SOCIAL MEDIA

Newsletter

PARTNER SITES
Select Language Select State

ಗ್ರಾಮ ಪಂಚಾಯಿತಿಗಳಿಗೆ ಆರ್ಥಿಕ ಬಲ ತುಂಬಲು ಸರ್ಕಾರದ ಮಾಸ್ಟರ್ ಪ್ಲಾನ್‌! ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು?

ಗ್ರಾಮ ಪಂಚಾಯಿತಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಹಲವು ಕ್ರಮಗಳನ್ನ ಕೈಗೊಳ್ಳುವುದಾಗಿ ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸ್ಥಳೀಯ ಸಂಸ್ಥೆಗಳಿಗೆ ಜಿಎಸ್‌ಟಿ ಆದಾಯದಲ್ಲಿ ಪಾಲು ನೀಡಲು ಜಿಎಸ್‌ಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವುದು, ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಭೆ ರಚನೆ ಹಾಗೂ ‘ಜನರ ಯೋಜನೆ’ ಜಾರಿಗೆ ಮಾರ್ಗಸೂಚಿ ರೂಪಿಸಲು ಸೂಚಿಸಿದ್ದಾರೆ. ಅಲ್ಲದೆ ಪಂಚಾಯಿತಿಗಳಿಗೆ ಅನುದಾನ ಹಂಚಿಕೆ, ಗ್ರಾಮ ಠಾಣಾ ಗಡಿ ನಿರ್ಧಾರ ಮತ್ತು KIADB ಸಂಗ್ರಹಿಸುವ ಆಸ್ತಿ ತೆರಿಗೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಪಾಲು ನೀಡುವ ವಿಚಾರಗಳ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

Written By Puttaraj K Alur
Published: Oct 14, 2026, 06:53 PM IST | Updated: Oct 14, 2026, 07:07 PM IST
Image Credit: DK Shivakumar
Join

CM DK Shivakumar on Gram Panchayat Funding: ರಾಜ್ಯದ ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಆರ್ಥಿಕ ಸಾಮರ್ಥ್ಯವನ್ನ ಹೆಚ್ಚಿಸಿ, ಆಡಳಿತ ವ್ಯವಸ್ಥೆಯನ್ನ ಮತ್ತಷ್ಟು ಬಲಪಡಿಸಲು ಕರ್ನಾಟಕ ಸರ್ಕಾರ ಮಹತ್ವದ ಕ್ರಮಗಳಿಗೆ ಮುಂದಾಗಿದೆ. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಜಿಎಸ್‌ಟಿ ಆದಾಯದಲ್ಲಿ ಪಾಲು ನೀಡುವ ಕುರಿತು ಜಿಎಸ್‌ಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವುದರ ಜೊತೆಗೆ, ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಭೆಗಳನ್ನ ರಚಿಸುವುದು ಮತ್ತು ಜನರ ಬೇಡಿಕೆಗಳಿಗೆ ಆದ್ಯತೆ ನೀಡುವ ‘ಜನರ ಯೋಜನೆ’ಯನ್ನ ಜಾರಿಗೊಳಿಸಲು ಸರ್ಕಾರ ಉದ್ದೇಶಿಸಿದೆ.

ಬುಧವಾರ ಬೆಂಗಳೂರಿನ ಕೃಷ್ಣಾ ಗೃಹ ಕಚೇರಿಯಲ್ಲಿ ನಡೆದ ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸ್ಥಳೀಯ ಆಡಳಿತದ ಸುಧಾರಣೆ ಕುರಿತು ಹಲವು ನಿರ್ದೇಶನಗಳನ್ನ ನೀಡಿದರು. ಪಂಚಾಯತ್ ರಾಜ್ ಸಂಸ್ಥೆಗಳಿಗೆ ಹೆಚ್ಚಿನ ಆರ್ಥಿಕ ಸಂಪನ್ಮೂಲ ಒದಗಿಸುವುದು, ಆಡಳಿತದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನ ಹೆಚ್ಚಿಸುವುದು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನ ಪರಿಣಾಮಕಾರಿಯಾಗಿಸುವುದು ಸಭೆಯ ಪ್ರಮುಖ ಉದ್ದೇಶವಾಗಿತ್ತು.

ಪಂಚಾಯಿತಿಗಳಿಗೆ ₹1,261 ಕೋಟಿ ಅನುದಾನ ಬಿಡುಗಡೆ

ರಾಜ್ಯದ ಸ್ಥಳೀಯ ಆಡಳಿತ ಸಂಸ್ಥೆಗಳಿಗೆ ಐದನೇ ರಾಜ್ಯ ಹಣಕಾಸು ಆಯೋಗದ ಶಿಫಾರಸುಗಳ ಅನ್ವಯ ಈಗಾಗಲೇ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸಭೆಯಲ್ಲಿ ತಿಳಿಸಿದರು.

ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ವಿವರ ಹೀಗಿದೆ:

- ಗ್ರಾಮ ಪಂಚಾಯಿತಿಗಳು: ₹1,261 ಕೋಟಿ
- ತಾಲೂಕು ಪಂಚಾಯಿತಿಗಳು: ₹557 ಕೋಟಿ
- ಜಿಲ್ಲಾ ಪಂಚಾಯಿತಿಗಳು: ₹183 ಕೋಟಿ

ಹಣಕಾಸು ಹಂಚಿಕೆ ಮತ್ತು ಆಡಳಿತ ಸುಧಾರಣೆಗೆ ಸಂಬಂಧಿಸಿದ ಆಯೋಗದ ಶಿಫಾರಸುಗಳನ್ನ ಪರಿಶೀಲಿಸಿ ಅನುಷ್ಠಾನಗೊಳಿಸಲು ಗ್ರಾಮೀಣಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಅನುಷ್ಠಾನಕ್ಕೆ ಯೋಗ್ಯವಾದ ಶಿಫಾರಸುಗಳನ್ನ ಪರಿಶೀಲಿಸಿದ ಬಳಿಕ ಸಮಿತಿಯು ತನ್ನ ವರದಿಯನ್ನ ಸಲ್ಲಿಸಲಿದೆ.

ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಭೆ

ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಜನರ ನೇರ ಪಾಲ್ಗೊಳ್ಳುವಿಕೆಗೆ ಅವಕಾಶ ಕಲ್ಪಿಸಲು ಗ್ರಾಮಸಭೆಗಳ ಮಾದರಿಯಲ್ಲಿ ವಾರ್ಡ್ ಸಭೆಗಳನ್ನ ರಚಿಸುವ ಅಗತ್ಯವನ್ನ ಮುಖ್ಯಮಂತ್ರಿ ಒತ್ತಿಹೇಳಿದರು. ಸ್ಥಳೀಯ ಸಮಸ್ಯೆಗಳನ್ನ ಗುರುತಿಸಿ, ಜನರ ಅಗತ್ಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನ ರೂಪಿಸಲು ಈ ವ್ಯವಸ್ಥೆ ನೆರವಾಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಇದೇ ವೇಳೆ ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ರಚಿಸಲಾಗಿರುವ ಜಿಲ್ಲಾ ಯೋಜನಾ ಸಮಿತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಸಭೆ ನಡೆಸಬೇಕು. ಸಭೆಯಲ್ಲಿ ಕೈಗೊಂಡ ನಿರ್ಧಾರಗಳು ಮತ್ತು ಯೋಜನೆಗಳ ಪ್ರಗತಿ ಕುರಿತು ವರದಿ ಸಲ್ಲಿಸುವಂತೆಯೂ ಸೂಚಿಸಲಾಗಿದೆ.

ನಗರ ಸ್ಥಳೀಯ ಸಂಸ್ಥೆಗಳು ಸಂವಿಧಾನದ 74ನೇ ತಿದ್ದುಪಡಿಯ ಆಶಯಕ್ಕೆ ಅನುಗುಣವಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅಗತ್ಯ ಸುಧಾರಣೆಗಳನ್ನ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ಸಂಬಂಧಿತ ಕಾಯ್ದೆಗಳಿಗೆ ತಿದ್ದುಪಡಿ ತರುವ ಕುರಿತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ವಿಶ್ವವಿದ್ಯಾಲಯದ ತಜ್ಞರೊಂದಿಗೆ ಸಮಾಲೋಚನೆ ನಡೆಸುವ ಉದ್ದೇಶವನ್ನೂ ಮುಖ್ಯಮಂತ್ರಿ ಪ್ರಸ್ತಾಪಿಸಿದರು.

‘ಜನರ ಯೋಜನೆ’ಗೆ ಮಾರ್ಗಸೂಚಿ ರೂಪಿಸಲು ಸೂಚನೆ

ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರ ಅಗತ್ಯಗಳನ್ನ ಕೆಳಹಂತದಿಂದಲೇ ಗುರುತಿಸಿ, ಅವುಗಳನ್ನ ರಾಜ್ಯದ ಬಜೆಟ್ ಯೋಜನೆಗಳಲ್ಲಿ ಅಳವಡಿಸುವ ಉದ್ದೇಶದಿಂದ ‘ಜನರ ಯೋಜನೆ’ಯನ್ನ ಜಾರಿಗೊಳಿಸುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಯೋಜನೆಯನ್ನ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಇಲಾಖೆಗಳು ಸೂಕ್ತ ಮಾರ್ಗಸೂಚಿಗಳನ್ನ ಸಿದ್ಧಪಡಿಸಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು. ಯೋಜನೆಗೆ ಅಗತ್ಯವಿರುವ ತಂತ್ರಾಂಶವನ್ನ ಅಭಿವೃದ್ಧಿಪಡಿಸುವಂತೆಯೂ ನಿರ್ದೇಶನ ನೀಡಿದರು.

ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಯೋಜನಾ ನಿರ್ವಹಣಾ ಘಟಕಗಳನ್ನ ಸ್ಥಾಪಿಸಲು ಬೇಕಾದ ಅನುದಾನ ಒದಗಿಸುವ ಅಗತ್ಯವನ್ನೂ ಅವರು ಪ್ರಸ್ತಾಪಿಸಿದರು. ಪಂಚಾಯತ್ ರಾಜ್ ಸಂಸ್ಥೆಗಳ ವಿವಿಧ ಹಂತಗಳಲ್ಲಿ ಯಾವ ಇಲಾಖೆಗೆ ಯಾವ ಜವಾಬ್ದಾರಿ ಇರಲಿದೆ ಎಂಬುದನ್ನ ಸ್ಪಷ್ಟಪಡಿಸುವ ಜವಾಬ್ದಾರಿ ನಕ್ಷೆಯನ್ನ ನಿಗದಿತ ಅವಧಿಯೊಳಗೆ ಸಿದ್ಧಪಡಿಸಿ ಸಲ್ಲಿಸುವಂತೆ ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಲಾಗಿದೆ.

ಸ್ಥಳೀಯ ಸಂಸ್ಥೆಗಳಿಗೆ GST ಆದಾಯದಲ್ಲಿ ಪಾಲು?

ಗ್ರಾಮ ಪಂಚಾಯಿತಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆದಾಯ ಮೂಲಗಳನ್ನ ಹೆಚ್ಚಿಸುವ ನಿಟ್ಟಿನಲ್ಲಿ ಜಿಎಸ್‌ಟಿ ಆದಾಯದಲ್ಲಿ ಪಾಲು ನೀಡುವ ಪ್ರಸ್ತಾಪ ಮಹತ್ವ ಪಡೆದುಕೊಂಡಿದೆ. ಈ ಸಂಬಂಧ ಜಿಎಸ್‌ಟಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ಇದರೊಂದಿಗೆ ಕರ್ನಾಟಕ ಪಂಚಾಯತ್ ಆಡಳಿತಾತ್ಮಕ ಸೇವೆಯನ್ನ ಆರಂಭಿಸುವ ಕುರಿತು ಇಲಾಖೆಯ ಸಚಿವರಿಂದ ಪ್ರಸ್ತಾವನೆ ಪಡೆಯಲು ನಿರ್ಧರಿಸಲಾಗಿದೆ. ಇಂತಹ ಕ್ರಮಗಳು ಸ್ಥಳೀಯ ಆಡಳಿತದಲ್ಲಿ ಆಡಳಿತಾತ್ಮಕ ಸಾಮರ್ಥ್ಯವನ್ನ ಹೆಚ್ಚಿಸಲು ನೆರವಾಗಬಹುದು ಎಂಬ ನಿರೀಕ್ಷೆಯಿದೆ.

ಗ್ರಾಮ ಠಾಣಾ ಗಡಿ ನಿರ್ಧಾರಕ್ಕೆ ವೇಗ

ಗ್ರಾಮ ಠಾಣಾ ಗಡಿಗಳನ್ನ ನಿಗದಿಪಡಿಸುವ ಕಾರ್ಯವನ್ನ ತ್ವರಿತಗೊಳಿಸಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಕಾರ್ಯದಲ್ಲಿ ಸ್ವಾಮಿತ್ವ (SVAMITVA) ಯೋಜನೆಯ ದತ್ತಾಂಶವನ್ನ ಬಳಸಿಕೊಳ್ಳಬೇಕು. ಪಂಚಾಯತ್ ರಾಜ್ ಮತ್ತು ಕಂದಾಯ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಪ್ರಕ್ರಿಯೆಯನ್ನ ಪೂರ್ಣಗೊಳಿಸುವಂತೆ ಸೂಚಿಸಲಾಯಿತು.

ಕೈಗಾರಿಕಾ ಆಸ್ತಿ ತೆರಿಗೆ ಹಂಚಿಕೆ ಕುರಿತು ಮಾಹಿತಿ ಕೇಳಿದ ಸಿಎಂ

ಗ್ರಾಮ ಪಂಚಾಯಿತಿಗಳ ಆದಾಯದ ಮೇಲೆ ಪರಿಣಾಮ ಬೀರುವ ಮತ್ತೊಂದು ವಿಷಯದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಕೈಗಾರಿಕೆಗಳಿಗೆ ತೆರಿಗೆ ವಿಧಿಸುವ ಅಧಿಕಾರವನ್ನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಗ್ರಾಮ ಪಂಚಾಯಿತಿಗಳಿಂದ ಹಿಂಪಡೆದ ಹಿನ್ನೆಲೆಯಲ್ಲಿ ಪಂಚಾಯಿತಿಗಳ ಆದಾಯ ಕಡಿಮೆಯಾಗಿರುವ ವಿಚಾರವನ್ನ ಮುಖ್ಯಮಂತ್ರಿ ಪ್ರಸ್ತಾಪಿಸಿದರು.

KIADB ಸಂಗ್ರಹಿಸುವ ಆಸ್ತಿ ತೆರಿಗೆಯ ಶೇ.30ರಷ್ಟನ್ನ ಗ್ರಾಮ ಪಂಚಾಯಿತಿಗಳಿಗೆ ಹಂಚಿಕೆ ಮಾಡಲು ಸಂಬಂಧಿತ ಅಧಿನಿಯಮದಲ್ಲಿ ಅವಕಾಶವಿದೆ ಎಂದು ಅವರು ತಿಳಿಸಿದರು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಇಲ್ಲಿಯವರೆಗೆ ಸಂಗ್ರಹಿಸಿರುವ ತೆರಿಗೆ ಮೊತ್ತ ಮತ್ತು ಗ್ರಾಮ ಪಂಚಾಯಿತಿಗಳಿಗೆ ವಿತರಿಸಿರುವ ಹಣದ ಸಂಪೂರ್ಣ ವಿವರಗಳನ್ನ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಒಟ್ನಲ್ಲಿ ಗ್ರಾಮ ಪಂಚಾಯಿತಿಗಳ ಹಣಕಾಸು ಸ್ಥಿತಿಯನ್ನ ಸುಧಾರಿಸುವುದು, ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನ ಹೆಚ್ಚಿಸುವುದು ಮತ್ತು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಅಭಿವೃದ್ಧಿ ಯೋಜನೆಗಳನ್ನ ರೂಪಿಸುವುದು ಸರ್ಕಾರದ ಮುಂದಿನ ಆದ್ಯತೆಗಳಾಗಿವೆ. ಈ ಉದ್ದೇಶಗಳಿಗೆ ಸಂಬಂಧಿಸಿದ ಪ್ರಸ್ತಾವನೆಗಳು ಮತ್ತು ಮಾರ್ಗಸೂಚಿಗಳು ಜಾರಿಯಾದ ಬಳಿಕ ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಯಾವ ರೀತಿಯ ಬದಲಾವಣೆಗಳಾಗಲಿವೆ ಎಂಬುದು ಗಮನಾರ್ಹವಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES