ಇಂದಿನಿಂದ ವಿಶೇಷ ಅಧಿವೇಶನ ಆರಂಭವಾಗಿದ್ದು, ಮೊದಲ ದಿನ ಕಸ್ತೂರಿ ರಂಗನ್ ವರದಿ ಬಗ್ಗೆ ಗಂಭೀರವಾದ ಚರ್ಚೆ ನಡೆದಿದೆ. ದಿನವೀಡಿ ವರದಿ ಬಗ್ಗೆ ಪ್ರಸ್ತಾಪ ಮಾಡಿ ರಾಜ್ಯಕ್ಕೆ ಆಗುವ ಡ್ಯಾಮೇಜ್ ಬಗ್ಗೆ ಸದನದಲ್ಲಿ ಸುದೀರ್ಘ ಚರ್ಚೆ ಮಾಡಲಾಗಿದೆ. ಸದನದಲ್ಲಿ ಕಸ್ತೂರಿ ರಂಗನ್ ಮತ್ತು ಬರಗಾಲ ನಿರ್ವಹಣೆಯ ಬಗ್ಗೆ ಚರ್ಚೆಗಳು ನಡೆದವು. ವಿರೋಧ ಪಕ್ಷದ ಸದಸ್ಯರು ಕಸ್ತೂರಿರಂಗನ್ ವರದಿ ಮತ್ತು ಬರಗಾಲದ ಕುರಿತು ನಿಲುವಳಿ ಸೂಚನೆ ಅಡಿಯಲ್ಲಿ ಚರ್ಚೆಗೆ ಅವಕಾಶ ಕೋರಿದರು. ಇದರಿಂದ ಸದನದಲ್ಲಿ ಗದ್ದಲ ಏರ್ಪಟ್ಟಿತ್ತು. ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಸಭಾಧ್ಯಕ್ಷ ಪೀಠವು ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಿದೆ ಎಂದು ಆಕ್ಷೇಪ ಮಾಡಿದರು.
ಇಂದಿನಿಂದ ವಿಶೇಷ ಅಧವೇಶನ ಆರಂಭ.
ಮೊದಲ ದಿನವೀಡಿ ಕಸ್ತೂರಿ ರಂಗನ್ ವರದಿ ಚರ್ಚೆ
ಚರ್ಚೆಗೆ ಪ್ರಸ್ತಾಪ ಮಂಡಿಸಿದ ಸಿಎಂ ಡಿ.ಕೆ. ಶಿವಕುಮಾರ್
ರಾಜಕಾರಣ ಪಕ್ಕಕ್ಕಿಟ್ಟು ರಾಜ್ಯದ ಹಿತಕ್ಕಾಗಿ ನಿರ್ಧಾರ ಕೈಗೊಳ್ಳೋಣ
ವಿಶೇಷ ಅಧಿವೇಶನದ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ಕುರಿತು ಗಂಭೀರ ಚರ್ಚೆ ನಡೆಯಿತು. ಪ್ರಸ್ತಾಪ ಮಂಡಿಸಿದ ಸಿಎಂ ಡಿ.ಕೆ. ಶಿವಕುಮಾರ್, ಈ ವಿಷಯದಲ್ಲಿ ಯಾವುದೇ ರಾಜಕಾರಣ ಮಾಡುವ ಅಗತ್ಯವಿಲ್ಲ. ನಾವೂ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದರು. ಮಲೆನಾಡು ಹಾಗೂ ಪಶ್ಚಿಮ ಘಟ್ಟ ವ್ಯಾಪ್ತಿಯ ರೈತರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಆದ್ಯತೆ. ವಿಪಕ್ಷಗಳು ಸೂಕ್ತ ಸಲಹೆಗಳನ್ನು ನೀಡಲಿ, ಎಲ್ಲರೂ ಸೇರಿ ರಾಜ್ಯದ ಹಿತದೃಷ್ಟಿಯಿಂದ ಸರ್ವಪಕ್ಷ ನಿಯೋಗ ಕೊಂಡೊಯ್ಯೋಣ ಎಂದು ಸದನಕ್ಕೆ ಪ್ರಸ್ತಾಪಿಸಿದರು.
ಸರ್ಕಾರಕ್ಕೆ ವಿಪಕ್ಷ ನಾಯಕರಿಂದ ಪ್ರಮುಖ ಸಲಹೆ
ಕೇರಳ ಮಾದರಿಯಲ್ಲಿ ರಾಜ್ಯದಲ್ಲೂ ಭೌತಿಕ ಸರ್ವೆ ನಡೆಸಿ
ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಸಮರಕ್ಕೆ ಸಮರ್ಥ ವಕೀಲರ ತಂಡ ರಚಿಸಿ
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ಸರ್ಕಾರಕ್ಕೆ ಮೂರು ಪ್ರಮುಖ ಸಲಹೆಗಳನ್ನು ನೀಡಿದರು. ಮೊದಲನೆಯದಾಗಿ ಕೇರಳ ರಾಜ್ಯದ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಭೌತಿಕ ಸರ್ವೆ ನಡೆಸಿ ನೈಜ ವರದಿಯನ್ನು ಸಿದ್ಧಪಡಿಸಬೇಕು. ಎರಡನೆಯದಾಗಿ ಕಸ್ತೂರಿ ರಂಗನ್ ವರದಿ ಜಾರಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಲವಾದ ಕಾನೂನು ಹೋರಾಟ ನಡೆಸಲು ತಜ್ಞ ವಕೀಲರ ತಂಡವನ್ನು ರಚಿಸಬೇಕು. ಮೂರನೆಯದಾಗಿ ಕೇಂದ್ರ ಸರ್ಕಾರದ ಏಳನೇ ಅಧಿಸೂಚನೆ ತಿರಸ್ಕರಿಸಲು ಕೇಂದ್ರದ ಬಳಿಗೆ ಸರ್ವಪಕ್ಷ ನಿಯೋಗ ತೆರಳಲು ವಿಪಕ್ಷಗಳು ಸಿದ್ಧವಿರುವುದಾಗಿ ಆರ್ ಅಶೋಕ್ ಅವರು ಹೇಳಿದ್ದಾರೆ.
ವರದಿಯಿಂದ ರಾಜ್ಯಕ್ಕಾಗುವ ಪರಿಣಾಮಗಳ ಬಗ್ಗೆ ಗಂಭೀರ ಚರ್ಚೆ..!
ಕಸ್ತೂರಿ ರಂಗನ್ ವರದಿ ಅನ್ವಯ ರಾಜ್ಯದ ಹತ್ತು ಜಿಲ್ಲೆಗಳ 1,500ಕ್ಕೂ ಹೆಚ್ಚು ಗ್ರಾಮಗಳು ಮತ್ತು 20,668 ಚದರ ಕಿಲೋ ಮೀಟರ್‌ಗೂ ಹೆಚ್ಚಿನ ಭೂಪ್ರದೇಶ ಪರಿಸರ ಸೂಕ್ಷ್ಮ ವಲಯದ (ESA) ವ್ಯಾಪ್ತಿಗೆ ಬರಲಿದೆ. ಇದರಿಂದ ಆ ಭಾಗದಲ್ಲಿ ಕೃಷಿ ಚಟುವಟಿಕೆಗಳು, ರಸ್ತೆ, ವಿದ್ಯುತ್‌ನಂತಹ ಮೂಲಭೂತ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸಾರ್ವಜನಿಕರ ದೈನಂದಿನ ಜೀವನದ ಮೇಲೆ ಭಾರಿ ಹೊಡೆತ ಬೀಳಲಿದೆ. ಕೇಂದ್ರದ ಏಳನೇ ಅಧಿಸೂಚನೆ ಜಾರಿಯಾದರೆ ಮಲೆನಾಡು ಭಾಗ ಸಂಪೂರ್ಣವಾಗಿ ಸ್ತಬ್ಧವಾಗುವ ಭೀತಿ ಎದುರಾಗಿದ್ದು, ಸದನದಲ್ಲಿ ಪಕ್ಷಾತೀತವಾಗಿ ವರದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಸದನದಲ್ಲಿ ಮಲೆನಾಡು ಮತ್ತು ಕರಾವಳಿ ಭಾಗದ ಶಾಸಕರು, ಸದಸ್ಯರು ತಮ್ಮ ಭಾಗದ ರೈತರ ಕಷ್ಟಗಳನ್ನು ಸದನದಲ್ಲಿ ಎಲ್ಲರ ಗಮನಕ್ಕೆ ತಂದರು. ಕಳೆದ ಅಧಿವೇಶವನ್ನು ಎರಡು ದಿನಗಳ ಮೊದಲೇ ಮುಗಿಸಿರುವುದನ್ನು ವಿರೋಧ ಪಕ್ಷದವರು ನೆನಪಿಸಿ ಸರ್ಕಾರಕ್ಕೆ ತಿರುಗೇಟು ನೀಡಿದರು. ವಿಶೇಷ ಅಧಿವೇಶನವನ್ನು ವಿಶೇಷ ಚರ್ಚೆಗಾಗಿ ಕರೆಯಲಾಗಿದೆ. ನಿಲುವಳಿ ಸೂಚನೆಯ ಮೂಲಕ ಚರ್ಚೆಗೆ ಅವಕಾಶ ನೀಡದಿರುವ ಕುರಿತು ಗಂಭೀರವಾಗಿ ಚರ್ಚಿಸಲು ವಿರೋಧ ಪಕ್ಷ ಸಿದ್ಧವಿತ್ತು. ಶಾಸಕಿ ನಯನ ಮೋಟಮ್ಮ ಅವರು ಆಕ್ರೋಶಗೊಂಡರು. ಮಲೆನಾಡು ಭಾಗದ ಶಾಸಕರ ಕಷ್ಟಗಳನ್ನು ಯಾರು ಕೇಳುತ್ತಿಲ್ಲ. ಬೆಂಗಳೂರು ಶಾಸಕರು ಮಾತನಾಡಲು ಅವಕಾಶನೇ ನೀಡುತ್ತಿಲ್ಲ ಎಂದು ಹೇಳಿದರು.
ಕಸ್ತೂರಿರಂಗನ್ ವರದಿ ಮೇಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮಾತನಾಡುವಾಗ ಸಿಎಂ ಡಿಕೆ ಶಿವಕುಮಾರ್ ಅವರು ಮಾತನಾಡಿದರು. ಇದರಿಂದ ಕಸ್ತೂರಿರಂಗನ್ ವರದಿ ಬಗ್ಗೆ ಬಿ.ವೈ ವಿಜಯೇಂದ್ರ ಅವರು ಮತ್ತು ಸಿಎಂ ಡಿಕೆ ಶಿವಕುಮಾರ್ ನಡುವೆ ಮಾತಿನ ಸಮರ ನಡೆಯಿತು. ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಸಚಿವರು, ಶಾಸಕರು ರಾಜಕಾರಣ ಮಾಡುತ್ತಿದ್ದಾರೆ. ಜನರನ್ನು ಬೀದಿಗೆ ತರುವ ಕೆಲಸ ಮಾಡ್ತಿದ್ದಾರೆ ಅಂತ ವಿಜಯೇಂದ್ರ ಆರೋಪ ಮಾಡಿದರು.
ಬಿ.ವೈ ವಿಜಯೇಂದ್ರ ಆರೋಪಕ್ಕೆ ಸಿಎಂ ಡಿಕೆ ಶಿವಕುಮಾರ್ ಅವರು ಟಕ್ಕರ್ ಕೊಟ್ಟು, ಯಾರೂ ನಿಮ್ಮ ಥರ ಆಡಳಿತ ಪಕ್ಷದವರು, ರಾಜಕೀಯ ಮಾಡ್ತಿದ್ದಾರೆ ಅಂತ ಹೇಳಲಿಲ್ಲ. ಯಾರು ರಾಜಕಾರಣ ಮಾಡ್ತಿದ್ದಾರೆ ಹೇಳಿ. ಯಾರೂ ಯಾರನ್ನೂ ಎತ್ತಿ ಕಟ್ಟಿಲ್ಲ, ನೀವೇ ಎತ್ತಿ ಕಟ್ತಿದ್ದೀರಿ, ಪಾಲಿಟಿಕ್ಸ್ ಮಾಡ್ತಿದ್ದೀರಿ. ಕೇಂದ್ರದ ಮುಂದೆ ವರದಿ ಇದೆಯಲ್ಲ, ಬಿಜೆಪಿಯವರ ಜವಾಬ್ದಾರಿ ಇದು ಅಂತ ನಮ್ಮವರು ಹೇಳಿರಬೇಕು. ಇಲ್ಲಿ ನೀವು ಮಾತಾಡ್ತಿರೋದು ನಮ್ಮಿಂದಾಗಿ, ನಾವು ನಿಮಗೆ ಮಾತಾಡಲು ಶಕ್ತಿ ಕೊಟ್ಟಿರೋದು, ಒಟ್ಟಿಗೆ ಚರ್ಚೆ ಮಾಡಿ ಕೇಂದ್ರಕ್ಕೆ ತಿಳಿಸೋಣ ಅಂತ ಈ ಅಧಿವೇಶ ನಡೆಸಲಾಗುತ್ತಿದೆ ಎಂದರು.
ಈ ಮಧ್ಯೆ ಬಿ.ವೈ ವಿಜಯೇಂದ್ರ ಅವರ ನೆರವಿಗೆ ಬಂದ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು, ಸಿಎಂ ಡಿ.ಕೆ ಶಿವಕುಮಾರ್ ಮತ್ತು ಬಿ.ವೈ ವಿಜಯೇಂದ್ರ ಅವರ ಮಾತುಗಳಲ್ಲಿ ಸಾಮ್ಯತೆ ಇಲ್ಲ. ಕಸ್ತೂರಿ ರಂಗನ್ ವರದಿ ಜಾರಿಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಬಲವಾದ ಕಾನೂನು ಹೋರಾಟ ನಡೆಸಲು ತಜ್ಞ ವಕೀಲರ ತಂಡವನ್ನು ರಚಿಸಬೇಕು. ಎಲ್ಲರೂ ಒಟ್ಟಾಗಿ ಹೋರಾಡಬೇಕು. ಹೊರಗಡೆ ಹೋದ ಮೇಲೆ ಒಬ್ಬರ ಮೇಲೆ ಒಬ್ಬರು ಆರೋಪ, ಪ್ರತ್ಯಾರೋಪ ಮಾಡಬಾರದು. ಇಲ್ಲಿ ಒಟ್ಟಿಗೆ ಹೋಗೋಣ ಅಂತೀರಿ, ಅಲ್ಲಿ ನಿಮ್ಮ ಸಚಿವರು ಪ್ರತಿಭಟನೆ ಮಾಡಿ ಅಂತ ಜನಕ್ಕೆ ಹೇಳ್ತೀರಿ. ಇದು ಡಬಲ್ ಸ್ಟಾಂಡರ್ಡ್, ಇದು ಬೇಡ ಅಂದ ಆರ್ ಅಶೋಕ್ ಗರಂ ಆಗಿಯೇ ಹೇಳಿದರು.