SOCIAL MEDIA

Newsletter

PARTNER SITES
Select Language Select State

ಕುಡಿದ ಮತ್ತಿನಲ್ಲಿ ಕಿರಿಕ್, ಗೆಳೆಯನಿಗೆ ಕಟ್ಟಿದ ಚಟ್ಟ.. ಎಸ್ಕೇಪ್‌ ಆಗಿದ್ದ ಡ್ರೈವರ್‌ ಸಿಕ್ಕಿದ್ದೇ ರೋಚಕ ಕಹಾನಿ

ಹೊಸರೋಡ್ ನಿವಾಸಿ ಸಂತೋಷ್ ಬಂಧಿತ ಆರೋಪಿಯಾಗಿದ್ದು, ಇವನು ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಇನ್ನು ಕೊಲೆಯಾದ ಯುವಕನನ್ನು ಆನೇಕಲ್ ತಾಲ್ಲೂಕಿನ ಕರ್ಪೂರು ನಿವಾಸಿ ಸುಭಾಷ್ ಎಂದು ಗುರುತಿಸಲಾಗಿದೆ.

Written By Bhimappa
Published: Sep 28, 2026, 12:41 PM IST | Updated: Sep 28, 2026, 01:03 PM IST
Image Credit: Subhash_M_Case
Join

Suryanagar police arrest accused Santosh: ಸ್ನೇಹ, ಗೆಳೆತನ ಎನ್ನುವುದು ಜಗತ್ತಿನಲ್ಲಿ ಅತ್ಯಂತ ಪವಿತ್ರವಾದ ಬಾಂಧವ್ಯ. ಆದರೆ, ಇಂದಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಗೆ ಹಾಗೂ ಕುಡಿತದ ಚಟಕ್ಕೆ ಬಿದ್ದು ಆಪ್ತ ಸ್ನೇಹಿತರೇ ಪರಸ್ಪರ ಮಾರಣಾಂತಿಕ ಹಲ್ಲೆ ನಡೆಸಿ ಜೀವ ತೆಗೆಯುವ ದುರಂತಗಳು ಹೆಚ್ಚಾಗುತ್ತಿವೆ. ಅಂಥದ್ದೇ ಒಂದು ಕರಾಳ ಹಾಗೂ ಬೆಚ್ಚಿಬೀಳಿಸುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನಲ್ಲಿ ನಡೆದಿದೆ. ಕುಡಿದ ಮತ್ತಿನಲ್ಲಿ ಸ್ನೇಹಿತರ ನಡುವೆ ಉಂಟಾದ ಸಣ್ಣ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಆಟೋ ಚಾಲಕನೊಬ್ಬ ತನ್ನದೇ ಸ್ನೇಹಿತನನ್ನು ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಭೀಕರ ಕೊಲೆ ಪ್ರಕರಣವನ್ನು ಸೂರ್ಯನಗರ ಠಾಣೆಯ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಹಂತಕನನ್ನು ಬಂಧಿಸಿದ್ದಾರೆ.

ಹೊಸರೋಡ್ ನಿವಾಸಿ ಸಂತೋಷ್ (29) ಬಂಧಿತ ಆರೋಪಿಯಾಗಿದ್ದು, ಇವನು ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದಾನೆ. ಇನ್ನು ಕೊಲೆಯಾದ ಯುವಕನನ್ನು ಆನೇಕಲ್ ತಾಲ್ಲೂಕಿನ ಕರ್ಪೂರು ನಿವಾಸಿ ಸುಭಾಷ್ ಎಂದು ಗುರುತಿಸಲಾಗಿದೆ. ಆರೋಪಿ ಸಂತೋಷ್ ಹಾಗೂ ಮೃತ ಸುಭಾಷ್ ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಕಳೆದ ತಿಂಗಳು ಅಂದರೆ 23ನೇ ತಾರೀಕಿನಂದು ಇವರಿಬ್ಬರ ನಡುವೆ ನಡೆದಿದ್ದ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದೆ.

ಘಟನೆ ನಡೆದ ದಿನ ರಾತ್ರಿ ಸುಭಾಷ್, ತನ್ನ ಸ್ನೇಹಿತ ಸಂತೋಷ್‌ಗೆ ಫೋನ್ ಮಾಡಿ ಎಣ್ಣೆ ಕೊಡ್ಸು ಬಾ ಎಂದು ಕರೆದಿದ್ದನು. ಸ್ನೇಹಿತನ ಕರೆಗೆ ಓಗೊಟ್ಟ ಸಂತೋಷ್, ತಕ್ಷಣವೇ ತನ್ನ ಆಟೋ ತೆಗೆದುಕೊಂಡು ಸುಭಾಷ್ ಬಳಿಗೆ ತೆರಳಿದ್ದನು. ಇಬ್ಬರೂ ಸೇರಿಕೊಂಡು ಬಾರ್‌ನಲ್ಲಿ ಮದ್ಯ ಖರೀದಿಸಿ, ಬಳಿಕ ರಾಮಕೃಷ್ಣಪುರ ರಸ್ತೆಯ ಕಡೆಗೆ ತೆರಳಿದ್ದರು. ಅಂದು ಕಂಠಪೂರ್ತಿ ಮದ್ಯ ಸೇವಿಸಿದ ಇಬ್ಬರೂ ಆಟೋದಲ್ಲಿಯೇ ಕುಳಿತುಕೊಂಡು ರಾತ್ರಿ ಪೂರ್ತಿ ಸುತ್ತಾಡುತ್ತಿದ್ದರು. ಮದ್ಯದ ನಶೆ ಹೆಚ್ಚಾದಂತೆ ಇವರ ನಡುವೆ ಮಾತುಗಳು ವಾಗ್ವಾದಕ್ಕೆ ತಿರುಗಿವೆ.

ಮಾತಿನ ಚಕಮಕಿಯೇ ಕೊಲೆಗೆ ಕಾರಣ ಆಯಿತಾ?: ಮದ್ಯದ ನಶೆಯಲ್ಲಿ ತೇಲಾಡುತ್ತಿದ್ದಾಗ ಸುಭಾಷ್ ಅಚಾನಕ್ಕಾಗಿ, ಆಟೋವನ್ನು ನಾನು ಓಡಿಸುತ್ತೇನೆ, ನನಗೆ ಕೊಡು ಎಂದು ಕೇಳಿದ್ದಾನೆ. ಆದರೆ ಸುಭಾಷ್‌ಗೆ ಸರಿಯಾಗಿ ಆಟೋ ಚಾಲನೆ ಮಾಡಲು ಬರುವುದಿಲ್ಲ ಎಂಬುದು ಸಂತೋಷ್‌ಗೆ ತಿಳಿದಿತ್ತು. ಹೀಗಾಗಿ ಸಂತೋಷ್ ಆಟೋ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ಸುಭಾಷ್, ಸಂತೋಷ್‌ಗೆ ಏಕವಚನದಲ್ಲಿ ಹಾಗೂ ಅತ್ಯಂತ ಅವಾಚ್ಯ ಶಬ್ದಗಳಿಂದ ಬೈಯಲು ಶುರು ಮಾಡಿದ್ದಾನೆ.

ಅರ್ಧ ರಾತ್ರಿ 1.30ರ ಸುಮಾರಿಗೆ ಇಬ್ಬರ ನಡುವೆ ಈ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಮದ್ಯದ ಮತ್ತಿನಲ್ಲಿದ್ದ ಇಬ್ಬರೂ ಒಬ್ಬರಿಗಿಬ್ಬರು ತೀವ್ರವಾಗಿ ಬೈದಾಡಿಕೊಂಡಿದ್ದಾರೆ. ಪರಿಸ್ಥಿತಿ ಕೈಮೀರಿ ಹೋಗುತ್ತಿದ್ದಂತೆ ಸಿಟ್ಟಿಗೆದ್ದ ಆರೋಪಿ ಸಂತೋಷ್, ತೀವ್ರ ಆಕ್ರೋಶಗೊಂಡು ಆಟೋದಲ್ಲಿದ್ದ ದೊಣ್ಣೆಯನ್ನು ತೆಗೆದುಕೊಂಡಿದ್ದಾನೆ. ಬಳಿಕ ಸುಭಾಷ್‌ನ ತಲೆ ಹಾಗೂ ದೇಹದ ಇತರೆ ಭಾಗಗಳಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಸಂತೋಷ್‌ನ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡ ಸುಭಾಷ್, ರಸ್ತೆ ಬದಿಯ ಪೊದೆಯಲ್ಲಿ ಬಿದ್ದು ನರಳಾಡಿ ಕೊನೆಯುಸಿರೆಳೆದಿದ್ದಾನೆ. ಕೃತ್ಯ ಎಸಗಿದ ಬಳಿಕ ಆರೋಪಿ ಸಂತೋಷ್, ಶವದ ಪಕ್ಕದಲ್ಲಿಯೇ ಹಲ್ಲೆ ಮಾಡಿದ ದೊಣ್ಣೆಯನ್ನು ಬಿಸಾಕಿ ಆಟೋ ಸಮೇತ ಪರಾರಿ ಆಗಿದ್ದನು.

ಪೊಲೀಸರ ಮಿಂಚಿನ ಕಾರ್ಯಾಚರಣೆ, ಆರೋಪಿನ ಅರೆಸ್ಟ್‌ ಮಾಡಿದ್ದೇ ರೋಚಕ: ಕಳೆದ 23ನೇ ತಾರೀಕಿನಂದು ರಾಮಕೃಷ್ಣಪುರ ರಸ್ತೆ ಬದಿಯ ಪೊದೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಆರಂಭದಲ್ಲಿ ಮೃತದೇಹದ ಗುರುತು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಯುವಕ ಯಾರೆಂಬ ಸುಳಿವೂ ಸಿಕ್ಕಿರಲಿಲ್ಲ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸೂರ್ಯನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಚಂದ್ರಪ್ಪ ನೇತೃತ್ವದ ವಿಶೇಷ ತಂಡವು ತನಿಖೆಯನ್ನು ತೀವ್ರಗೊಳಿಸಿತು.

ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕುವಲ್ಲಿ ಪೊಲೀಸರು ಯಶಸ್ವಿಯಾದರು. ದೊರೆತ ಸುಳಿವಿನ ಆಧಾರದ ಮೇಲೆ ಪೊಲೀಸರು ಕೊಲೆಯಾದ ಯುವಕ ಕರ್ಪೂರು ಗ್ರಾಮದ ಸುಭಾಷ್ ಎಂಬುದನ್ನು ಖಚಿತಪಡಿಸಿಕೊಂಡರು. ತಕ್ಷಣವೇ ಕಾರ್ಯಾಚರಣೆಗಿಳಿದ ಇನ್‌ಸ್ಪೆಕ್ಟರ್ ಚಂದ್ರಪ್ಪ ಹಾಗೂ ಅವರ ಸಿಬ್ಬಂದಿ, ಆರೋಪಿ ಆಟೋ ಚಾಲಕ ಸಂತೋಷ್‌ನ ಹೆಡೆಮುರಿ ಕಟ್ಟಿ ವಶಕ್ಕೆ ಪಡೆದಿದ್ದಾರೆ.

ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸಿದಾಗ ಆರೋಪಿ ಸಂತೋಷ್ ತಾನು ಮಾಡಿದ ಪಾಪ ಕೃತ್ಯವನ್ನು ಬಾಯ್ದಿಟ್ಟಿದ್ದಾನೆ. ಕುಡಿದ ಮತ್ತಿನಲ್ಲಿ ಸ್ನೇಹಿತನೆಂದೂ ನೋಡದೆ ಕ್ಷುಲ್ಲಕ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಸಣ್ಣ ಮಾತಿನ ಜಗಳ ಹಾಗೂ ಮದ್ಯದ ಅಮಲು ಸ್ನೇಹಿತನ ಜೀವ ತೆಗೆಯುವಂತೆ ಮಾಡಿದೆ. ಆರೋಪಿ ಸಂತೋಷ್‌ ಕಂಬಿ ಹಿಂದೆ ಹೋಗಿದ್ದಾನೆ. ಸೂರ್ಯನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ, ಚುರುಕಿನ ತನಿಖೆಯಿಂದ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸುತ್ತಿದ್ದಾರೆ. 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES