SOCIAL MEDIA

Newsletter

PARTNER SITES
Select Language Select State

ಬೆಂಗಳೂರು-ಮೈಸೂರು ಟ್ರಾಫಿಕ್‌ ಸಿಗ್ನಲ್‌ ದುರಸ್ಥಿಗೆ ಡಿಜಿಪಿಗೆ ಪತ್ರ ಬರೆದ ಪೊಲೀಸ್‌ ಪ್ರಾಧಿಕಾರ

ಬೆಂಗಳೂರು, ಮೈಸೂರು ಟ್ರಾಫಿಕ್‌ ಸಿಗ್ನಲ್‌ ಎಎಂಸಿ ನವೀಕರಣಕ್ಕೆ ಒತ್ತಾಯಿಸಿ ಡಿಜಿಪಿಗೆ ಪೊಲೀಸ್ ಪ್ರಾಧಿಕಾರದ ಸದಸ್ಯರಿಂದಲೇ ಪತ್ರ ಬರೆಯಲಾಗಿದೆ.

Written By Yashaswini V
Published: Sep 26, 2026, 10:40 AM IST | Updated: Sep 26, 2026, 10:42 AM IST
Join

ಬೆಂಗಳೂರು ಮತ್ತು ಮೈಸೂರು ನಗರದಲ್ಲಿನ ಸಂಚಾರ ಸಿಗ್ನಲ್‌ಗಳು (ಎಎಂಸಿ) ಸಮರ್ಪಕವಾಗಿ ಕಾರ್ಯನಿರ್ವಹಿಸದ ಬಗ್ಗೆ ಹಾಗು ಇದರಿಂದ ಪೊಲೀಸ್‌ ಇಲಾಖೆಯ ಸಿಬ್ಬಂದಿಗಳು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಪೊಲೀಸ್ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ, ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರು ಮತ್ತು ಮೈಸೂರು ನಗರದ ವಿವಿಧ ಪ್ರಮುಖ ಜಂಕ್ಷನ್‌ಗಳಲ್ಲಿ ಅಳವಡಿಸಿರುವ ಸಂಚಾರ ಸಿಗ್ನಲ್ ಲೈಟ್ ಗಳ ನಿರ್ವಹಣೆಯ ಎಎಂಸಿ (ಅನ್ಯೂಯಲ್ ಮೆಂಟೈನನ್ಸ್ ಕಾಂಟ್ರಾಕ್ಟ್) ಸಮರ್ಪಕವಾಗಿ ಸುಮಾರು ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಸಿಗ್ನಲ್‌ಗಳ ಮೂಲಕ ಸ್ವಯಂಚಾಲಿತವಾಗಿ ಸಂಚಾರ ನಿಯಂತ್ರಣ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.

ಮ್ಯಾನುವಲ್ ಆಗಿ ಸಂಚಾರ ನಿಯಂತ್ರಣ ಕರ್ತವ್ಯ: 
ಪ್ರತಿದಿನ ಸಂಚಾರ ಪೊಲೀಸ್ ಸಿಬ್ಬಂದಿಗಳನ್ನು ಸುಮಾರು 8 ಗಂಟೆಗಳ ಕಾಲ ನಿರಂತರವಾಗಿ ಮ್ಯಾನುವಲ್ ಆಗಿ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ ಎಂದು ಉಲ್ಲೇಖಿಸಿರುವ  ಅವರು, ಈ ಸಿಬ್ಬಂದಿಗಳು ಪ್ರತಿದಿನ ಬೆಳಿಗ್ಗಿನಿಂದ ಸಂಜೆವರೆಗೆ ದೀರ್ಘಕಾಲ ಬಿಸಿಲು, ಮಳೆ, ಧೂಳು ಮತ್ತು ವಾಹನಗಳ ಹೊಗೆ ನಡುವೆ ಕರ್ತವ್ಯ ನಿರ್ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ ಇಂತಹ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುವುದ್ದರಿಂದ ಅನೇಕ ಸಿಬ್ಬಂದಿಗಳ ಆರೋಗ್ಯದಲ್ಲಿ ಏರುಪೇರಾಗಿದ್ದು, ಕಣ್ಣಿನ ಉರಿಯಿಂದಾಗಿ ರಾತ್ರಿ ನಿದ್ದೆಬಾರದೆ ದೈಹಿಕ ಹಾಗೂ ಮಾನಸಿಕವಾಗಿ ತೀವ್ರ ಒತ್ತಡ ಅನುಭವಿಸುತ್ತಿದ್ದಾರೆ ಎಂದು ಪೊಲೀಸರ ಸ್ಥಿತಿಯ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.  

ಶೌಚಾಲಯಕ್ಕೆ ತೆರಳಲೂ ಅವಕಾಶವಿಲ್ಲ!
ಇನ್ನು ಮ್ಯಾನುವಲ್ ಆಗಿ ಸಂಚಾರ ನಿಯಂತ್ರಣ ಕಾರ್ಯ ನಡೆಸಬೇಕಿರುವುದರಿಂದ ಕರ್ತವ್ಯದ ಸ್ಥಳದಿಂದ ದೂರ ಸರಿಯಲು ಸಾಧ್ಯವಾಗದ ಕಾರಣ ಶೌಚಾಲಯಕ್ಕೆ ತೆರಳಲು ಸಹ ಸೂಕ್ತ ಅವಕಾಶ ದೊರೆಯದಂತಹ ಪರಿಸ್ಥಿತಿ ಉಂಟಾಗಿದೆ. ಕುಡಿಯುವ ನೀರು, ವಿಶ್ರಾಂತಿ ಮತ್ತು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಿಬ್ಬಂದಿಗಳಿಗೆ ತೊಂದರೆಯಾಗುತ್ತಿದೆ. ಕೆಲವು ಸಂಚಾರ ಪೊಲೀಸ್ ಸಿಬ್ಬಂದಿಗಳು ಈ ಪರಿಸ್ಥಿತಿಯ ಕರ್ತವ್ಯವನ್ನು ಮಾಡಲಾಗದೇ ಗೈರಾಗುತ್ತಿದ್ದಾರೆ ಎಂದು ಸಂಚಾರಿ ಪೊಲೀಸರ ದೈನಂದಿನ ಜಂಜಾಟದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ತಾಂತ್ರಿಕ ದೋಷದ ಬಗ್ಗೆಯೂ ಉಲ್ಲೇಖಿಸಿರುವ ಅವರು, ಎಎಂಸಿ ನವೀಕರಣ ಮಾಡದೇ ಸಿಗ್ನಲ್ ವ್ಯವಸ್ಥೆಯನ್ನು ತಾಂತ್ರಿಕವಾಗಿ ಸರಿಪಡಿಸುವ ಬದಲು ಅಧಿಕಾರಿಗಳು ಅದರ ಸಂಪೂರ್ಣ ಹೊಣೆಯನ್ನು ಸಂಚಾರ ಪೊಲೀಸ್ ಸಿಬ್ಬಂದಿಗಳ ಮೇಲೆ ಹಾಕಲಾಗಿದೆ.

ಮ್ಯಾನುವಲ್ ಕರ್ತವ್ಯ ನಿರ್ವಹಿಸುವ ಕಾರ್ಯಕ್ಕೆ ನಿಯೋಜಿಸಿರುವುದು ಆರೋಗ್ಯದ ದೃಷ್ಟಿಯಿಂದ ಆತಂಕಕಾರಿಯಾಗಿರುವುದ್ದರಿಂದ ಕೂಡಲೇ ಬೆಂಗಳೂರು ಮತ್ತು ಮೈಸೂರು ನಗರದ ಎಲ್ಲಾ ಸಂಚಾರ ಸಿಗ್ನಲ್‌ಗಳ ಎಎಂಸಿ/ನಿರ್ವಹಣಾ ವ್ಯವಸ್ಥೆಯನ್ನು ನವೀಕರಿಸಿ/ಸರಿಪಡಿಸಿ ಸಿಬ್ಬಂದಿಗಳ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವಂತೆ ಪತ್ರದ ಮೂಲಕ ಮನವಿ ಮಾಡಿದ್ದು, ಸದರಿ ಪತ್ರವನ್ನು ಸಿಬ್ಬಂದಿಗಳ ಆರೋಗ್ಯದ ಮತ್ತು ಸುಗಮ ಸಂಚಾರದ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕು. ಬೆಂಗಳೂರು, ಮೈಸೂರು ನಗರ ಸೇರಿದಂತೆ ರಾಜ್ಯಾದ್ಯಂತ ಅಳವಡಿಸಿರುವ ಎಲ್ಲಾ ಸಂಚಾರ ಸಿಗ್ನಲ್ ಲೈಟ್‌ಗಳ ಕಾರ್ಯನಿರ್ವಹಣೆಯನ್ನು ಎಎಂಸಿಗಳಿಂದ ಸ್ವಯಂಚಾಲಿತವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜೊತೆಗ ಟ್ರಾಫಿಕ್‌ ಸಿಗ್ನಲ್‌ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮದ ಬಗ್ಗೆ ಪ್ರಾಧಿಕಾರದ ಕಛೇರಿಗೆ ಮಾಹಿತಿ ನೀಡುವಂತೆ ಪತ್ರ ಮುಖೇನ ಡಿಜಿಪಿ ಅವರಿಗೂ ಸೂಚಿಸಿದ್ದಾರೆ.

ಟ್ರಾಫಿಕ್ ಸಿಗ್ನಲ್ ಸರಿಪಡಿಸಿ ಎಂದು ಪೊಲೀಸ್ ಪ್ರಾಧಿಕಾರದ ಸದಸ್ಯರಿಂದಲೇ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಿಗೆ ಪತ್ರ ಬರೆದ ಮೇಲಾದರೂ ಟ್ರಾಫಿಕ್‌ ಸಿಗ್ನಲ್‌ ಸಮಸ್ಯೆಗೆ ಮುಕ್ತಿ ಸಿಗಲಿದ್ಯಾ ಎಂಬುದನ್ನು ಕಾದುನೋಡಬೇಕಿದೆ. 
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 

ZEENEWS TRENDING STORIES