Bengaluru Viral Fever: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹವಾಮಾನದಲ್ಲಾಗುತ್ತಿರುವ ಏರುಪೇರಿನ ನಡುವೆ ವಿವಿಧ ಸೋಂಕುಗಳು ಹಾಗೂ ಆರೋಗ್ಯ ಸಮಸ್ಯೆಗಳ ಬಗ್ಗೆ ಆತಂಕ ಹೆಚ್ಚಾಗಿದೆ. ಒಂದು ದಿನ ಮಳೆ, ಮತ್ತೊಂದು ದಿನ ಬಿಸಿಲು ಎಂಬ ವಾತಾವರಣದ ನಡುವೆ ಮಕ್ಕಳು, ವಯಸ್ಕರು ಹಾಗೂ ಹಿರಿಯರು ಜ್ವರ, ಶೀತ, ಕೆಮ್ಮು, ವಾಂತಿ ಮತ್ತು ಬೇಧಿಯಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಬಿಸಿಲು-ಮಳೆಯ ನಡುವೆ ಆರೋಗ್ಯ ಸಮಸ್ಯೆ
ಬೆಂಗಳೂರಿನಲ್ಲಿ ಬೆಳಗ್ಗೆ ಬಿಸಿಲು ಕಾಣಿಸಿಕೊಂಡರೆ, ಸಂಜೆ ವೇಳೆಗೆ ಮಳೆಯಾಗುತ್ತಿರುವುದು ಕಂಡುಬರುತ್ತಿದೆ. ಹವಾಮಾನದಲ್ಲಿನ ಈ ಬದಲಾವಣೆಗಳ ನಡುವೆಯೇ ಜನರಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಜ್ವರ, ಶೀತ, ಕೆಮ್ಮು, ಗಂಟಲು ನೋವು ಹಾಗೂ ಸುಸ್ತಿನಂತಹ ಲಕ್ಷಣಗಳೊಂದಿಗೆ ಅನೇಕರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ.
ಮಕ್ಕಳು ಮತ್ತು ಹಿರಿಯರಲ್ಲಿ ಇಂತಹ ಲಕ್ಷಣಗಳು ಕಂಡುಬಂದಾಗ ಪೋಷಕರು ಹಾಗೂ ಕುಟುಂಬದವರು ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ. ವೈರಲ್ ಸೋಂಕುಗಳ ಜೊತೆಗೆ ಜೀರ್ಣಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳೂ ವರದಿಯಾಗುತ್ತಿದ್ದು, ಸ್ವಚ್ಛತೆ ಮತ್ತು ಸುರಕ್ಷಿತ ಕುಡಿಯುವ ನೀರಿನ ಬಳಕೆಗೆ ಆದ್ಯತೆ ನೀಡುವಂತೆ ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.
ಒಂದು ವಾರದ ಅಂಕಿ-ಅಂಶಗಳು ಹೀಗಿವೆ
ವರದಿಯಲ್ಲಿರುವ ಕಳೆದ ಒಂದು ವಾರದ ಅಂಕಿ-ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿವೆ.
* ವಾಂತಿ ಮತ್ತು ಬೇಧಿ: 3,297 ಪ್ರಕರಣಗಳು
* ತೀವ್ರ ಉಸಿರಾಟದ ಸೋಂಕು (SARI): 268 ಪ್ರಕರಣಗಳು
* ಇನ್ಫ್ಲುಯೆನ್ಸ: 274 ಪ್ರಕರಣಗಳು
* ಇಲಿ ಜ್ವರ: 94 ಪ್ರಕರಣಗಳು
* ಡೆಂಗ್ಯೂ: 242 ಪ್ರಕರಣಗಳು
* ಮಲೇರಿಯಾ: 128 ಪ್ರಕರಣಗಳು
ಈ ಅಂಕಿ-ಅಂಶಗಳು ವಾಂತಿ ಮತ್ತು ಬೇಧಿ ಪ್ರಕರಣಗಳ ಜೊತೆಗೆ ಉಸಿರಾಟದ ಸೋಂಕುಗಳು ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆಯೂ ಗಮನಹರಿಸುವ ಅಗತ್ಯವನ್ನ ಸೂಚಿಸುತ್ತವೆ.
ಇಲಿ ಜ್ವರ, ಡೆಂಗ್ಯೂ, ಮಲೇರಿಯಾ ಪ್ರಕರಣಗಳೂ ವರದಿ
ವೈರಲ್ ಜ್ವರದ ಲಕ್ಷಣಗಳ ಜೊತೆಗೆ ಇಲಿ ಜ್ವರ, ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆಗಳ ಪ್ರಕರಣಗಳೂ ದಾಖಲಾಗಿವೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲವಾಗಬಹುದು. ಹೀಗಾಗಿ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು, ನೀರಿನ ಪಾತ್ರೆಗಳನ್ನ ಮುಚ್ಚಿಡುವುದು ಹಾಗೂ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದು ಮುಖ್ಯವಾಗಿದೆ.
ಇನ್ನು ವಾಂತಿ ಮತ್ತು ಬೇಧಿ ಕಾಣಿಸಿಕೊಂಡಾಗ ದೇಹದಲ್ಲಿ ನೀರಿನ ಕೊರತೆ ಉಂಟಾಗುವ ಸಾಧ್ಯತೆಯಿದೆ. ವಿಶೇಷವಾಗಿ ಮಕ್ಕಳು ಮತ್ತು ಹಿರಿಯರಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯಕೀಯ ಸಲಹೆ ಪಡೆಯಬೇಕು. ಮಳೆನೀರು ಅಥವಾ ಕಲುಷಿತ ನೀರು ಕುಡಿಯುವ ನೀರಿನ ಮೂಲಗಳಿಗೆ ಸೇರದಂತೆ ಎಚ್ಚರಿಕೆ ವಹಿಸಬೇಕು.
ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ
ನಗರದ ಕೆ.ಸಿ.ಜನರಲ್ ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ, ಸಿ.ವಿ.ರಾಮನ್ ನಗರ ಆಸ್ಪತ್ರೆ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ ಮತ್ತು ಸೋಂಕಿನ ಲಕ್ಷಣಗಳೊಂದಿಗೆ ರೋಗಿಗಳು ಬರುತ್ತಿದ್ದಾರೆ ಎಂದು ವರದಿಯಾಗಿದೆ. ಆರೋಗ್ಯ ಇಲಾಖೆಯು ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸೆ ಒದಗಿಸುವಂತೆ ಸೂಚಿಸಿರುವುದಾಗಿ ಮೂಲ ವರದಿಯಲ್ಲಿ ತಿಳಿಸಲಾಗಿದೆ.
ಸಾರ್ವಜನಿಕರು ಯಾವ ಮುನ್ನೆಚ್ಚರಿಕೆ ವಹಿಸಬೇಕು?
ಮಳೆ ಮತ್ತು ಬಿಸಿಲಿನ ನಡುವೆ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಕುಡಿಯುವ ನೀರನ್ನ ಸುರಕ್ಷಿತವಾಗಿ ಬಳಸಬೇಕು. ಅಗತ್ಯವಿದ್ದಲ್ಲಿ ನೀರನ್ನ ಕುದಿಸಿ ಆರಿಸಿ ಕುಡಿಯಬೇಕು. ಕೈಗಳನ್ನ ನಿಯಮಿತವಾಗಿ ಸ್ವಚ್ಛಗೊಳಿಸುವುದು, ಆಹಾರವನ್ನ ಮುಚ್ಚಿಡುವುದು ಹಾಗೂ ಸುತ್ತಮುತ್ತಲಿನ ಪರಿಸರವನ್ನ ಸ್ವಚ್ಛವಾಗಿಡುವುದು ಮುಖ್ಯ.
ಜ್ವರ, ನಿರಂತರ ಕೆಮ್ಮು, ಉಸಿರಾಟದ ತೊಂದರೆ, ವಾಂತಿ ಅಥವಾ ಬೇಧಿಯಂತಹ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧೋಪಚಾರಕ್ಕೆ ಮುಂದಾಗದೆ ವೈದ್ಯರನ್ನ ಸಂಪರ್ಕಿಸಬೇಕು. ಉಸಿರಾಟದ ತೊಂದರೆ, ತೀವ್ರ ಸುಸ್ತು ಅಥವಾ ದೇಹದಲ್ಲಿ ನೀರಿನ ಕೊರತೆಯ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯಕೀಯ ನೆರವು ಪಡೆಯಬೇಕು.
ಒಟ್ನಲ್ಲಿ ಬೆಂಗಳೂರಿನ ಹವಾಮಾನ ಬದಲಾವಣೆಯ ನಡುವೆಯೇ ವಿವಿಧ ಸೋಂಕುಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ವೈಯಕ್ತಿಕ ಸ್ವಚ್ಛತೆ, ಸುರಕ್ಷಿತ ಕುಡಿಯುವ ನೀರು ಮತ್ತು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದರಿಂದ ಆರೋಗ್ಯ ಸಮಸ್ಯೆಗಳ ಅಪಾಯವನ್ನ ಕಡಿಮೆ ಮಾಡಿಕೊಳ್ಳಬಹುದು.