ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 50 x 80 ಅಡಿವರೆಗಿನ ವಸತಿ ನಿವೇಶನಗಳಲ್ಲಿ ಗರಿಷ್ಠ 4 ವಸತಿ ಘಟಕಗಳವರೆಗೆ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಕ್ಷೆ ಮಂಜೂರಾತಿ ವ್ಯವಸ್ಥೆ ಜಾರಿ ಮಾಡಲಾಗಿದೆ. ‘ನಂಬಿಕೆ ನಕ್ಷೆ 2.0’ ತಂತ್ರಾಂಶ ಲೋಕಾರ್ಪಣೆ ಆಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯನ್ನು ಲೋಕಾರ್ಪಣೆ ಮಾಡಲಾಗಿದ್ದು ಇದು ಸೊಲಿಕಾನ್ ಸಿಟಿಯ ಎಲ್ಲರಿಗೂ ಅನುಕೂಲ ಆಗಲಿದೆ. ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಈಗ ಜನ ಸ್ನೇಹಿಯೇ ಆಗಿದೆ. ಸಿಎಂ ಡಿ.ಕೆ ಶಿವಕುಮಾರ್ ಅವರ ಮಾರ್ಗದರ್ಶನದಂತೆ ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆ ಸಿದ್ಧವಾಗಿದೆ.
ಈ ವೇಳೆ ಮಾತನಾಡಿದ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಅವರು, ಜನರಿಗೆ ಸರಳ, ವೇಗದ ಹಾಗೂ ಪಾರದರ್ಶಕ ಆಡಳಿತ ಒದಗಿಸುವ ಉದ್ದೇಶದಿಂದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ನಿರ್ದೇಶನದಂತೆ ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಗೊಳಿಸಲಾಗಿದೆ. ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿಗಾಗಿ ದಾಖಲೆಗಳನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವ ನಂಬಿಕೆ ನಕ್ಷೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿತ್ತು. ಈ ವ್ಯವಸ್ಥೆಯ ಅನುಷ್ಠಾನದ ನಂತರವೂ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸಿ, ಸಾರ್ವಜನಿಕರಿಗೆ ವೇಗವಾಗಿ ಸೇವೆ ಒದಗಿಸುವ ಅಗತ್ಯವನ್ನು ಮನಗಂಡು, ‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
* 4,000 ಚದರ ಅಡಿ (50x80 ಅಡಿ) ವರೆಗಿನ ವಸತಿ ಕಟ್ಟಡಗಳ ಕಟ್ಟಡ ನಕ್ಷೆ ಮಂಜೂರಾತಿಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಪಡೆಯಬಹುದಾಗಿದೆ.
* ಅರ್ಹತೆ ಹೊಂದಿರುವ ವಾಸ್ತುಶಿಲ್ಪಿ (Architect) ಮೂಲಕ ಕಟ್ಟಡ ನಕ್ಷೆಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬಹುದಾಗಿದೆ. ಸಲ್ಲಿಸಲಾದ ನಕ್ಷೆಯು ನಗರ ಯೋಜನಾ ನಿಯಮಗಳಿಗೆ ಅನುಗುಣವಾಗಿದ್ದಲ್ಲಿ, ಸ್ವಯಂಚಾಲಿತವಾಗಿ ಸುಮಾರು 30 ನಿಮಿಷಗಳೊಳಗೆ ಕಟ್ಟಡ ನಕ್ಷೆ ಮಂಜೂರಾತಿ ದೊರೆಯುವ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ಖಾತಾ ದಾಖಲೆಗಳ ಅಪ್‌ಲೋಡ್ ಅಗತ್ಯವಿಲ್ಲ:
* ‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯಲ್ಲಿ ಸಾರ್ವಜನಿಕರು ಖಾತಾ ದಾಖಲೆ ಸೇರಿದಂತೆ ಹಲವು ದಾಖಲೆಗಳನ್ನು ಪ್ರತ್ಯೇಕವಾಗಿ ಅಪ್‌ಲೋಡ್ ಮಾಡುವ ಅಗತ್ಯವಿಲ್ಲ.
* ಇ-ಖಾತಾ ಸಂಖ್ಯೆಯನ್ನು ನಮೂದಿಸಿದ ಕೂಡಲೇ ಸಂಬಂಧಿತ ಆಸ್ತಿಯ ಮೂಲ ಮಾಲೀಕತ್ವದ ಮಾಹಿತಿಯನ್ನು ವ್ಯವಸ್ಥೆಯೇ ಸ್ವಯಂಚಾಲಿತವಾಗಿ ಪಡೆದುಕೊಳ್ಳಲಿದೆ.
* ಕಟ್ಟಡ ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಹಾಗೂ ಸ್ವಯಂಚಾಲಿತಗೊಳಿಸುವ ಮೂಲಕ ಮಧ್ಯವರ್ತಿಗಳ ಹಸ್ತಕ್ಷೇಪವನ್ನು ತಡೆಯಲಾಗುತ್ತಿದೆ.
* ಸಾರ್ವಜನಿಕರ ಅಮಾಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚನೆ ಅಥವಾ ಶೋಷಣೆ ನಡೆಯದಂತೆ ಪಾರದರ್ಶಕ ಹಾಗೂ ಜನಸ್ನೇಹಿ ಆಡಳಿತ ವ್ಯವಸ್ಥೆಯನ್ನು ರೂಪಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
* ಈ ಹಿಂದೆ ಕಟ್ಟಡ ನಕ್ಷೆ ಮಂಜೂರಾತಿಗೆ 2 ರಿಂದ 3 ತಿಂಗಳವರೆಗೆ ಸಮಯ ಬೇಕಾಗುತ್ತಿತ್ತು.
* ‘ನಂಬಿಕೆ ನಕ್ಷೆ 2.0’ ವ್ಯವಸ್ಥೆಯನ್ನು ಮೊದಲ ಹಂತದಲ್ಲಿ ಆಯ್ದ ಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.
* ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿ, ಅಗತ್ಯ ಸುಧಾರಣೆಗಳನ್ನು ಕೈಗೊಂಡ ನಂತರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಇತರ ಪ್ರದೇಶಗಳಿಗೂ ವಿಸ್ತರಣೆ.
* ಮುಂದಿನ ಹಂತದಲ್ಲಿ ವಾಣಿಜ್ಯ ಕಟ್ಟಡಗಳು ಹಾಗೂ ದೊಡ್ಡ ವಿಸ್ತೀರ್ಣದ ಕಟ್ಟಡಗಳಿಗೂ ಸರಳೀಕೃತ ಹಾಗೂ ತಂತ್ರಜ್ಞಾನ ಆಧಾರಿತ ಮಂಜೂರಾತಿ ವ್ಯವಸ್ಥೆ ಜಾರಿಗೆ ಸಿದ್ಧತೆ.
* ಜನರ ಹಾಗೂ ಅರ್ಹ ಆರ್ಕಿಟೆಕ್ಟ್ ಮೇಲೆ ನಂಬಿಕೆಯಿಟ್ಟು ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ವ್ಯವಸ್ಥೆಯ ದುರುಪಯೋಗ ಕಂಡುಬಂದಲ್ಲಿ, ಅಂತಹವರರಿಗೆ ದುಬಾರಿ ಶಿಕ್ಷೆ ವಿಧಿಸಲಾಗುವುದಾಗಿ ಸಚಿವರು ಎಚ್ಚರಿಸಿದರು.
ಇದರಿಂದ ಬೆಂಗಳೂರಿನ ಜನರಿಗೆ ಹೆಚ್ಚು ಉಪಯುಕ್ತತೆ ಆಗಲಿದೆ. ಎಲ್ಲರಿಗೂ ಅನುಕೂಲ ಆಗುವುದರಿಂದ ಇದನ್ನು ಜಾರಿ ಮಾಡಲಾಗಿದೆ. ಕೃಷ್ಣಭೈರೇಗೌಡ ಅವರು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರು ಆದ ಮೇಲೆ ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗುತ್ತಿವೆ. ಎಲ್ಲವೂ ಜನ ಸ್ನೇಹಿ ಆಗಿದ್ದು ನಗರ ವಾಸಿಗಳಿಗೂ ಸಚಿವರ ಕೆಲಸ, ಕಾರ್ಯಗಳು ಮೆಚ್ಚುಗೆ ಆಗುತ್ತಿವೆ. ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲಸ ವೇಗ ಪಡೆದಿದೆ ಎಂದು ಹೇಳಬಹುದು. ಈ ಮೊದಲೇ ಪುಟ್‌ಪಾತ್ ತೆರವು ಕಾರ್ಯಾಚರಣೆ ಯಶಸ್ವಿಯಾಗಿದ್ದು ಹಲವು ಕಡೆ ಟ್ರಾಫಿಕ್ ಆಗಿದೆ ಎನ್ನಬಹುದು. ರಸ್ತೆಗೆ ಬಂದಿದ್ದ ಸಾಕಷ್ಟು ಅಂಗಡಿಗಳನ್ನು ತೆರವು ಮಾಡಲಾಗಿದೆ. ವಾಹನಗಳ ಓಡಾಟ ಸುಲಭವಾಗಿದೆ.