ಯುದ್ಧಭೂಮಿಯಿಂದ ಮನರಂಜನಾ ವೇದಿಕೆಯವರೆಗೆ.. ರೋಬೋಟ್‌ಗಳ ಹೊಸ ಅವತಾರ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಂತ್ರಜ್ಞಾನದ ಲೋಕವೇ ಅನಾವರಣಗೊಂಡಿದೆ. ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಈ ಬಾರಿ ರೋಬೋಟ್‌ಗಳದ್ದೇ ಹವಾ! ಮನುಷ್ಯರು ಹೋಗಲಾಗದ ಜಾಗಕ್ಕೆ ಹೋಗಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸುವ ಮೈನಿಂಗ್ ರೋಬೋಟ್, ಸೈನಿಕರಿಗೆ ನೆರವಾಗುವ ನಾಲ್ಕು ಕಾಲಿನ ರೋಬೋಟ್ ಹಾಗೂ ಮನುಷ್ಯರಂತೆ ಹೆಜ್ಜೆ ಹಾಕಿ ಡ್ಯಾನ್ಸ್ ಮಾಡುವ ಹ್ಯೂಮನಾಯ್ಡ್ ರೋಬೋಟ್‌ಗಳು ನೋಡುಗರ ಗಮನ ಸೆಳೆದಿವೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಂತ್ರಜ್ಞಾನದ ಲೋಕವೇ ಅನಾವರಣಗೊಂಡಿದೆ. ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಈ ಬಾರಿ ರೋಬೋಟ್‌ಗಳದ್ದೇ ಹವಾ! ಮನುಷ್ಯರು ಹೋಗಲಾಗದ ಜಾಗಕ್ಕೆ ಹೋಗಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸುವ ಮೈನಿಂಗ್ ರೋಬೋಟ್, ಸೈನಿಕರಿಗೆ ನೆರವಾಗುವ ನಾಲ್ಕು ಕಾಲಿನ ರೋಬೋಟ್ ಹಾಗೂ ಮನುಷ್ಯರಂತೆ ಹೆಜ್ಜೆ ಹಾಕಿ ಡ್ಯಾನ್ಸ್ ಮಾಡುವ ಹ್ಯೂಮನಾಯ್ಡ್ ರೋಬೋಟ್‌ಗಳು ನೋಡುಗರ ಗಮನ ಸೆಳೆದಿವೆ.
ಬೆಂಗಳೂರು ಟೆಕ್ ಸಮಿಟ್‌ನಲ್ಲಿ ಈ ಬಾರಿ ತಂತ್ರಜ್ಞಾನದ ಜಾದೂ ನೋಡುಗರನ್ನು ಬೆರಗುಗೊಳಿಸಿದೆ. ಮನುಷ್ಯರ ಕೆಲಸವನ್ನು ಸುಲಭಗೊಳಿಸುವ, ಅಪಾಯಕಾರಿ ಪ್ರದೇಶಗಳಲ್ಲೂ ಕಾರ್ಯಾಚರಣೆ ನಡೆಸುವ ರೋಬೋಟ್‌ಗಳು ಎಲ್ಲರ ಗಮನ ಸೆಳೆದಿವೆ. ಅದರಲ್ಲೂ ಮನುಷ್ಯರಂತೆ ನಡೆಯುವ, ಕುಣಿಯುವ ಹ್ಯೂಮನಾಯ್ಡ್ ರೋಬೋಟ್‌ಗಳಂತೂ ವಿಶೇಷ ಆಕರ್ಷಣೆ. ಹಾಗಾದ್ರೆ ಈ ರೋಬೋಟ್‌ಗಳ ವಿಶೇಷತೆ ಏನು? ನೋಡೋಣ ಈ ವರದಿ.
ಬೆಂಗಳೂರು ಟೆಕ್ ಸಮಿಟ್ – ರೋಬೋಟ್‌ಗಳ ಲೋಕ
ಬಿಐಇಸಿಯಲ್ಲಿ ನಡೆಯುತ್ತಿರುವ 29ನೇ ಆವೃತ್ತಿಯ ಬೆಂಗಳೂರು ಟೆಕ್ ಸಮಿಟ್‌ನಲ್ಲಿ ತಂತ್ರಜ್ಞಾನದ ಹೊಸ ಲೋಕವೇ ತೆರೆದುಕೊಂಡಿದೆ. ಒಂದಕ್ಕಿಂತ ಒಂದು ವಿಭಿನ್ನ ರೋಬೋಟ್‌ಗಳು ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿವೆ. ಅದರಲ್ಲೂ ಮನುಷ್ಯರು ಹೋಗಲಾಗದ ಸ್ಥಳಗಳಿಗೆ ತೆರಳಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸುವ ಮೈನಿಂಗ್ ರೋಬೋಟ್ ವಿಶೇಷ ಆಕರ್ಷಣೆ. ಚಿನ್ನ, ಕಬ್ಬಿಣ ಸೇರಿದಂತೆ ವಿವಿಧ ಖನಿಜಗಳ ಗುಣಮಟ್ಟ ಪತ್ತೆಹಚ್ಚಲು ಈ ತಂತ್ರಜ್ಞಾನ ನೆರವಾಗಲಿದೆ.
ಸೈನಿಕರ ಬೆನ್ನಿಗೆ ನಿಂತ ರೋಬೋಟ್!
ಇನ್ನು ಯುದ್ಧಭೂಮಿಯಲ್ಲೂ ರೋಬೋಟ್‌ಗಳ ಬಳಕೆಗೆ ವೇದಿಕೆ ಸಜ್ಜಾಗಿದೆ. ಸೈನಿಕರಿಗೆ ಅಗತ್ಯ ವಸ್ತುಗಳನ್ನು ಹೊತ್ತು ಸಾಗಿಸುವ ನಾಲ್ಕು ಕಾಲಿನ ರೋಬೋಟ್‌ಗಳು ಪ್ರದರ್ಶನದ ಮತ್ತೊಂದು ಹೈಲೈಟ್. ಬೆಟ್ಟ, ಗುಡ್ಡ, ಮರಳುಗಾಡಿನಂತಹ ಕಠಿಣ ಪ್ರದೇಶಗಳಲ್ಲೂ ಸುಲಭವಾಗಿ ಸಂಚರಿಸುವ ಸಾಮರ್ಥ್ಯ ಇವುಗಳಿಗಿದೆ. ಸುಮಾರು 20 ಕೆ.ಜಿ. ತೂಕದ ಈ ರೋಬೋಟ್, 15 ಕೆ.ಜಿ.ವರೆಗೆ ಭಾರ ಹೊತ್ತು ಸಾಗಬಲ್ಲದು.
ಇನ್ನು ಹ್ಯೂಮನಾಯ್ಡ್ ರೋಬೋಟ್‌ಗಳದ್ದೇ ಮತ್ತೊಂದು ಅಬ್ಬರ. ಮನುಷ್ಯನಿಗೆ ಬಾಡಿಗಾರ್ಡ್‌ನಂತೆ ರಕ್ಷಣೆ ನೀಡುವ ಸಾಮರ್ಥ್ಯ ಹೊಂದಿರುವ ರೋಬೋಟ್, ಎದುರಾಳಿಯನ್ನು ಎದುರಿಸಲೂ ಸಜ್ಜಾಗಿದೆ. ಮನುಷ್ಯರಂತೆ ನಡೆಯುತ್ತೆ, ಕುಣಿಯುತ್ತೆ.. ಅಷ್ಟೇ ಅಲ್ಲ, ತರ್ಲೆ ಮಾಡಿದ್ರೆ ಹೊಡೆಯುತ್ತೆ ಎಂಬ ವಿವರಣೆಯೂ ನೋಡುಗರಲ್ಲಿ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಸ್ಪೀಕರ್, ಸಿಸಿ ಕ್ಯಾಮೆರಾ ಹೊಂದಿರುವ ಪುಟ್ಟ ಮಾನವ ಸ್ನೇಹಿ ರೋಬೋಟ್ ತನ್ನ ಡ್ಯಾನ್ಸ್ ಮೂಲಕ ಜನರನ್ನು ರಂಜಿಸುತ್ತಿದೆ. ವಾಕಿಂಗ್‌ಗೂ ಸಾಥ್ ನೀಡುವ ಈ ರೋಬೋಟ್ ಗಮನ ಸೆಳೆಯುತ್ತಿದೆ.
65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳ ಭಾಗಿ
ಕೃತಕ ಬುದ್ಧಿಮತ್ತೆ ಮತ್ತು ಅದರಾಚೆಗೆ ಎಂಬ ಘೋಷವಾಕ್ಯದೊಂದಿಗೆ ಈ ಬಾರಿಯ ಟೆಕ್ ಸಮಿಟ್ ಆಯೋಜಿಸಲಾಗಿದೆ. ವಿಶ್ವದ 65ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿಯಾಗಿದ್ದಾರೆ. 10 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು, 700ಕ್ಕೂ ಹೆಚ್ಚು ಭಾಷಣಕಾರರು, 1,500ಕ್ಕೂ ಹೆಚ್ಚು ಪ್ರದರ್ಶಕರು ಹಾಗೂ 13 ವೇದಿಕೆಗಳಲ್ಲಿ 140ಕ್ಕೂ ಹೆಚ್ಚು ವಿಚಾರಗೋಷ್ಠಿಗಳು ನಡೆಯಲಿವೆ. 1,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಭಾಗಿಯಾಗಿದ್ದು, ಸ್ವೀಡನ್ ಪಾಲುದಾರ ರಾಷ್ಟ್ರವಾಗಿ ಹಾಗೂ ಆಸ್ಟ್ರೇಲಿಯಾ, ಪೋಲೆಂಡ್ ಮತ್ತು ಇಟಲಿ ಬೆಂಬಲಿತ ರಾಷ್ಟ್ರಗಳಾಗಿ ಪಾಲ್ಗೊಂಡಿವೆ.
ಒಟ್ಟಿನಲ್ಲಿ ಮನುಷ್ಯರ ಕೆಲಸಕ್ಕೆ ನೆರವಾಗುವುದರಿಂದ ಹಿಡಿದು ಸೇನಾ ಕಾರ್ಯಾಚರಣೆಗಳವರೆಗೆ ರೋಬೋಟ್‌ಗಳ ಬಳಕೆ ವಿಸ್ತರಿಸುತ್ತಿದೆ. ಮುಂದಿನ ದಿನಗಳಲ್ಲಿ ತಂತ್ರಜ್ಞಾನ ಯಾವ ಹಂತ ತಲುಪಲಿದೆ ಎಂಬುದಕ್ಕೆ ಬೆಂಗಳೂರು ಟೆಕ್ ಸಮಿಟ್ ಸಾಕ್ಷಿಯಾಗಿದೆ.