ಊಟ ಮಾಡುತ್ತಿದ್ದಾಗಲೇ ಹೃದಯಾಘಾತ.. ಕ್ಷಣಾರ್ಧದಲ್ಲೇ ಉಸಿರು ಚೆಲ್ಲಿದ ಚಂದ್ರು
ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದಾಗಲೇ ವ್ಯಕ್ತಿಯೊಬ್ಬರ ಹೃದಯಾಘಾತ ಸಂಭವಿಸಿ ಪ್ರಾಣಪಕ್ಷಿ ಹಾರಿಹೋದ ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ.ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆಯಾಗಿದೆ.
ಸಾವು ಯಾವ ರೂಪದಲ್ಲಿ ಬರುತ್ತೆ ಅನ್ನೋದೇ ಗೊತ್ತಾಗಲ್ಲ.. ಆರೋಗ್ಯವಾಗಿಯೇ ಇದ್ದ ವ್ಯಕ್ತಿ ಊಟ ಮಾಡುತ್ತಿದ್ದಾಗಲೇ ಏಕಾಏಕಿ ಎದೆನೋವಿನಿಂದ ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ. ರೆಸ್ಟೋರೆಂಟ್‌ನಲ್ಲಿ ಕುಳಿತು ಊಟ ಮಾಡುತ್ತಿದ್ದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ್ದು, ಕ್ಷಣಾರ್ಧದಲ್ಲೇ ಕುಸಿದು ಬಿದ್ದಿದ್ದಾರೆ. ಅಷ್ಟಕ್ಕೂ ಸಿಬ್ಬಂದಿ ಕಣ್ಣೆದುರೇ ನಡೆದ ಈ ಹೃದಯ ವಿದ್ರಾವಕ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಳಗ್ಗೆ ಹೊತ್ತು.. ರೆಸ್ಟೋರೆಂಟ್‌ನಲ್ಲಿ ಎಂದಿನಂತೆ ಕೆಲಸ ಕಾರ್ಯಗಳು ನಡೆಯುತ್ತಿದ್ದವು. ಗ್ರಾಹಕರು ಊಟ ಮಾಡುತ್ತಿದ್ದರು. ಇದೇ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಚಂದ್ರು ಕೂಡ ಊಟಕ್ಕೆ ಕುಳಿತಿದ್ದರು. ತಟ್ಟೆಯಲ್ಲಿ ಊಟ ಬಡಿಸಿಕೊಂಡು ತಿನ್ನುತ್ತಿದ್ದ ಚಂದ್ರುಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ.
ಎದೆನೋವಿನಿಂದ ಚಂದ್ರು ಒದ್ದಾಡಿದ್ದಾರೆ. ಕುಳಿತಿದ್ದ ಟೇಬಲ್ ಮೇಲೆಯೇ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡ ರೆಸ್ಟೋರೆಂಟ್ ಸಿಬ್ಬಂದಿ ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಪ್ರಾಣ ಉಳಿಸಲು ಸಿಪಿಆರ್ ಕೂಡ ಮಾಡಿದ್ದಾರೆ. ಆದ್ರೆ ದುರದೃಷ್ಟವಶಾತ್ ಚಂದ್ರುಗೆ ಮತ್ತೆ ಪ್ರಜ್ಞೆ ಬಂದಿಲ್ಲ.
ಕೂಡಲೇ ಚಂದ್ರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹೀಗೆ ಊಟ ಮಾಡುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾದ ಚಂದ್ರು ಕುಟುಂಬದಲ್ಲಿ ಈಗ ಶೋಕ ಮಡುಗಟ್ಟಿದೆ.
ಅಂದಹಾಗೆ ಈ ಘಟನೆ ನಡೆದಿರೋದು ಬೆಂಗಳೂರಿನ ಗೊಟ್ಟಿಗೆರೆಯ ಗುರು ಗ್ರೀನ್ಸ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ. ಚನ್ನರಾಯಪಟ್ಟಣ ಮೂಲದ 42 ವರ್ಷದ ಚಂದ್ರು ಇದೇ ರೆಸ್ಟೋರೆಂಟ್‌ನಲ್ಲಿ ಹಲವು ವರ್ಷಗಳಿಂದ ಬಾರ್ ಕ್ಯಾಷಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 30ರ ಬೆಳಗ್ಗೆ ಸುಮಾರು 11.40ರ ವೇಳೆಗೆ ಈ ಘಟನೆ ನಡೆದಿದೆ. ಊಟಕ್ಕೆ ಕುಳಿತಿದ್ದಾಗಲೇ ಸಂಭವಿಸಿದ ಈ ದುರಂತದ ದೃಶ್ಯ ರೆಸ್ಟೋರೆಂಟ್‌ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಗ್ಯವಾಗಿದ್ದ ವ್ಯಕ್ತಿ ಕ್ಷಣಾರ್ಧದಲ್ಲಿ ಹೃದಯಾಘಾತಕ್ಕೆ ಬಲಿಯಾಗಿರುವುದು ಸ್ಥಳೀಯರು ಹಾಗೂ ಸಹೋದ್ಯೋಗಿಗಳಲ್ಲಿ ಆಘಾತ ಮೂಡಿಸಿದೆ.ಒಟ್ಟಿನಲ್ಲಿ, ಸಾವು ಯಾವಾಗ, ಹೇಗೆ ಬರುತ್ತೆ ಅನ್ನೋದೇ ಗೊತ್ತಾಗಲ್ಲ ಅನ್ನೋದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಹೃದಯಾಘಾತ ಎಂದರೇನು? ಹೃದಯಾಘಾತಕ್ಕೆ ಕಾರಣಗಳೇನು?
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ವಯಸ್ಸಾದವರಷ್ಟೇ ಅಲ್ಲ, ಯುವಕರೂ ಕೂಡ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕಾರಿ ವಿಚಾರ. ಅದರಲ್ಲೂ ಯಾವುದೇ ಮುನ್ಸೂಚನೆ ಇಲ್ಲದೆ ಹಠಾತ್ ಹೃದಯಾಘಾತ ಸಂಭವಿಸುತ್ತಿದೆ. ಹಾಗಾದ್ರೆ ಹೃದಯಾಘಾತಕ್ಕೆ ಅಸಲಿ ಕಾರಣವೇನು? ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು? ಹೃದಯಾಘಾತದಿಂದ ದೂರವಿರಲು ಏನು ಮಾಡಬೇಕು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೃದಯ ನಮ್ಮ ದೇಹದ ಪ್ರಮುಖ ಅಂಗ. ದೇಹದ ಪ್ರತಿಯೊಂದು ಭಾಗಕ್ಕೂ ರಕ್ತವನ್ನು ಪೂರೈಸುವ ಕೆಲಸವನ್ನು ಹೃದಯ ಮಾಡುತ್ತದೆ. ಆದರೆ ಹೃದಯಕ್ಕೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ಕೊಬ್ಬಿನ ಪದರ ಅಥವಾ ರಕ್ತ ಹೆಪ್ಪುಗಟ್ಟುವಿಕೆಯಿಂದ ರಕ್ತ ಸಂಚಾರಕ್ಕೆ ಅಡ್ಡಿಯಾದಾಗ ಹೃದಯದ ಸ್ನಾಯುಗಳಿಗೆ ಆಮ್ಲಜನಕದ ಕೊರತೆ ಉಂಟಾಗುತ್ತದೆ. ಇದನ್ನೇ ಹೃದಯಾಘಾತ ಎಂದು ಕರೆಯಲಾಗುತ್ತದೆ.
ಹೃದಯಾಘಾತಕ್ಕೆ ಕಾರಣಗಳೇನು?
*ಅಧಿಕ ರಕ್ತದೊತ್ತಡ
*ಮಧುಮೇಹ
*ರಕ್ತದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗುವುದು
*ಧೂಮಪಾನ ಮತ್ತು ಮದ್ಯಪಾನ
*ದೈಹಿಕ ಚಟುವಟಿಕೆಯ ಕೊರತೆ
*ಅತಿಯಾದ ತೂಕ ಮತ್ತು ಬೊಜ್ಜು
*ಅನಾರೋಗ್ಯಕರ ಆಹಾರ ಪದ್ಧತಿ
*ಕುಟುಂಬದಲ್ಲಿ ಹೃದಯ ಕಾಯಿಲೆಯ ಇತಿಹಾಸ
*ಇವೆಲ್ಲವೂ ಹೃದಯಾಘಾತದ ಅಪಾಯವನ್ನು ಹೆಚ್ಚಿಸಬಹುದು.
ಹೃದಯಾಘಾತದ ಎಚ್ಚರಿಕೆ ಲಕ್ಷಣಗಳು
*ಹೃದಯಾಘಾತ ಸಂಭವಿಸುವ ಮೊದಲು ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳಬಹುದು.
*ಎದೆ ಮಧ್ಯಭಾಗದಲ್ಲಿ ನೋವು ಅಥವಾ ಒತ್ತಡ
*ಎಡಗೈ, ಎರಡೂ ಕೈಗಳು, ಬೆನ್ನು, ಕುತ್ತಿಗೆ ಅಥವಾ ದವಡೆಗೆ ನೋವು ಹರಡುವುದು
*ಉಸಿರಾಟದ ತೊಂದರೆ
*ಅತಿಯಾದ ಬೆವರು
*ವಾಕರಿಕೆ ಅಥವಾ ವಾಂತಿ
*ತಲೆಸುತ್ತು ಮತ್ತು ಸುಸ್ತು
ಇನ್ನೂ ಕೆಲವರಿಗೆ ಎದೆನೋವು ಇಲ್ಲದೆಯೂ ಹೃದಯಾಘಾತ ಸಂಭವಿಸಬಹುದು. ವಿಶೇಷವಾಗಿ ಮಹಿಳೆಯರು ಮತ್ತು ಮಧುಮೇಹ ಇರುವವರಲ್ಲಿ ಲಕ್ಷಣಗಳು ವಿಭಿನ್ನವಾಗಿರಬಹುದು.
ಹೃದಯಾಘಾತವಾದಾಗ ಏನು ಮಾಡಬೇಕು?
ಹೃದಯಾಘಾತದ ಲಕ್ಷಣಗಳು ಕಂಡುಬಂದರೆ ಒಂದು ಕ್ಷಣವೂ ತಡಮಾಡಬಾರದು. ತಕ್ಷಣ 112 ಅಥವಾ ಸ್ಥಳೀಯ ಆಂಬುಲೆನ್ಸ್ ಸೇವೆಗೆ ಕರೆ ಮಾಡಿ. ರೋಗಿಯನ್ನು ಸ್ವತಃ ವಾಹನ ಚಲಾಯಿಸಿಕೊಂಡು ಆಸ್ಪತ್ರೆಗೆ ಕರೆದೊಯ್ಯಬೇಡಿ. ವೈದ್ಯಕೀಯ ನೆರವು ಬರುವವರೆಗೆ ವ್ಯಕ್ತಿಯನ್ನು ವಿಶ್ರಾಂತ ಸ್ಥಿತಿಯಲ್ಲಿ ಇರಿಸಿ. ವೈದ್ಯರ ಸಲಹೆಯಿಲ್ಲದೆ ಯಾವುದೇ ಔಷಧಿ ನೀಡಬೇಡಿ.
ವ್ಯಕ್ತಿ ಪ್ರಜ್ಞೆ ಕಳೆದುಕೊಂಡು ಸಾಮಾನ್ಯವಾಗಿ ಉಸಿರಾಡದಿದ್ದರೆ ತಕ್ಷಣ CPR ಪ್ರಾರಂಭಿಸಿ ಮತ್ತು AED ಲಭ್ಯವಿದ್ದರೆ ಬಳಸಿ.
ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಹೇಗೆ?ಪ್ರತಿದಿನ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಿ.
ಹಣ್ಣು, ತರಕಾರಿ ಮತ್ತು ನಾರಿನಾಂಶವಿರುವ ಆಹಾರ ಸೇವಿಸಿ.
ಉಪ್ಪು, ಸಕ್ಕರೆ ಮತ್ತು ಕೊಬ್ಬಿನಂಶ ಹೆಚ್ಚಿರುವ ಆಹಾರ ಕಡಿಮೆ ಮಾಡಿ.
ಧೂಮಪಾನದಿಂದ ದೂರವಿರಿ.
ರಕ್ತದೊತ್ತಡ, ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಪರೀಕ್ಷಿಸಿಕೊಳ್ಳಿ.
ದೇಹದ ತೂಕವನ್ನು ನಿಯಂತ್ರಣದಲ್ಲಿಡಿ.
ಉತ್ತಮ ನಿದ್ರೆ ಮತ್ತು ಒತ್ತಡ ನಿರ್ವಹಣೆಗೆ ಆದ್ಯತೆ ನೀಡಿ.
ಹೃದಯಾಘಾತ ಎನ್ನುವುದು ಜೀವಕ್ಕೆ ಅಪಾಯಕಾರಿಯಾದ ಆರೋಗ್ಯ ಸಮಸ್ಯೆ. ಆದರೆ ಸರಿಯಾದ ಜೀವನಶೈಲಿ, ನಿಯಮಿತ ಆರೋಗ್ಯ ತಪಾಸಣೆ ಮತ್ತು ಸಮಯಕ್ಕೆ ಸರಿಯಾದ ಚಿಕಿತ್ಸೆಯಿಂದ ಅಪಾಯವನ್ನು ಕಡಿಮೆ ಮಾಡಬಹುದು. ಎದೆನೋವು ಅಥವಾ ಹೃದಯಾಘಾತದ ಲಕ್ಷಣಗಳನ್ನು ಗ್ಯಾಸ್ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ.