Phone In Programme Bengaluru: ನಾಗರಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ಉದ್ದೇಶದಿಂದ ಬೆಂಗಳೂರು ಉತ್ತರ ನಗರ ಪಾಲಿಕೆ ಮಹತ್ವದ ಹೆಜ್ಜೆ ಇಟ್ಟಿದೆ. ಸಾರ್ವಜನಿಕರ ಅಹವಾಲುಗಳನ್ನ ನೇರವಾಗಿ ಆಲಿಸಿ, ಸಂಬಂಧಪಟ್ಟ ಇಲಾಖೆಗಳ ಮೂಲಕ ಶೀಘ್ರ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರತೀ ಶುಕ್ರವಾರ ‘ಫೋನ್-ಇನ್’ ಕಾರ್ಯಕ್ರಮವನ್ನ ಆರಂಭಿಸಿದ್ದಾರೆ.
ಈ ವಾರದ ಫೋನ್-ಇನ್ ಕಾರ್ಯಕ್ರಮವು ಸೆಪ್ಟೆಂಬರ್ 25ರಂದು ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ 9 ಗಂಟೆಯವರೆಗೆ ನಡೆಯಲಿದೆ. ಈ ಸಮಯದಲ್ಲಿ ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ನಾಗರಿಕರು ತಮ್ಮ ಪ್ರದೇಶದಲ್ಲಿ ಎದುರಾಗುತ್ತಿರುವ ವಿವಿಧ ಸಮಸ್ಯೆಗಳ ಕುರಿತು ಆಯುಕ್ತರೊಂದಿಗೆ ನೇರವಾಗಿ ಮಾತನಾಡಿ ಅಹವಾಲು ಸಲ್ಲಿಸಬಹುದಾಗಿದೆ.
ಯಾವ ಸಮಸ್ಯೆಗಳ ಬಗ್ಗೆ ದೂರು ನೀಡಬಹುದು?
ನಗರದ ನಾಗರಿಕರಿಗೆ ಪ್ರತಿನಿತ್ಯ ಎದುರಾಗುವ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಕುರಿತು ಫೋನ್-ಇನ್ ಕಾರ್ಯಕ್ರಮದಲ್ಲಿ ದೂರು ಸಲ್ಲಿಸಲು ಅವಕಾಶವಿದೆ. ಮುಖ್ಯವಾಗಿ ರಸ್ತೆ ಗುಂಡಿಗಳು, ರಸ್ತೆ ದುರಸ್ತಿ ಕಾರ್ಯಗಳು, ಬೀದಿ ದೀಪಗಳ ನಿರ್ವಹಣೆ, ಮನೆಮನೆ ಕಸ ಸಂಗ್ರಹಣೆ ಮತ್ತು ಕಸ ವಿಲೇವಾರಿ ಕುರಿತು ನಾಗರಿಕರು ದೂರು ನೀಡಬಹುದು. ಇದಲ್ಲದೆ ಸಾರ್ವಜನಿಕರಿಗೆ ಅಪಾಯ ಉಂಟುಮಾಡುವ ಮರಗಳು ಅಥವಾ ಕೊಂಬೆಗಳನ್ನ ತೆರವುಗೊಳಿಸುವಂತೆ ಮನವಿ ಸಲ್ಲಿಸಬಹುದಾಗಿದೆ.
ನಗರದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳು, ಬೀದಿ ನಾಯಿಗಳ ನಿಯಂತ್ರಣ, ಉದ್ಯಾನವನಗಳ ಅಭಿವೃದ್ಧಿ ಮತ್ತು ಸಂರಕ್ಷಣೆ ಸೇರಿದಂತೆ ವಿವಿಧ ಸಾರ್ವಜನಿಕ ಸಮಸ್ಯೆಗಳನ್ನೂ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ. ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್ ಮತ್ತು ಪೋಸ್ಟರ್‌ಗಳ ತೆರವು, ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಹಾಗೂ ಇ-ಖಾತಾ ಸಂಬಂಧಿತ ಸಮಸ್ಯೆಗಳ ಬಗ್ಗೆಯೂ ನಾಗರಿಕರು ನೇರವಾಗಿ ದೂರು ಸಲ್ಲಿಸಬಹುದಾಗಿದೆ.
ದೂರು ನೀಡಿದ ಬಳಿಕ ಏನಾಗಲಿದೆ?
ಫೋನ್-ಇನ್ ಕಾರ್ಯಕ್ರಮದಲ್ಲಿ ನಾಗರಿಕರಿಂದ ಸ್ವೀಕರಿಸಲಾದ ಪ್ರತಿಯೊಂದು ಅಹವಾಲನ್ನೂ ‘ಸಹಾಯ 2.0’ ಪೋರ್ಟಲ್‌ನಲ್ಲಿ ದಾಖಲಿಸಲಾಗುತ್ತದೆ. ನಂತರ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ದೂರುಗಳನ್ನ ತಕ್ಷಣವೇ ಕಳುಹಿಸಲಾಗುತ್ತದೆ. ಇದರ ಮೂಲಕ ಸಾರ್ವಜನಿಕರು ನೀಡಿದ ದೂರು ಕೇವಲ ದೂರಿನ ರೂಪದಲ್ಲಿ ಉಳಿಯದೆ, ಅದನ್ನ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಮುಂದಿನ ಕ್ರಮ ಕೈಗೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ದೂರು ದಾಖಲಾದ ಬಳಿಕ ಅದರ ವಿವರಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಮಾಹಿತಿಯನ್ನ ನಾಗರಿಕರಿಗೆ ಎಸ್‌ಎಂಎಸ್ ಮೂಲಕ ತಿಳಿಸಲಾಗುತ್ತದೆ. ಇದರಿಂದ ತಮ್ಮ ದೂರನ್ನ ಯಾವ ಅಧಿಕಾರಿಗೆ ಕಳುಹಿಸಲಾಗಿದೆ ಎಂಬ ಮಾಹಿತಿಯನ್ನೂ ಸಾರ್ವಜನಿಕರು ತಿಳಿದುಕೊಳ್ಳಬಹುದಾಗಿದೆ.
ಈ ಸಂಖ್ಯೆಗೆ ಕರೆ ಮಾಡಿ
ಫೋನ್-ಇನ್ ಕಾರ್ಯಕ್ರಮದ ಸಂದರ್ಭದಲ್ಲಿ ನಾಗರಿಕರು ಪಾಲಿಕೆಯ ನಿಯಂತ್ರಣ ಕೊಠಡಿಗೆ ಸಂಪರ್ಕಿಸಬಹುದಾಗಿದೆ.
ಮೊಬೈಲ್/ವಾಟ್ಸ್‌ಆಪ್: 9480685705
ಲ್ಯಾಂಡ್‌ಲೈನ್: 080-22975936 / 080-23636671
ಸೆಪ್ಟೆಂಬರ್ 25ರಂದು ಬೆಳಗ್ಗೆ 7ರಿಂದ 9 ಗಂಟೆಯವರೆಗೆ ಈ ಸಂಖ್ಯೆಗಳ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.
‘ಸಹಾಯ 2.0’ ಮೂಲಕವೂ ದೂರು ಸಲ್ಲಿಕೆ
ಫೋನ್-ಇನ್ ಕಾರ್ಯಕ್ರಮದ ಜೊತೆಗೆ ನಾಗರಿಕರು ತಮ್ಮ ದೂರುಗಳನ್ನ ‘ಸಹಾಯ 2.0’ ಮೊಬೈಲ್ ಅಪ್ಲಿಕೇಶನ್ ಮೂಲಕವೂ ಸಲ್ಲಿಸಬಹುದಾಗಿದೆ. ಹೀಗಾಗಿ ಫೋನ್-ಇನ್ ಸಮಯದಲ್ಲಿ ಕರೆ ಮಾಡಲು ಸಾಧ್ಯವಾಗದವರು ಮೊಬೈಲ್ ಅಪ್ಲಿಕೇಶನ್ ಬಳಸಿ ತಮ್ಮ ಸಮಸ್ಯೆಗಳನ್ನ ದಾಖಲಿಸಬಹುದು.
ನಗರದ ರಸ್ತೆ, ಸ್ವಚ್ಛತೆ, ಬೀದಿ ದೀಪ, ಉದ್ಯಾನವನ, ಒತ್ತುವರಿ, ಇ-ಖಾತಾ ಸೇರಿದಂತೆ ವಿವಿಧ ನಾಗರಿಕ ಸೇವೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನ ಒಂದೇ ವ್ಯವಸ್ಥೆಯ ಮೂಲಕ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶ ಈ ವ್ಯವಸ್ಥೆಯ ಹಿಂದಿದೆ. ಪ್ರತೀ ಶುಕ್ರವಾರ ನಡೆಯಲಿರುವ ಫೋನ್-ಇನ್ ಕಾರ್ಯಕ್ರಮದ ಮೂಲಕ ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನ ನೇರವಾಗಿ ಆಯುಕ್ತರ ಗಮನಕ್ಕೆ ತರಲು ಅವಕಾಶ ಸಿಕ್ಕಂತಾಗಿದೆ. ದೂರುಗಳನ್ನ ‘ಸಹಾಯ 2.0’ನಲ್ಲಿ ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸುವ ವ್ಯವಸ್ಥೆ ಜಾರಿಯಾಗಿರುವುದರಿಂದ, ಸಮಸ್ಯೆಗಳ ಪರಿಹಾರ ಪ್ರಕ್ರಿಯೆಯ ಮೇಲೂ ಹೆಚ್ಚಿನ ನಿಗಾ ಇರಿಸಲು ಸಾಧ್ಯವಾಗಲಿದೆ.