SOCIAL MEDIA

Newsletter

PARTNER SITES
Select Language Select State

ಬೆಂಗಳೂರಿನಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚನೆ: SBI, ಸೊಸೈಟಿ ವಿರುದ್ಧ ದೂರು

ಬೆಂಗಳೂರಿನಲ್ಲಿ BIAAPA ಮತ್ತು A ಖಾತಾ ನಿವೇಶನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿ ವಂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ, SBI ಹಾಗೂ ಇತರರ ವಿರುದ್ಧ ರಾಜೇಂದ್ರ ಟಿ.ವಿ. ಎಂಬುವವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Nov 22, 2026, 22:30 IST | Updated: Nov 22, 2026, 22:31 IST
Image Credit: Crime News
Join

ಬೆಂಗಳೂರು : ನಿವೇಶನ ಕೊಡಿಸುವುದಾಗಿ ನಂಬಿಸಿ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ. SBI ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ಧವೇ ಈ ಆರೋಪ ಕೇಳಿಬಂದಿದ್ದು, ಈ ಸಂಬಂಧ ರಾಜೇಂದ್ರ ಟಿ.ವಿ. ಎಂಬುವವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಅಷ್ಟಕ್ಕೂ ಈ ನಿವೇಶನ ಹಂಚಿಕೆ ಹೆಸರಿನಲ್ಲಿ ನಡೆದಿರುವ ಹಣಕಾಸಿನ ವ್ಯವಹಾರ ಹೇಗಿತ್ತು... ಯಾರೆಲ್ಲರ ವಿರುದ್ಧ ದೂರು ದಾಖಲಾಗಿದೆ...? ಈ ಕುರಿತ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಹೌದು.. ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವತಿಯಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಲಾಗಿತ್ತು. BIAAPA ಹಾಗೂ A ಖಾತಾ ನಿವೇಶನಗಳನ್ನು ನೀಡುವುದಾಗಿ ತಿಳಿಸಿ ಹಣ ಸಂಗ್ರಹಿಸಲಾಗಿದೆ ಎಂದು ರಾಜೇಂದ್ರ ಟಿ.ವಿ ಎಂಬುವವರು ಆರೋಪಿಸಿದ್ದಾರೆ.. ಅದರಲ್ಲೂ 30x40 ಅಳತೆಯ ನಿವೇಶನಕ್ಕೆ ಪ್ರತಿ ಚದರ ಅಡಿಗೆ 1,260 ರೂಪಾಯಿಯಂತೆ ದರ ನಿಗದಿಪಡಿಸಿ, ಒಟ್ಟು 15 ಲಕ್ಷದ 12 ಸಾವಿರ ರೂಪಾಯಿ ಪಾವತಿಸುವಂತೆ ತಿಳಿಸಲಾಗಿತ್ತು ಎನ್ನಲಾಗಿದೆ.

ಇನ್ನು ನಿವೇಶನ ಬುಕ್ಕಿಂಗ್ ಹೆಸರಿನಲ್ಲಿ ಆರಂಭದಲ್ಲೇ 50 ಸಾವಿರ ರೂಪಾಯಿ ಹಾಗೂ ಹೆಚ್ಚುವರಿಯಾಗಿ 2,500 ರೂಪಾಯಿ ಪಡೆದುಕೊಳ್ಳಲಾಗಿದೆ ಎಂಬ ಆರೋಪವಿದೆ.. ಬಳಿಕ ವಿವಿಧ ಹಂತಗಳಲ್ಲಿ ಹಣ ಪಾವತಿಸುವಂತೆ ಸೂಚಿಸಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ದೂರುದಾರರು ಹಣ ಪಾವತಿಸಿದರೂ, ಭರವಸೆ ನೀಡಿದಂತೆ ನಿವೇಶನದ ಹಂಚಿಕೆಯಾಗಲಿ, ನೋಂದಣಿಯಾಗಲಿ ಮಾಡಿಕೊಟ್ಟಿಲ್ಲ ಎಂದು ಆರೋಪಿಸಿದ್ದಾರೆ.ಈ ಮೂಲಕ ನಿವೇಶನದ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೆ ವಂಚನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇನ್ನು ಈ ಪ್ರಕರಣದ ದೂರಿನಲ್ಲಿ ಗೌರವ್, ರೋಹಿತ್, SBI ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಕಾರ್ಯದರ್ಶಿಯ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಅಷ್ಟೇ ಅಲ್ಲದೆ ಬೆಂಗಳೂರಿನ ರಿಯಲ್ ಎಸ್ಟೇಟ್ ಕಂಪನಿಯ ಮುಖ್ಯಸ್ಥರ ವಿರುದ್ಧವೂ ದೂರುದಾರರು ಆರೋಪ ಮಾಡಿದ್ದಾರೆ. ಹಣ ಪಡೆದು ನೂರಾರು ಜನರಿಗೆ ನಿವೇಶನ ನೀಡದೆ ವಂಚಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.ಹೀಗಾಗಿ ಸಂಘದ ಆಡಳಿತ ಮಂಡಳಿ ಹಾಗೂ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲರ ವಿರುದ್ಧ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಜೇಂದ್ರ ಟಿ.ವಿ. ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.

ಒಟ್ಟಿನಲ್ಲಿ ನಿವೇಶನದ ಕನಸು ಕಂಡು ಹಣ ಪಾವತಿಸಿದವರಿಗೆ ನಿವೇಶನ ಸಿಗುತ್ತಾ ಅಥವಾ ಈ ಆರೋಪಗಳ ಹಿಂದೆ ಬೇರೆಯೇ ಕಥೆ ಇದೆಯಾ ಪೊಲೀಸರ ತನಿಖೆಯಿಂದಷ್ಟೇ ಸತ್ಯಾಂಶ ಹೊರಬರಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES