ಬೆಂಗಳೂರಲ್ಲಿ ಗನ್ ಡೀಲಿಂಗ್.. ಕರ್ನಾಟಕಕ್ಕೆ ಬಂದೂಕು ಎಲ್ಲಿಂದ ಬರುತ್ತಿವೆ, ಪೊಲೀಸರ ತನಿಖೆಗೆ ಬಿಗ್ ಸೆಲ್ಯೂಟ್
ದಾವೂದ್ ಕಡೆಯಿಂದ ಗನ್ ಪಡೆದು ಪ್ರದೀಪ್ ರಮೇಶ್ ರೈಲಿನಲ್ಲಿ ಆನೇಕಲ್‌ಗೆ ಬರುತ್ತಿದ್ದ. ಹಾಲ್ದೇನಹಳ್ಳಿ ರೈಲು ನಿಲ್ದಾಣದ ಬಳಿ ಗನ್ ಡೆಲಿವರಿ ಕೊಡಲು ಕಾಯುತ್ತಿದ್ದ ವೇಳೆ
Bengaluru Police arrest 7 people in illegal gun dealing: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಗನ್ ಡೀಲಿಂಗ್ ನಡೆಯುತ್ತಿದೆಯಾ?. ಇಷ್ಟು ವರ್ಷಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ನಡೆಯಬಾರದ್ದು ಈಗ ನಡೆಯುತ್ತಿದೆಯಾ?. ಕೇಳುವರರಿಗೂ ಇದು ಶಾಕ್ ಆಗುತ್ತಿದೆ. ಏಕೆಂದರೆ ಇಡೀ ದೇಶದಲ್ಲಿಯೇ ಬೆಂಗಳೂರಿನಂತಹ ಸುಂದರ ನಗರದಲ್ಲಿ ಎಲ್ಲ ರಾಜ್ಯದ ಜನರು, ವಿದೇಶಿಗರು ವಾಸ ಮಾಡುತ್ತಿದ್ದಾರೆ. ಇಂತಹ ಪ್ರತಿಷ್ಠತಿ ಉದ್ಯಾನ ನಗರಿಯಲ್ಲಿ ಗನ್ ಡೀಲಿಂಗ್ ಕೆಲಸಗಳು ನಡೆಯುತ್ತಿವೆ. ಈ ಸಂಬಂಧ ಪೊಲೀಸರು ಏಳು ಮಂದಿ ಆರೋಪಿಗಳ ಹೆಡೆಮುರಿ ಕಟ್ಟಿದ್ದು ಆರೋಪಿಗಳ ವಿರುಧ್ದ ಕೋಕಾ ಆ್ಯಕ್ಟ್ ದಾಖಲು ಮಾಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನ ನೆಲದಡಿ ನಡೆಯುತ್ತಿದ್ದ ಅಕ್ರಮ ಗನ್ ದಂಧೆಯ ಕರಾಳ ಜಾಲ ಬಯಲಾಗಿದೆ. ಕೈಯಲ್ಲಿ ಪಿಸ್ತೂಲ್, ಜೇಬಲ್ಲಿ ಗುಂಡು, ರಿಯಲ್ ಎಸ್ಟೇಟ್‌ನಿಂದ ಹಿಡಿದು ಅಪರಾಧ ಜಗತ್ತಿನವರೆಗೆ ಅಕ್ರಮ ಗನ್‌ಗಳ ಸಪ್ಲೈ. ಬೆಂಗಳೂರಿನಲ್ಲೇ ನಡೆಯುತ್ತಿತ್ತಾ ಭರ್ಜರಿ ಗನ್ ಡೀಲಿಂಗ್, ರಾಜಧಾನಿಯ ಈ ಡೆಡ್ಲಿ ನೆಟ್‌ವರ್ಕ್‌ಗೆ ಆನೇಕಲ್ ಪೊಲೀಸರು ಬಿಗ್ ಶಾಕ್ ಕೊಟ್ಟಿದ್ದಾರೆ. ಅಕ್ರಮ ಪಿಸ್ತೂಲ್‌ಗಳ ಸಪ್ಲೈ ಜಾಲವನ್ನೇ ಪೊಲೀಸರು ಬೇಟೆಯಾಡಿದ್ದಾರೆ. ಯಾರಿಂದ ಗನ್‌ಗಳು ಬರುತ್ತಿದ್ದವು ಯಾರಿಗೆ ಸಪ್ಲೈ ಆಗ್ತಿತ್ತು, ಈ ಗನ್ ದಂಧೆಯ ಹಿಂದಿನ ಅಸಲಿ ಕಹಾನಿ ಏನು, ಬೆಂಗಳೂರಿನ ಅಕ್ರಮ ಗನ್ ದಂಧೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮ ಗನ್ ಡೀಲಿಂಗ್
ಆನೇಕಲ್ ಪೊಲೀಸರ ಭರ್ಜರಿ ಆಪರೇಷನ್, 7 ಮಂದಿ ಬಂಧನ
ಐದು ಕಂಟ್ರಿಮೇಡ್ ಪಿಸ್ತೂಲ್.. ಹತ್ತು ಜೀವಂತ ಗುಂಡುಗಳು ವಶಕ್ಕೆ
ಬೆಂಗಳೂರು ಹೊರ ವಲಯ ಆನೇಕಲ್‌ನಲ್ಲಿ ಪಿಸ್ತೂಲ್‌ಗಳ ಕರಾಳ ದಂಧೆಯನ್ನೇ ಪೊಲೀಸರು ಬಯಲು ಮಾಡಿದ್ದಾರೆ. ಗನ್ ಮಾರಾಟದ ಡೀಲರ್‌ನಿಂದ ಹಿಡಿದು, ಗನ್ ಖರೀದಿಸಿದ್ದ ರೌಡಿ ಶೀಟರ್‌ಗಳವರೆಗೆ ಒಟ್ಟು ಏಳು ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ. ಪ್ರದೀಪ್ ರಮೇಶ್, ಮನೋಜ್ ಅಲಿಯಾಸ್ ಜಾಕಿ, ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್, ನಂಜಪ್ಪ ಅಲಿಯಾಸ್ ಡೆಡ್ಲಿ ನಂಜ, ವೆಂಕಟರಾಜು ಅಲಿಯಾಸ್ ತುಕಡಿ, ಗೋಪಿ ಅಲಿಯಾಸ್ ಸುಣವಾರ ಗೋಪಿ ಮತ್ತು ಶಿವರಾಜ್ ಸೇರಿ ಒಟ್ಟು ಏಳು ಮಂದಿ ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ ಐದು ಕಂಟ್ರಿಮೆಡ್ ಪಿಸ್ತೂಲ್, ಹತ್ತು ಗುಂಡುಗಳನ್ನ ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಇನ್ನೂ ಈವೊಂದು ಕೇಸ್‌ನಲ್ಲಿ ಒಂದೆಡೆ ಅಕ್ರಮ ಗನ್‌ಗಳ ಸಪ್ಲೈ, ಇನ್ನೊಂದೆಡೆ ಗನ್ ಖರೀದಿಸುತ್ತಿದ್ದ ರೌಡಿಗಳ ಜಾಲ. ಈ ಎರಡನ್ನೂ ಕನೆಕ್ಟ್ ಮಾಡಿದ್ದು ಆನೇಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ. ಕಳೆದ ತಿಂಗಳು 14ನೇ ತಾರೀಖು ಆನೇಕಲ್‌ನ ಹಾಲ್ದೇನಹಳ್ಳಿಯ ರೈಲ್ವೆ ಗೇಟ್ ಬಳಿ ಪೊಲೀಸರು ಗಸ್ತಿನಲ್ಲಿದ್ದರು. ಅಷ್ಟರಲ್ಲೇ ಬ್ಯಾಗ್ ಹಿಡಿದು ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯ ಬಳಿ ಹೋಗಿ ಬ್ಯಾಗ್ ಚೆಕ್ ಮಾಡಿದಾಗ ಮೂರು ಕಂಟ್ರಿಮೇಡ್ ಪಿಸ್ತೂಲ್, ಹತ್ತು ಜೀವಂತ ಗುಂಡುಗಳು ಸಿಕ್ಕಿವೆ.
ಬಳಿಕ ಅಲ್ಲಿಂದಲೇ ಅಕ್ರಮ ಗನ್ ದಂಧೆಯ ತನಿಖೆ ಶುರುವಾಯ್ತು. ಪೊಲೀಸರ ಪ್ರಕಾರ ಮಧ್ಯಪ್ರದೇಶದ ಬೇಡಘಾಟ್ ಗ್ರಾಮದ ದಾವೂದ್ ಎಂಬಾತ ಈ ಜಾಲದ ಕಿಂಗ್‌ಪಿನ್ ಎಂದು ತನಿಖೆಯಲ್ಲಿ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿತ್ತು. ದಾವೂದ್ ಕಡೆಯಿಂದ ಗನ್ ಪಡೆದು ಪ್ರದೀಪ್ ರಮೇಶ್ ರೈಲಿನಲ್ಲಿ ಆನೇಕಲ್‌ಗೆ ಬರುತ್ತಿದ್ದ. ಹಾಲ್ದೇನಹಳ್ಳಿ ರೈಲು ನಿಲ್ದಾಣದ ಬಳಿ ಗನ್ ಡೆಲಿವರಿ ಕೊಡಲು ಕಾಯುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಪ್ರದೀಪ್‌ನ ವಿಚಾರಣೆ ಮುಂದುವರಿದಂತೆ ಇನ್ನೆರಡು ಪಿಸ್ತೂಲ್‌ಗಳ ಮಾರಾಟದ ಮಾಹಿತಿ ಹೊರಬಿದ್ದಿತ್ತು.
ತನಿಖೆ ಮುಂದುವರಿಸಿದ ಪೊಲೀಸರಿಗೆ ಒಂದೊಂದೇ ಶಾಕಿಂಗ್ ಲಿಂಕ್‌ಗಳು ಬಯಲಾಗಿವೆ. ಕೆಜಿ ಹಳ್ಳಿ ಭಾಗದ ರೌಡಿ ಶೀಟರ್ ರಿಜ್ವಾನ್ ಪಾಷ ಅಲಿಯಾಸ್ ಕುಳ್ಳ ರಿಜ್ವಾನ್ ಬಳಿಗೆ ಒಂದು ಅಕ್ರಮ ಪಿಸ್ತೂಲ್ ತಲುಪಿತ್ತು ಎನ್ನಲಾಗಿದೆ. ಮತ್ತೊಂದು ಪಿಸ್ತೂಲ್ ನಟೋರಿಯಸ್ ರೌಡಿ ಶೀಟರ್ ಮನೋಜ್ ಅಲಿಯಾಸ್ ಜಾಕಿ ಬಳಿ ಪತ್ತೆಯಾಗಿದೆ. ಇಬ್ಬರ ಬಳಿಯಿದ್ದ ಅಕ್ರಮ ಪಿಸ್ತೂಲ್‌ಗಳನ್ನೂ ಆನೇಕಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದ್ರೆ ಇಲ್ಲಿಂದಲೇ ಪ್ರಕರಣದ ಅಸಲಿ ತನಿಖೆ ಶುರುವಾಗಿದೆ.
ಇದು ಕೇವಲ ಎರಡು ಪಿಸ್ತೂಲ್‌ಗಳ ವಶಪಡಿಸಿಕೊಳ್ಳುವ ಪ್ರಕರಣವಲ್ಲ, ಬಂಧಿತ ಆರೋಪಿಗಳ ಕ್ರಿಮಿನಲ್ ಬ್ಯಾಕ್‌ಗ್ರೌಂಡ್ ಕೂಡ ಪೊಲೀಸರ ತನಿಖೆಯಲ್ಲಿ ಮಹತ್ವ ಪಡೆದುಕೊಂಡಿದೆ. ಆರ್ಮ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ಹಿಂದಿರುವ ಕ್ರೈಂ ನೆಟ್‌ವರ್ಕ್ ಹಾಗೂ ಅಕ್ರಮ ಗನ್ ಸಪ್ಲೈಯ ಸಂಪೂರ್ಣ ಜಾಲದ ಬಗ್ಗೆ ತನಿಖೆ ಚುರುಕುಗೊಳಿಸಿದ್ದಾರೆ. ಇನ್ಸ್‌ಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ಇದೀಗ ಗನ್ ದಂಧೆಯ ಹಿಂದೆ ಯಾರಿದ್ದಾರೆ, ಈ ಪಿಸ್ತೂಲ್‌ಗಳು ಎಲ್ಲಿಂದ ಬಂದವು, ಯಾರಿಗೆಲ್ಲಾ ಸಪ್ಲೈ ಆಗಿವೆ, ಈ ಜಾಲದಲ್ಲಿ ಇನ್ನೆಷ್ಟು ಮಂದಿ ಸಂಪರ್ಕ ಹೊಂದಿದ್ದಾರೆ ಅನ್ನೋದನ್ನ ಪತ್ತೆಹಚ್ಚಲು ಮುಂದಾಗಿದೆ.
ತನಿಖೆ ಆಳಕ್ಕಿಳಿಯುತ್ತಿದ್ದಂತೆ ಮತ್ತಷ್ಟು ರೌಡಿ ಶೀಟರ್‌ಗಳು ಹಾಗೂ ಗನ್ ದಂಧೆಯ ಸಂಪರ್ಕ ಹೊಂದಿರುವವರ ಮೇಲೆ ಪೊಲೀಸರ ಕಣ್ಣು ಬಿದ್ದಿದೆ. ಬೆಂಗಳೂರಿನಲ್ಲಿ ನಡೆಯುತ್ತಿದ್ದ ಅಕ್ರಮ ಗನ್ ಸಪ್ಲೈಗೆ ಬ್ರೇಕ್ ಹಾಕಲು ಆನೇಕಲ್ ಪೊಲೀಸರ ತನಿಖೆ ಮುಂದುವರಿದಿದೆ. ಆನೇಕಲ್ ಪೊಲೀಸರ ಈ ಭರ್ಜರಿ ಆಪರೇಷನ್‌ನಿಂದ ಅಕ್ರಮ ಗನ್ ದಂಧೆಯ ಪ್ರಮುಖ ಕೊಂಡಿಗಳು ಪತ್ತೆಯಾಗಿವೆ. ಆದ್ರೆ ಈ ಗನ್‌ಗಳು ಯಾರಿಗಾಗಿ ತರಲಾಗಿತ್ತು, ಯಾರಿಂದ ಇನ್ನಷ್ಟು ಗನ್‌ಗಳಿಗೆ ಬೇಡಿಕೆ ಇತ್ತು, ಈ ದಂಧೆಯ ಹಿಂದೆ ಇನ್ನೂ ಯಾರ್ಯಾರು ಇದ್ದಾರೆ ಎಂಬುದರ ಬಗ್ಗೆ ಪೊಲೀಸರ ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಇನ್ನಷ್ಟು ರೌಡಿ ಶೀಟರ್‌ಗಳು ಹಾಗೂ ಗನ್ ದಂಧೆಯ ಸಂಪರ್ಕ ಹೊಂದಿರುವ ರಾಜಕಾರಣಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ಧ ಕ್ರಮ ಸಾಧ್ಯತೆ ಇದೆ.
ರಾಜ್ಯ ರಾಜಧಾನಿಯಲ್ಲಿ ಅಕ್ರಮ ಗನ್ ಡೀಲಿಂಗ್ ಮಾಡುತ್ತಿದ್ದ ಗ್ಯಾಂಗ್ ಅನ್ನು ಆನೇಕಲ್ ಪೊಲೀಸರು ಬೇಟೆಯಾಡಿದ್ದಾರೆ. ಗನ್ ಡೀಲಿಂಗ್ ನಡೆಸುತ್ತಿದ್ದ ಏಳು ಆರೋಪಿಗಳನ್ನು ಆನೇಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ಸಪೆಕ್ಟರ್ ಪ್ರಕಾಶ್ ನೇತೃತ್ವದ ತಂಡ ರೌಡಿಶೀಟರ್‌ಗಳನ್ನು ಬಂಧನ ಮಾಡಿದೆ. ಬಂಧಿತರಿಂದ ಐದು ಕಂಟ್ರಿಮೇಡ್ ಪಿಸ್ತೂಲ್, ಹತ್ತು ಗುಂಡುಗಳನ್ನು ಜಪ್ತಿ ಮಾಡಲಾಗಿದೆ. ಈ ಅಕ್ರಮದ ಹಿಂದೆ ರಾಜಕಾರಣಿಗಳು ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳ ಕೈವಾಡ ಇರುವಂತೆ ಅನುಮಾನ ವ್ಯಕ್ತಪಡಿಸಲಾಗಿದೆ.