ದಾವಣಗೆರೆ: ಆನ್ ಲೈನ್ ಗೇಮಿಂಗ್‌ಗೆ 13 ವರ್ಷದ ಬಾಲಕ ಬಲಿ
ಪ್ರತಿಷ್ಠಿತ ಶಾಲೆಗೆ ಸೇರಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದರು. ಆದ್ರೆ ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್‌ಗೆ ಪ್ರಭಾವಿತನಾಗಿದ್ದ ಮಗ ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಜೀವ ತೆತ್ತಿದ್ದಾನೆ. ಆ ಬಾಲಕ ಆತ್ಮಹತ್ಯೆಯ ಹಿಂದಿನ ಗೇಮ್ ಏನು ? ಅಸಲಿ ಕಾರಣವೇನು ಈ ರಿಪೋರ್ಟ್ ನೋಡಿ
ದಾವಣಗೆರೆ: ಅವರು ತಮ್ಮ ಮಗನ ಉಜ್ವಲ ಭವಿಷ್ಯಕ್ಕೆ ಕನಸು ಕಂಡವರು. ಪ್ರತಿಷ್ಠಿತ ಶಾಲೆಗೆ ಸೇರಿಸಿ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದ್ದರು. ಆದ್ರೆ ಮೊಬೈಲ್‌ನಲ್ಲಿ ಆನ್‌ಲೈನ್ ಗೇಮ್‌ಗೆ ಪ್ರಭಾವಿತನಾಗಿದ್ದ ಮಗ ಕೆಲ ಕಿಡಿಗೇಡಿಗಳ ಕೃತ್ಯಕ್ಕೆ ಜೀವ ತೆತ್ತಿದ್ದಾನೆ. ಆ ಬಾಲಕ ಆತ್ಮಹತ್ಯೆಯ ಹಿಂದಿನ ಗೇಮ್ ಏನು ? ಅಸಲಿ ಕಾರಣವೇನು ಈ ರಿಪೋರ್ಟ್ ನೋಡಿ
ಬಾಲಕನ ಮೃತದೇಹ ಎದುರು ಕಣ್ಣೀರಿಡುತ್ತಿರುವ ಪೋಷಕರು.. ಗ್ರಾಮದಲ್ಲಿ ಆವರಿಸಿದ ನೀರವ ಮೌನ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿ. ಹೀಗೆ ಶವವಾಗಿ ಮಲಗಿದ ಬಾಲಕನ ಹೆಸರು ಮನೋಜ್ ಟಿ.ಆರ್.. ವಯಸ್ಸು ಜಸ್ಟ್ 13 ವರ್ಷ... ರೈತ ರೇವಣ್ಣ ಟಿ.ಆರ್. ಎಂಬುವರ ಪುತ್ರರಾಗಿದ್ದ ಮನೋಜ್, ಎಂ.ಎನ್.ಹಳ್ಳಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಎಂಟನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಹೀಗಿದ್ದ ಮನೋಜ್‌ಗೆ ಅದೇ ಗ್ರಾಮದ ಮನು ಎಂಬಾತ ನಿನಗೆ ಮೊಬೈಲ್ ನಲ್ಲಿ ಫ್ರೀ ಫೈರ್ ಗೇಮ್ ಐಡಿ ತಗೆದುಕೊಡ್ತೀನಿ ಅದಕ್ಕೆ ಆರು ಸಾವಿರ ರೂ. ಖರ್ಚಾಗುತ್ತದೆ ಎಂದು ಹಣ ಪಡೆದಿದ್ದ. ಬಳಿಕ ಈ ಆನ್‌ಲೈನ್ ಗೇಮ್‌ನಲ್ಲಿ 105ನೇ ಲೆವೆಲ್ ಗೆ ತಲುಪಲು ಒಂದೂವರೆಯಿಂದ ಎರಡೂವರೆ ಲಕ್ಷ ಹಣ ಖರ್ಚಾಗಿದೆ. ಆ ಹಣ ನೀಡದಿದ್ರೆ ನಿನ್ನ ಅಣ್ಣ ಹಾಗೂ ನಿನ್ನನ್ನು ಕೊಲೆ ಮಾಡ್ತೀವಿ ಅಂತಾ ಬೆದರಿಸಿದ್ದಾರೆ. ಇದರಿಂದ ಹೆದರಿ ಬಾಲಕ ಮನೋಜ್ ಮನೆಯಲ್ಲಿ ತಂದೆ ತನ್ನ ಹಿರಿಯ ಪುತ್ರನ ವಿದ್ಯಾಭ್ಯಾಸಕ್ಕೆ ಎಂದು ಕೂಡಿಟ್ಟಿದ್ದ ನಾಲ್ಕು ಲಕ್ಷ ಹಣವನ್ನು ಹಂತಹಂತವಾಗಿ ಆರೋಪಿಗಳಿಗೆ ನೀಡಿದ್ದಾನೆ. ಅಷ್ಟೇ ಅಲ್ಲದೇ ತನ್ನ ತಂದೆ ಹಾಗೂ ತಾಯಿಯ ಫೋನ್ ಬಳಸಿ ಫೋನ್ ಪೇ ಮೂಲಕ ಆರೋಪಿಗಳಿಗೆ 11 ಸಾವಿರ ಹಣ ವರ್ಗಾಯಿಸಿದ್ದನಂತೆ.
ಯಾವಾಗ ಪೋಷಕರಿಗೆ ಈ ವಿಚಾರ ಗೊತ್ತಾಯಿತೋ ಮನೋಜ್ ತೀವ್ರ ಆತಂಕಗೊಂಡಿದ್ದಾನೆ. ಹೀಗಿದ್ದಾಗ ಅಕ್ಟೋಬರ್ 7ರ ಸಂಜೆ 4 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರೂಮ್‌ನಲ್ಲಿದ್ದ ಫ್ಯಾನ್‌ಗೆ ಪಂಚೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಯಾವಾಗ ಮನೋಜ್ ಆತ್ಮಹತ್ಯೆ ಸುದ್ದಿ ಊರಿನಲ್ಲಿ ಜನಕ್ಕೆ ಗೊತ್ತಾಯ್ತೋ ಆರೋಪಿಗಳ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಳಿಕ ಮೃತ ಮನೋಜ್ ತಂದೆ ನೀಡಿದ ದೂರಿನ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮನು ಸೇರಿ ಐವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು ವಿಚಾರಣೆ ಮುಂದುವರಿಸಿದ್ದಾರೆ.
ಇನ್ನು ಗ್ರಾಮಸ್ಥರು ಆನ್ ಲೈನ್ ಗೇಮಿಂಗ್ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಾಲಕನ ಆನ್‌ಲೈನ್ ಗೇಮಿಂಗ್ ಗೆ ಪ್ರಚೋದಿಸಿ ಬ್ಲ್ಯಾಕ್ ಮೇಲ್ ಮಾಡಿ ಹಣ ಲೂಟಿ ಮಾಡಿದ್ದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಬಾಳಿ ಬದುಕಬೇಕಿದ್ದ ಮುದ್ದಾದ ಮಗ ಕಣ್ಣಮುಂದೆಯೇ ದುರಂತ ಅಂತ್ಯಕಂಡಿದ್ದು ಪೋಷಕರಿಗೆ ಬರಸಿಡಿಲು ಬಡೆದಂತಾಗಿದೆ.