ಬೆಂಗಳೂರು: ರಾಜ್ಯ ಸರ್ಕಾರದ ಹೊಸ ಯೋಜನೆಗಳಿಗೆ ಹಣಕಾಸು ಇಲಾಖೆ ಬ್ರೇಕ್ ? ಪ್ರಸಕ್ತ ಸಾಲಿನ ರಾಜ್ಯದ ಆರ್ಥಿಕ ಸ್ಥಿತಿಗತಿ ತೀವ್ರ ಸಂಕಷ್ಟದಲ್ಲಿದೆ ಎಂದು ಇಲಾಖೆಯಿಂದ ಮಾಹಿತಿ. ಮಂಗಳೂರು ಸಂಪುಟ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಮುಂದಿಟ್ಟಿದ್ದ 10,000 ಕೋಟಿ ರೂಪಾಯಿ ವೆಚ್ಚದ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ ಪ್ರಸ್ತಾವನೆಗೆ ಹಣಕಾಸು ಇಲಾಖೆ ತೀವ್ರ ಆಕ್ಷೇಪ. ಸಾಲದ ಮಿತಿ ಮೀರಿರುವುದು, ಬಿಲ್ ಬಾಕಿ ಹಾಗೂ ಬರ ಪರಿಹಾರದ ಹೆಚ್ಚುವರಿ ಹೊರೆಯಿಂದಾಗಿ ಹೊಸ ಯೋಜನೆಗೆ ಹಣ ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟಪಡಿಸಿದೆ. ಈ ಕುರಿತು ಬಿಜೆಪಿ ಶಾಸಕ ಭರತ್ ಶೆಟ್ಟಿ ದಾಖಲೆ ಬಿಡುಗಡೆ ಮಾಡಿ ಶ್ವೇತಪತ್ರಕ್ಕೆ ಆಗ್ರಹಿಸಿದ್ದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
2026-27 ಹಾಗೂ 2027-28ನೇ ಸಾಲಿನಲ್ಲಿ ರಾಜ್ಯದಾದ್ಯಂತ 15,000 ಕಿಲೋಮೀಟರ್ ಗ್ರಾಮೀಣ ರಸ್ತೆಗಳನ್ನು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆಯನ್ನು ಸಿದ್ಧಪಡಿಸಲಾಗಿತ್ತು. ಹೆಚ್ಚುವರಿ ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಈ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಸಂಪೂರ್ಣವಾಗಿ ತಳ್ಳಿಹಾಕಿದೆ ಬಜೆಟ್‌ನಲ್ಲಿ ಈ ಯೋಜನೆಗೆ ಯಾವುದೇ ಹಣ ಮೀಸಲಿಟ್ಟಿಲ್ಲ. ಈಗ ಅನುದಾನ ನೀಡಿದರೆ ರಾಜ್ಯದ ಹಣದ ಹರಿವು ಹಾಗೂ ವಿತ್ತೀಯ ನಿರ್ವಹಣೆ ಸಂಪೂರ್ಣ ಅಸ್ತವ್ಯಸ್ತಗೊಳ್ಳಲಿದೆ ಎಂದು ಖಡಕ್ ಎಚ್ಚರಿಕೆ ನೀಡಿದೆ. ರಾಜ್ಯ ಈಗಾಗಲೇ ತನ್ನ ಸಾಲ ಪಡೆಯುವ ಗರಿಷ್ಠ ಮಿತಿಯನ್ನು ತಲುಪಿದ್ದು, ಹೆಚ್ಚುವರಿ ಸಾಲ ಪಡೆಯಲು ಅವಕಾಶವೇ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಆರ್ಥಿಕ ಇಲಾಖೆ ನೀಡಿರುವ ವರದಿ ರಾಜ್ಯ ಸರ್ಕಾರದ ಆರ್ಥಿಕ ಮುಗ್ಗಟ್ಟನ್ನು ಬಿಚ್ಚಿಟ್ಟಿದೆ. ಪ್ರಸ್ತುತ ಲೋಕೋಪಯೋಗಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಹಾಗೂ ಆರ್‌ಡಿಪಿಆರ್ ಇಲಾಖೆಗಳಲ್ಲಿ ಬರೋಬ್ಬರಿ 36,136 ಕೋಟಿ ರೂಪಾಯಿ ಬಾಕಿ ಬಿಲ್ ಪೆಂಡಿಂಗ್ ಇದೆ. ಒಟ್ಟಾರೆಯಾಗಿ 2 ಲಕ್ಷ ಕೋಟಿ ರೂ. ಮೌಲ್ಯದ ಕಾಮಗಾರಿಗಳು ನಡುನೀರಿನಲ್ಲಿವೆ. ಜೊತೆಗೆ ತೀವ್ರ ಬರಗಾಲದಿಂದಾಗಿ ಕೃಷಿ ಪಂಪ್‌ಸೆಟ್‌ಗಳ ಉಚಿತ ವಿದ್ಯುತ್‌ಗಾಗಿ 4,000 ದಿಂದ 5,000 ಕೋಟಿ ರೂ. ಹೆಚ್ಚುವರಿ ಸಬ್ಸಿಡಿ ನೀಡಬೇಕಿದೆ. ಇಷ್ಟೇ ಅಲ್ಲದೆ, ಕೆಎಸ್ಆರ್‌ಟಿಸಿ, ನೀರಾವರಿ ನಿಗಮ ಹಾಗೂ ಎಸ್ಕಾಂ ಸಿಬ್ಬಂದಿಗೆ ವೇತನ ನೀಡಲು ಮತ್ತು ಮಾಸಿಕ ಪಿಂಚಣಿ ಪಾವತಿಸಲು ಹಣದ ಅಭಾವ ಎದುರಾಗಿದೆ. ಹೊಸ ಯೋಜನೆಗಳಿಗೆ ಹಣ ಬೇಕಿದ್ದರೆ, ಇತರ ಇಲಾಖೆಗಳ ಬಜೆಟ್ ಕಡಿತಗೊಳಿಸಬೇಕಾಗುತ್ತದೆ, ಇದರಿಂದ ಹಾಲಿ ಕೆಲಸಗಳು ಸ್ಥಗಿತಗೊಳ್ಳಲಿವೆ ಎಂದು ಇಲಾಖೆ ಎಚ್ಚರಿಸಿದೆ.
ಹಣಕಾಸು ಇಲಾಖೆಯ ಈ ವರದಿಯನ್ನು ಬಿಡುಗಡೆ ಮಾಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ, ರಾಜ್ಯ ಸರ್ಕಾರದಲ್ಲಿ 27,000 ಕೋಟಿ ರೂಪಾಯಿ ಆರ್ಥಿಕ ಕೊರತೆ ಇದೆ. ಕಂಟ್ರಾಕ್ಟರ್‌ಗಳಿಗೆ ಹಣ ನೀಡುತ್ತಿಲ್ಲ, ನೌಕರರಿಗೆ ಸಂಬಳವಿಲ್ಲ. ಬಜೆಟ್‌ನಲ್ಲಿ ಹಂಚಿಕೆ ಮಾಡದೆ ಬಾಯಿಗೆ ಬಂದಂತೆ ಯೋಜನೆಗಳನ್ನು ಘೋಷಿಸಬೇಡಿ ಎಂದು ಇಲಾಖೆಯೇ ಮುಖಕ್ಕೆ ಹೊಡೆದಂತೆ ಹೇಳಿದೆ. ಸರ್ಕಾರ ತಕ್ಷಣವೇ ರಾಜ್ಯದ ಆರ್ಥಿಕ ಸ್ಥಿತಿಯ ಕುರಿತು ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯಿಸಿರುವ ಡಿ.ಕೆ. ಶಿವಕುಮಾರ್, ಆರ್ಥಿಕ ಇಲಾಖೆ ಮುನ್ನೆಚ್ಚರಿಕೆಯ ಸಲಹೆ ನೀಡುವುದು ಅವರ ಕರ್ತವ್ಯ. ಆದರೆ, ಸರ್ಕಾರವನ್ನು ಹೇಗೆ ನಡೆಸಬೇಕು, ಜನರಿಗೆ ನೀಡಿರುವ ಗ್ಯಾರಂಟಿ ಯೋಜನೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ. ಕೇಂದ್ರ ಸರ್ಕಾರ ನಮಗೆ ಬರಬೇಕಾದ ತೆರಿಗೆ ಪಾಲು ಹಾಗೂ ರೈತರ ಪರಿಹಾರದ 5,200 ಕೋಟಿ ರೂಪಾಯಿಯನ್ನು ತಕ್ಷಣ ಬಿಡುಗಡೆ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಆರ್ಥಿಕ ಇಲಾಖೆ ಈ ರೀತಿ ಎಚ್ವರಿಕೆ ನೀಡಿದ್ದು ಇದೇ ಮೊದಲೇನಲ್ಲ. ಬದ್ರ ಮೇಲ್ದಂಡೆ ಯೋಜನೆ ವಿಚಾರ ಕೈಗೆತ್ತಿಕೊಂಡಾಗಲೂ ಇದೇ ರೀತಿ ಹೇಳಿತ್ತು. ಎಚ್ಚರಿಕೆಯಿಂದ ಆಡಳಿತ ನಡೆಸುವುದೊಂದೇ ಇದಕ್ಕೆ ಪರಿಹಾರ. ಸಾಲ ಮಾಡುವಂತಿಲ್ಲ, ಹೊಸ ಯೋಜನೆಗೆ ಹಣವಿಲ್ಲ. ಎಲ್ಲ ಇಲಾಖೆಯ ಅನುದಾನ ಪರಿಷ್ಕರಣೆ ಮಾಡಿದರೆ ಮಾತ್ರ ಒಂದಷ್ಟು ಹಣ ಉಳಿಸಬಹುದು ಎನ್ನುವುದು ಆರ್ಥಿಕ ಇಲಾಖೆ ಸಲಹೆ. ಒಟ್ಟಿನಲ್ಲಿ ಸದ್ಯಕ್ಕೆ ಸರ್ಕಾರ ಏನೇ ಯೋಜನೆ ಘೋಷಣೆ ಮಾಡಿದ್ರು, ಅದು ಘೋಷಣೆಗೆ ಸೀಮಿತ ಅನ್ನೋದನ್ನ ಆರ್ಥಿಕ ಇಲಾಖೆ ಹೇಳಿಬಿಟ್ಟಿದೆ.