SOCIAL MEDIA

Newsletter

PARTNER SITES
Select Language Select State

ಬೀದಿದೀಪ ನಿರ್ವಹಣೆಯಲ್ಲಿ ನಿರ್ಲಕ್ಷ್ಯ: ಮೂವರು ಗುತ್ತಿಗೆದಾರರಿಗೆ ₹13 ಲಕ್ಷ ದಂಡ!

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಮೂವರು ಗುತ್ತಿಗೆದಾರರಿಗೆ ಒಟ್ಟು ₹13 ಲಕ್ಷ ದಂಡ ವಿಧಿಸಲಾಗಿದೆ. ಸಹಾಯ ಆ್ಯಪ್ ದೂರುಗಳು ಹಾಗೂ ರಾತ್ರಿ ತಪಾಸಣೆಯಲ್ಲಿ ಹಲವು ಬೀದಿದೀಪಗಳು ಕಾರ್ಯನಿರ್ವಹಿಸದಿರುವುದು ಪತ್ತೆಯಾಗಿದೆ. ಹಾಳಾದ ದೀಪಗಳನ್ನು ತಕ್ಷಣ ದುರಸ್ತಿಪಡಿಸುವಂತೆ ಆಯುಕ್ತ ಕೆ.ಎನ್.ರಮೇಶ್ ಸೂಚಿಸಿದ್ದು, ನಿರ್ಲಕ್ಷ್ಯ ಮುಂದುವರಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Written By Puttaraj K Alur
Published: Sep 27, 2026, 11:49 AM IST | Updated: Sep 27, 2026, 11:58 AM IST
Image Credit: Bengaluru Streetlights
Join

Bengaluru Streetlights: ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ ಮೂವರು ಗುತ್ತಿಗೆದಾರರಿಗೆ ಒಟ್ಟು 13,00,753 ರೂ. ದಂಡ ವಿಧಿಸಲಾಗಿದೆ. ರಾತ್ರಿ ವೇಳೆ ನಡೆಸಿದ ತಪಾಸಣೆ ಹಾಗೂ ಸಾರ್ವಜನಿಕರಿಂದ ಸಹಾಯ (Sahaaya) ಆ್ಯಪ್ ಮೂಲಕ ದಾಖಲಾದ ದೂರುಗಳ ಪರಿಶೀಲನೆಯಲ್ಲಿ ಬೀದಿದೀಪಗಳ ನಿರ್ವಹಣೆಯಲ್ಲಿ ಲೋಪ ಕಂಡುಬಂದ ಹಿನ್ನೆಲೆಯಲ್ಲಿ ಪಾಲಿಕೆ ಈ ಕ್ರಮ ಕೈಗೊಂಡಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಚಿವರಾದ ಕೃಷ್ಣ ಭೈರೇಗೌಡ ಅವರ ಆದೇಶದಂತೆ ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್.ರಮೇಶ್ ಅವರ ನಿರ್ದೇಶನದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳ ಕಾರ್ಯನಿರ್ವಹಣೆಯನ್ನ ಪರಿಶೀಲಿಸಲು ರಾತ್ರಿ ವೇಳೆಯಲ್ಲಿ ವಿಶೇಷ ತಪಾಸಣೆ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಹಲವು ಪ್ರದೇಶಗಳಲ್ಲಿ ಎಲ್‌ಇಡಿ (LED) ಬೀದಿದೀಪಗಳು ಕಾರ್ಯನಿರ್ವಹಿಸದಿರುವುದು ಪತ್ತೆಯಾಗಿದೆ.

ಸಹಾಯ ಆ್ಯಪ್ ದೂರುಗಳ ಪರಿಶೀಲನೆ

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಲ್‌ಇಡಿ ಬೀದಿದೀಪಗಳನ್ನ ಅಳವಡಿಸುವುದು ಮತ್ತು ಅವುಗಳ ನಿರ್ವಹಣೆಯ ಜವಾಬ್ದಾರಿಯನ್ನ ವಿವಿಧ ಗುತ್ತಿಗೆ ಸಂಸ್ಥೆಗಳಿಗೆ ವಹಿಸಲಾಗಿದೆ. ಒಪ್ಪಂದದ ಪ್ರಕಾರ ಗುತ್ತಿಗೆದಾರರು ತಮ್ಮ ವ್ಯಾಪ್ತಿಯ ಬೀದಿದೀಪಗಳನ್ನ ನಿಯಮಿತವಾಗಿ ಪರಿಶೀಲಿಸಿ, ದೀಪಗಳು ಹಾಳಾದಲ್ಲಿ ತಕ್ಷಣ ದುರಸ್ತಿ ಮಾಡಬೇಕಿದೆ.

ಆದರೆ ಸೆಪ್ಟೆಂಬರ್ 1ರಿಂದ 23ರವರೆಗೆ ಸಹಾಯ ಆ್ಯಪ್ ಮೂಲಕ ಸಾರ್ವಜನಿಕರು ದಾಖಲಿಸಿದ್ದ ದೂರುಗಳನ್ನ ಪರಿಶೀಲಿಸಿದಾಗ, ಗುತ್ತಿಗೆದಾರರ ಸಿಬ್ಬಂದಿಯಿಂದ ನಿಯಮಿತ ತಪಾಸಣೆ ಹಾಗೂ ಸಮರ್ಪಕ ದುರಸ್ತಿ ಕಾರ್ಯಗಳು ನಡೆಯದಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ನಡೆಸಿದ ಸ್ಥಳ ಪರಿಶೀಲನೆಯಲ್ಲಿಯೂ ಹಲವು ಬೀದಿದೀಪಗಳು ಬೆಳಗದಿರುವುದು ಕಂಡುಬಂದಿದೆ.

ಬೀದಿದೀಪಗಳು ಕಾರ್ಯನಿರ್ವಹಿಸದ ಕಾರಣ ಕೆಲವು ಪ್ರದೇಶಗಳಲ್ಲಿ ಕತ್ತಲೆ ಆವರಿಸಿದ್ದು, ಇದರಿಂದ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನಿರ್ವಹಣಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಗುತ್ತಿಗೆ ಸಂಸ್ಥೆಗಳಿಗೆ ದಂಡ ವಿಧಿಸಲಾಗಿದೆ.

ಯಾವ ಗುತ್ತಿಗೆದಾರರಿಗೆ ಎಷ್ಟು ದಂಡ?

ಬೀದಿದೀಪಗಳ ನಿರ್ವಹಣೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ ಮೂರು ಸಂಸ್ಥೆಗಳಿಗೆ ವಿಧಿಸಿರುವ ದಂಡದ ವಿವರ ಹೀಗಿದೆ.

ಗುತ್ತಿಗೆ ಸಂಸ್ಥೆವಿಧಿಸಿದ ದಂಡ
ಎಂ/ಎಸ್ ಎಫಿಲೂಮ್ ಪ್ರೈವೇಟ್ ಲಿಮಿಟೆಡ್ (Effilume Pvt. Ltd.) ₹3,29,199 
ಎಂ/ಎಸ್ ಸ್ಪೆಕ್ಟ್ರಮ್ ಟೂಲ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್ (Spectrum Tool Engineers Pvt. Ltd.) ₹9,56,955
ಎಂ/ಎಸ್ ಟ್ರಾನ್ಸ್‌ಗ್ಲೋಬಲ್ ಪವರ್ ಲಿಮಿಟೆಡ್ (Transglobal Power Ltd.)  ₹14,599 
ಒಟ್ಟು₹13,00,753

ಈ ಪೈಕಿ ಸ್ಪೆಕ್ಟ್ರಮ್ ಟೂಲ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಅತಿಹೆಚ್ಚು 9,56,955 ರೂ. ದಂಡ ವಿಧಿಸಲಾಗಿದೆ. ಎಫಿಲೂಮ್ ಪ್ರೈವೇಟ್ ಲಿಮಿಟೆಡ್‌ಗೆ 3,29,199 ರೂ. ಹಾಗೂ ಟ್ರಾನ್ಸ್‌ಗ್ಲೋಬಲ್ ಪವರ್ ಲಿಮಿಟೆಡ್‌ಗೆ 14,599 ರೂ. ದಂಡ ವಿಧಿಸಲಾಗಿದೆ.

ಕತ್ತಲೆ ಪ್ರದೇಶಗಳನ್ನ ತಕ್ಷಣ ನಿವಾರಿಸಲು ಸೂಚನೆ

ಪಾಲಿಕೆ ವ್ಯಾಪ್ತಿಯಲ್ಲಿ ಬೀದಿದೀಪಗಳು ಕಾರ್ಯನಿರ್ವಹಿಸದಿರುವುದರಿಂದ ಉಂಟಾಗಿರುವ ಕತ್ತಲೆ ಪ್ರದೇಶಗಳನ್ನ (Dark Spots) ಕೂಡಲೇ ನಿವಾರಿಸುವಂತೆ ಆಯುಕ್ತ ಕೆ.ಎನ್.ರಮೇಶ್ ಸಂಬಂಧಪಟ್ಟ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹಾಳಾಗಿರುವ ಎಲ್ಲಾ ಎಲ್‌ಇಡಿ ಬೀದಿದೀಪಗಳನ್ನ ಕೂಡಲೇ ದುರಸ್ತಿಪಡಿಸಬೇಕು. ಸಾರ್ವಜನಿಕರಿಗೆ ರಾತ್ರಿ ವೇಳೆಯಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಬೀದಿದೀಪಗಳ ಸಮರ್ಪಕ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದು ನಿರ್ದೇಶನ ನೀಡಿದ್ದಾರೆ.

ಗುತ್ತಿಗೆದಾರರು ತಮ್ಮ ವ್ಯಾಪ್ತಿಯ ಬೀದಿದೀಪಗಳನ್ನ ನಿರಂತರವಾಗಿ ಪರಿಶೀಲಿಸಿ, ಸಾರ್ವಜನಿಕರಿಂದ ದೂರುಗಳು ಬಂದ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವುದು ಮುಂದುವರಿದರೆ ಸಂಬಂಧಪಟ್ಟವರ ವಿರುದ್ಧ ಮುಂದಿನ ದಿನಗಳಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಎಚ್ಚರಿಕೆ ನೀಡಿದೆ.

ಬೀದಿದೀಪಗಳ ನಿರ್ವಹಣೆಯಲ್ಲಿ ಸಾರ್ವಜನಿಕ ಸುರಕ್ಷತೆ ಪ್ರಮುಖವಾಗಿದ್ದು, ಗುತ್ತಿಗೆದಾರರು ಒಪ್ಪಂದದ ನಿಯಮಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ದೂರುಗಳ ತ್ವರಿತ ವಿಲೇವಾರಿ ಹಾಗೂ ಹಾಳಾದ ದೀಪಗಳ ದುರಸ್ತಿ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿ ಬೆಳಕಿನ ವ್ಯವಸ್ಥೆಯನ್ನ ಸುಧಾರಿಸುವುದು ಈ ಕ್ರಮದ ಉದ್ದೇಶವಾಗಿದೆ.

Add Zee News as a Preferred Source
TAGS:

About the Author

ಪುಟ್ಟರಾಜ ಕೆ. ಆಲೂರ (Puttaraj K Alur) ಅನುಭವಿ ಪತ್ರಕರ್ತರಾಗಿದ್ದು, ಪ್ರಸ್ತುತ ಜೀ ಕನ್ನಡ ನ್ಯೂಸ್‌ನ ಡಿಜಿಟಲ್ ವಿಭಾಗದಲ್ಲಿ ಸೀನಿಯರ್ ಸಬ್ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುದ್ರಣ, ದೂರದರ್ಶನ ಮತ್ತು ಡಿಜಿಟಲ್ ಮಾಧ್ಯಮ ಸೇರಿದಂತೆ ಪತ್ರಿಕೋದ್ಯಮದ ವಿವಿಧ ಕ್ಷೇತ್ರಗಳಲ್ಲಿ 10ಕ್ಕೂ ಹೆಚ್ಚು ವರ್ಷಗಳ ವೃತ್ತಿಪರ ಅನುಭವ ಹೊಂದಿದ್ದಾರೆ. ಮೈಸೂರಿನ ರಾಜ್ಯಧರ್ಮ ಮತ್ತು ಮೈಸೂರು ಮಿತ್ರ ದಿನಪತ್ರಿಕೆಗಳಲ್ಲಿ ವೃತ್ತಿಜೀವನ ಆರಂಭಿಸಿದ ಅವರು, ಬೆಂಗಳೂರಿನ ದಿಗ್ವಿಜಯ ನ್ಯೂಸ್, ದೆಹಲಿಯ ಒಪೇರಾ ನ್ಯೂಸ್, ಯುಸಿ ನ್ಯೂಸ್ ಮತ್ತು ಒಪೊಯಿ ನ್ಯೂಸ್ ಸೇರಿದಂತೆ ಹಲವು ಮಾಧ್ಯಮ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.ಕಳೆದ 5 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅವರು, ವಿವಿಧ ವಿಷಯಗಳ ಸುದ್ದಿಗಳನ್ನು ಸರಳ, ಸ್ಪಷ್ಟ ಮತ್ತು ಓದುಗರಿಗೆ ಆಸಕ್ತಿದಾಯಕವಾಗಿ ಪ್ರಸ್ತುತಪಡಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯಲ್ಲಿ M.Sc. in Electronic Media ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮನರಂಜನೆ, ಕ್ರೀಡೆ, ಜ್ಯೋತಿಷ್ಯ ಮತ್ತು ಆಧ್ಯಾತ್ಮಿಕತೆ, ಆರೋಗ್ಯ, ಲೈಫ್‌ಸ್ಟೈಲ್, ವೈರಲ್ ಸುದ್ದಿಗಳು, ಬ್ಯುಸಿನೆಸ್ ಹಾಗೂ ಷೇರು ಮಾರುಕಟ್ಟೆ ಸೇರಿದಂತೆ ಹಲವು ವಿಭಾಗಗಳಲ್ಲಿ ಸುದ್ದಿ ಬರವಣಿಗೆಯ ಅನುಭವ ಹೊಂದಿದ್ದಾರೆ. 

ZEENEWS TRENDING STORIES