ಸಹಕಾರಿ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಲಿ: ಸಿಎಂ ಡಿ ಕೆ ಶಿವಕುಮಾರ್
ಕರ್ನಾಟಕದ ಮನೆಗಳಲ್ಲಷ್ಟೇ ಅಲ್ಲದೆ, ಹೊರರಾಜ್ಯಗಳಲ್ಲಿಯೂ ಈ ಬ್ರ್ಯಾಂಡ್ ಗೆ ಬೇಡಿಕೆ ಹೆಚ್ಚಬೇಕು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ಬೆಂಗಳೂರು: "ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡುವ ರೀತಿಯಲ್ಲಿ ಸಹಕಾರಿ ಸಂಸ್ಥೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ನಂದಿನಿ, ಮೈಸೂರು ಸ್ಯಾಂಡಲ್ ನಂತೆ ಸಫಲ್ ಕೂಡ ಜನರ ವಿಶ್ವಾಸ ಗಳಿಸಬೇಕು. ಕರ್ನಾಟಕದ ಮನೆಗಳಲ್ಲಷ್ಟೇ ಅಲ್ಲದೆ, ಹೊರರಾಜ್ಯಗಳಲ್ಲಿಯೂ ಈ ಬ್ರ್ಯಾಂಡ್ ಗೆ ಬೇಡಿಕೆ ಹೆಚ್ಚಬೇಕು" ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ನಡೆದ ಸಫಲ್ ಬ್ರ್ಯಾಂಡ್ ನ ಹೊಸ ವಿನ್ಯಾಸದ ಪ್ಯಾಕೆಟ್ ಗಳು ಹಾಗೂ ಲೋಗೋ ಲೋಕಾರ್ಪಣೆಗೊಳಿಸಿ ಮಾತನಾಡಿದರು.
"1984 ರಲ್ಲಿ ಆರಂಭವಾದ ಸಫಲ್ ಬ್ರ್ಯಾಂಡ್ ಗೆ ಹೊಸ ರೂಪ ನೀಡುವ ಮೂಲಕ ಮತ್ತಷ್ಟು ಜನರನ್ನು ಆಕರ್ಷಿಸುವ ಪ್ರಯತ್ನ ನಡೆಯುತ್ತಿದೆ. ಗುಣಮಟ್ಟ ಮತ್ತು ಪರಿಶುದ್ಧತೆಯ ಮೂಲಕ ಖಾಸಗಿ ಕಂಪನಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಸಫಲ್ ಬ್ರಾಂಡ್ ನ ಯಶಸ್ಸು ಕೇವಲ ಒಂದು ಕಂಪನಿ ಅಥವಾ ಒಂದು ಒಕ್ಕೂಟದ ಯಶಸ್ಸಲ್ಲ. ಇದು ಒಂದು ಕ್ರಾಂತಿಕಾರಿ ಬದಲಾವಣೆಗೆ ನಾಂದಿ ಹಾಡುವ ಪ್ರಯತ್ನ. ಜನರಲ್ಲಿ ಹೊಸ ಭರವಸೆ ಮೂಡಿಸುವ ಹೆಜ್ಜೆ" ಎಂದರು.
"ರೈತರು ಬೆಳೆದ ಎಣ್ಣೆಕಾಳುಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಜತೆಗೆ, ಗುಣಮಟ್ಟದ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರ ಮನೆಗಳಿಗೆ ತಲುಪಿಸುವ ಉದ್ದೇಶದಿಂದ ‘ಸಫಲ್’ ಬ್ರ್ಯಾಂಡ್ ಗೆ ಹೊಸ ರೂಪ ನೀಡಲಾಗಿದೆ" ಎಂದರು.
ಆನ್ ಲೈನ್ ಮೂಲಕವೂ ಗ್ರಾಹಕರಿಗೆ ತಲುಪಲಿ
"ಇಂದಿನ ದಿನಗಳಲ್ಲಿ ಗ್ರಾಹಕರು ಆನ್ ಲೈನ್ ಮೂಲಕವೇ ಅನೇಕ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಸಫಲ್ ಉತ್ಪನ್ನಗಳನ್ನು ರಾಜ್ಯದ ಪ್ರತಿಯೊಂದು ಮನೆಗೂ ತಲುಪಿಸುವ ಪ್ರಯತ್ನವಾಗಬೇಕು. ರೈತರ ಸಹಕಾರ ಸಂಸ್ಥೆಗಳು ಉತ್ಪಾದನೆಗೆ ಮಾತ್ರ ಸೀಮಿತವಾಗದೆ, ಮಾರುಕಟ್ಟೆ ವಿಸ್ತರಣೆ ಮತ್ತು ಗ್ರಾಹಕರ ವಿಶ್ವಾಸ ಗಳಿಸುವತ್ತಲೂ ಗಮನಹರಿಸಬೇಕು" ಎಂದು ಸಲಹೆ ನೀಡಿದರು.
ರೈತರ ಬೆಳೆಗಳ ಮೌಲ್ಯವರ್ದನೆ
"ಕರ್ನಾಟಕವು ದೇಶದಲ್ಲಿ ಹೆಚ್ಚಿನ ಕೃಷಿ ಭೂಮಿ ಹೊಂದಿರುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಕಡಲೆಕಾಯಿ, ಸೂರ್ಯಕಾಂತಿ ಸೇರಿದಂತೆ ವಿವಿಧ ಎಣ್ಣೆಕಾಳುಗಳನ್ನು ಬೆಳೆಯಲಾಗುತ್ತಿದೆ. ತೆಂಗು ಕೂಡ ಪ್ರಮುಖ ಖಾದ್ಯ ತೈಲ ಉತ್ಪಾದಕ ಬೆಳೆ. ರೈತರು ಉತ್ಪಾದಿಸುವ ಇಂತಹ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ಉತ್ತಮ ಮಾರುಕಟ್ಟೆ ಕಲ್ಪಿಸಬೇಕಿದೆ" ಎಂದು ಹೇಳಿದರು.
"ಮನುಷ್ಯನ ಬದುಕಿನಲ್ಲಿ ಎಣ್ಣೆಗೆ ಮಹತ್ವದ ಸ್ಥಾನವಿದೆ. ದೀಪ ಬೆಳಗುವುದರಿಂದ ಹಿಡಿದು ತಲೆಗೆ ಹಚ್ಚುವ ಎಣ್ಣೆ ಹಾಗೂ ಅಡುಗೆಯಲ್ಲಿ ಬಳಸುವ ಎಣ್ಣೆಯವರೆಗೆ ಪ್ರತಿಯೊಂದಕ್ಕೂ ತನ್ನದೇ ಆದ ಪ್ರಾಮುಖ್ಯವಿದೆ. ಎಣ್ಣೆ ಇಲ್ಲದಿದ್ದರೆ ಅಡುಗೆಗೆ ರುಚಿಯೇ ಇರುವುದಿಲ್ಲ. ಆದ ಕಾರಣ ನಮ್ಮ ರೈತರು ಬೆಳೆದ ಎಣ್ಣೆಕಾಳುಗಳಿಂದ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸಿ ಜನರಿಗೆ ತಲುಪಿಸುವ ಕೆಲಸ ಆಗಬೇಕು” ಎಂದರು.
"ನಾನು ಕಡಲೆಕಾಯಿ ಬೆಳೆಯುವ ಪ್ರದೇಶದಿಂದ ಬಂದಿರುವವನು. ಎಣ್ಣೆ ತೆಗೆಯಲು ರೈತರು ಪಡುವ ಶ್ರಮದ ಅರಿವಿದೆ. ತೆಂಗಿನಕಾಯಿಯಿಂದ ಎಣ್ಣೆ ತೆಗೆಯುವ ಪ್ರಕ್ರಿಯೆಯೂ ಗೊತ್ತಿದೆ. ಹೀಗಾಗಿ ರೈತರ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರೆಯುವಂತೆ ಮಾಡುವುದು ಅತ್ಯಂತ ಮುಖ್ಯ" ಎಂದರು.
ಸಹಕಾರ ಕ್ಷೇತ್ರವೇ ರೈತರ ಶಕ್ತಿ
"1983ರಲ್ಲಿ ಕನಕಪುರದಲ್ಲಿ ಸಹಕಾರ ಕ್ಷೇತ್ರದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡೆ. ಸಹಕಾರ ಕ್ಷೇತ್ರದೊಂದಿಗೆ ದೀರ್ಘಕಾಲದ ನಂಟಿದೆ. ಇಲ್ಲಿ ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು, ಒಗ್ಗಟ್ಟಿನಿಂದ ಕೆಲಸ ಮಾಡುವುದು ಮತ್ತು ಸಾಮೂಹಿಕ ಪ್ರಯತ್ನದ ಮೂಲಕ ಯಶಸ್ಸು ಸಾಧಿಸುವುದೇ ಸಹಕಾರದ ಮೂಲ ಆಶಯ" ಎಂದರು.
“ಸಹಕಾರ ಸಂಸ್ಥೆಗಳು ರೈತರ ಬೆನ್ನೆಲುಬಾಗಿವೆ. ಖಾಸಗಿ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿದ್ದ ಸಂದರ್ಭಗಳಲ್ಲಿ ಸಹಕಾರಿ ಬ್ಯಾಂಕುಗಳು ಸಕ್ಕರೆ ಕಾರ್ಖಾನೆಗಳಿಗೆ ಸೇರಿದಂತೆ ಹಲವು ಸಂಸ್ಥೆಗಳಿಗೆ ನೆರವಾಗಿವೆ. ಇಂತಹ ಸಂಸ್ಥೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ” ಎಂದು ಹೇಳಿದರು.
"ಸಹಕಾರ ಸಂಸ್ಥೆಗಳನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ. ಆಡಳಿತ, ನಿರ್ವಹಣೆ, ಹಣಕಾಸು ಮತ್ತು ಮಾರುಕಟ್ಟೆ ಸೇರಿದಂತೆ ಹಲವು ಸವಾಲುಗಳಿರುತ್ತವೆ. ಆದರೂ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಸಂಸ್ಥೆಗಳನ್ನು ಇನ್ನಷ್ಟು ಬಲಪಡಿಸಬಹುದು" ಎಂದು ತಿಳಿಸಿದರು.
ರೈತರ ಹಿತ ಕಾಯಲು ಸರ್ಕಾರ ಬದ್ಧ
"ರೈತರ ಉತ್ಪಾದನಾ ವೆಚ್ಚ ಹೆಚ್ಚುತ್ತಿರುವುದರಿಂದ ಕೃಷಿ ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪೆಟ್ರೋಲ್, ಡೀಸೆಲ್, ಕೀಟ ನಾಶಕಗಳು, ಕಾರ್ಮಿಕರ ಕೂಲಿ ಸೇರಿದಂತೆ ವಿವಿಧ ವೆಚ್ಚಗಳು ಹೆಚ್ಚಾಗಿವೆ. ಮತ್ತೊಂದೆಡೆ, ಬೆಳೆಗಳಿಗೆ ನಿರೀಕ್ಷಿತ ಬೆಲೆ ಸಿಗದಿರುವುದು ರೈತರ ಸಂಕಷ್ಟವನ್ನು ಹೆಚ್ಚಿಸಿದೆ. ಇಂತಹ ಸಂದರ್ಭದಲ್ಲಿ ರೈತರನ್ನು ಉಳಿಸಿ ಬೆಳೆಸುವುದು ಸರ್ಕಾರದ ಆದ್ಯತೆಯಾಗಿದೆ" ಎಂದು ಹೇಳಿದರು.
ರಾಜ್ಯ ಸರ್ಕಾರ ರೈತರಿಗೆ ನೆರವಾಗಲು ವಿದ್ಯುತ್ ಸಬ್ಸಿಡಿಗೆ ಸುಮಾರು 30,000 ಕೋಟಿ ರೂ. ವೆಚ್ಚ ಮಾಡುತ್ತಿದೆ. ನೀರಾವರಿ ಮತ್ತು ಕೃಷಿಗೆ ಅಗತ್ಯವಾದ ನೆರವು ನೀಡುವ ಮೂಲಕ ರೈತರ ಬದುಕನ್ನು ಸುಧಾರಿಸಲು ಪ್ರಯತ್ನಿಸುತ್ತಿದೆ" ಎಂದರು.
"ರೈತರ ಹಿತದೃಷ್ಟಿಯಿಂದ ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ಸಚಿವ ಸಂಪುಟದಲ್ಲಿ ಕೈಗೊಳ್ಳಲಾಗಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ನಿರಂತರವಾಗಿ ನಡೆಯಲಿದೆ. ರೈತರ ಬದುಕಿನಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಅವರ ಸೇವೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸುವ ಮತ್ತು ಅವರ ಆದಾಯ ಹೆಚ್ಚಿಸುವ ಪ್ರಯತ್ನಗಳಿಗೆ ಸರ್ಕಾರ ಬೆಂಬಲ ನೀಡಲಿದೆ” ಎಂದು ತಿಳಿಸಿದರು.