Bengaluru Electricity Supply Company Limited: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತವು 2025-26ನೇ ಹಣಕಾಸು ವರ್ಷದಲ್ಲಿ ಬರೋಬ್ಬರಿ 293.62 ಕೋಟಿ ರೂಪಾಯಿಗಳನ್ನು ಲಾಭ ಗಳಿಸಿದೆ. ಸುಧಾರಿತ ಆದಾಯ ಸಂಗ್ರಹಣೆ ಹಾಗೂ ಆರ್ಥಿಕ ಶಿಸ್ತಿನಿಂದ ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ಲಾಭ ಗಳಿಸಿದೆ. ಆದಾಯ ಹೆಚ್ಚಳ ಮತ್ತು ವೆಚ್ಚ ನಿಯಂತ್ರಣಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸುಧಾರಣೆ ತರಲಾಗಿದೆ. ಗೃಹ ಜ್ಯೋತಿ ಯೋಜನೆ ನಡುವೆಯೂ ಬೆಸ್ಕಾಂ ಲಾಭದಲ್ಲಿ ದಾರಿಯಲ್ಲಿ ಸಾಗುತ್ತಿರುವುದಕ್ಕೆ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ ಜಾರ್ಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಸ್ಕಾಂನ 144 ನೇ ಆಡಳಿತ ಮಂಡಳಿ ಸಭೆಯಲ್ಲಿ 2025-26ನೇ ಸಾಲಿನ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆ ಹಾಗೂ ಲಾಭ ದಾಖಲಿಸಲು ಕಾರಣವಾದ ಅಂಶಗಳ ಕುರಿತು ಮಾತನಾಡಿದರು. ಬೆಸ್ಕಾಂ ಲಾಭದ ಹಾದಿಯಲ್ಲಿ ಸಾಗಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಇಂಧನ ಸಚಿವರು, ಆದಾಯ ಹೆಚ್ಚಳ ಮತ್ತು ವೆಚ್ಚ ನಿಯಂತ್ರಣಕ್ಕೆ ಸಮಾನ ಆದ್ಯತೆ ನೀಡುವ ಮೂಲಕ ಬೆಸ್ಕಾಂನ ಆರ್ಥಿಕ ಕಾರ್ಯಕ್ಷಮತೆಯಲ್ಲಿ ಸುಧಾರಣೆ ತರಲಾಗಿದೆ ಎಂದು ಕೆ.ಜೆ ಜಾರ್ಜ್ ಅವರು ಹೇಳಿದರು.
ಸಮರ್ಪಕ ಬಿಲ್ಲಿಂಗ್ ವ್ಯವಸ್ಥೆಯು ಆರ್ಥಿಕ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರೋಬ್ ರೀಡಿಂಗ್ ವ್ಯವಸ್ಥೆಯಿಂದ ಸಿಬ್ಬಂದಿ ಹಸ್ತಕ್ಷೇಪ ಕಡಿಮೆಯಾಗಿ ಬಿಲ್ಲಿಂಗ್ ನಿಖರತೆ ಹೆಚ್ಚಿದೆ. ಇದರಿಂದ ಸುಮಾರು 100 ಮಿಲಿಯನ್ ಯೂನಿಟ್ ಹೆಚ್ಚುವರಿ ವಿದ್ಯುತ್ ಮಾರಾಟಕ್ಕೆ ಕಾರಣವಾಗಿರುವುದರ ಜೊತೆಗೆ ಗರಿಷ್ಠ ಬೇಡಿಕೆಯನ್ನು ನಿಖರವಾಗಿ ದಾಖಲಿಸಲು ಕೂಡ ಸಹಾಯವಾಗಿದೆ. ಹೆಚ್ಚಿನ ಆದಾಯ ನೀಡುವ ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರ ವಿಭಾಗದಲ್ಲಿ ಶೇಕಡಾ 100 ರಷ್ಟು ಬಿಲ್ಲಿಂಗ್ ದಕ್ಷತೆ ಸಾಧಿಸಲು ಬೆಸ್ಕಾಂ ಮುಂದಾಗಿದೆ ಎಂದು ಹೇಳಿದ್ದಾರೆ.
ಸರಾಸರಿ ಆದಾಯ ವಸೂಲಿಯನ್ನು ನಿಯಮಿತವಾಗಿ ಪರಿಶೀಲಿಸುವ ಮೂಲಕ ಆದಾಯದ ಮೇಲ್ವಿಚಾರಣೆ, ಉತ್ತಮ ದರ ಪರಿಷ್ಕರಣೆ ಪ್ರಸ್ತಾವನೆಗಳು ಮತ್ತು ಪರಿಣಾಮಕಾರಿ ಆರ್ಥಿಕ ನಿರ್ಧಾರಗಳನ್ನು ಬೆಸ್ಕಾ ಕೈಗೊಂಡಿದೆ. ವಿದ್ಯುತ್ ಖರೀದಿಯ ಸಮರ್ಪಕ ನಿರ್ವಹಣೆ, ಹಳೆಯ ಬಾಕಿಗಳನ್ನು ಕಂತುಗಳಲ್ಲಿ ಪಾವತಿಸುವ ಮೂಲಕ ವಿಳಂಬ ಪಾವತಿಯ ಹೆಚ್ಚುವರಿ ಶುಲ್ಕದ ಹೊರೆ ಕಡಿಮೆ ಮಾಡಿರುವ ಬೆಸ್ಕಾಂ ವಿದ್ಯುತ್ ಉತ್ಪಾದನಾ ಸಂಸ್ಥೆಗಳು ನೀಡುವ ಮುಂಗಡ ಪಾವತಿ ರಿಯಾಯಿತಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡ ಬೆಸ್ಕಾಂ ಹೆಚ್ಚಿನ ಬಡ್ಡಿದರದ ಸಾಲಗಳ ಪುನರ್‌ರಚನೆ ಮೂಲಕ ಹಣಕಾಸು ವೆಚ್ಚವನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದರಿಂದ ಬಡ್ಡಿ ವೆಚ್ಚ ಇಳಿಕೆಯಾಗುವುದರ ಜೊತೆಗೆ, ನಗದು ನಿರ್ವಹಣೆಯೂ ಸುಧಾರಿಸಿದೆ. ಸಾಲದ ಪಾವತಿಯಲ್ಲಿ ಬೆಸ್ಕಾಂ ಯಾವುದೇ ಡಿಫಾಲ್ಟ್ ಮಾಡಿಲ್ಲ. ಬಾಕಿ ಆದಾಯ ವಸೂಲಿ, ವೆಚ್ಚ ನಿಯಂತ್ರಣ ಮತ್ತು ಆರ್ಥಿಕ ನಿರ್ವಹಣೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಂಡ ನಿರಂತರ ಕ್ರಮಗಳ ಫಲವಾಗಿ ಬೆಸ್ಕಾಂ ಲಾಭ ದಾಖಲಿಸಿದೆ. ಬಿಲ್ಲಿಂಗ್ ದಕ್ಷತೆ, ವೆಚ್ಚ ಕಡಿತ ಮತ್ತು ಶಿಸ್ತುಬದ್ಧ ಆರ್ಥಿಕ ನಿರ್ವಹಣೆಗೆ ನೀಡಿದ ಆದ್ಯತೆ ಈ ಸಾಧನೆಗೆ ಪ್ರಮುಖವಾಗಿ ಕಾರಣವಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು ಡಾ.ಎನ್. ಶಿವಶಂಕರ ಅವರು ಹೇಳಿದರು.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಥವಾ ಬೆಸ್ಕಾಂ- BESCOM ಬೆಂಗಳೂರು ಮತ್ತು ಕರ್ನಾಟಕದ 8 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆ ಮತ್ತು ಸರಬರಾಜು ಮಾಡುತ್ತದೆ. ಇದರ ಸೇವಾ ಕೇಂದ್ರಗಳು ಎಂದರೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಚಿತ್ರದುರ್ಗ, ರಾಮನಗರ ಮತ್ತು ತುಮಕೂರು ಜಿಲ್ಲೆಗಳು ಆಗಿವೆ. ಬೆಸ್ಕಾಂ ಮಿತ್ರ BESCOM Mithra ಈ ಆಪ್ ಮೂಲಕ ಗ್ರಾಹಕರು ಬಿಲ್ ಪಾವತಿ ಮಾಡಬಹುದು. ದೂರು ದಾಖಲು ಮಾಡಬಹುದು. ವಿದ್ಯುತ್ ವ್ಯತ್ಯಯ ಮಾಹಿತಿಯನ್ನು ತಿಳಿಯಬಹುದಾಗಿದೆ. ಕರ್ನಾಟಕ ಒನ್ ಮೂಲಕ ನಿಮ್ಮ ಖಾತೆ ಸಂಖ್ಯೆಯನ್ನು ಬಳಸಿ ಸುಲಭವಾಗಿ ಬಿಲ್ ಪಾವತಿ ಮಾಡಬಹುದು.