ಮೇಕೆದಾಟು ಯೋಜನೆಗೆ ಕೇಂದ್ರದ ಮಧ್ಯಸ್ಥಿಕೆ ಕೋರಿದ ಡಿಕೆಶಿ! ತಮಿಳುನಾಡಿಗೆ ನಿಯೋಗ ಕಳುಹಿಸಲು ಮನವಿ
ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ನೀಡುವಂತೆ ಕೇಂದ್ರದ ಮಧ್ಯಸ್ಥಿಕೆ ಕೋರಿರುವ ಸಿಎಂ ಡಿ.ಕೆ.ಶಿವಕುಮಾರ್, ಯೋಜನಾ ಸ್ಥಳ ಪರಿಶೀಲನೆಗೆ ತಮಿಳುನಾಡು ನಿಯೋಗ ಕಳುಹಿಸಲು ಮನವಿ ಮಾಡಿದ್ದಾರೆ. ತಮಿಳುನಾಡು ಸಿಎಂ ಜೊತೆ ನೇರ ಚರ್ಚೆಗೂ ಆಹ್ವಾನ ನೀಡುವುದಾಗಿ ತಿಳಿಸಿದ್ದಾರೆ.
Mekedatu Project: ಕರ್ನಾಟಕದ ಮಹತ್ವದ ಜಲ ಯೋಜನೆಗಳ ಅನುಮೋದನೆ ಹಾಗೂ ಕೇಂದ್ರದ ನೆರವಿಗಾಗಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ಕೋರಿದ್ದಾರೆ. ಮೇಕೆದಾಟು ಯೋಜನೆಗೆ ತ್ವರಿತ ಅನುಮೋದನೆ ನೀಡಬೇಕು ಮತ್ತು ಯೋಜನಾ ಸ್ಥಳವನ್ನ ಪರಿಶೀಲಿಸಲು ತಮಿಳುನಾಡು ಸರ್ಕಾರ ನಿಯೋಗ ಕಳುಹಿಸಬೇಕೆಂದು ಮನವಿ ಮಾಡಿದ್ದಾರೆ. ದೆಹಲಿಯಲ್ಲಿ ಸೋಮವಾರ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರನ್ನ ಭೇಟಿಯಾದ ಬಳಿಕ ಮಾತನಾಡಿದ ಅವರು, ಮೇಕೆದಾಟು ಯೋಜನೆಯ ನೀರನ್ನ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲಾಗುತ್ತದೆ ಎಂಬ ಕರ್ನಾಟಕದ ನಿಲುವನ್ನ ಕೇಂದ್ರ ಸರ್ಕಾರ ಅರ್ಥ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಮೇಕೆದಾಟು ಸ್ಥಳ ಪರಿಶೀಲನೆಗೆ ತಮಿಳುನಾಡಿಗೆ ಆಹ್ವಾನ
ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಸರ್ಕಾರ ನಿಯೋಗ ಕಳುಹಿಸಿ ಯೋಜನಾ ಸ್ಥಳವನ್ನ ಪರಿಶೀಲಿಸಲಿ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಿಯೋಗಕ್ಕೆ ಕರ್ನಾಟಕ ಸರ್ಕಾರ ಅಗತ್ಯ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೆ ತಮಿಳುನಾಡು ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರೊಂದಿಗೆ ಮುಖಾಮುಖಿ ಚರ್ಚೆ ನಡೆಸಲು ಆಹ್ವಾನ ನೀಡುವುದಾಗಿಯೂ ತಿಳಿಸಿದ್ದಾರೆ. ₹16,745 ಕೋಟಿ ವೆಚ್ಚದ ಮೇಕೆದಾಟು ಸಮತೋಲನ ಜಲಾಶಯ ಮತ್ತು ಕುಡಿಯುವ ನೀರಿನ ಯೋಜನೆಗೆ ಕರ್ನಾಟಕ ಸರ್ಕಾರ ಹೊಸ ವಿವರವಾದ ಯೋಜನಾ ವರದಿ (DPR) ಸಲ್ಲಿಸಿದೆ.
ಈ ವರದಿಯ ಪರಿಶೀಲನೆ ಹಾಗೂ ಅಗತ್ಯ ಅನುಮೋದನೆಗಳನ್ನ ತ್ವರಿತಗೊಳಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಆಗಸ್ಟ್ 13ರಂದು ಸಲ್ಲಿಸಿರುವ ಅನುಸರಣೆ ವರದಿಯೊಂದಿಗೆ ಮೇಕೆದಾಟು ಡಿಪಿಆರ್ ಪರಿಶೀಲನೆಗೆ ಆದ್ಯತೆ ನೀಡುವಂತೆ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸಿ.ಆರ್.ಪಾಟೀಲ್ ಅವರಿಗೆ ಸಲ್ಲಿಸಿದ ಪತ್ರದಲ್ಲಿ ಡಿ.ಕೆ.ಶಿವಕುಮಾರ್ ಕೋರಿದ್ದಾರೆ.
ಕೃಷ್ಣಾ ಜಲ ವಿವಾದದಲ್ಲೂ ಕೇಂದ್ರದ ನೆರವಿಗೆ ಮನವಿ
ಕೃಷ್ಣಾ ಜಲ ವಿವಾದಗಳ ನ್ಯಾಯಮಂಡಳಿ-2ಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಬಾಕಿ ಇರುವ ವಿಚಾರದಲ್ಲಿಯೂ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಕರ್ನಾಟಕ ಮನವಿ ಮಾಡಿದೆ. ಮೇಲ್ದಂಡೆ ಕೃಷ್ಣಾ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳನ್ನ ಬಗೆಹರಿಸಲು ನೆರೆಯ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸುವಂತೆಯೂ ಡಿ.ಕೆ.ಶಿವಕುಮಾರ್ ಕೋರಿದ್ದಾರೆ. ಜಲ ವಿವಾದಗಳ ಪರಿಹಾರ ಮತ್ತು ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ಸಮನ್ವಯಕ್ಕೆ ಕೇಂದ್ರದ ನೆರವು ಪಡೆಯಲು ರಾಜ್ಯ ಸರ್ಕಾರ ಪ್ರಯತ್ನಿಸುತ್ತಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ ₹21,167 ಕೋಟಿ ನೆರವಿನ ಬೇಡಿಕೆ
ಭದ್ರಾ ಮೇಲ್ದಂಡೆ ಯೋಜನೆಗೂ ಕೇಂದ್ರ ಸರ್ಕಾರದ ನೆರವು ನೀಡುವಂತೆ ಮನವಿ ಮಾಡಲಾಗಿದೆ. ₹21,167.93 ಕೋಟಿ ವೆಚ್ಚದ ಈ ಯೋಜನೆಯನ್ನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY) ಅಡಿಯಲ್ಲಿ ಸೇರಿಸಬೇಕೆಂದು ರಾಜ್ಯ ಸರ್ಕಾರ ಕೋರಿದೆ. 2023-24ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದ್ದ ನೆರವನ್ನ ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಬೇಕೆಂಬ ಬೇಡಿಕೆಯನ್ನೂ ಮುಂದಿಡಲಾಗಿದೆ. ಇದರಿಂದ ಯೋಜನೆಯ ಅನುಷ್ಠಾನಕ್ಕೆ ಅಗತ್ಯವಾದ ಹಣಕಾಸಿನ ನೆರವು ದೊರೆಯಲಿದೆ ಎಂಬ ನಿರೀಕ್ಷೆಯಿದೆ. ಇದೇ ವೇಳೆ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಪ್ರವಾಹ ನಿರ್ವಹಣೆ ಹಾಗೂ ಗಡಿ ಪ್ರದೇಶಗಳ ಕಾರ್ಯಕ್ರಮ (FMBAP) ಅಡಿಯಲ್ಲಿ ಕರ್ನಾಟಕ ಸಲ್ಲಿಸಿರುವ ಪ್ರಸ್ತಾವನೆಗಳನ್ನ ತ್ವರಿತವಾಗಿ ಪರಿಶೀಲಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ.
ಮಹಾದಾಯಿ, ನದಿ ಜೋಡಣೆ ಯೋಜನೆಗಳ ಪ್ರಸ್ತಾಪ
ಮಹಾದಾಯಿ ಜಲ ವಿವಾದದ ಕುರಿತು ಕರ್ನಾಟಕ ಮತ್ತು ಗೋವಾ ಮುಖ್ಯಮಂತ್ರಿಗಳ ಜಂಟಿ ಸಭೆ ನಡೆಸುವುದಾಗಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಭರವಸೆ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಗೋದಾವರಿ-ಕಾವೇರಿ ಮತ್ತು ಬೆಡ್ತಿ-ವರದಾ (ಹಿರೇವದತ್ತಿ) ನದಿ ಜೋಡಣೆ ಯೋಜನೆಗಳಲ್ಲಿ ಕರ್ನಾಟಕಕ್ಕೆ ನ್ಯಾಯಸಮ್ಮತ ನೀರಿನ ಹಂಚಿಕೆ ಖಚಿತಪಡಿಸಬೇಕೆಂದು ಕೇಂದ್ರವನ್ನ ಕೋರಲಾಗಿದೆ. ರಾಜ್ಯದ ವಿವಿಧ ಜಲ ಯೋಜನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನ ಪರಿಹರಿಸಲು ಕೇಂದ್ರದ ಸಹಕಾರ ಅಗತ್ಯವಿದೆ ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.
ಸರ್ವಪಕ್ಷ ನಿಯೋಗ ದೆಹಲಿಗೆ
ಕಸ್ತೂರಿರಂಗನ್ ವರದಿ, ಬರ ಮತ್ತು ಜಲ ಸಮಸ್ಯೆಗಳ ಕುರಿತು ಚರ್ಚಿಸಲು ಸರ್ವಪಕ್ಷ ನಿಯೋಗವನ್ನ ದೆಹಲಿಗೆ ಕರೆದೊಯ್ಯುವುದಾಗಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಈ ನಿಯೋಗದಲ್ಲಿ ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಕೂಡ ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ರಾಜ್ಯದ ಪ್ರಮುಖ ಜಲ ಸಮಸ್ಯೆಗಳು ಮತ್ತು ಯೋಜನೆಗಳ ವಿಚಾರದಲ್ಲಿ ಎಲ್ಲಾ ಪಕ್ಷಗಳು ಒಟ್ಟಾಗಿ ಕೇಂದ್ರದ ಗಮನ ಸೆಳೆಯಬೇಕು ಎಂಬುದು ಅವರ ನಿಲುವಾಗಿದೆ. ಒಟ್ನಲ್ಲಿ ಮೇಕೆದಾಟು ಯೋಜನೆಯ ತ್ವರಿತ ಅನುಮೋದನೆಯಿಂದ ಹಿಡಿದು ಭದ್ರಾ ಮೇಲ್ದಂಡೆ, ಮಹಾದಾಯಿ ಮತ್ತು ನದಿ ಜೋಡಣೆ ಯೋಜನೆಗಳವರೆಗೆ ಕರ್ನಾಟಕದ ವಿವಿಧ ಜಲ ಯೋಜನೆಗಳಿಗೆ ಕೇಂದ್ರದ ನೆರವು ಪಡೆಯಲು ರಾಜ್ಯ ಸರ್ಕಾರ ಮುಂದಾಗಿದೆ.