ರಾಜ್ಯದ ವಿವಿಧ ನಿಗಮ ಮಂಡಳಿಗಳಿಗೆ 428 ಮಂದಿಗೆ ನೇಮಕ
Karnataka Government News : ರಾಜ್ಯದ ವಿವಿಧ ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಒಟ್ಟು 428 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು : ರಾಜ್ಯದ ವಿವಿಧ ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಒಟ್ಟು 428 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಮೂಲಕ ಹಲವು ದಿನಗಳಿಂದ ಕಾಯುತ್ತಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೆ ಸರ್ಕಾರ ಅಧಿಕಾರದ ಅವಕಾಶ ಕಲ್ಪಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಯೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಹಿಯ ಬಳಿಕ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ. ಬುಧವಾರ ಈ ಕುರಿತು ಅಧಿಕೃತ ಆದೇಶ ಪ್ರಕಟವಾಗಿದ್ದು, ವಿವಿಧ ಜಿಲ್ಲೆಗಳ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ.
ವಿದ್ಯುತ್ ಸರಬರಾಜು ನಿಗಮಗಳು, ಸಾರಿಗೆ ಸಂಸ್ಥೆಗಳು, ಅಭಿವೃದ್ಧಿ ನಿಗಮಗಳು ಸೇರಿದಂತೆ ಹಲವು ಸರ್ಕಾರಿ ಸಂಸ್ಥೆಗಳಿಗೆ ಹೊಸದಾಗಿ ನಿರ್ದೇಶಕರು ಮತ್ತು ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಇದರ ಜೊತೆಗೆ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ವಿವಿಧ ಸಮುದಾಯಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ನಿಗಮಗಳಲ್ಲಿಯೂ ನೇಮಕಾತಿ ನಡೆದಿದೆ.
ಈ ಹಿಂದೆ ಮೈಸೂರಿನಲ್ಲಿ ಮಾತನಾಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸುಮಾರು 500 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮತ್ತು ಮಂಡಳಿಗಳಲ್ಲಿ ಸ್ಥಾನ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದ್ದರು. ನೇಮಕಾತಿಗೆ ಸಂಬಂಧಿಸಿದ ಪಟ್ಟಿಗೆ ಸಹಿ ಹಾಕಲಾಗಿದ್ದು, ಅಂತಿಮ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದರು.
ಅಲ್ಲದೆ, ಅಧಿಕಾರ ಹಂಚಿಕೆಯನ್ನು ಮೂರು ಹಂತಗಳಲ್ಲಿ ಪೂರ್ಣಗೊಳಿಸುವುದಾಗಿ ಹೇಳಿದ್ದರು. ಮೊದಲ ಹಂತದಲ್ಲಿ ನಿರ್ದೇಶಕರು ಮತ್ತು ಸದಸ್ಯರ ನೇಮಕ ಮಾಡಲಾಗುತ್ತಿದ್ದು, ಮುಂದಿನ ಹಂತಗಳಲ್ಲಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ. ಕೆಲವು ಶಾಸಕರಿಗೂ ನಿಗಮ-ಮಂಡಳಿಗಳಲ್ಲಿ ಅವಕಾಶ ನೀಡುವ ಕುರಿತು ಚರ್ಚೆ ನಡೆದಿದೆ ಎಂದು ತಿಳಿಸಿದ್ದರು.
ಇದೀಗ ಮೊದಲ ಹಂತದಲ್ಲಿ 428 ಮಂದಿಗೆ ಸ್ಥಾನ ನೀಡುವ ಮೂಲಕ ಸರ್ಕಾರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಉಳಿದ ಹುದ್ದೆಗಳ ಭರ್ತಿಯತ್ತ ರಾಜಕೀಯ ವಲಯದ ಗಮನ ನೆಟ್ಟಿದೆ.