ಮುಂಬರುವ ಹಬ್ಬದ ಋತುವಿನಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ದಕ್ಷಿಣ ಮಧ್ಯ ರೈಲ್ವೆಯು ತೆಲಂಗಾಣದ ಹೈದರಾಬಾದ್‌ನ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಒಂದಾದ ಚರ್ಲಪಲ್ಲಿ ರೈಲು ನಿಲ್ದಾಣ (Charlapalli Railway Station - CHZ) ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (Sir M. Visvesvaraya Terminal, Bengaluru - SMVB) ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲಿನ ಸೇವೆಯನ್ನು ಘೋಷಣೆ ಮಾಡಿದೆ.
ಚರ್ಲಪಲ್ಲಿ - ಎಸ್ಎಂವಿಟಿ ಬೆಂಗಳೂರು ನಡುವೆ ಸಂಚರಿಸಲಿದೆ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್:
ದಕ್ಷಿಣ ಮಧ್ಯ ರೈಲ್ವೆ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ನವರಾತ್ರಿ, ದಸರಾ, ದೀಪಾವಳಿ ಸಂದರ್ಭದಲ್ಲಿ ಈ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು ಚರ್ಲಪಲ್ಲಿ ಹಾಗೂ SMVT ಬೆಂಗಳೂರು ರೈಲು ನಿಲ್ದಾಣಗಳ ನಡುವೆ ಸಂಚರಿಸಲಿದೆ ಎಂದು ಹೇಳಲಾಗಿದೆ.
ಚರ್ಲಪಲ್ಲಿ – SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲಿನ ಸಮಯ:
ಲಭ್ಯವಿರುವ ಮಾಹಿತಿಗಳ ಪ್ರಕಾರ, ರೈಲು ಸಂಖ್ಯೆ 07065 ಚರ್ಲಪಲ್ಲಿ – SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು 2026ರ ಅಕ್ಟೋಬರ್ 5, 12, 19, 26 ಹಾಗೂ ನವೆಂಬರ್ 2, 9, 16, 23, 30 ರಂದು ರಾತ್ರಿ 09:50 ಗಂಟೆಗೆ ಚರ್ಲಪಲ್ಲಿಯಿಂದ ಹೊರಟು, ಮರುದಿನ ಮಧ್ಯಾಹ್ನ 01:15 ಗಂಟೆಗೆ SMVT ಬೆಂಗಳೂರು ತಲುಪಲಿದೆ.

SMVT ಬೆಂಗಳೂರು - ಚರ್ಲಪಲ್ಲಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲಿನ ವೇಳಾಪಟ್ಟಿ:
ಮರು ಮಾರ್ಗದಲ್ಲಿ ರೈಲು ಸಂಖ್ಯೆ 07066 SMVT ಬೆಂಗಳೂರು–ಚರ್ಲಪಲ್ಲಿ ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು 2026ರ ಅಕ್ಟೋಬರ್ 6, 13, 20, 27, ನವೆಂಬರ್ 3, 10, 17, 24 ಮತ್ತು ಡಿಸೆಂಬರ್ 1 ರಂದು ಮಧ್ಯಾಹ್ನ 03:50 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 05:30 ಗಂಟೆಗೆ ಚರ್ಲಪಲ್ಲಿ ತಲುಪಲಿದೆ ಎನ್ನಲಾಗಿದೆ.

ಚರ್ಲಪಲ್ಲಿ – SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಮಾರ್ಗ ಮಧ್ಯೆ, ಎರಡೂ ಮಾರ್ಗಗಳಲ್ಲಿ ಸಿಕಂದರಾಬಾದ್ ಜಂಕ್ಷನ್, ಬೇಗಂಪೇಟೆ, ಲಿಂಗಂಪಲ್ಲಿ, ವಿಕಾರಾಬಾದ್ ಜಂಕ್ಷನ್, ಸೇಡಂ, ಯಾದಗಿರಿ, ಕೃಷ್ಣ, ರಾಯಚೂರು ಜಂಕ್ಷನ್, ಮಂತ್ರಾಲಯಂ ರೋಡ್, ಆದೋನಿ, ಗುಂತಕಲ್ ಜಂಕ್ಷನ್, ಅನಂತಪುರ, ಧರ್ಮಾವರಂ ಜಂಕ್ಷನ್, ಹಿಂದೂಪುರ ಮತ್ತು ಯಲಹಂಕ ಜಂಕ್ಷನ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ಚರ್ಲಪಲ್ಲಿ – SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್’ಪ್ರೆಸ್ ರೈಲು ಒಟ್ಟು 24 ಬೋಗಿಗಳನ್ನು ಒಳಗೊಂಡಿರಲಿದ್ದು, ಇದರಲ್ಲಿ 03 ಎಸಿ 2-ಟೈರ್, 05 ಎಸಿ 3-ಟೈರ್, 10 ಸ್ಲೀಪರ್ ಕ್ಲಾಸ್, 04 ಸಾಮಾನ್ಯ ದ್ವಿತೀಯ ದರ್ಜೆ ಮತ್ತು 02 ದ್ವಿತೀಯ ದರ್ಜೆ ಲಗೇಜ್ ಹಾಗೂ ಬ್ರೇಕ್ ವ್ಯಾನ್ ಬೋಗಿಗಳಿರಲಿವೆ ಎಂದು ರೈಲ್ವೆ ಇಲಾಖೆ ಮಾಹಿತಿ ನೀಡಿದೆ.