Green SM Cab: ಕರ್ನಾಟಕದಲ್ಲಿ ಎಲೆಕ್ಟ್ರಿಕ್ ಕ್ಯಾಬ್ ಸೇವೆ ಆರಂಭಿಸಲು ಸಜ್ಜಾಗಿರುವ ವಿಯೆಟ್ನಾಂ ಮೂಲದ ವಿನ್‌ಗ್ರೂಪ್‌ನ ಅಂಗಸಂಸ್ಥೆ ‘ಗ್ರೀನ್ ಎಸ್‌ಎಂ’ ಕಂಪನಿಗೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕಂಪನಿಯು ಪ್ರತಿ ಕಿಲೋಮೀಟರ್‌ಗೆ ಕೇವಲ ₹8 ದರದಲ್ಲಿ ಕ್ಯಾಬ್ ಸೇವೆ ಒದಗಿಸಲು ಮುಂದಾಗಿರುವುದು ಸ್ಥಳೀಯ ಚಾಲಕರ ಜೀವನೋಪಾಯಕ್ಕೆ ಹೊಡೆತ ನೀಡಲಿದೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದು, ಕಂಪನಿಯ ಸೇವೆ ಮತ್ತು ದರ ನೀತಿಯ ಕುರಿತು ಸರ್ಕಾರ ತಕ್ಷಣ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.
ಗ್ರೀನ್ ಎಸ್‌ಎಂ ಸೇವೆಗೆ ಒಕ್ಕೂಟದ ವಿರೋಧವೇಕೆ?
ವಿಯೆಟ್ನಾಂ ಮೂಲದ ವಿನ್‌ಗ್ರೂಪ್‌ನ ಅಂಗಸಂಸ್ಥೆಯಾಗಿರುವ ಗ್ರೀನ್ ಎಸ್‌ಎಂ, ಎಲೆಕ್ಟ್ರಿಕ್ ಕಾರುಗಳ ಮೂಲಕ ಕ್ಯಾಬ್ ಸೇವೆ ಆರಂಭಿಸಲು ಸಿದ್ಧತೆ ನಡೆಸಿದೆ. ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಿಕಾ ಸಂಸ್ಥೆ ವಿನ್‌ಫಾಸ್ಟ್‌ನ ಮಾಲೀಕತ್ವವೂ ವಿನ್‌ಗ್ರೂಪ್ ಹೊಂದಿದೆ. ಬೆಂಗಳೂರಿನಲ್ಲಿ ತನ್ನ ಸೇವೆಯನ್ನ ಆರಂಭಿಸಲು ಮುಂದಾಗಿರುವ ಕಂಪನಿಯು ಪ್ರತಿ ಕಿಲೋಮೀಟರ್‌ಗೆ ₹8 ದರ ನಿಗದಿಪಡಿಸಲು ಯೋಜಿಸಿದೆ ಎನ್ನಲಾಗಿದೆ.
ಈಗಾಗಲೇ ಕರ್ನಾಟಕ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್ ನಿಯಮಗಳು-2016ರ ಅಡಿಯಲ್ಲಿ ಗ್ರೀನ್ ಎಸ್‌ಎಂ ಕಂಪನಿಯು ರಾಜ್ಯ ಸಾರಿಗೆ ಇಲಾಖೆಯಿಂದ ಅಗ್ರಿಗೇಟರ್ ಪರವಾನಗಿ ಪಡೆದುಕೊಂಡಿದೆ. ಈ ಪರವಾನಗಿಯು 2031ರ ಸೆಪ್ಟೆಂಬರ್‌ವರೆಗೆ ಮಾನ್ಯತೆ ಹೊಂದಿದೆ. ಕಂಪನಿಯು ಕಡಿಮೆ ದರದಲ್ಲಿ ಸೇವೆ ನೀಡಲು ಮುಂದಾಗಿರುವುದು ಖಾಸಗಿ ಸಾರಿಗೆ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
₹8 ದರದಿಂದ 11 ಲಕ್ಷ ಚಾಲಕರಿಗೆ ಸಂಕಷ್ಟ?
ಗ್ರೀನ್ ಎಸ್‌ಎಂ ಕಂಪನಿಯ ದರ ನೀತಿಯು ಪ್ರಸ್ತುತ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ದರಗಳಿಗಿಂತ ಕಡಿಮೆಯಾಗಿದೆ ಎಂದು ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಹೇಳಿದೆ. ಬೆಂಗಳೂರಿನಲ್ಲಿ ಅಂದಾಜು 8 ಲಕ್ಷ ಹಾಗೂ ರಾಜ್ಯದ ಇತರ ನಗರಗಳಲ್ಲಿ ಸುಮಾರು 3 ಲಕ್ಷ ಕ್ಯಾಬ್ ಮತ್ತು ಆಟೋ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕಂಪನಿಯು ಇದೇ ರೀತಿಯ ಕಡಿಮೆ ದರದಲ್ಲಿ ಸೇವೆ ಒದಗಿಸಿದರೆ ಸ್ಥಳೀಯ ಚಾಲಕರು ಸ್ಪರ್ಧಿಸಲು ಕಷ್ಟವಾಗಬಹುದು ಎಂಬುದು ಒಕ್ಕೂಟದ ಆತಂಕವಾಗಿದೆ.
ವಿದೇಶಿ ಮೂಲದ ಬೃಹತ್ ಕಂಪನಿಗಳು ಕಡಿಮೆ ದರದ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿದರೆ, ಈಗಾಗಲೇ ಸಾರಿಗೆ ಸೇವೆ ಒದಗಿಸುತ್ತಿರುವ ಸ್ಥಳೀಯ ಚಾಲಕರ ಆದಾಯದ ಮೇಲೆ ಪರಿಣಾಮ ಬೀರಬಹುದು ಎಂದು ಸಂಘಟನೆಗಳು ಅಭಿಪ್ರಾಯಪಟ್ಟಿವೆ. ಈ ಹಿನ್ನೆಲೆಯಲ್ಲಿ ಕಂಪನಿಯ ದರ ನಿಗದಿ ನೀತಿಯ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಬೇಕು ಎಂದು ಒಕ್ಕೂಟ ಆಗ್ರಹಿಸಿದೆ.
ಸ್ಪರ್ಧಾತ್ಮಕ ಕಾಯ್ದೆ ಉಲ್ಲಂಘನೆಯಾಗುತ್ತಿದೆಯೇ?
ಮುಖ್ಯಮಂತ್ರಿಗಳಿಗೆ ಸಲ್ಲಿಸಿರುವ ಪತ್ರದಲ್ಲಿ ಒಕ್ಕೂಟವು ಕಂಪನಿಯ ದರ ನೀತಿಯ ಕುರತು ಹಲವು ಪ್ರಶ್ನೆಗಳನ್ನ ಎತ್ತಿದೆ. ಪ್ರತಿ ಕಿಲೋಮೀಟರ್‌ಗೆ ₹8 ದರದಲ್ಲಿ ಸೇವೆ ಒದಗಿಸುವುದು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆಯೇ ಎಂಬುದನ್ನ ಸರ್ಕಾರ ಪರಿಶೀಲಿಸಬೇಕು ಎಂದು ಒತ್ತಾಯಿಸಿದೆ. ಪ್ರಬಲ ಮಾರುಕಟ್ಟೆ ಶಕ್ತಿ ಹೊಂದಿರುವ ಕಂಪನಿಯೊಂದು ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಸೇವೆ ನೀಡುತ್ತಿದ್ದರೆ, ಅದು ಸ್ಪರ್ಧಾತ್ಮಕ ಕಾಯ್ದೆ-2002ರ ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದು ಒಕ್ಕೂಟ ಪತ್ರದಲ್ಲಿ ಉಲ್ಲೇಖಿಸಿದೆ. ಈ ಕುರಿತು ನಡೆಸುವ ಪರಿಶೀಲನೆಯಲ್ಲಿ ಆರೋಪಗಳು ದೃಢಪಟ್ಟರೆ, ಪ್ರಕರಣವನ್ನ ಭಾರತೀಯ ಸ್ಪರ್ಧಾತ್ಮಕ ಆಯೋಗಕ್ಕೆ ಶಿಫಾರಸು ಮಾಡಬೇಕು ಎಂಬುದು ಸಂಘಟನೆಯ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.
ವಾಹನಗಳ ಸಂಖ್ಯೆನ್ನು 100ಕ್ಕೆ ಮಿತಿಗೊಳಿಸಲು ಆಗ್ರಹ
ಗ್ರೀನ್ ಎಸ್‌ಎಂ ಕಂಪನಿಗೆ ನೀಡಿರುವ ಅಗ್ರಿಗೇಟರ್ ಪರವಾನಗಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆಯು ಸಮಗ್ರ ಅನುಸರಣೆ ಪರಿಶೀಲನೆ ನಡೆಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ. ಅಲ್ಲದೆ, ಕಂಪನಿಯ ವಾಹನಗಳ ಸಂಖ್ಯೆಯನ್ನ ಕೇವಲ 100ಕ್ಕೆ ಸೀಮಿತಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ವಾಹನಗಳ ನೋಂದಣಿ ಅಥವಾ ಹೊಸ ವಾಹನಗಳನ್ನ ಸೇವೆಗೆ ಸೇರ್ಪಡೆಗೊಳಿಸಲು ಅನುಮತಿ ನೀಡಬಾರದು ಎಂದು ಒತ್ತಾಯಿಸಿದೆ.
ಇದರ ಜೊತೆಗೆ ಕಂಪನಿಯು ನಿಗದಿಪಡಿಸಿರುವ ಪ್ರಯಾಣ ದರಗಳು ಸರ್ಕಾರದ ಅಧಿಸೂಚಿತ ದರ ವ್ಯವಸ್ಥೆಗೆ ಅನುಗುಣವಾಗಿವೆಯೇ ಎಂಬುದನ್ನೂ ಪರಿಶೀಲಿಸಬೇಕೆಂದು ಪತ್ರದಲ್ಲಿ ತಿಳಿಸಲಾಗಿದೆ. ಪ್ರಚಾರದ ಉದ್ದೇಶಕ್ಕಾಗಿ ಅಥವಾ ವೆಚ್ಚಕ್ಕಿಂತ ಕಡಿಮೆ ದರದಲ್ಲಿ ಸೇವೆ ಒದಗಿಸುತ್ತಿದ್ದರೆ, ಅದರ ಸಂಪೂರ್ಣ ವಿವರಗಳನ್ನ ಬಹಿರಂಗಪಡಿಸುವಂತೆ ಕಂಪನಿಗೆ ಸೂಚಿಸಬೇಕೆಂದು ಒಕ್ಕೂಟ ಆಗ್ರಹಿಸಿದೆ.
ಸಿಎಂ ಮಧ್ಯಪ್ರವೇಶಕ್ಕೆ ಖಾಸಗಿ ಸಾರಿಗೆ ಸಂಘಟನೆಗಳ ಮನವಿ
ಗ್ರೀನ್ ಎಸ್‌ಎಂ ಕಂಪನಿಯ ಕರ್ನಾಟಕ ಪ್ರವೇಶ ಮತ್ತು ಅದರ ಕಡಿಮೆ ದರದ ಸೇವೆಯಿಂದ ಸ್ಥಳೀಯ ಕ್ಯಾಬ್ ಹಾಗೂ ಆಟೋ ಚಾಲಕರಿಗೆ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಖಾಸಗಿ ಸಾರಿಗೆ ಸಂಘಟನೆಗಳ ಒಕ್ಕೂಟ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಗಮನ ಸೆಳೆದಿದೆ. ಕಂಪನಿಯ ದರ ನೀತಿ, ವಾಹನಗಳ ಸಂಖ್ಯೆ ಮತ್ತು ಪರವಾನಗಿ ನಿಯಮಗಳ ಕುರಿತು ಸೂಕ್ತ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.
ಒಟ್ನಲ್ಲಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಕ್ಯಾಬ್ ಸೇವೆ ಆರಂಭಿಸಲು ಸಜ್ಜಾಗಿರುವ ಗ್ರೀನ್ ಎಸ್‌ಎಂ ಕಂಪನಿಯ ದರ ನೀತಿಯು ಖಾಸಗಿ ಸಾರಿಗೆ ಸಂಘಟನೆಗಳ ವಿರೋಧಕ್ಕೆ ಕಾರಣವಾಗಿದೆ. ರಾಜ್ಯದ ಸುಮಾರು 11 ಲಕ್ಷ ಕ್ಯಾಬ್ ಮತ್ತು ಆಟೋ ಚಾಲಕರ ಹಿತಾಸಕ್ತಿಯನ್ನ ಗಮನದಲ್ಲಿಟ್ಟುಕೊಂಡು ಸರ್ಕಾರ ಮಧ್ಯಪ್ರವೇಶಿಸಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ.