SOCIAL MEDIA

Newsletter

PARTNER SITES
Select Language Select State

ನನ್ನ ಬಳಿ 1,400 ಕೋಟಿ ಆಸ್ತಿ ಇದೆ! ಇದನ್ನು ಕೇಳಲು ಕುಮಾರಸ್ವಾಮಿ ಐಟಿ ಅಧಿಕಾರಿಯೇ?: ಸಿಎಂ ಡಿ.ಕೆ.ಶಿವಕುಮಾರ್

"ಹೌದು, ಇಂದಿನ ಮೌಲ್ಯದಲ್ಲಿ ನನ್ನ ಬಳಿ 1,400 ಕೋಟಿ ರೂ. ಮೌಲ್ಯದ ಆಸ್ತಿ ಇದೆ. ನಾನು ಕಾನೂನು ಚೌಕಟ್ಟಿನಲ್ಲಿ ಆಸ್ತಿ ಸಂಪಾದಿಸಿದ್ದೇನೆ. ಕುಮಾರಸ್ವಾಮಿ ಅವರು ಹತಾಶಾರಾಗಿ ಈ ರೀತಿ ಮಾತನಾಡುತ್ತಿದ್ದಾರೆ" ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.

Written By Chetana Devarmani
Published: Sep 29, 2026, 11:04 PM IST | Updated: Sep 29, 2026, 11:06 PM IST
Join

ನವದೆಹಲಿ: ಕುಮಾರಸ್ವಾಮಿ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಬಿರುಕು, ತಾ ಮುಂದು ನಾ ಮುಂದು ಎಂಬ ಪೈಪೋಟಿಯಲ್ಲಿ ಕುಮಾರಸ್ವಾಮಿ ಅವರು ಹತಾಶರಾಗಿದ್ದಾರೆ. ಅವರಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅವರು ಇಷ್ಟು ದಿನ ಏಕೆ ಸುಮ್ಮನಿದ್ದರು. ಅವರ ತಂದೆ ದೇವೇಗೌಡರೇ ಆ ಯೋಜನೆಗೆ ಸಹಿ ಹಾಕಿದ್ದರು. ಜೊತೆಗೆ ಇವರು ಸಹ ಮುಖ್ಯಮಂತ್ರಿಯಾಗಿದ್ದರು. ಅಲ್ಲದೇ ಗಾಂಧಿ ಎನ್ನುವವರೊಬ್ಬರಿಗೆ ಇವರೇ ಪ್ರಯತ್ನಿಸಿ ಟೆಂಡರ್ ಕೊಡಿಸಿದರು. ಈ ವಿಚಾರವಾಗಿ ನ್ಯಾಯಾಲಯವು ಛಿಮಾರಿ ಹಾಕಿತ್ತು. ಬೇನಾಮಿ ಹೆಸರಿನಲ್ಲಿ ಅಲ್ಲಲ್ಲಿ ಸಾಕಷ್ಟು ವ್ಯವಹಾರಗಳು ನಡೆದವು. ಅವರಂತೆ ನಾನು ಹೆಸರುಗಳನ್ನು ತೆಗೆದುಕೊಳ್ಳಲು ಹೋಗುವುದಿಲ್ಲ ಎಂದು ತಿಳಿಸಿದರು.

ನನ್ನ ಆಸ್ತಿ ವಿಚಾರವಾಗಿ ಮಾತನಾಡಿದ್ದಾರೆ. ರೈತನ ಮಗ, ಉದ್ಯಮಿಯಾದ ನನಗೆ ಆಸ್ತಿ ಇರಬಾರದೇ? ನನ್ನ ಮಕ್ಕಳು ಆಸ್ತಿ ಕೊಂಡುಕೊಳ್ಳಬಾರದೇ? ಕಾನೂನಾತ್ಮಕ ಇರುವ ಅವಕಾಶದಲ್ಲೇ ನಾನು ಆಸ್ತಿ ಮಾಡಿದ್ದೇ‌ನೆ. ತಪ್ಪೇನಿದೆ?ಕುಮಾರಸ್ವಾಮಿ ಅವರು ಏನಾದರೂ ಆದಾಯ ತೆರಿಗೆ ಅಧಿಕಾರಿಯೇ? ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಿ ಎಂದು ಸವಾಲು ಹಾಕಿದರು. ಇವರುಗಳು ಮಾತ್ರ ಯಾವುದೋ ಊರಿಂದ ಬಂದು ಇಲ್ಲೆಲ್ಲಾ ಆಸ್ತಿಗಳನ್ನ ತೆಗೆದುಕೊಳ್ಳಬಹುದಾ. ಬಿಎಂಐಸಿಎಪಿಎ , ನೈಸ್ ರಸ್ತೆ ಯೋಜನೆಯೊಳಗೆ ಇವರ ಆಸ್ತಿ ಇಲ್ಲವೇ? ಆಸ್ತಿಗಳನ್ನು ಯಾರ್ಯಾರು ತಗೊಂಡಿದ್ದಾರೆ? ಯಾಕೆ ಇವರ ಆಸ್ತಿಗಳೆಲ್ಲಾ ವ್ಯಾಪ್ತಿಯಲ್ಲಿ, ಬಿಡದಿ ಟೌನ್ ಶಿಪ್ ಯೋಜನೆಯೊಳಗೆ ಹೇಗೆ ಆಸ್ತಿ ಬಂದಿತು? ಎಂದು ಪ್ರಶ್ನಿಸಿದರು.  

ಕುಮಾರಸ್ವಾಮಿ ಅವರು ಏನಾದರೂ ಮಾಡಿಕೊಳ್ಳಲಿ. ಅದರ ಬಗ್ಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ. ನನಗೆ ಆಸ್ತಿ ಇದೆ. ನನ್ನ ಮಕ್ಕಳಿಗೆ ಇನ್ನೂ ತೆಗೆದುಕೊಳ್ಳುವ ಶಕ್ತಿ ಇದ್ದರೆ ತೆಗೆದುಕೊಳ್ಳುತ್ತಾರೆ. ಕಾನೂನಲ್ಲಿ ಅವಕಾಶ ಇದೆ, ಖರೀದಿ ಮಾಡುವ ಸಾಮರ್ಥ್ಯವಿದೆ, ಬದುಕುತ್ತಾರೆ ಎಂದು ಸ್ಪಷ್ಟಪಡಿಸಿದರು. ಶೋಭಾ ಡೆವಲಪರ್ಸ್ ಜೊತೆ 5 ಕೋಟಿ ಹೂಡಿಕೆ ಮಾಡಿ ಈಗ 2,000 ಕೋಟಿ ಮಾಡಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, ಹೌದು, ನಾವು ಎಷ್ಟಾದರೂ ಮಾಡುತ್ತೇವೆ. ನನಗೆ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರು 1 ಲಕ್ಷ ರೂಪಾಯಿಗೆ ಆಗ ಒಂದು ನಿವೇಶನ ನೀಡಿದ್ದರು. ಇಂದು ಅದರ ಬೆಲೆ 20 ಕೋಟಿ ಇದೆ. ಇದರಲ್ಲಿ ಏನಾದರೂ ತಪ್ಪಿದೆಯೇ? ನಾನು ಲಂಚ ಹೊಡೆದಿದ್ದೇನೆಯೇ? ಇಲ್ಲ ಯಾವುದಾದರೂ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದೆನೆಯೇ? ಯಾವುದೂ ಇಲ್ವವಲ್ಲಾ ಎಂದು ವ್ಯಂಗ್ಯವಾಡಿದರು.  

ನನಗೆ ಉದ್ದಿಮೆ ಮಾಡಲು ಎಲ್ಲಾ ರೀತಿಯ ಹಕ್ಕು, ಅವಕಾಶವಿದೆ. ನನ್ನ ಮಕ್ಕಳಿಗೂ ಸಾಮರ್ಥ್ಯವಿದೆ. ಇನ್ನೂ ಖರೀದಿ ಮಾಡುವ ಸಾಮರ್ಥ್ಯವಿದೆ. ನಾನು ಕದ್ದುಮುಚ್ಚಿ ಮಾಡೋ ಅವಶ್ಯಕತೆಯಿಲ್ಲ. ನನ್ನ ಆಸ್ತಿಯನ್ನ ಈಗಾಗಲೇ ಘೋಷಣೆ ಮಾಡಿಕೊಂಡಿದ್ದೇನೆ ಎಂದರು. ಕುಮಾರಸ್ವಾಮಿ ಅವರದ್ದು ಏನೇನಿದೆ ಅಂತ ನಾನು ಈಗ ಮಾತನಾಡಲು ಹೋಗುವುದಿಲ್ಲ. ನನಗೆ ಈ ವಿಚಾರಗಳನ್ನು ಯಾರೋ ಹೇಳಿದರು. ಕುಮಾರಸ್ವಾಮಿ ಅವರು ಎಲ್ಲಾ ಎತ್ತಿಕೊಂಡು ಹೋಗಿ ಸಂಸ್ಥೆಗಳಿಗೆಲ್ಲಾ ಈಗಾಗಲೇ ಕೊಟ್ಟಿದ್ದಾರಲ್ಲಾ? ಇನ್ನೆಷ್ಟು ಬಾರಿ ಕೊಡುತ್ತಾರೆ. ಅವರಿಗೆ ಲಾರಿ ಬೇಕಾದರೆ ಕಳುಹಿಸಿಕೊಡೋಣ ಎಂದು ಲೇವಡಿ ಮಾಡಿದರು.

ಕುಮಾರಸ್ವಾಮಿ ಅವರು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆಗೆ ಸವಾಲು ಹಾಕಿರುವ ಬಗ್ಗೆ ಕೇಳಿದಾಗ, ವಿಧಾನಸೌಧದ ಮೆಟ್ಟಿಲುಗಳ ಮೇಲೆ ಯಾಕೆ? ಧೈರ್ಯವಿದ್ದರೆ ಯಾರನ್ನಾದರೂ ಕೌನ್ಸಿಲ್ ಅಥವಾ ಅಸೆಂಬ್ಲಿ ಸದಸ್ಯತ್ವಕ್ಕೆ ರಾಜೀನಾಮೆ ಕೊಡಿಸಿ, ಅಸೆಂಬ್ಲಿ ಒಳಗಡೆ ಬಂದು ಚರ್ಚೆ ಮಾಡಲಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಚರ್ಚೆ ಮಾಡುವ ಬದಲು ಫ್ರೀಡಂ ಪಾರ್ಕ್ ಇದೆ, ಅಲ್ಲಿಗೆ ಹೋಗಿ ಚರ್ಚೆ ಮಾಡಿಕೊಳ್ಳಲಿ ಎಂದರು.

ನೈಸ್ ಯೋಜನೆ ಜಾರಿಗೆ ತಮಗೆ ಬೆಂಬಲ ಇರಲಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾತನಾಡಿ, 2007 ರಲ್ಲಿ ಅವರಿಗೆ ಅಧಿಕಾರವಿತ್ತಲ್ಲ. ಇವರೇ ಹರಾಜಿನಲ್ಲಿ   ನಿಖಿಲ್ ಗಾಂಧಿ  ಕೊಟ್ಟಿದ್ದರಲ್ಲ. ಯಾಕೆ ಮಾಡಲು ಆಗಿಲ್ಲ? ಅಧಿಕಾರದಲ್ಲಿದ್ದಾಗ ಟೋಲ್ ರದ್ದು ಮಾಡದವರು ಈಗ ದೇಶಾದ್ಯಂತ ಟೋಲ್ ಬಂದ್ ಮಾಡಿಸಲು ಪ್ರಧಾನಿ ಮೋದಿಯವರಿಗೆ ಹೇಳಲಿ. ಈ ಗೊಡ್ಡು ಬೆದರಿಕೆಗೆಲ್ಲಾ ಡಿ ಕೆ ಶಿವಕುಮಾರ್ ಹೆದರುವುದಿಲ್ಲ. ಈ ನಾಟಕ, ಡ್ರಾಮಾ, ಫಿಲಾಸಫಿ, ಬ್ಲಾಕ್ ಮೇಲ್  ಎಲ್ಲಾ ಬೇಕಾದಷ್ಟು ನೋಡಿದ್ದೀನಿ. ಇವಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಮಾಡುವ ಕೆಲಸ ಮಾಡೋಣ. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಅವರಿಗೆ ತಡೆದುಕೊಳ್ಳಲಾಗುತ್ತಿಲ್ಲ. ಅಸೂಯೆಗೆ ಮದ್ದಿಲ್ಲ ಎಂದು ಹಿಂದೆಯೂ ಹೇಳಿದ್ದೇನೆ, ಈಗಲೂ ಹೇಳುತ್ತಿದ್ದೇನೆ, ನಾಳೆಯೂ ಹೇಳುತ್ತೇನೆ ಎಂದರು.  

ಕುಮಾರಸ್ವಾಮಿ ಅವರು ಇದು ಭಾಗ 1 ಎಂದು ಹೇಳಿದ್ದಾರೆ ಎಂದು ಕೇಳಿದಾಗ, ಪಾರ್ಟ್ 1, 2, 3,4 ಸ್ಟಿಂಗ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್, ಅವರ ಹತ್ರ ಇರೋದೆಲ್ಲಾ ಗೊತ್ತಿದೆ. ಚೆನ್ನಿಗಪ್ಪನ ಕಾಲದಿಂದಲೂ ಗೊತ್ತಿದೆ. ಬಾಲ ಗಂಗಾಧರನಾಥ ಸ್ವಾಮೀಜಿ, ನಿರ್ಮಲಾನಂದನಾಥ ಸ್ವಾಮೀಜಿ ಫೋನ್ ನನ್ನೇ ಟ್ಯಾಪ್ ಮಾಡಿಸಿದವರು, ಅವರನ್ನೇ ಬಿಟ್ಟಿಲ್ಲಾ, ನನ್ನನ್ನು ಬಿಡುತ್ತಾರೆಯೇ? ಹಾಗೆಂದು ಭಾವಿಸಿದರೆ ನಮ್ಮಂಥ ಮುಠ್ಠಾಳರು ಯಾರೂ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಹೆದರಲಿಲ್ಲ, ಈಗ ಹೆದರುತ್ತೇನೆಯೇ? ನನ್ನನ್ನು ದೊಡ್ಡ ಬೆದರಿಕೆ ಹಾಕಿ ಹೆದರಿಸುವ ಅಥವಾ ಬ್ಲ್ಯಾಕ್‌ಮೇಲ್ ಮಾಡುವ ಜಾಯಮಾನ ನನ್ನದಲ್ಲ ಎಂದರು.  

ಸ್ವಂತ ಅಪ್ಪನನ್ನೇ, ಅಣ್ಣ-ತಮ್ಮಂದಿರನ್ನೇ ಜೀರ್ಣಿಸಿಕೊಳ್ಳಲಾಗದವರು ನಮ್ಮನ್ನು ಬಿಡುತ್ತಾರೆಯೇ? ನಾವೇನೂ ಅವರಿಂದ ಒಳ್ಳೆಯದನ್ನು ನಿರೀಕ್ಷಿಸಿಲ್ಲ.  ನಮ್ಮ ಸರ್ಕಾರದ ಜನಪ್ರಿಯತೆಯನ್ನು ತಡೆದುಕೊಳ್ಳಲು ಆಗದೆ 'ಅಸೂಯೆ'ಯಿಂದ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಸಂಸ್ಕಾರವೂ ಇಲ್ಲ, ಸಂಸ್ಕೃತಿಯೂ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ತಾರ್ತಿಕ ಅಂತ್ಯವಿಲ್ಲವೇ ಎಂದು ಕೇಳಿದಾಗ, ನನಗೆ ಅವರ ಮೇಲೆ ಆರೋಪ ಮಾಡಲು ಇಷ್ಟವಿಲ್ಲ. ಅದಕ್ಕೆಲ್ಲ ನನ್ನ ಬಳಿ ಸಮಯವೂ ಇಲ್ಲ. ನೀವು ಹೇಳಿದ್ದಕ್ಕೆ ನಾನು ಉತ್ತರ ಕೊಡುತ್ತಿದ್ದೇನೆ ಅಷ್ಟೇ. ಉತ್ತರ ಕೊಡಲೂ ನನಗೆ ಇಷ್ಟವಿಲ್ಲ ಎಂದರು.

ಬಂಗಾರಪ್ಪ ಅವರು ನೀಡಿದ್ದ ನಿವೇಶನದ ಬಗ್ಗೆ ಕೇಳಿದಾಗ, ಮಾಜಿ ಮುಖ್ಯಮಂತ್ರಿ ದಿ.ಬಂಗಾರಪ್ಪನವರ ಕಾಲದಲ್ಲಿ 99 ಸಾವಿರ ನೀಡಿ ನಿವೇಶನ ಖರೀದಿಸಿದ್ದೆ. ಅವರೇ ಅದನ್ನು ಹಂಚಿಕೆ ಮಾಡಿದ್ದರು. ಇವತ್ತಿಗೆ 20 ಕೋಟಿ ಬೆಲೆ ಬಾಳುತ್ತದೆ. ನನ್ನ ಆಸ್ತಿಯ ಬೆಲೆ ಹೆಚ್ಚಾಗಿದೆ. ಅದನ್ನು ಘೋಷಿಸಿದ್ದೇನೆ. ತಪ್ಪೇನಿದೆ? ಇಂಥ ನೂರಾರು ಆಸ್ತಿ ನನ್ನ ಬಳಿ ಇದೆ. ಲಾರಿ ಇಟ್ಟುಕೊಂಡು ಕಸ ಹೊಡೆದು ಸಂಪಾದಿಸಿದ ಹಣ ನನ್ನ ಬಳಿ ಇಲ್ಲ. ನನ್ನದೇ ವೃತ್ತಿ, ವ್ಯವಹಾರ ಬದುಕಿದೆ. ಪ್ರತಿ ವರ್ಷವೂ ಆಸ್ತಿ ಘೋಷಿಸಿದ್ದೇನೆ. ಚುನಾವಣಾ ಆಯೋಗ, ಇಡಿ ಎಲ್ಲಾ ನೋಡಿ ಆಗಿದೆ. ಇನ್ನು ಯಾವುದಾದರೂ ದೊಡ್ಡ ಏಜೆನ್ಸಿಯನ್ನು ಹಾಕಿ ನೋಡಲಿ. ಯಾರು ಬೇಡ ಹೇಳುತ್ತಾರೆ ಎಂದರು.

ಶಾಸಕ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಬಗ್ಗೆ ಕೇಳಿದಾಗ, ಅವರು ಮಂತ್ರಿಯಾಗಿ ಅಥವಾ ಹುದ್ದೆಗೆ ಬಂದು ಇನ್ನಷ್ಟೇ ಕೆಲವು ತಿಂಗಳುಗಳಾಗಿವೆ, ಅಷ್ಟರಲ್ಲೇ 444 ಕೋಟಿ ಅಕ್ರಮ ಮಾಡಲು ಸಾಧ್ಯವೇ? ಅದೆಲ್ಲವೂ ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ಎಂದು ತಳ್ಳಿಹಾಕಿದರು.
 
ತಮ್ಮ ದೆಹಲಿ ಪ್ರವಾಸದ ಕುರಿತು ವಿವರಣೆ ನೀಡಿದ ಸಿಎಂ, ಇವತ್ತು ನಾವು ದೆಹಲಿಯಲ್ಲಿ ದಕ್ಷಿಣ ಭಾರತದ ರಾಜ್ಯಗಳ ಶಿಕ್ಷಣ ನೀತಿ (Education Policy) ಹಾಗೂ ಪರೀಕ್ಷಾ ಅಕ್ರಮಗಳನ್ನು ತಡೆಯುವ ಬಗ್ಗೆ ಮಹತ್ವದ ಸಭೆ ನಡೆಸಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ತಮಿಳುನಾಡು, ತೆಲಂಗಾಣ, ಕೇರಳ, ಹಿಮಾಚಲ ಪ್ರದೇಶದ ಸಚಿವರು ಮತ್ತು ಸಿಎಂಗಳು ಭಾಗವಹಿಸಿದ್ದರು. ಕೆಪಿಎಸ್‍ಸಿ ಸೇರಿದಂತೆ ಎಲ್ಲಾ ಪರೀಕ್ಷೆಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು ಹಾಗೂ ಪೇಪರ್ ಲೀಕ್ ತಡೆಯುವ ಕುರಿತು ಹೈಕಮಾಂಡ್ ನಾಯಕರು ನಮಗೆ ಸ್ಪಷ್ಟ ಮಾರ್ಗದರ್ಶನ ನೀಡಿದ್ದಾರೆ. ನಾವು ಸಚಿವ ಯು ಟಿ ಖಾದರ್ ಅವರ ನೇತೃತ್ವದ ಸಚಿವ ಸಂಪುಟ ಉಪಸಮಿತಿಯ ಮೂಲಕ ಶಿಕ್ಷಣ ರಂಗದಲ್ಲಿ ಸುಧಾರಣೆ ತರಲು ಬದ್ಧರಾಗಿದ್ದೇವೆ ಎಂದರು.  

ಕೆಲವು ರಾಜ್ಯಗಳಲ್ಲಿ ಬಿಜೆಪಿ ಸಿದ್ಧಾಂತವನ್ನು ಪಠ್ಯಪುಸ್ತಕಗಳಲ್ಲಿ ಅಳವಡಿಸಲು ಪ್ರಯತ್ನಿಸುತ್ತಿದ್ದಾರೆ. ನಮ್ಮಲ್ಲಿ ಮೊದಲಿನಿಂದಲೂ ಇರುವ ತತ್ವಗಳ ಆಧಾರದ ಮೇಲೆ ರಾಷ್ಟ್ರೀಯ ಸಮಸ್ಯೆಗಳ ಬಗ್ಗೆ ಕ್ರಮ ವಹಿಸಲು ಮಾರ್ಗದರ್ಶನವಿದೆ ಎಂದರು

ಗುತ್ತಿಗೆದಾರರ ಸಂಘವು ₹38,000 ಕೋಟಿ ಬಾಕಿ ಹಣ ಬಿಡುಗಡೆಗೆ ಬರೆದಿರುವ ಪತ್ರದ ಕುರಿತು ಮಾತನಾಡಿ, ಹಿಂದಿನ ಯಡಿಯೂರಪ್ಪನವರ ಸರ್ಕಾರ ಅಷ್ಟೊಂದು ಜಾಸ್ತಿ ಕೆಲಸಗಳನ್ನು ಕೊಟ್ಟು ಆರ್ಥಿಕ ಹೊರೆ ಹಾಕಿ ಹೊರಟುಹೋದರು. ಪತಿಕಾ ಗೋಷ್ಠಿ ನಡೆಸುತ್ತಿರುವವರಿಗೆ ಇದಕ್ಕೆ ಪರಿಹಾರ ಸೂಚಿಸಲು ಹೇಳಿ ಎಂದು ವ್ಯಂಗ್ಯವಾಡಿದರು. ಪರಿಸ್ಥಿತಿ ಕಷ್ಟವಿದೆ, ಆದರೂ ಅದರ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES