SOCIAL MEDIA

Newsletter

PARTNER SITES
Select Language Select State

ಪತ್ನಿಯ ಮೇಲಿನ ಸಿಟ್ಟಿಗೆ ಸ್ಕ್ರಾಪ್‌ ಗೋಡೌನ್‌ ಸುಟ್ಟ ಪತಿ! ಕಣ್ಮುಂದೆ ಸಾ*ವಾಗುತ್ತಿದ್ದರೂ ನೋಡಿ ಆನಂದಿಸಿದ ಕ್ರೂ*ರಿ

ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋದಳೆಂಬ ಕ್ಷುಲ್ಲಕ ಹಾಗೂ ಕುರುಡು ಕೋಪಕ್ಕೆ ವ್ಯಕ್ತಿಯೊಬ್ಬ ಎಸಗಿದ ವಿಕೃತ ಕೃತ್ಯವು ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಪತ್ನಿಯ ಮೇಲಿನ ಸೇಡನ್ನು ತೀರಿಸಿಕೊಳ್ಳಲು ಮುಂದಾದ ಆತ, ಸಾಲು ಸಾಲು ಸ್ಕ್ರಾಪ್ ಗೋಡೌನ್‌ಗಳಿಗೆ ಬೆಂಕಿ ಹಚ್ಚಿ ವಿಕೃತ ಆನಂದ ಪಟ್ಟಿದ್ದಾನೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..

Written By Krishna NK
Published: Nov 15, 2026, 18:34 IST | Updated: Nov 15, 2026, 18:36 IST
Image Credit: Crime News
Join

ಬೆಂಗಳೂರು : ಪತ್ನಿ ಮುನಿಸಿಕೊಂಡು ತವರು ಮನೆಗೆ ಹೋದಳೆಂಬ ಕಾರಣಕ್ಕೆ ಪತಿಯೊಬ್ಬ ಮಾಡಿದ್ದೇನು ಗೊತ್ತಾ..? ಸಾಲು ಸಾಲು ಸ್ಕ್ರಾಪ್ ಗೋಡೌನ್‌ಗಳಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ಹೊತ್ತಿ ಉರಿಯುವುದನ್ನು ಕಂಡು ವಿಕೃತ ಸಂತೋಷ ಪಟ್ಟಿದ್ದಾನೆ. ಅಷ್ಟೇ ಅಲ್ಲ ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ನರಳಾಡುತ್ತಿದ್ದ ವ್ಯಕ್ತಿಯನ್ನ ಕಂಡೂ ಕನಿಕರ ತೋರಿಸದೆ, ಆ ದೃಶ್ಯವನ್ನೇ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾನೆ. ಈತನ ವಿಕೃತ ಕೃತ್ಯಕ್ಕೆ ಕೊನೆಗೆ ಅಮಾಯಕ ಮಣಿಕಂಠ ಬಲಿಯಾಗಿದ್ದಾನೆ. ಸರಣಿ ಅಗ್ನಿ ಅವಘಡಗಳ ಹಿಂದಿದ್ದ ಕಿಡಿಗೇಡಿಯನ್ನು ಬರೋಬ್ಬರಿ 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಅತ್ತಿಬೆಲೆ ಪೊಲೀಸರು ಬಂಧಿಸಿದ್ದಾರೆ. ಅಷ್ಟಕ್ಕೂ ಈ ಅಗ್ನಿಕಾಂಡದ ಹಿಂದಿನ ಅಸಲಿ ಕಾರಣವೇನು..? ಇಲ್ಲಿದೆ ವರದಿ

ಹೌದು.. ಈತನ ಹೆಸರು ಜೀವನ್ ರಾಜ್, ಮೂಲತಃ ತಮಿಳುನಾಡಿನ ಡೆಂಕಣಿಕೋಟೆ ನಿವಾಸಿ, ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ವಾಸವಿದ್ದ ಈತ ಈರುಳ್ಳಿ ವ್ಯಾಪಾರ ಮಾಡಿಕೊಂಡಿದ್ದ. ಸುಮಾರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದ ಜೀವನ್ ರಾಜ್, ಪತ್ನಿ ಹಾಗೂ ಮಗನೊಂದಿಗೆ ಸಂಸಾರ ನಡೆಸುತ್ತಿದ್ದ. ಆದ್ರೆ ಇತ್ತೀಚೆಗೆ ಕ್ಷುಲ್ಲಕ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿತ್ತು. ಜಗಳ ವಿಕೋಪಕ್ಕೆ ಹೋಗಿ ಪತ್ನಿ ಗಂಡನನ್ನು ಬಿಟ್ಟು ಮಗನೊಂದಿಗೆ ತವರು ಮನೆ ಸೇರಿದ್ದಳು. ಇದರಿಂದ ಕೆರಳಿದ್ದ ಜೀವನ್ ರಾಜ್, ಪತ್ನಿಯ ಮೇಲಿನ ಕೋಪವನ್ನು ಅಮಾಯಕರ ಮೇಲೆ ತೀರಿಸಿಕೊಳ್ಳಲು ಶುರುಮಾಡಿದ್ದ.

ಪತ್ನಿ ಮನೆ ಬಿಟ್ಟು ಹೋದಳೆಂಬ ಸಿಟ್ಟಿಗೆ ಸ್ಕ್ರಾಪ್ ಗೋಡೌನ್‌ಗಳೇ ಈತನ ಟಾರ್ಗೆಟ್ ಮಾಡಿದ್ದ. ಕಳೆದ ತಿಂಗಳ 22 ವ್ ತಾರೀಕಿನಂದು ಅತ್ತಿಬೆಲೆ, ಆನೇಕಲ್ ಹಾಗೂ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲವು ಕಡೆಗಳಲ್ಲಿದ್ದ ಸ್ಕ್ರಾಪ್ ಅಂಗಡಿಗಳಿಗೆ ಬೆಂಕಿ ಹಚ್ಚಿದ್ದ. ಒಂದಲ್ಲ, ಎರಡಲ್ಲ ಬರೋಬ್ಬರಿ ಏಳೆಂಟು ಸ್ಕ್ರಾಪ್ ಅಂಗಡಿಗಳು ಈತನ ಕೃತ್ಯಕ್ಕೆ ಆಹುತಿಯಾಗಿದ್ದವು. ಇನ್ನು ಬೆಂಕಿ ಹಚ್ಚಿ ಪರಾರಿಯಾಗುವ ಬದಲು ಅಲ್ಲೇ ನಿಂತು ಬೆಂಕಿ ಹೊತ್ತಿ ಉರಿಯುವುದನ್ನು ನೋಡುತ್ತಿದ್ದ ಈತ, ತನ್ನ ಕೃತ್ಯವನ್ನು ಮೊಬೈಲ್‌ನಲ್ಲಿ ವಿಡಿಯೋ ಕೂಡ ಮಾಡಿಕೊಳ್ಳುತ್ತಿದ್ದ. ಅಷ್ಟೇ ಅಲ್ಲ, ಸ್ಕ್ರಾಪ್ ಅಂಗಡಿಯಲ್ಲಿ ಮಲಗಿದ್ದ ಮಣಿಕಂಠ ಬೆಂಕಿಯ ಹೊಗೆಯಿಂದ ಉಸಿರುಗಟ್ಟಿ ನರಳಾಡುತ್ತಿದ್ದರೂ ಈತನ ಮನಸ್ಸು ಕರಗಿರಲಿಲ್ಲ. ಬದಲಿಗೆ ಮಣಿಕಂಠನ ನರಳಾಟವನ್ನು ಕಂಡು ವಿಕೃತ ಸಂತೋಷ ಪಟ್ಟಿದ್ದ ಎನ್ನಲಾಗಿದೆ. ಸ್ಥಳೀಯರು ತಕ್ಷಣ ಮಣಿಕಂಠನನ್ನು ಆಸ್ಪತ್ರೆಗೆ ದಾಖಲಿಸಿದ್ದರು ಚಿಕಿತ್ಸೆ ಪಲಿಸದೆ ಸಾವನ್ನಪ್ಪಿದ್ದ.

ಇಷ್ಟಾದರೂ ಈತನ ವಿಕೃತಿ ನಿಂತಿರಲಿಲ್ಲ. ಮಣಿಕಂಠ ದಾಖಲಾಗಿದ್ದ ಆಸ್ಪತ್ರೆಯ ಬಳಿಗೂ ತೆರಳಿ ಪರಿಸ್ಥಿತಿಯನ್ನು ಗಮನಿಸುತ್ತಿದ್ದ. ಜರ್ಕಿನ್ ಧರಿಸಿಕೊಂಡು ಆಸ್ಪತ್ರೆಯೊಳಗೆ ಹೋಗಿದ್ದ ಜೀವನ್ ರಾಜ್, ಹೊರಬರುವಾಗ ಯಾರಿಗೂ ಅನುಮಾನ ಬಾರದಂತೆ ಜರ್ಕಿನ್ ಅನ್ನೇ ಉಲ್ಟಾ ಧರಿಸಿಕೊಂಡು ಅಲ್ಲಿಂದ ಎಸ್ಕೇಪ್ ಆಗಿದ್ದ. ಇತ್ತ ಚಿಕಿತ್ಸೆ ಫಲಕಾರಿಯಾಗದೆ ಮಣಿಕಂಠ ಮೃತಪಟ್ಟಿದ್ದರಿಂದ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಸಾಲು ಸಾಲು ಸ್ಕ್ರಾಪ್ ಗೋಡೌನ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆರಂಭದಲ್ಲಿ ಇದೊಂದು ಆಕಸ್ಮಿಕ ಅಗ್ನಿ ಅವಘಡ ಎಂದು ಭಾವಿಸಲಾಗಿತ್ತು. ಆದ್ರೆ ಒಂದೇ ಮಾದರಿಯಲ್ಲಿ ಪದೇ ಪದೇ ಬೆಂಕಿ ಕಾಣಿಸಿಕೊಳ್ಳುತ್ತಿದ್ದ ಹಿನ್ನೆಲೆ ಪೊಲೀಸರಿಗೆ ಅನುಮಾನ ಮೂಡಿತ್ತು. ಇದು ಆಕಸ್ಮಿಕವಲ್ಲ, ಯಾರೋ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚುತ್ತಿದ್ದಾರೆ ಎಂಬ ಶಂಕೆ ಬಲವಾಗಿತ್ತು. ಹೀಗಾಗಿ ಪ್ರಕರಣದ ಬೆನ್ನತ್ತಿದ ಅತ್ತಿಬೆಲೆ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ತನಿಖೆಗೆ ಇಳಿದಿತ್ತು.

ಆರೋಪಿ ಪತ್ತೆಗೆ ಪೊಲೀಸರು ಬರೋಬ್ಬರಿ 200ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದರು. ಆಗ ಸ್ಕ್ರಾಪ್ ಅಂಗಡಿಗಳ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯ ದೃಶ್ಯ ಸೆರೆಯಾಗಿತ್ತು. ಅಷ್ಟೇ ಅಲ್ಲ, ಆಸ್ಪತ್ರೆ ಬಳಿ ಜರ್ಕಿನ್ ಬದಲಾಯಿಸಿಕೊಂಡು ಹೋಗುತ್ತಿದ್ದ ದೃಶ್ಯವೂ ಪೊಲೀಸರಿಗೆ ಸಿಕ್ಕಿತ್ತು. ಸಿಟಿ-100 ಬೈಕ್‌ನಲ್ಲಿ ಓಡಾಡುತ್ತಿದ್ದ ವ್ಯಕ್ತಿಯ ಸುಳಿವು ಆಧರಿಸಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಕಳೆದ ಹದಿನೈದು ದಿನಗಳಿಂದ ಹಗಲು ರಾತ್ರಿ ಎನ್ನದೆ ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರು, ಸ್ಕ್ರಾಪ್ ಅಂಗಡಿಗಳ ಸುತ್ತಲೂ ನಿಗಾ ಇಟ್ಟಿದ್ದರು. ಕೊನೆಗೂ ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದ ತಂಡದ ಕಣ್ಣಿಗೆ ಜೀವನ್ ರಾಜ್ ಬಿದ್ದಿದ್ದ. ತಕ್ಷಣ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹೊರಬಂದ ಸತ್ಯ ಪೊಲೀಸರನ್ನೇ ಬೆಚ್ಚಿಬೀಳಿಸಿತ್ತು. ಪತ್ನಿ ತನ್ನನ್ನು ಬಿಟ್ಟು ತವರು ಮನೆಗೆ ಹೋಗಿದ್ದಾಳೆಂಬ ಕೋಪಕ್ಕೆ ಸಾಲು ಸಾಲು ಸ್ಕ್ರಾಪ್ ಗೋಡೌನ್‌ಗಳಿಗೆ ಬೆಂಕಿ ಹಚ್ಚಿದ್ದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಒಂದು ಕೌಟುಂಬಿಕ ಕಲಹಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹೊರಟವನ ವಿಕೃತ ಕೃತ್ಯಕ್ಕೆ ಕೊನೆಗೆ ಪ್ರಾಣ ಕಳೆದುಕೊಂಡಿದ್ದು ಮಾತ್ರ ಯಾವುದೇ ತಪ್ಪು ಮಾಡದ ಮಣಿಕಂಠ. ಪತ್ನಿ ಮೇಲಿನ ಕೋಪಕ್ಕೆ ಬೆಂಕಿಯ ಆಟವಾಡಿದ ಕಿರಾತಕನ ಕೈಗೆ ಕೊನೆಗೂ ಪೊಲೀಸರು ಕೋಳ ತೊಡಿಸಿದ್ದಾರೆ. ಬರೋಬ್ಬರಿ 200ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳ ಪರಿಶೀಲನೆ, ಹದಿನೈದು ದಿನಗಳ ನಿರಂತರ ಕಾರ್ಯಾಚರಣೆಯ ಮೂಲಕ ಆರೋಪಿಯನ್ನು ಬಂಧಿಸಿದ ಇನ್ಸ್‌ಪೆಕ್ಟರ್ ಮಂಜುನಾಥ್ ಹಾಗೂ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಒಬ್ಬನ ವಿಕೃತ ಸೇಡಿಗೆ ಅಮಾಯಕ ಮಣಿಕಂಠನ ಜೀವವೇ ಬಲಿಯಾಗಿರುವುದು ಮಾತ್ರ ದುರಂತ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES