Husband killed wife in Bangalore crime news: ಬೆಂಗಳೂರಿನಲ್ಲಿ ಮತ್ತೆರಡು ಹೆಣ ಬಿದ್ದಿವೆ. ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮದಿರೆಯ ಮತ್ತಲ್ಲಿ ಗಂಡನೊಬ್ಬ ಶೀಲ ಶಂಕಿಸಿ ಆಕೆಯ ಕಥೆ ಮುಗಿಸಿದ್ದಾನೆ. ಮತ್ತೊಂದು ಕಡೇ ಕ್ಷುಲ್ಲಕ ಕಾರಣಕ್ಕೆ ಗೆಳೆಯನನ್ನೇ ಕೊಂದು ವ್ಯಕ್ತಿಯೊಬ್ಬ ಅರೆಸ್ಟ್ ಆಗಿದ್ದಾನೆ. ಈ ಎರಡು ಪ್ರಕರಣ ಡಿಟೇಲ್ಸ್ ಇಲ್ಲಿದೆ.
ಬೆಂಗಳೂರಿನಲ್ಲಿ ಮದ್ಯದ ಮತ್ತಿನಲ್ಲಿ ಎರಡು ಭೀಕರ ಹತ್ಯೆಗಳು ನಡೆದಿವೆ. ಕೋರಮಂಗಲದಲ್ಲಿ ಕುಡಿದ ಮತ್ತಿನಲ್ಲಿ ಶುರುವಾದ ಜಗಳ ಗೆಳೆಯನ ಕೊಲೆಯಲ್ಲಿ ಅಂತ್ಯವಾಗಿದ್ರೆ, ಮತ್ತೊಂದೆಡೆ ಮಹದೇವಪುರದಲ್ಲಿ ಶೀಲ ಶಂಕಿಸಿ ಪತ್ನಿಯನ್ನೇ ಪತಿ ಬರ್ಬರವಾಗಿ ಹತ್ಯೆಗೈದಿದ್ದಾನೆ. ಮೊದಲ ಪ್ರಕರಣ ಕೋರಮಂಗಲದ 1ನೇ ಬ್ಲಾಕ್‌ನಲ್ಲಿ ನಡೆದಿದೆ. ಜಕ್ಕಸಂದ್ರದ ಶಿವಕುಮಾರ್ ಮತ್ತು ನವೀನ್ ಆತ್ಮೀಯ ಸ್ನೇಹಿತರಾಗಿದ್ರು. ಇಬ್ಬರೂ ಒಟ್ಟಿಗೆ ಮದ್ಯ ಸೇವಿಸಿ ಮನೆಗೆ ವಾಪಸ್ ಆಗುವಾಗ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಶಿವಕುಮಾರ್ ನಿಂದಿಸಿದ್ದಕ್ಕೆ ಕೆರಳಿದ ನವೀನ್, ಗೆಳೆಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ. ಸದ್ಯ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇನ್ನೊಂದು ಪ್ರಕರಣ ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರಿನಲ್ಲಿ ನಡೆದಿದೆ. ಪತ್ನಿಯ ಶೀಲ ಶಂಕಿಸಿ ಬಸವರಾಜು ಪದೇಪದೆ ಜಗಳವಾಡುತ್ತಿದ್ದ. ನಿನ್ನೆ ಕೂಡ ಇದೇ ವಿಚಾರಕ್ಕೆ ಗಲಾಟೆ ನಡೆದಿದ್ದು, ಆಕ್ರೋಶಗೊಂಡ ಬಸವರಾಜು ಮನೆಯಲ್ಲಿದ್ದ ಪಿಕಾಸಿಯಿಂದ ಪತ್ನಿ ದುರ್ಗಮ್ಮ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಹೌಸ್‌ಕೀಪಿಂಗ್ ಕೆಲಸ ಮಾಡಿಕೊಂಡು ಸಂಸಾರ ನಡೆಸುತ್ತಿದ್ದ 36 ವರ್ಷದ ದುರ್ಗಮ್ಮ ಕೊಲೆಯಾಗಿದ್ದಾರೆ.
ಸದ್ಯ ಆರೋಪಿ ಬಸವರಾಜುನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.ಒಟ್ಟಾರೆ ಸಣ್ಣಪುಟ್ಟ ಕಾರಣಗಳಿಗೆ ಬೆಂಗಳೂರಲ್ಲಿ ಕೊಲೆಯಾಗ್ತಿರೋದು ನೋಡಿದ್ರೆ ನಿಜವಾಗಿಯೂ ಸಾರ್ವಜನಿಕರು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿರುವುದಂತೂ ಸುಳ್ಳಲ್ಲ.
ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನ ಮೈಕೈ ಸುಟ್ಟು ಗಂಭೀರ ಗಾಯ
ಆತ ಶಾಲೆಗೆ ಹೋಗುತ್ತ,ಸ್ನೇಹಿತರ ಜೊತೆ ಆಟವಾಡಿಕೊಂಡಿದ್ದ ಬಾಲಕ. ಆದರೆ ಇವತ್ತು ಆತ ಸಾವು ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಬಂದಿದೆ. ಅದು ಆತ ಮಾಡಿಕೊಂಡ ತಪ್ಪಿನಿಂದ ಅಲ್ಲಾ. ಯಾರದ್ದೋ ನಿರ್ಲಕ್ಷ್ಯಕ್ಕೆ ಅವನು ನೋವು ಅನುಭವಿಸುತ್ತಿದ್ದಾನೆ. ಮಗನ ಈ ಪರಿಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಹಾಗಾದ್ರೆ ಯಾರ ನಿರ್ಲಕ್ಷ್ಯಕ್ಕೆ ಆತನಿಗೆ ಈ ಪರಿಸ್ಥಿತಿ ಬಂದಿದೆ ಎಂಬುದನ್ನು ಹೇಳ್ತಿವಿ ನೋಡಿ
ಯೆಸ್, ಬೆಸ್ಕಾಂ ನಿರ್ಲಕ್ಷ್ಯಕ್ಕೆ ಆಗಾಗ ಏನಾದ್ರೂ ಅವಾಂತರಗಳು ಸೃಷ್ಟಿಯಾಗುತ್ತಿವೆ. ಈಗ ವಿದ್ಯುತ್ ತಂತಿ ಸ್ಪರ್ಶಿಸಿ ಬಾಲಕನ ಮೈಕೈ ಸುಟ್ಟು ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ದರ್ಶನ್ ಎಂಬ 11 ವರ್ಷದ ಬಾಲಕನೇ ವಿದ್ಯುತ್ ಅವಘಡದಲ್ಲಿ ಗಂಭೀರವಾಗಿ ಗಾಯಗೊಂಡವನು. ವಿದ್ಯುತ್ ತಂತಿ ಅಪಾಯದ ಬಗ್ಗೆ ಈ ಹಿಂದೆಯೇ ದೂರು ನೀಡಿದ್ದರೂ ಸಹ ಬೆಸ್ಕಾಂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಆರೋಪ ಕೇಳಿಬಂದಿದೆ.
ದರ್ಶನ್ ತಂದೆ ಕುಪ್ಪಣ್ಣಗೆ ದೇವರಚಿಕ್ಕನಹಳ್ಳಿಯಲ್ಲಿ ಗ್ಯಾರೇಜ್ ಇದೆ. ದೀಪಾವಳಿ ಅಂಗಡಿ ಪೂಜೆಯ ಹಿನ್ನೆಲೆ ಇಬ್ಬರು ಮಕ್ಕಳು ಗ್ಯಾರೇಜ್‌ಗೆ ಬಂದಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಕಟ್ಟಡದ ಟೆರೇಸ್‌ನಲ್ಲಿದ್ದ ವಾಶ್‌ರೂಮ್‌ಗೆ ತೆರಳಿದ್ದ ದರ್ಶನ್ ಗೆ ಕಟ್ಟಡದ ಸಮೀಪದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿ ಟಚ್ ಆದ ಪರಿಣಾಮ ವಿದ್ಯುತ್ ಶಾಕ್ ಹೊಡೆದು ಬಾಲಕನ ಬಲಗೈ ಚರ್ಮ ಸುಟ್ಟುಹೋಗಿದೆ. ಎದೆ, ಬೆನ್ನು ಹಾಗೂ ತಲೆಯ ಕೂದಲು ಕೂಡ ಸುಟ್ಟು ಗಾಯಗಳಾಗಿವೆ. ಕೂಡಲೇ ತಂದೆ ಕುಪ್ಪಣ್ಣ ಮಗನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ವಿದ್ಯುತ್ ತಂತಿಯಿಂದ ಅಪಾಯವಿರುವ ಬಗ್ಗೆ ಈ ಹಿಂದೆಯೇ ಕಟ್ಟಡದ ಅಂಗಡಿ ಮಾಲೀಕರು ಹಾಗೂ ಕುಪ್ಪಣ್ಣ ಬೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಿದ್ದರು. ಮಕ್ಕಳು ಆಟವಾಡುವಾಗ ವಿದ್ಯುತ್ ತಂತಿ ತಗುಲದಂತೆ ಸರಿಪಡಿಸುವಂತೆ ಮನವಿ ಮಾಡಿದ್ದರೂ, ಕೆಲಸ ಮುಗಿದ ಬಳಿಕ ಕಚೇರಿಗೆ ಬಂದು ಮಾತನಾಡುವಂತೆ ಬೆಸ್ಕಾಂ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದರು ಎಂಬ ಆರೋಪವಿದೆ. ಬೆಸ್ಕಾಂ ನಿರ್ಲಕ್ಷ್ಯದಿಂದಲೇ ಮಗನಿಗೆ ಈ ಸ್ಥಿತಿ ಬಂದಿದೆ ಎಂದು ಆರೋಪಿಸಿ ಕುಪ್ಪಣ್ಣ ಬೇಗೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾದ ಬಳಿಕ ವಿದ್ಯುತ್ ತಂತಿ ತೆರವುಗೊಳಿಸಲಾಗಿದೆ. ಇತ್ತ ಗಾಯಕ್ಕೆ ಬ್ಯಾಂಡೇಜ್ ಹಾಕಿ ಬಾಲಕನನ್ನು ಮನೆಗೆ ಕಳುಹಿಸಿದ್ದು, ಗಾಯ ಗುಣವಾಗುವ ಮುನ್ನವೇ ಆಸ್ಪತ್ರೆಯಿಂದ ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಷ್ಟೆಲ್ಲಾ ಆದರೂ ಬೆಸ್ಕಾಂ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿಲ್ಲ, ಬಾಲಕನ ಆರೋಗ್ಯವನ್ನೂ ವಿಚಾರಿಸಿಲ್ಲ ಎಂದು ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸದ್ಯ ಮಗನ ಪರಿಸ್ಥಿತಿ ಕಂಡು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಕುಟುಂಬದ ನೆರವಿಗೆ ಬರಬೇಕಾಗಿದೆ.