ಬೆಂಗಳೂರಿಗೆ 5 ಕಮಿಷನರ್‌ಗಳು, ಮುಖ್ಯ ಪೊಲೀಸ್ ಆಯುಕ್ತರಾಗಿ ಆರ್ ಹಿತೇಂದ್ರ ನೇಮಕ.!
ರಾಜಧಾನಿ ಆಡಳಿತ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಬದಲಾವಣೆಯಾಗಿದ್ದು, ಸಿಲಿಕಾನ್ ಸಿಟಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಇಡೀ ನಗರವನ್ನು ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳನ್ನಾಗಿ ವಿಭಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರೊಂದಿಗೆ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರನ್ನು ನೇಮಿಸಲಾಗಿದ್ದು, ಒಟ್ಟು 34 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.. ಹೆಚ್ಚಿನ ವಿವರ ಇಲ್ಲಿದೆ..
ಬೆಂಗಳೂರು : ಮಹಾನಗರದ ಆಡಳಿತ ಸುಧಾರಣೆಗಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಜಿಬಿಎ) ಐದು ವಲಯಗಳಾಗಿ ವಿಂಗಡಿಸಿದ ಸರ್ಕಾರದ ಮಾದರಿಯಲ್ಲೇ, ಈಗ ಬೆಂಗಳೂರು ನಗರ ಪೊಲೀಸ್ ವ್ಯವಸ್ಥೆಗೂ ಭರ್ಜರಿ ಬದಲಾವಣೆ ತರಲಾಗಿದೆ. ಇನ್ನು ಮುಂದೆ ಸಿಲಿಕಾನ್ ಸಿಟಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಿರ್ವಹಿಸಲು ಇಡೀ ನಗರವನ್ನು ಒಟ್ಟು ಐದು ಪ್ರತ್ಯೇಕ ಪೊಲೀಸ್ ಕಮಿಷನರೇಟ್‌ಗಳನ್ನಾಗಿ ವಿಭಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಹೊಸ ಆಡಳಿತಾತ್ಮಕ ಬದಲಾವಣೆಯ ಭಾಗವಾಗಿ ಒಟ್ಟು 34 ಹಿರಿಯ ಐಪಿಎಸ್ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿವಿಧ ಸ್ಥಾನಗಳಿಗೆ ವರ್ಗಾವಣೆ ಮಾಡಲಾಗಿದೆ.
ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಆರ್. ಹಿತೇಂದ್ರ ನೇಮಕ
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಾಂತ್ ಕುಮಾರ್ ಸಿಂಗ್ ಅವರ ನಿರ್ಗಮನದಿಂದ ತೆರವಾದ ಸ್ಥಾನಕ್ಕೆ, 1996ನೇ ಬ್ಯಾಚ್‌ನ ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರನ್ನು ನೇಮಿಸಲಾಗಿದೆ. ಇದುವರೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿದ್ದ ಹಿತೇಂದ್ರ ಅವರು, ಇನ್ನು ಮುಂದೆ ಹೊಸ ಕಮಿಷನರೇಟ್ ವ್ಯವಸ್ಥೆಯ ಮುಖ್ಯಸ್ಥರಾಗಿ (ಚೀಫ್ ಕಮಿಷನರ್) ಬೆಂಗಳೂರು ನಗರದ ಪೊಲೀಸ್ ಕಮಾಂಡ್ ವಹಿಸಿಕೊಳ್ಳಲಿದ್ದಾರೆ.
ಐದು ವಲಯಗಳ ಹೊಸ ಪೊಲೀಸ್ ಕಮಿಷನರ್‌ಗಳು : ಬೆಂಗಳೂರು ನಗರವನ್ನು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ಎಂದು ಐದು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಈ ಹೊಸ ಕಮಿಷನರೇಟ್‌ಗಳಿಗೆ ಈ ಕೆಳಗಿನಂತೆ ಆಯುಕ್ತರನ್ನು ನೇಮಿಸಲಾಗಿದೆ.
ಕೇಂದ್ರ ಬೆಂಗಳೂರು ನಗರ (Central): ಲಾಭೂ ರಾಮ್ (ಆಯುಕ್ತರು)
ಪೂರ್ವ ಬೆಂಗಳೂರು ನಗರ (East): ಡಾ. ಪಿ.ಎಸ್. ಹರ್ಷ
ಪಶ್ಚಿಮ ಬೆಂಗಳೂರು ನಗರ (West): ವಿಕಾಶ್ ಕುಮಾರ್ ವಿಕಾಶ್
ಉತ್ತರ ಬೆಂಗಳೂರು ನಗರ (North): ಡಾ. ಎಂ.ಬಿ. ಬೋರಲಿಂಗಯ್ಯ
ದಕ್ಷಿಣ ಬೆಂಗಳೂರು ನಗರ (South): ಸಿ. ವಂಶಿ ಕೃಷ್ಣ
ಹೇಮಂತ್ ನಿಂಬಾಳ್ಕರ್‌ಗೆ ವಿಶೇಷ ಜವಾಬ್ದಾರಿ
ಸ್ಥಳ ನಿರೀಕ್ಷೆಯಲ್ಲಿದ್ದ ಹಿರಿಯ ಐಪಿಎಸ್ ಅಧಿಕಾರಿ ಹೇಮಂತ್ ಎಂ. ನಿಂಬಾಳ್ಕರ್ ಅವರಿಗೆ ಬೆಂಗಳೂರು ನಗರ ಸಂಚಾರ ಪೊಲೀಸ್ ಆಯುಕ್ತರ ಹುದ್ದೆಯ ಜತೆಗೆ, ಮೇಲ್ದರ್ಜೆಗೇರಿಸಲಾದ ರೌಡಿ ನಿಗ್ರಹ ದಳದ (Anti-Rowdy Squad) ಆಯುಕ್ತರ ಹೆಚ್ಚುವರಿ ಜವಾಬ್ದಾರಿಯನ್ನು ವಹಿಸಲಾಗಿದೆ. ಇವರು ಮುಖ್ಯ ಆಯುಕ್ತರ ಅಡಿಯಲ್ಲಿ ಅಪರಾಧ ನಿಯಂತ್ರಣದ ಮೇಲ್ವಿಚಾರಣೆ ನಡೆಸಲಿದ್ದಾರೆ.
ಇತರೆ ಪ್ರಮುಖ ಐಪಿಎಸ್ ಅಧಿಕಾರಿಗಳ ವರ್ಗಾವಣೆ ಪಟ್ಟಿ
ಬಿಜಯ್ ಕುಮಾರ್ ಸಿಂಗ್: ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ
ಎಸ್. ಮುರುಗನ್: ಎಡಿಜಿಪಿ, ಲೋಕಾಯುಕ್ತ
ಮನೀಶ್ ಖರ್ಬೀಕರ್: ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ
ಎನ್. ಶಶಿ ಕುಮಾರ್: ಐಜಿಪಿ, ಪಶ್ಚಿಮ ವಲಯ, ಮಂಗಳೂರು
ಅನುಪಮ್ ಅಗ್ರವಾಲ್: ಐಜಿಪಿ, ಕೆಎಸ್‌ಆರ್‌ಪಿ (KSRP)
ಕುಲದೀಪ್ ಕುಮಾರ್ ಆರ್. ಜೈನ್: ಡಿಐಜಿ ಮತ್ತು ಪೊಲೀಸ್ ಆಯುಕ್ತರು, ಕಲಬುರಗಿ ನಗರ
ಒಟ್ಟಾರೆಯಾಗಿ ಹೆಚ್ಚುತ್ತಿರುವ ಜನಸಂಖ್ಯೆ, ವಾಹನ ದಟ್ಟಣೆ ಹಾಗೂ ಅಪರಾಧ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದು ಬಹುಮುಖ್ಯವಾಗಿದೆ. ಈ ಆಡಳಿತಾತ್ಮಕ ಬದಲಾವಣೆಯು ಸಿಲಿಕಾನ್ ಸಿಟಿಯ ಜನಸಾಮಾನ್ಯರಿಗೆ ಮತ್ತಷ್ಟು ಸುರಕ್ಷಿತ ವಾತಾವರಣ ಕಲ್ಪಿಸುವಲ್ಲಿ ಮುಂದಿನ ದಿನ ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತೆ ಅನ್ನೋದನ್ನ ಕಾದುನೋಡಬೇಕಿದೆ..