ನಿಮ್ಮ ಕಾರು ಮೇಲೆ ಲೋನ್ ಇದೆಯಾ, ಹುಷಾರ್.. ವಾಹನ ಮಾರಾಟ ಮಾಡೋ ಮೊದಲು ಇದನ್ನ ಸ್ವಲ್ಪ ಓದಿ!
ಆರೋಪಿ ಗುರು ಪ್ರಸಾದ್‌ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಲಾಕ್ ಮಾಡಿದ್ದು, ಈತನ ವಿರುದ್ಧ ವಿಲ್ಸನ್ ಗಾರ್ಡನ್, ಸುಬ್ರಹ್ಮಣ್ಯಪುರ ಹಾಗೂ ಆಡುಗೋಡಿ ಪೊಲೀಸ್ ಠಾಣೆಗಳಲ್ಲೂ ಕೇಸ್ ಇವೆ
Bengaluru Police arrested, Guruprasad P: ಲೋನ್ ಕಟ್ಟಲಾಗದ ಕಾರುಗಳನ್ನೇ ಟಾರ್ಗೆಟ್ ಮಾಡಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಹೆಚ್ಚಿನ ಮಾರಾಟ ಮಾಡುತ್ತಿದ್ದ ಕಿಲಾಡಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ತನಿಖೆ ವೇಳೆ ಕಿಲಾಡಿಗಳ ಐನಾತಿ ಪ್ಲಾನ್ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ಹಾಗಾದರೆ ಆರೋಪಿಗಳ ಸಂಚು ಹೇಗಿರುತ್ತಿತ್ತು. ಹೇಗೆ ಪೊಲೀಸರಿಗೆ ತಗಲಾಕ್ಕೊಂಡರು ಎನ್ನುವ ಮಾಹಿತಿ ಇಲ್ಲಿದೆ.
ಲೋನ್ ಇರುವ ಕಾರುಗಳ ಮಾಲೀಕರನ್ನೇ ಟಾರ್ಗೆಟ್ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಖತರ್ನಾಕ್ ಆರೋಪಿಯೊಬ್ಬ ಅರೆಸ್ಟ್ ಆಗಿದ್ದಾನೆ. ಗುರುಪ್ರಸಾದ್ ಎಂಬಾತ ಮೊದಲು ಕಾರು ಮಾಲೀಕರನ್ನು ಪರಿಚಯ ಮಾಡಿಕೊಂಡು, ಕಾರಿನ ಲೋನ್ ಕ್ಲಿಯರ್ ಮಾಡಿಸಿ ಒಳ್ಳೆಯ ಬೆಲೆಗೆ ಮಾರಾಟ ಮಾಡಿಕೊಡುವುದಾಗಿ ನಂಬಿಸುತ್ತಿದ್ದನು. ಇದರಿಂದ ಕಾರು ಮಾಲೀಕರು ಉತ್ತಮ ಬೆಲೆ ಸಿಗುತ್ತದೆ ಎಂದು ಖತರ್ನಾಕ್ ಆರೋಪಿ ಬಲೆಗೆ ಬೀಳುತ್ತಿದ್ದರು. ಬಳಿಕ ಕಾರು ಮಾಲೀಕರಿಗೆ ಒಂದರಿಂದ ಎರಡು ಲಕ್ಷ ರೂಪಾಯಿ ನೀಡಿ ಕಾರನ್ನು ಪಡೆದುಕೊಳ್ಳುತ್ತಿದ್ದನು.
ನಂತರ ಅದೇ ಕಾರುಗಳನ್ನು ಐದರಿಂದ ಹತ್ತು ಲಕ್ಷ ರೂಪಾಯಿಗೆ ಬೇರೆಯವರಿಗೆ ಮಾರಾಟ ಮಾಡುತ್ತಿದ್ದನು. ಇದರಿಂದ ದೊಡ್ಡ ಮೊತ್ತದ ಹಣವನ್ನು ಆರೋಪಿಯು ಪಡೆದುಕೊಂಡು ಲಾಭದಲ್ಲಿ ಇರುತ್ತಿದ್ದನು. ಇತ್ತ ಹಣ ಪಡೆದುಕೊಂಡ ಬಳಿಕ ಈ ಹಿಂದೆ ಕಾರನ್ನು ಕೊಟ್ಟ ಮಾಲೀಕರ ಕೈಗೆ ಸಿಗದೇ ಎಸ್ಕೇಪ್ ಆಗುತ್ತಿದ್ದನು. ಈ ಹಿನ್ನೆಲೆ ಆರೋಪಿ ಗುರು ಪ್ರಸಾದ್‌ನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಲಾಕ್ ಮಾಡಿದ್ದು, ಈತನ ವಿರುದ್ಧ ವಿಲ್ಸನ್ ಗಾರ್ಡನ್, ಸುಬ್ರಹ್ಮಣ್ಯಪುರ ಹಾಗೂ ಆಡುಗೋಡಿ ಪೊಲೀಸ್ ಠಾಣೆಗಳಲ್ಲೂ ಇದೇ ರೀತಿ ಪ್ರಕರಣಗಳು ದಾಖಲಾಗಿರೋದು ಪತ್ತೆಯಾಗಿದೆ. ಇದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದ ಆರೋಪಿಯು ಕಾರು ಮಾಲೀಕರಿಗೆ ಮೋಸ ಮಾಡುತ್ತಿದ್ದನು. ಕಾರು, ಹಣ ಕೊಡುತ್ತಿದ್ದ ಮಾಲೀಕ ದೊಡ್ಡ ನಷ್ಟ ಅನುಭವಿಸುತ್ತಿದ್ದನು.
ಇನ್ನು ಲೋನ್ ಕಟ್ಟದ ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ, ನಕಲಿ ದಾಖಲೆಗಳ ಮೂಲಕ ಮಾರಾಟ ಮಾಡುತ್ತಿದ್ದ ಮತ್ತೊಂದು ಗ್ಯಾಂಗ್ ಕೂಡ ಪೊಲೀಸರ ಬಲೆಗೆ ಬಿದ್ದಿದೆ. ವಿಲ್ಸನ್ ಗಾರ್ಡನ್ ಪೊಲೀಸರು ಸೋಮೇಶ್, ಸಂತೋಷ್ ಹಾಗೂ ಪ್ರಭಾಕರ್ ಎಂಬುವವರನ್ನ ಬಂಧಿಸಿದ್ದಾರೆ. ಈ ಕಿಲಾಡಿಗಳು ಲೋನ್ ಕ್ಲಿಯರ್ ಆಗಿದೆ ಎಂದು ತೋರಿಸಲು ನಕಲಿ ಎನ್‌ಒಸಿ ಸೃಷ್ಟಿಸಿ, ಬಳಿಕ ನಕಲಿ ಆರ್‌ಸಿ ಕಾರ್ಡ್ ತಯಾರಿಸಿ ಕಾರುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ತನಿಖೆ ವೇಳೆ ಹಳೆಯ ಆಸ್ತಿ ಪತ್ರ, ಹಕ್ಕುಪತ್ರ, ಜಮೀನು ದಾಖಲೆಗಳು ಸೇರಿದಂತೆ ಮೈಸೂರು ಸರ್ಕಾರ, ಬಿಡಿಎ ಮತ್ತು ಕರ್ನಾಟಕ ಸರ್ಕಾರದ ಹೆಸರಿನ ನಕಲಿ ದಾಖಲೆಗಳು ಸೃಷ್ಟಿ ಮಾಡಿರುವುದು ಪತ್ತೆಯಾಗಿವೆ.
ನಕಲಿ ದಾಖಲೆಗಳನ್ನಷ್ಟೇ ಅಲ್ಲ, ಬೇಕಾದ ರೀತಿಯ ಸೀಲುಗಳನ್ನು ತಯಾರಿಸಲು ಸೀಲ್ ತಯಾರಿಸುವ ಮಿಷಿನ್‌ನ್ನೇ ಆರೋಪಿಗಳು ಹೊಂದಿದ್ದರು. ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಅಧಿಕಾರಿಗಳ ಹೆಸರಿನ ಬರೋಬ್ಬರಿ 428 ಸೀಲುಗಳು ಪೊಲೀಸರ ಕೈಗೆ ಸಿಕ್ಕಿವೆ. ಅನ್ನಪೂರ್ಣೇಶ್ವರಿ ನಗರ ಪ್ರಕರಣದಲ್ಲಿ 14 ಕಾರು, ಒಂದು ಗೂಡ್ಸ್ ವಾಹನ, ಎರಡು ಆಟೋ ಹಾಗೂ ಆರು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು ಒಂದು ಕೋಟಿ 51 ಲಕ್ಷದ 30 ಸಾವಿರ ರೂಪಾಯಿ ಮೌಲ್ಯದ ವಾಹನಗಳನ್ನು ಸೀಜ್ ಮಾಡಲಾಗಿದೆ.
ಮತ್ತೊಂದು ಪ್ರಕರಣದಲ್ಲಿ 11 ಕಾರುಗಳನ್ನು ವಿಲ್ಸನ್ ಗಾರ್ಡನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರ ತನಿಖೆ ಮುಂದುವರಿದಿದೆ. ಅದೇನೇ ಹೇಳಿ, ವಂಚನೆಗೆ ಒಳಗಾಗುವವರು ಇರೋವರೆಗೂ ವಂಚನೆ ಮಾಡೋರು ಇರ್ತಾರೆ ಎಂಬುದಕ್ಕೆ ಈ ಪ್ರಕರಣಗಳು ತಾಜಾ ಉದಾಹರಣೆಯಾಗಿವೆ. ಕಾರುಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು ದೊಡ್ಡ ಮಟ್ಟದ ಲಾಭದಲ್ಲಿ ತೇಲಾಡುತ್ತಿದ್ದರು. ಸದ್ಯ ಈಗ ಪೊಲೀಸರ ಬಲೆಗೆ ಬಿದ್ದಿದ್ದು ತನಿಖೆಯಿಂದ ಎಲ್ಲ ಮಾಹಿತಿ ಹೊರ ಬೀಳಲಿದೆ.