ಸೋಮವಾರದಿಂದ ಪ್ರಾರಂಭವಾಗಲಿರುವ ಮೂರು ದಿನಗಳ ರಾಜ್ಯ ವಿಧಾನಮಂಡಲ ಅಧಿವೇಶನ ತೀವ್ರ ಕಾವು ಪಡೆದುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲ, ರೈತರ ಬೆಳೆ ನಷ್ಟ, ಸಾಲಮನ್ನಾ ಗೊಂದಲ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಪಕ್ಕಾ ಪ್ಲಾನ್ ರೂಪಿಸಿವೆ.
ರಾಜ್ಯದಲ್ಲಿ ಮಳೆಯಿಲ್ಲದೆ ರೈತರು ಕಂಗಾಲಾಗಿದ್ದಾರೆ. ಎರಡೆರಡು ಬಾರಿ ಬಿತ್ತನೆ ಮಾಡಿದರೂ ಮೊಳಕೆ ಬಾರದೆ ಬೀಜ-ಗೊಬ್ಬರದ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಪರಿಹಾರ ನೀಡುವ ಬದಲು, ಸರ್ಕಾರ ಬೆಳೆ ಬೆಳೆಯಬೇಡಿ ಎಂದು ಕೈಕಟ್ಟಿ ಕುಳಿತಿದೆ ಎಂಬುದು ವಿಪಕ್ಷಗಳ ಪ್ರಮುಖ ಆರೋಪ. ಮತ್ತೊಂದೆಡೆ, ಸಾಲಮನ್ನಾ ವಿಚಾರದಲ್ಲಿ ಸಿಎಂ ಡಿಕೆಶಿ ಕೇಂದ್ರ ಸರ್ಕಾರದ ಸಹಕಾರ ಬೇಕು ಎನ್ನುತ್ತಿರುವುದಕ್ಕೆ ಕುಮಾರಸ್ವಾಮಿ ಖಾರವಾಗಿ ತಿರುಗೇಟು ನೀಡಿದ್ದಾರೆ.
ನಾನು ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಮತ್ತು ನನ್ನ ಅವಧಿಯಲ್ಲಿ ರಾಜ್ಯದ ಹಣದಲ್ಲೇ ಸಾಲಮನ್ನಾ ಮಾಡಿದ್ದೆವೇ ಹೊರತು ಕೇಂದ್ರದ ಮುಂದೆ ಕೈಚಾಚಿರಲಿಲ್ಲ ಎಂದು ನೆನಪಿಸಿದ್ದಾರೆ. ಅಲ್ಲದೆ, ಡಿಎಲ್ಎಫ್, ತಾವರೆಕೆರೆ ಡಿವೈನಿಟಿ ಹಾಗೂ ನೈಸ್ ಯೋಜನೆಯಲ್ಲಿ ಲೂಟಿ ಮಾಡುತ್ತಿರುವ ಸಾವಿರಾರು ಕೋಟಿ ಹಣವನ್ನು ತಡೆದರೆ, ಸರ್ಕಾರದ ಖಜಾನೆಯಿಂದ ಅಲ್ಲದೆ ವೈಯಕ್ತಿಕವಾಗಿಯೇ ರೈತರ ಸಾಲಮನ್ನಾ ಮಾಡಬಹುದು ಎಂದು ಕುಮಾರಸ್ವಾಮಿ ನೀಡಿರುವ ಹೇಳಿಕೆ ಅಧಿವೇಶನದಲ್ಲಿ ಸರ್ಕಾರಕ್ಕೆ ದೊಡ್ಡ ಪರೀಕ್ಷೆಯಾಗಲಿದೆ.
ಫ್ಲೋ
ಇನ್ನು, ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಂಪುಟ ಸಭೆಯ ಹೆಸರಿನಲ್ಲಿ ಸರ್ಕಾರ ಲಕ್ಷಾಂತರ ರೂಪಾಯಿ ದುಂದುವೆಚ್ಚ ಮಾಡಿದೆ ಎಂಬುದು ವಿಪಕ್ಷಗಳ ಮತ್ತೊಂದು ಪ್ರಮುಖ ಅಸ್ತ್ರ. ಜನರಿಗೆ ಕುಡಿಯುವ ನೀರಿಲ್ಲ, ರೈತರಿಗೆ ಪರಿಹಾರವಿಲ್ಲ. ಆದರೆ ಸರ್ಕಾರ ಧಾಮ್‌ಧೂಮ್ ಮಾಡಿಕೊಂಡು ದಂಡು ದಾಳಿ ನಡೆಸುತ್ತಿದೆ. ವಿಧಾನಸೌಧ ಇರುವುದು ಯಾವುದಕ್ಕೆ? ಇದೇನು ಟೂರಿಂಗ್ ಟಾಕೀಸಾ?' ಎಂದು ಕುಮಾರಸ್ವಾಮಿ ಮಾಡಿರುವ ವ್ಯಂಗ್ಯದ ವಾಗ್ದಾಳಿಯನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಪಕ್ಷಗಳು ಸಜ್ಜಾಗಿವೆ. ಪ್ರತಿ ಜಿಲ್ಲೆಯಲ್ಲಿ ಕ್ಯಾಬಿನೆಟ್ ಮೀಟಿಂಗ್ ಮಾಡಿ ಏನ್ ಸಾಧನೆ ಮಾಡಿದ್ದೀರಿ? ಆ ಖರ್ಚಿನ ಹಣವನ್ನು ಉಳಿಸಿದ್ದರೆ ಒಂದು ಜಿಲ್ಲೆಯ ರೈತರ ಬದುಕನ್ನೇ ಹಸನು ಮಾಡಬಹುದಿತ್ತು ಎಂದು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಕಾರ್ಯತಂತ್ರ ಹೆಣೆದಿವೆ.
ಇಷ್ಟೇ ಅಲ್ಲದೆ, ಪಶ್ಚಿಮ ಘಟ್ಟದ ಮಲೆನಾಡು ಹಾಗೂ ಕರಾವಳಿ ಭಾಗದ ಜನರನ್ನು ಆತಂಕಕ್ಕೆ ತಳ್ಳಿರುವ ಕಸ್ತೂರಿ ರಂಗನ್ ವರದಿ ಜಾರಿ ವಿಚಾರ ಕೂಡ ಸದನದಲ್ಲಿ ಬಹುದೊಡ್ಡ ಮಟ್ಟದಲ್ಲಿ ಸದ್ದು ಮಾಡಲಿದೆ. ಈ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂಬುದು ಸ್ಥಳೀಯ ರೈತರ ಹಾಗೂ ಸಾರ್ವಜನಿಕರ ಸ್ಪಷ್ಟ ನಿಲುವಾಗಿದೆ. ವಿಪಕ್ಷಗಳು ಕೂಡ ರೈತರ ಬೆಂಬಲಕ್ಕೆ ನಿಂತಿದ್ದು, ಅಧಿವೇಶನದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುವಂತೆ ಪಟ್ಟು ಹಿಡಿಯಲಿವೆ.
ಒಟ್ಟಿನಲ್ಲಿ, ಮೂರೇ ದಿನಗಳ ಅಧಿವೇಶನವಾದರೂ ಬರ, ಸಾಲಮನ್ನಾ, ಭ್ರಷ್ಟಾಚಾರದ ಆರೋಪ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರಗಳನ್ನು ಮುಂದಿಟ್ಟುಕೊಂಡು ಸಿಎಂ ಡಿ.ಕೆ. ಶಿವಕುಮಾರ್ ಅವರನ್ನು ಕಟ್ಟಿಹಾಕಲು ವಿಪಕ್ಷಗಳು ಸರ್ವಸನ್ನದ್ಧವಾಗಿವೆ.
ಒಂದೆಡೆ ರೈತರ ಆಕ್ರೋಶ, ಇನ್ನೊಂದೆಡೆ ಸಾಲಮನ್ನಾ ಮತ್ತು ದುಂದುವೆಚ್ಚದ ಕುರಿತು ಕುಮಾರಸ್ವಾಮಿ ಅವರ ತೀಕ್ಷ್ಣ ವಾಗ್ದಾಳಿ. ಈ ಮೂರು ದಿನಗಳ ಅಧಿವೇಶನದಲ್ಲಿ ವಿಪಕ್ಷಗಳ ಈ ಚಕ್ರವ್ಯೂಹವನ್ನು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಹೇಗೆ ಭೇದಿಸಲಿದೆ. ಡಿ.ಕೆ. ಶಿವಕುಮಾರ್ ಸರ್ಕಾರ ಯಾವ ರೀತಿ ಮರುದಾಳಿ ನಡೆಸಲಿದೆ ಎಂಬುದನ್ನು ಕಾದು ನೋಡಬೇಕಿದೆ.