ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಪ್ರಕರಣ: ಸಿಸಿಬಿ ಎದುರು ಕಣ್ಣೀರಿಟ್ಟ ಕೃಪಾ ಆಳ್ವಾ ಹೇಳಿದ್ದು ಇದೊಂದೇ ಮಾತು
Siddaramaiah Sting Operation case: ಕೇರಳದ ಮಹಿಳೆಯೊಂದಿಗಿನ ಸಂಪರ್ಕ, ಸ್ಟಿಂಗ್ ಆಪರೇಷನ್ ವಿಡಿಯೋ, ಪತ್ರಕರ್ತರೊಂದಿಗಿನ ಸಂಪರ್ಕ ಹಾಗೂ ವಿಡಿಯೋ ವೈರಲ್ ಆಗಿರುವ ವಿಚಾರಗಳ ಕುರಿತು ಸಿಸಿಬಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿರುವ ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೃಪಾ ಆಳ್ವಾ ಅವರನ್ನು ಪೊಲೀಸರು ಎರಡನೇ ಬಾರಿಗೆ ವಿಚಾರಣೆ ನಡೆಸಿದ್ದಾರೆ.
ನವೆಂಬರ್ 9 ರಂದು ತನಿಖಾಧಿಕಾರಿ ಎಸಿಪಿ ರವಿ ಅವರ ಮುಂದೆ ಹಾಜರಾಗಿದ್ದ ಕೃಪಾ ಆಳ್ವಾ ಅವರನ್ನು ಸುಮಾರು ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಇದೀಗ ಮತ್ತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಅದರಂತೆ ಆಗಮಿಸಿದ ಅವರನ್ನು ಸುಮಾರು ಒಂದು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.
ಸಿಸಿಬಿ ವಿಚಾರಣೆ ವೇಳೆ ಕೃಪಾ ಆಳ್ವಾ ಹೇಳಿದ್ದೇನು?
ಎರಡೂ ದಿನಗಳ ವಿಚಾರಣೆ ವೇಳೆ ಕೃಪಾ ಆಳ್ವಾ ಅವರು ಸ್ಟಿಂಗ್ ಆಪರೇಷನ್ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂಬ ನಿಲುವನ್ನೇ ಪುನರುಚ್ಚರಿಸಿದ್ದಾರೆ ಎನ್ನಲಾಗಿದೆ. ವಿಚಾರಣೆ ವೇಳೆ ಹಿರಿಯ ಅಧಿಕಾರಿಗಳ ಮುಂದೆ ಈಗಾಗಲೇ ತಮ್ಮ ಹೇಳಿಕೆಯನ್ನು ನೀಡಿದ್ದೇನೆ. ಮತ್ತೆ ಮತ್ತೆ ಏನು ಹೇಳಲಿ ಎಂದು ಎಸಿಪಿ ರವಿ ಅವರ ಮುಂದೆ ಕಣ್ಣೀರಿಟ್ಟಿದ್ದಾರೆ ಎಂದು ವರದಿಯಾಗಿದೆ.
ಕೇರಳದ ಮಹಿಳೆಯೊಂದಿಗಿನ ಸಂಪರ್ಕ, ಸ್ಟಿಂಗ್ ಆಪರೇಷನ್ ವಿಡಿಯೋ, ಪತ್ರಕರ್ತರೊಂದಿಗಿನ ಸಂಪರ್ಕ ಹಾಗೂ ವಿಡಿಯೋ ವೈರಲ್ ಆಗಿರುವ ವಿಚಾರಗಳ ಕುರಿತು ಸಿಸಿಬಿ ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.
ಈ ವೇಳೆ ಕೃಪಾ ಆಳ್ವಾ ಅವರು, ತಾವು ಹೋಟೆಲ್‌ನಲ್ಲಿ ಕೇವಲ ಅರ್ಧ ಗಂಟೆ ಇದ್ದು ಅಲ್ಲಿಂದ ತೆರಳಿದ್ದಾಗಿ ತಿಳಿಸಿದ್ದಾರೆ. ಅಲ್ಲಿ ವಿಡಿಯೋ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ತನಗೆ ಯಾವುದೇ ಮಾಹಿತಿ ಇರಲಿಲ್ಲ. ವಿಡಿಯೋ ರೆಕಾರ್ಡ್ ಮಾಡಿರುವುದು ಅಥವಾ ಅದು ವೈರಲ್ ಆಗಿರುವುದರ ಬಗ್ಗೆಯೂ ತಿಳಿದಿಲ್ಲ ಎಂದು ಹೇಳಿರುವುದಾಗಿ ವರದಿಯಾಗಿದೆ.
ಅಲ್ಲದೆ, ಈ ಘಟನೆ ನಡೆದು ಹಲವು ವರ್ಷಗಳಾಗಿರುವುದರಿಂದ ಎಲ್ಲ ವಿಚಾರಗಳು ನೆನಪಿಲ್ಲ. ಅಂದು ಕೇರಳದ ಮಹಿಳೆಯೊಬ್ಬರು ದೂರು ನೀಡಿದಾಗ ಹೈಕಮಾಂಡ್‌ನ ನಾಯಕರೊಬ್ಬರಿಗೆ ಮಾಹಿತಿ ನೀಡಿದ್ದೆ. ನಂತರ ಏನಾಯಿತು ಎಂಬುದು ತನಗೆ ತಿಳಿದಿಲ್ಲ ಎಂದು ವಿಚಾರಣೆ ವೇಳೆ ಹೇಳಿದ್ದಾರೆ ಎನ್ನಲಾಗಿದೆ.
ವಿಚಾರಣೆ ವೇಳೆ ಕೆಲವು ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಅಗತ್ಯವಿದ್ದರೆ ಮತ್ತೊಮ್ಮೆ ವಿಚಾರಣೆಗೆ ಹಾಜರಾಗುವಂತೆ ಕೃಪಾ ಆಳ್ವಾ ಅವರಿಗೆ ಸಿಸಿಬಿ ಪೊಲೀಸರು ಸೂಚಿಸಿದ್ದಾರೆ ಎನ್ನಲಾಗಿದೆ. ಸ್ಟಿಂಗ್ ಆಪರೇಷನ್ ವಿಡಿಯೋ ಚಿತ್ರೀಕರಣ, ಅದರ ಪ್ರಸಾರ ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ಸಂಪರ್ಕದ ಕುರಿತು ತನಿಖೆ ಮುಂದುವರಿದಿದೆ.