ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲೆ ಬಿಜೆಪಿ ಕಾರ್ಯಕರ್ತರ ಕಿತ್ತಾಟ.! ಬಿವೈವಿ ಅಸಮಾಧಾನ
ಗುಬ್ಬಿ ತಾಲೂಕಿನ ಹಾಗಲವಾಡಿ ಜುಂಜಪ್ಪನಹಟ್ಟಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸೇವಾ ಸಂಕಲ್ಪ ಅಭಿಯಾನ ಹಾಗೂ ಬೂತ್ ವಿಜಯ ಸಂಕಲ್ಪ ಯಾತ್ರೆ ನಡೆಯಿತು. ಈ ವೇಳೆ ವಿಜಯೇಂದ್ರ ಅವರಿಗೆ ಅದ್ದೂರಿ ಸ್ವಾಗತ ಕೋರಲಾಯ್ತು. ಇದೇ ವೇಳೆ ಗುಬ್ಬಿಯ ಚೇಳೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡರ ನಡುವೆ ಗಲಾಟೆಯೂ ಕೂಡ ನಡೆದಿದೆ.
ತುಮಕೂರು : ಮುಂಬರುವ 2028 ರ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಣತೊಟ್ಟಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇವಾ ಸಂಕಲ್ಪ ಯಾತ್ರೆ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಅಭಿಯಾನ ಆರಂಭಿಸಿದ್ದಾರೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಾಗಲವಾಡಿ ಬಳಿಯ ಜುಂಜಪ್ಪನಹಟ್ಟಿಯಲ್ಲಿ ಸೇವಾ ಸಂಕಲ್ಪ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚಾಲನೆ ನೀಡಿದರು. ಇದೇ ವೇಳೆ ಗ್ರಾಮಸ್ಥರು ಅದ್ದೂರಿ ಹರೇವಾದ್ಯ, ಪೂರ್ಣಕುಂಭ ಹಾಗೂ ಸೋಬಾನೆ ಪದಗಳ ಮೂಲಕ ವಿಜಯೇಂದ್ರ ಅವರನ್ನು ಮಾಡಿಕೊಳ್ಳಲಾಯ್ತು.
ಇನ್ನು ಜುಂಜಪ್ಪನ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ವಿಜಯೇಂದ್ರ, ಪ್ರಧಾನಿ ನರೇಂದ್ರ ಮೋದಿಯವರಿಗೆ ಆಯಸ್ಸು, ಆರೋಗ್ಯ ಹಾಗೂ ಶಕ್ತಿ ನೀಡುವಂತೆ ಪ್ರಾರ್ಥಿಸಿದ್ರು. ಕಂಸಾಳೆ, ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಬಳಿಕ ಬೂತ್ ಅಧ್ಯಕ್ಷ ಬಸವರಾಜು ಅವರ ಮನೆಯಲ್ಲಿ ವಿಜಯೇಂದ್ರ ಉಪಹಾರ ಸೇವಿಸಿದ್ರು. ಮೋದಿಯವರ 25 ವರ್ಷಗಳ ಸಾರ್ವಜನಿಕ ಜೀವನದ ಸಾಧನೆಯನ್ನು ಸೇವಾ ಸಂಕಲ್ಪ ಅಭಿಯಾನದ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗ್ತಿದೆ. ರಕ್ತದಾನ ಶಿಬಿರ, ಸಸಿ ನೆಡುವ ಕಾರ್ಯಕ್ರಮ, ಮಕ್ಕಳಿಗೆ ಚೆಸ್ ಸ್ಪರ್ಧೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸೇವಾ ಸಂಕಲ್ಪ ಹಾಗೂ ಬೂತ್ ವಿಜಯ ಸಂಕಲ್ಪ ಅಭಿಯಾನವನ್ನು ಒಟ್ಟಿಗೆ ಜೋಡಿಸಿಕೊಂಡು ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಲಾಗ್ತಿದೆ.
ಇನ್ನು ಸೇವಾ ಸಂಕಲ್ಪ ಅಭಿಯಾನದ ವೇದಿಕೆಯಿಂದಲೇ ರಾಜ್ಯ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ರು. ಭೀಕರ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ರೂ ರಾಜ್ಯ ಸರ್ಕಾರ ರೈತರ ನೆರವಿಗೆ ಬರುತ್ತಿಲ್ಲ ಅಂತ ಆರೋಪಿಸಿದ್ರು. ಒಂದು ಹೆಕ್ಟೇರ್‌ಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿತ್ತು. ಆದ್ರೆ ಸರ್ಕಾರ ಘೋಷಣೆ ಮಾಡಿದ ಪರಿಹಾರವನ್ನೂ ಸಂಪೂರ್ಣವಾಗಿ ಬಿಡುಗಡೆ ಮಾಡಿಲ್ಲ ಅಂತ ವಿಜಯೇಂದ್ರ ಆರೋಪಿಸಿದ್ರು. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಇದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಅಂತ ಸರ್ಕಾರದ ವಿರುದ್ಧ ಕಿಡಿಕಾರಿದ್ರು.
ಇನ್ನು ಸೇವಾ ಸಂಕಲ್ಪ ಅಭಿಯಾನದ ನಡುವೆ ಗುಬ್ಬಿ ಬಿಜೆಪಿಯ ಆಂತರಿಕ ಬೇಗುದಿಯೂ ಬಹಿರಂಗವಾಯ್ತು. ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ್ ಭಾಷಣ ಮಾಡುತ್ತಿದ್ದ ವೇಳೆ ಗದ್ದಲ ಶುರುವಾಯ್ತು. ಸ್ವಾಗತ ಭಾಷಣದಲ್ಲಿ ಮತ್ತೊಬ್ಬ ಮುಖಂಡ ದಿಲೀಪ್ ಕುಮಾರ್ ಅವರ ಹೆಸರು ಪ್ರಸ್ತಾಪ ಮಾಡದ ಹಿನ್ನೆಲೆ ದಿಲೀಪ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ರು. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸಮ್ಮುಖದಲ್ಲೇ ಎರಡು ಬಣಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಎರಡೂ ಮುಖಂಡರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡ್ರು. ವೇದಿಕೆಯಲ್ಲೇ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಯಂತ್ರಿಸಲು ಮುಖಂಡರು ಹರಸಾಹಸ ಪಟ್ಟರು. ಕೊನೆಗೆ ವಿಜಯೇಂದ್ರ ಅವರೇ ಭಾಷಣಕ್ಕೆ ಮುಂದಾಗಿ ಕಾರ್ಯಕರ್ತರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ರು.
ಇನ್ನು ಕಾರ್ಯಕರ್ತರ ನಡುವಿನ ಆಂತರಿಕ ಕಲಹಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ವಿಜಯೇಂದ್ರ ಅವರು, ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವಂತೆ ನಾವೆಲ್ಲರೂ ವರ್ಷಾನುಗಟ್ಟಲೆ ಕಷ್ಟಪಟ್ಟು ಕಟ್ಟಿದ ಪಕ್ಷವನ್ನು ನೀವು ಕೆಲವೇ ನಿಮಿಷಗಳಲ್ಲಿ ಹಾಳು ಮಾಡುತ್ತಿದ್ದೀರಾ ಎಂದು ಗರಂ ಆದರು. ಕೆಲವರು ತಮ್ಮಿಂದಲೇ ಗುಬ್ಬಿಯಲ್ಲಿ ಪಕ್ಷ ಬೆಳೆದಿದೆ ಎನ್ನುವ ಭ್ರಮೆಯಲ್ಲಿದ್ದಾರೆ ಎಂದು ಚಾಟಿ ಬೀಸಿದ ಅವರು, ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸುವುದರಿಂದ ಮೂರನೇ ವ್ಯಕ್ತಿಗೆ ಲಾಭವಾಗುತ್ತದೆ ಎಂದು ಎಚ್ಚರಿಸಿದರು. ಅಲ್ಲದೆ, ನಿಮ್ಮ ಜಗಳ ಹೀಗೆಯೇ ಮುಂದುವರಿದರೆ ಕೊನೆಗೆ ಜಿಲ್ಲಾಧ್ಯಕ್ಷರೇ ಬಂದು ಇಲ್ಲಿ ಸ್ಪರ್ಧಿಸಬೇಕಾಗುತ್ತದೆ ಎಂದು ನಾಯಕರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಒಂದೆಡೆ ಪ್ರಧಾನಿ ನರೇಂದ್ರ ಮೋದಿಯವರ 25 ವರ್ಷಗಳ ಸಾರ್ವಜನಿಕ ಜೀವನದ ಹಿನ್ನೆಲೆಯಲ್ಲಿ ಸೇವಾ ಸಂಕಲ್ಪ ಅಭಿಯಾನ... ಮತ್ತೊಂದೆಡೆ ರಾಜ್ಯ ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ... ಇದರ ನಡುವೆಯೇ ವಿಜಯೇಂದ್ರ ಸಮ್ಮುಖದಲ್ಲೇ ನಡೆದ ಬಿಜೆಪಿ ಕಾರ್ಯಕರ್ತರ ಗಲಾಟೆ, ಗುಬ್ಬಿ ಬಿಜೆಪಿಯಲ್ಲಿನ ಆಂತರಿಕ ಭಿನ್ನಮತವನ್ನೂ ಬಹಿರಂಗಪಡಿಸಿದೆ. ಇನ್ನು ಚುನಾವಣಾ ಪೂರ್ವದಲ್ಲೆ ಪಕ್ಷದಲ್ಲನ ಆಂತರೀಕ ಬೇಗುದಿ ಯಾವ ರೀತಿ ರಾಜ್ಯಾಧ್ಯಕ್ಷ ಬಿ.ವೈ.ವಿ ಶಮನ ಮಾಡ್ತಾರೆ ಅನ್ನೋದು ಕಾದುನೋಡಬೇಕಿದೆ.