ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಪಿಂಕ್ ಲೈನ್ ಆರಂಭಕ್ಕೂ ಮುನ್ನವೇ ದೊಡ್ಡ ಬದಲಾವಣೆ ಕಂಡು ಬಂದಿದ್ದು, ಮೂರು ಮೆಟ್ರೋ ನಿಲ್ದಾಣಗಳ ಹೆಸರು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮೆಟ್ತೋ ನಿಲ್ದಾಣಗಳ ಮರು ನಾಮಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇದೀಗ ಇದಕ್ಕೆ ಅನುಮೋದನೆ ನೀಡಿದೆ. ನ. 13ರಂದು ಪಿಂಕ್ ಲೈನ್ ಮಾರ್ಗದ ಉದ್ಘಾಟನೆ ನಡೆಯಲಿರುವ ಬೆನ್ನಲ್ಲೇ ಈ ಬೆಳವಣಿಗೆಯು ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಹಾಗೂ ಸ್ಥಳೀಯರಿಗೆ ಸಂತಸ ತಂದಿದೆ.
ಈ ಕುರಿತು ಕೇಂದ್ರ ಸಚಿವಾಲಯದಿಂದ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಇಲಾಖೆಗೆ ಅಧಿಕೃತ ಅನುಮೋದನೆ ಪತ್ರ ರವಾನೆಯಾಗಿದ್ದು, ಶೀಘ್ರದಲ್ಲೇ ಈ ಸಂಬಂಧ ರಾಜ್ಯ ಸರ್ಕಾರದಿಂದ ಅಧಿಕೃತ ಗೆಜೆಟ್ ಅಧಿಸೂಚನೆ ಪ್ರಕಟವಾಗಲಿದೆ ಎನ್ನಲಾಗಿದೆ. ಇದಕ್ಕೂ ಮೊದಲೇ ಸಂಸದ ತೇಜಸ್ವಿ ಸೂರ್ಯ ಈ ಕುರಿತಂತೆ ಮಾಹಿತಿ ಹಂಚಿಕೊಂಡಿದ್ದಾರೆ.
In response to the demands of local residents and the recommendations of the committee, of which I was a member, the Ministry has approved the renaming of the following Pink Line Metro stations: •IIMB to Bilekahalli - IIMB •JP Nagar 4th Phase to NS Palya - JP Nagar 4th Phase •Tavarekere to SG Palya (Suddagunte Palya) I had earlier submitted a formal request to @MoHUA through BMRCL seeking these changes, particularly the renaming of IIMB Metro Station, in response to the long-standing demand of residents of Bommanahalli Assembly Constituency. @msrbommanahalli @krishnabgowda @RLR_BTM @OfficialBMRCL
— Tejasvi Surya (@Tejasvi_Surya) November 11, 2026
ಈ ನಿಲ್ದಾಣಗಳ ಹೆಸರುಗಳ ಮರುನಾಮಕರಣ
* IIMB ಮೆಟ್ರೋ ನಿಲ್ದಾಣಕ್ಕೆ ಬಿಳೇಕಹಳ್ಳಿ IIMB ಎಂದು ಮರುನಾಮಕರಣ
* JP ನಗರ 4ನೇ ಹಂತ ಮೆಟ್ರೋ ನಿಲ್ದಾಣಕ್ಕೆ NS ಪಾಳ್ಯ – JP ನಗರ 4ನೇ ಹಂತ ಎಂದು ಮರುನಾಮಕರಣ
* ತಾವರೆಕೆರೆ ಮೆಟ್ರೋ ನಿಲ್ದಾಣ – SG ಪಾಳ್ಯ (ಸುದ್ದಗುಂಟೆ ಪಾಳ್ಯ) ಎಂದು ಮರುನಾಮಕರಣ
ತೇಜಸ್ವಿ ಸೂರ್ಯ ಟ್ವೀಟ್:
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ನಿವಾಸಿಗಳ ಬಹುದಿನಗಳ ಬೇಡಿಕೆಗೆ ಸ್ಪಂದಿಸಲಾಗಿದೆ. ವಿಶೇಷವಾಗಿ IIMB ಮೆಟ್ರೋ ನಿಲ್ದಾಣದ ಹೆಸರು ಬದಲಾವಣೆ ಸೇರಿದಂತೆ ಮೂರು ನಿಲ್ದಾಣಗಳ ಹೆಸರು ಬದಲಾಯಿಸುವಂತೆ ಈ ಹಿಂದೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತ ಮನವಿ ಸಲ್ಲಿಸಿದ್ದೆ. ಇದೀಗ ಆ ಮನವಿಗೆ ಅನುಮೋದನೆ ದೊರೆತಿದೆ ಎಂದು ತೇಜಸ್ವಿ ಸೂರ್ಯ ತಮ್ಮ ಟ್ವೀಟ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ
ಇನ್ನೂ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಕಳೆದ 3-4 ದಿನಗಳಿಂದ ಸಿಎಂ ಹಾಗೂ ಕೃಷ್ಣಬೈರೇಗೌಡ ಅವರು ಮಾತನಾಡುತ್ತಾ ಮೆಟ್ರೋ ಅನುದಾನ ಬಗ್ಗೆ ಸಾಕಷ್ಟು ಆರೋಪ ಮಾಡ್ತಿದ್ದಾರೆ. ಮೆಟ್ರೋ ಆಗಿರಲಿ ಯಾವುದೇ ಅಭಿವೃದ್ಧಿ ಯೋಜನೆ ಆಗಿರಲಿ ಸಿಎಂ ಹಾಗೂ ಮೋದಿ ಅವರ ಸ್ವತಃ ಖರ್ಚಿನಿಂದ ಮಾಡಲ್ಲ. ಜನಸಾಮಾನ್ಯ ತೆರಿಗೆಯಿಂದ ಅಭಿವೃದ್ಧಿ ಯೋಜನೆ ಆಗುವುದು. ಜನರ ಹಕ್ಕು ಕೂಡ ಇದೆ. ತೆರಿಗೆ ಯಾವ ರೀತಿ ಬಳಕೆ ಆಗ್ತಿದೆ ಅಂತ ತಿಳಿದುಕೊಳ್ಳುವುದು. BMRCL ಕೇಂದ್ರ ಮತ್ತು ರಾಜ್ಯದ ಸರ್ಕಾರ 50- 50% ಪಾಲುದಾರಿಕೆ ಇದೆ. ಇಂಟರ್ನ್ಯಾಷನಲ್ ಲೋನ್ ಗಳ ಮೂಲಕ ಕೂಡ BMRCL ಯೋಜನೆ ಕೂಡ ಆಗುತ್ತೆ. ಲೋನ್ ಗಳ ಮೂಲಕ ಮೆಟ್ರೋ ಯೋಜನೆ ಮಾಡ್ತಾರೆ ಎಂದಿದ್ದಾರೆ.
ಪಿಂಕ್ ಲೈನ್ ನಿಲ್ದಾಣಗಳ ಹೆಸರುಗಳು ಅವು ಇರುವ ಮೂಲ ಬಡಾವಣೆಗಳನ್ನು ಪ್ರತಿನಿಧಿಸುತ್ತಿಲ್ಲ ಎಂಬ ಆರೋಪ ಸ್ಥಳೀಯ ನಿವಾಸಿಗಳು ಮತ್ತು ವಿವಿಧ ಸಂಗಟನೆಗಳಿಂದ ಕೇಳಿಬಂದಿತ್ತು. ಈ ಹಿನ್ನಲೆಯಲ್ಲಿ ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಲು ಜನಪ್ರತಿನಿಧಿಗಳನ್ನೊಳಗೊಂಡ ವಿಶೇಷ ಸಮಿತಿಯನ್ನು ರಚಿಸಲಾಗಿತ್ತು.
ಈ ಸಮಿತಿಯಲ್ಲಿ ಸಚಿವರಾದ ಕೃಷ್ಣ ಭೈರೇಗೌಡ, ರಾಮಲಿಂಗಾರೆಡ್ಡಿ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಗಹಾಗೂ ಶಾಸಕರಾದ ಎಂ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಮತ್ತು ಎಂ. ಕೃಷ್ಣಪ್ಪ ಅವರು ಸದಸ್ಯರಾಗಿದ್ದರು. ಪಕ್ಷಾತೀತವಾಗಿ ಒಗ್ಗೂಡಿದ್ದ ಈ ಜನಪ್ರತಿನಿಧಿಗಳ ನಿಯೋಗವು ಬಿಎಂಆರ್‌ಸಿಎಲ್ ಮೂಲಕ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಅಧಿಕೃತ ಪ್ರಸ್ತಾವನೆ ಸಲ್ಲಿಸಿತ್ತು.