Men cheated women: ಗಂಡನಿಂದ ದೂರವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದ ಮಹಿಳೆಗೆ ಮತ್ತೊಂದು ಮದುವೆಯಾಗಿ ಹೊಸ ಬದುಕು ಕೊಡುತ್ತೇನೆ ಎಂದು ನಂಬಿಸಿದ್ದ ಯುವಕನೊಬ್ಬ ಈಗ ಕೈಕೊಟ್ಟಿದ್ದಾನೆ. ಬಸ್‌ಸ್ಟ್ಯಾಂಡ್‌ನಲ್ಲಿ ಪರಿಚಯವಾಗಿ, ಪ್ರೀತಿಯ ಬಲೆಗೆ ಬೀಳಿಸಿ, ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಅಷ್ಟೇ ಅಲ್ಲ, ದುಬಾರಿ ಬೈಕ್, ಐಫೋನ್ ಗಿಫ್ಟ್ ಪಡೆದುಕೊಂಡು ಆರು ತಿಂಗಳ ಬಳಿಕ ಮದುವೆಯಾಗಲ್ಲ ಎಂದು ಎಸ್ಕೇಪ್ ಆಗಿದ್ದಾನೆ. ಕೊನೆಗೆ ಪ್ರಿಯಕರನಿಗಾಗಿ ಹುಡುಕಾಡಿ ಸುಸ್ತಾದ ಮಹಿಳೆ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ಹೌದು.. ಕೆ.ಬಿ. ಸಂದ್ರ ಬಸ್ ನಿಲ್ದಾಣದಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ಎಂಬಾತ ಪರಿಚಯವಾಗಿದ್ದ. ಪರಿಚಯ ಸ್ನೇಹವಾಗಿ, ಬಳಿಕ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಇಬ್ಬರೂ ಮಾತನಾಡಲು ಶುರುಮಾಡಿದ್ದರು. ಡೇಟಿಂಗ್ ನೆಪದಲ್ಲಿ ತನ್ನ ಪಿಜಿಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದ ಆರೋಪಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಲೈಂಗಿಕ ಸಂಪರ್ಕ ಬೆಳೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇಷ್ಟಕ್ಕೇ ನಿಲ್ಲದ ಆರೋಪಿ, ಮದುವೆಯಾಗುವುದಾಗಿ ನಂಬಿಸಿ ಮಹಿಳೆಯ ಮನೆಗೂ ತೆರಳಿ ಹಲವು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎನ್ನಲಾಗಿದೆ. ಈ ನಡುವೆ ಪ್ರಿಯಕರನಿಗೆ ದುಬಾರಿ ಬೆರ್ಗ್‌ಮನ್ ಬೈಕ್ ಹಾಗೂ ಐಫೋನ್ ಅನ್ನು ಮಹಿಳೆ ಉಡುಗೊರೆಯಾಗಿ ನೀಡಿದ್ದಾಳೆ. ಆದರೆ ದುಬಾರಿ ಗಿಫ್ಟ್‌ಗಳನ್ನು ಪಡೆದುಕೊಂಡ ಬಳಿಕ ತಾಹೀರ್ ವರಸೆಯೇ ಬದಲಾಗಿತ್ತು. ಮಹಿಳೆಯ ಕರೆಗಳನ್ನು ಸ್ವೀಕರಿಸದೆ, ಆಕೆಯನ್ನು ಅವಾಯ್ಡ್ ಮಾಡಲು ಶುರುಮಾಡಿದ್ದ. ಕೊನೆಗೆ ಆ 23ರಂದು ಫೋನ್ ಮಾಡಿ, ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿ ಕೈಕೊಟ್ಟಿದ್ದಾನೆ ಎನ್ನಲಾಗಿದೆ.
ಮದುವೆಯಾಗುತ್ತೇನೆ ಎಂದು ನಂಬಿಸಿ ವಂಚಿಸಿದ ಪ್ರಿಯಕರನನ್ನು ಹುಡುಕಿಕೊಂಡು ಮಹಿಳೆ ತನ್ನ ಸ್ನೇಹಿತೆಯೊಂದಿಗೆ ಹೈದರಾಬಾದ್‌ನಲ್ಲಿರುವ ಆತನ ಮನೆಗೂ ತೆರಳಿದ್ದಾಳೆ. ಆದರೆ ಮದುವೆಯ ಮಾತುಕತೆಯಿಂದ ತಪ್ಪಿಸಿಕೊಂಡಿರುವ ತಾಹೀರ್ ಈಗ ಸಂಪರ್ಕಕ್ಕೆ ಸಿಗದೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಕೊನೆಗೆ ನ್ಯಾಯಕ್ಕಾಗಿ ಮಹಿಳೆ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶೇಖ್ ಮೊಹಮ್ಮದ್ ತೈಯೀಬ್ ಅಲಿಯಾಸ್ ತಾಹೀರ್ ವಿರುದ್ಧ ದೂರು ನೀಡಿದ್ದಾಳೆ. ಪ್ರಕರಣ ಸಂಬಂಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರೀತಿಯ ಹೆಸರಿನಲ್ಲಿ ನಂಬಿಕೆ ಗಳಿಸಿ, ಮದುವೆಯ ಭರವಸೆ ನೀಡಿ ವಂಚಿಸಿದ ಆರೋಪ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಮಹಿಳೆಗೆ ನ್ಯಾಯ ಸಿಗುತ್ತಾ? ಆರೋಪಿ ತಾಹೀರ್ ಪೊಲೀಸರ ಬಲೆಗೆ ಬೀಳ್ತಾನಾ? ಅನ್ನೋದನ್ನ ಕಾದು ನೋಡಬೇಕಿದೆ.