ಬೈಕ್ ಟ್ಯಾಕ್ಸಿ ವಿಚಾರ ಸುಪ್ರೀಂಕೋರ್ಟ್‌ಗೆ; ಹೈಕೋರ್ಟ್ ತೀರ್ಪು ಪ್ರಶ್ನಿಸಿ 5 ಚಾಲಕರ ಸಂಘಟನೆಗಳಿಂದ ಅರ್ಜಿ
ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸಂಬಂಧಿಸಿದ ಹೈಕೋರ್ಟ್ ತೀರ್ಪನ್ನ ಪ್ರಶ್ನಿಸಿ ಐದು ಆಟೋ-ಟ್ಯಾಕ್ಸಿ ಚಾಲಕರ ಸಂಘಟನೆಗಳು ಸುಪ್ರೀಂಕೋರ್ಟ್ ಮೊರೆ ಹೋಗಿವೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀರಬಹುದು ಎಂದು ಸಂಘಟನೆಗಳು ವಾದಿಸಿವೆ. ಇದೀಗ ಈ ವಿಚಾರ ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ಕಾನೂನು ಹಂತಕ್ಕೆ ತಲುಪಿದೆ.
Bike Taxi Supreme Court Case: ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಹೋರಾಟ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕರ್ನಾಟಕ ಹೈಕೋರ್ಟ್ 2026ರ ಜನವರಿ 23ರಂದು ನೀಡಿದ್ದ ತೀರ್ಪನ್ನ ಪ್ರಶ್ನಿಸಿ ರಾಜ್ಯದ ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡುವುದರಿಂದ ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಆತಂಕವಿದೆ ಎಂದು ಸಂಘಟನೆಗಳು ಅರ್ಜಿಯಲ್ಲಿ ತಿಳಿಸಿವೆ.
ಅರ್ಜಿದಾರ ಸಂಘಟನೆಗಳಲ್ಲಿ ನಾಡಪ್ರಭು ಕೆಂಪೇಗೌಡ ಆಟೋ ಚಾಲಕರ ಸಂಘಟನೆ, ಕರ್ನಾಟಕ ವೆಂಕಟೇಗೌಡ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ, ಗ್ರೇಟರ್ ಬೆಂಗಳೂರು ಚಾಲಕರ ಸಂಘ, ಕರ್ನಾಟಕ ಸಾರಥಿಗಳ ಮಹಾಸಂಘ ಹಾಗೂ ಜೈ ಕರ್ನಾಟಕ ಸಾರಥಿ ಸೇನೆ ಟ್ರಸ್ಟ್ ಸೇರಿವೆ. ಇವರೊಂದಿಗೆ ಸತೀಶ್ ಕೆ.ಎಸ್. ಎಂಬ ಚಾಲಕರೂ ಅರ್ಜಿದಾರರಾಗಿ ಸೇರಿದ್ದಾರೆ ಎಂದು ವರದಿಯಾಗಿದೆ.
ಏನು ಹೇಳಿತ್ತು ಹೈಕೋರ್ಟ್?
ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಜನವರಿ 23ರಂದು ಬೈಕ್ ಟ್ಯಾಕ್ಸಿಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿತ್ತು. ಮೋಟಾರ್‌ಸೈಕಲ್‌ಗಳನ್ನ ಸಾರಿಗೆ ವಾಹನಗಳಾಗಿ ನೋಂದಾಯಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಪೀಠ ಹೇಳಿತ್ತು. ಬೈಕ್‌ಗಳನ್ನ ‘ಕಾಂಟ್ರಾಕ್ಟ್ ಕ್ಯಾರೇಜ್’ ಆಗಿ ಬಳಸಲು ಅಗತ್ಯವಿರುವ ಪರವಾನಗಿಗೆ ಅರ್ಜಿ ಸಲ್ಲಿಸಲು ಮಾಲೀಕರಿಗೆ ಅವಕಾಶ ನೀಡಲಾಗಿತ್ತು. ಅಲ್ಲದೆ ಬೈಕ್ ಟ್ಯಾಕ್ಸಿ ಸೇವೆ ನೀಡಲು ಬಯಸುವ ಅಗ್ರಿಗೇಟರ್‌ಗಳು ಕೂಡ ಅಗತ್ಯ ಪರವಾನಗಿಗಾಗಿ ಅರ್ಜಿ ಸಲ್ಲಿಸಬಹುದು ಎಂದು ಹೈಕೋರ್ಟ್ ತಿಳಿಸಿತ್ತು. ಸಂಬಂಧಪಟ್ಟ ಸಾರಿಗೆ ಪ್ರಾಧಿಕಾರಗಳು ಕಾನೂನಿನ ಪ್ರಕಾರ ಅರ್ಜಿಗಳನ್ನ ಪರಿಶೀಲಿಸಬಹುದು ಮತ್ತು ಅಗತ್ಯ ಷರತ್ತುಗಳನ್ನ ವಿಧಿಸಬಹುದು ಎಂದೂ ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿತ್ತು. ಈ ಪ್ರಕರಣದಲ್ಲಿ ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದ ಅಗ್ರಿಗೇಟರ್‌ಗಳು ಹಾಗೂ ಬೈಕ್ ಟ್ಯಾಕ್ಸಿ ಮಾಲೀಕರ ಸಂಘಟನೆಗಳು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದವು.
ಹಿಂದಿನ ಆದೇಶವೇನು?
ಇದಕ್ಕೂ ಮೊದಲು ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು 2025ರ ಏಪ್ರಿಲ್ 2ರಂದು ನೀಡಿದ್ದ ಆದೇಶದಲ್ಲಿ, ರಾಜ್ಯ ಸರ್ಕಾರವು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93ರ ಅಡಿಯಲ್ಲಿ ಅಗತ್ಯ ಮಾರ್ಗಸೂಚಿ ಮತ್ತು ನಿಯಮಗಳನ್ನ ರೂಪಿಸುವವರೆಗೆ ಅಗ್ರಿಗೇಟರ್‌ಗಳು ಬೈಕ್ ಟ್ಯಾಕ್ಸಿ ಸೇವೆ ನಡೆಸಲು ಸಾಧ್ಯವಿಲ್ಲವೆಂದು ಹೇಳಿತ್ತು. ಈ ಆದೇಶವನ್ನ ಓಲಾ, ಉಬರ್, ರ‍್ಯಾಪಿಡೋ ಸೇರಿದಂತೆ ಹಲವು ಅರ್ಜಿದಾರರು ಪ್ರಶ್ನಿಸಿದ್ದರು. ನಂತರ ವಿಭಾಗೀಯ ಪೀಠವು ಈ ಪ್ರಕರಣಗಳನ್ನ ವಿಚಾರಣೆ ನಡೆಸಿ 2026ರ ಜನವರಿ 23ರಂದು ಏಕಸದಸ್ಯ ಪೀಠದ ಆದೇಶವನ್ನ ಬದಿಗೊತ್ತಿತು.
ಚಾಲಕರ ಸಂಘಟನೆಗಳ ವಾದವೇನು?
ಹೈಕೋರ್ಟ್‌ನ ತೀರ್ಪಿನಿಂದ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ದಾರಿ ತೆರೆದಿರುವುದರಿಂದ ಈಗಾಗಲೇ ಆಟೋ ಮತ್ತು ಟ್ಯಾಕ್ಸಿ ಸೇವೆಗಳನ್ನ ಅವಲಂಬಿಸಿರುವ ಚಾಲಕರ ಮೇಲೆ ಪರಿಣಾಮ ಬೀರಬಹುದು ಎಂದು ಐದು ಚಾಲಕರ ಸಂಘಟನೆಗಳು ಸುಪ್ರೀಂಕೋರ್ಟ್‌ನಲ್ಲಿ ವಾದಿಸಿವೆ. ಲಕ್ಷಾಂತರ ಚಾಲಕರ ಜೀವನೋಪಾಯಕ್ಕೆ ಇದು ಸಂಬಂಧಿಸಿದ ವಿಚಾರವಾಗಿರುವುದರಿಂದ ಹೈಕೋರ್ಟ್ ತೀರ್ಪನ್ನ ಮರುಪರಿಶೀಲಿಸಬೇಕು ಎಂಬುದು ಅವರ ಅರ್ಜಿಯ ಪ್ರಮುಖ ಅಂಶವಾಗಿದೆ. ಅಲ್ಲದೆ ಬೈಕ್ ಟ್ಯಾಕ್ಸಿಗಳಿಗೆ ಸಂಬಂಧಿಸಿದ ನಿಯಂತ್ರಣ ಮತ್ತು ಪರವಾನಗಿ ನೀಡುವ ವಿಚಾರವು ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟ ಸಾರಿಗೆ ಪ್ರಾಧಿಕಾರಗಳ ವ್ಯಾಪ್ತಿಗೆ ಬರುತ್ತದೆ ಎಂಬ ವಾದವನ್ನೂ ಅರ್ಜಿಯಲ್ಲಿ ಮುಂದಿಡಲಾಗಿದೆ.
ಸುಪ್ರೀಂಕೋರ್ಟ್‌ನಲ್ಲಿ ಮುಂದಿನ ಹಂತ
ಇದೀಗ ಹೈಕೋರ್ಟ್‌ನ ಜನವರಿ 23ರ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಬೇಕಿದೆ. ಈ ನಡುವೆ ಬೈಕ್ ಟ್ಯಾಕ್ಸಿಗಳಿಗೆ ಸಂಬಂಧಿಸಿದ ಕಾನೂನು ನಿಯಮಗಳು, ಪರವಾನಗಿ ವ್ಯವಸ್ಥೆ ಹಾಗೂ ಆಟೋ-ಟ್ಯಾಕ್ಸಿ ಚಾಲಕರ ಜೀವನೋಪಾಯದ ಮೇಲೆ ಉಂಟಾಗಬಹುದಾದ ಪರಿಣಾಮಗಳು ಮತ್ತೆ ನ್ಯಾಯಾಲಯದ ಪರಿಗಣನೆಗೆ ಬರಲಿವೆ. ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಸಂಬಂಧಿಸಿದಂತೆ ಸರ್ಕಾರ, ಅಗ್ರಿಗೇಟರ್‌ಗಳು ಮತ್ತು ಸಾಂಪ್ರದಾಯಿಕ ಆಟೋ-ಟ್ಯಾಕ್ಸಿ ಚಾಲಕರ ನಡುವೆ ಹಲವು ವರ್ಷಗಳಿಂದ ಕಾನೂನು ಹಾಗೂ ನೀತಿ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಸುಪ್ರೀಂಕೋರ್ಟ್‌ನ ಮುಂದಿನ ವಿಚಾರಣೆ ಈ ವಿವಾದದ ಮುಂದಿನ ಕಾನೂನು ಹಂತವನ್ನ ನಿರ್ಧರಿಸಲಿದೆ.