SOCIAL MEDIA

Newsletter

PARTNER SITES
Select Language Select State

ನೋವಿನಲ್ಲೂ ಸಾರ್ಥಕತೆ ಮೆರೆದ ಇಡೀ ಕುಟುಂಬ.. ಪ್ರೀತಿಯ ಅಮ್ಮ ಕುಸುಮಾಗೆ ಮಕ್ಕಳ ಕಣ್ಣೀರಿನ ವಿದಾಯ

ಒಂದು ಕುಟುಂಬ ತನ್ನ ಪ್ರೀತಿ ಪಾತ್ರರನ್ನ ಕಳೆದುಕೊಂಡ ನೋವಿನಲ್ಲಿದ್ದರೂ ಇನ್ನೊಂದು ಕುಟುಂಬಕ್ಕೆ ತಮ್ಮ ಪ್ರೀತಿಪಾತ್ರರನ್ನ ಉಳಿಸಿಕೊಳ್ಳುವ ಅವಕಾಶ ಸಿಕ್ಕಿದೆ. ತಾಯಿಯನ್ನ ಕಳೆದುಕೊಂಡ ಕುಟುಂಬಕ್ಕೆ ಇದು ಮರೆಯಲಾಗದ ನೋವು,

Written By Bhimappa
Published: Sep 26, 2026, 04:24 PM IST | Updated: Sep 26, 2026, 04:28 PM IST
Image Credit: Anekal_Kusuma
Join

Anekal taluk Haragadde Dyavasandra village resident Kusuma Family: ತಾಯಿಯನ್ನ ಕಳೆದುಕೊಂಡ ನೋವು ಒಂದು ಕಡೆಯಾದರೆ, ಅದೇ ತಾಯಿಯ ಸಾವಿನಲ್ಲೂ ಹಲವು ಜೀವಗಳಿಗೆ ಹೊಸ ಬದುಕು ನೀಡಬೇಕು ಅನ್ನೋ ಮಾನವೀಯ ನಿರ್ಧಾರ ಮತ್ತೊಂದೆಡೆ. ಮೆದುಳು ನಿಷ್ಕ್ರಿಯಗೊಂಡ ಮಹಿಳೆಯ ಅಂಗಾಂಗ ದಾನ ಮಾಡಿ ಕುಟುಂಬವೊಂದು ಸಾರ್ಥಕತೆ ಮೆರೆದಿದೆ. ತಾಯಿಯನ್ನ ಕಳೆದುಕೊಂಡ ನೋವಿನ ನಡುವೆಯೂ ಪತಿ ಮತ್ತು ಮಕ್ಕಳು ತೆಗೆದುಕೊಂಡ ಈ ನಿರ್ಧಾರ, ಹಲವರ ಬದುಕಿಗೆ ಆಶಾಕಿರಣವಾಗಿದೆ. ಅಷ್ಟಕ್ಕೂ ತಾಯಿಯ ಸಾವಿನ ನೋವಿನ ನಡುವೆಯೂ ಕುಟುಂಬ ತೆಗೆದುಕೊಂಡ ಆ ಮಹತ್ವದ ನಿರ್ಧಾರ ಏನು?, ಹಲವು ಜೀವಗಳಿಗೆ ಹೇಗೆ ಹೊಸ ಭರವಸೆ ಆಯಿತು?.  

ಒಬ್ಬರ ಅಂತ್ಯ, ಅಂಗಾಂಗ ದಾನದಿಂದ ಹಲವರ ಬದುಕಿಗೆ ಹೊಸ ಆರಂಭ
ತಾಯಿಯ ಸಾವಿನಲ್ಲೂ ಮಕ್ಕಳಿಂದ ಮಾನವೀಯ ನಿರ್ಧಾರ
ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಕುಟುಂಬ

ಇದು ತಾಯಿಯನ್ನ ಕಳೆದುಕೊಂಡ ನೋವಿನ ಕಥೆ ಮಾತ್ರವಲ್ಲ. ಅದೇ ನೋವಿನ ನಡುವೆಯೂ ಹಲವು ಜೀವಗಳಿಗೆ ಹೊಸ ಆಶಾಕಿರಣವಾದ ಕುಟುಂಬದ ಕಥೆ. ಇದು ಆನೇಕಲ್ ತಾಲೂಕಿನ ಹಾರಗದ್ದೆ ದ್ಯಾವಸಂದ್ರ ಗ್ರಾಮದ ಕುಸುಮಾ ಅವರ ಕಥೆ. 39 ವರ್ಷದ ಕುಸುಮಾ ಪತಿ ಜಯಶಂಕರ್ ಹಾಗೂ ಇಬ್ಬರು ಮಕ್ಕಳ ಜೊತೆ ಸಂತೋಷವಾಗಿ ಜೀವನ ನಡೆಸುತ್ತಿದ್ದರು.ಆದ್ರೆ ಏಕಾಏಕಿ ಆರೋಗ್ಯದಲ್ಲಿ ಏರುಪೇರಾಗಿ, ಮನೆಯಲ್ಲೇ ಕಾರ್ಡಿಯಾಕ್ ಅರೆಸ್ಟ್ ಆಗಿ ಕುಸಿದು ಬಿದ್ದಿದ್ದಾರೆ.

ಕುಟುಂಬಸ್ಥರು ಕೂಡಲೇ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದ್ರೂ ಚಿಕಿತ್ಸೆ ಫಲಕಾರಿಯಾಗಿಲ್ಲ, ಚಿಕಿತ್ಸೆ ಪ್ರಾರಂಭಿಸುವಷ್ಟರಲ್ಲೆ ಕುಸುಮಾ ಅವರ ಮೆದುಳು ನಿಷ್ಕ್ರಿಯಗೊಂಡಿದೆ, ಈ ವಿಷಯವನ್ನು ವೈದ್ಯರು ಕುಸುಮಾ ಕುಟುಂಬಕ್ಕೆ ತಿಳಿಸಿದ್ದಾರೆ. ಒಂದೆಡೆ ಕಣ್ಣೆದುರೇ ಪತ್ನಿಯನ್ನ ಕಳೆದುಕೊಳ್ಳುವ ಪತಿ, ಮತ್ತೊಂದೆಡೆ ತಾಯಿಯನ್ನ ಕಳೆದುಕೊಳ್ಳುವ ಪುಟ್ಟ ಮಕ್ಕಳ ಆಘಾತ. ಆದ್ರೆ ಇದೇ ನೋವಿನ ನಡುವೆಯೇ ಕುಟುಂಬ ಒಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕುಸುಮಾ ಬದುಕಿಲ್ಲದಿದ್ದರೂ ಅವರ ಅಂಗಾಂಗಗಳ ಮೂಲಕ ಮತ್ತಷ್ಟು ಜೀವಗಳು ಬದುಕಲಿ ಅನ್ನೋ ನಿರ್ಧಾರಕ್ಕೆ ಕುಟುಂಬ ಬಂದಿದೆ.

ಇನ್ನು ಪತಿ ಜಯಶಂಕರ್ ಜೊತೆಗೂಡಿ ಕುಸುಮಾ ಅವರ ಇಬ್ಬರು ಮಕ್ಕಳು ಕೂಡ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದ್ದಾರೆ. ತಾಯಿಯನ್ನ ಮರಳಿ ಪಡೆಯಲು ಸಾಧ್ಯವಿಲ್ಲ ಆದ್ರೆ ತಾಯಿಯ ಅಂಗಾಂಗಗಳಿಂದ ಮತ್ತೊಬ್ಬರ ಬದುಕು ಉಳಿಯಬಹುದು ಅನ್ನೋ ಆಲೋಚನೆಯೇ ಕುಟುಂಬಕ್ಕೆ ದೊಡ್ಡ ಧೈರ್ಯ ನೀಡಿದೆ. ಕುಟುಂಬದ ಒಪ್ಪಿಗೆಯಂತೆ ಕುಸುಮಾ ಅವರ ಕಣ್ಣು, ಹೃದಯ, ಶ್ವಾಸಕೋಶ, ಲಿವರ್ ಮತ್ತು ಕಿಡ್ನಿ ಸೇರಿದಂತೆ ಅಂಗಾಂಗಗಳನ್ನು ದಾನ ಮಾಡಲಾಗಿದೆ. ಈ ಅಂಗಾಂಗ ದಾನದ ಮೂಲಕ ಸುಮಾರು 7 ರಿಂದ 8 ಮಂದಿಯ ಜೀವಕ್ಕೆ ನೆರವಾಗುವ ಅವಕಾಶ ಸಿಕ್ಕಿದೆ.

ಅಂದರೆ ಒಂದು ಕುಟುಂಬ ತನ್ನ ಪ್ರೀತಿ ಪಾತ್ರರನ್ನ ಕಳೆದುಕೊಂಡ ನೋವಿನಲ್ಲಿದ್ದರೂ ಇನ್ನೊಂದು ಕುಟುಂಬಕ್ಕೆ ತಮ್ಮ ಪ್ರೀತಿಪಾತ್ರರನ್ನ ಉಳಿಸಿಕೊಳ್ಳುವ ಅವಕಾಶ ಸಿಕ್ಕಿದೆ. ತಾಯಿಯನ್ನ ಕಳೆದುಕೊಂಡ ಕುಟುಂಬಕ್ಕೆ ಇದು ಮರೆಯಲಾಗದ ನೋವು, ಆದ್ರೆ ಅದೇ ನೋವಿನ ನಡುವೆ ತೆಗೆದುಕೊಂಡ ನಿರ್ಧಾರ ಮಾತ್ರ ಹಲವರ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯುವಂತಾಗಿದೆ. ಜೀವನದ ಕೊನೆಯ ಕ್ಷಣದಲ್ಲೂ ಕುಸುಮಾ ಹಲವರ ಬದುಕಿನ ಹೊಸ ಆರಂಭಕ್ಕೆ ಕಾರಣರಾಗಿದ್ದಾರೆ. ಕುಟುಂಬದ ಈ ಮಾನವೀಯ ನಿರ್ಧಾರಕ್ಕೆ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯ ವೈದ್ಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಂಗಾಂಗ ದಾನದಿಂದ ಮತ್ತೊಬ್ಬರ ಬದುಕಿಗೆ ಬೆಳಕಾಗಬಹುದು ಅನ್ನೋ ಸಂದೇಶವನ್ನ ಕುಸುಮಾ ಕುಟುಂಬ ಸಮಾಜಕ್ಕೆ ನೀಡಿದೆ. ಮರಣ ಅನ್ನೋದು ಬದುಕಿನ ಅಂತ್ಯ, ಆದ್ರೆ ಅಂಗಾಂಗ ದಾನದಿಂದ ಒಬ್ಬರ ಬದುಕಿನ ಅಂತ್ಯ, ಮತ್ತೊಬ್ಬರ ಬದುಕಿನ ಹೊಸ ಆರಂಭವಾಗಬಹುದು. ತಾಯಿಯನ್ನ ಕಳೆದುಕೊಂಡ ಕುಟುಂಬದ ನೋವು ಒಂದೆಡೆ, ಅದೇ ನೋವಿನ ನಡುವೆಯೂ ಹಲವು ಜೀವಗಳಿಗೆ ಆಶಾಕಿರಣವಾದ ನಿರ್ಧಾರ ಮತ್ತೊಂದೆಡೆ, ಹಾರಗದ್ದೆ ದ್ಯಾವಸಂದ್ರ ಗ್ರಾಮದ ಕುಸುಮಾ, ತಮ್ಮ ಬದುಕಿನ ಅಂತ್ಯದಲ್ಲೂ ಹಲವರ ಬದುಕಿಗೆ ಬೆಳಕಾಗಿದ್ದಾರೆ. ತಮ್ಮವರನ್ನ ಕಳೆದುಕೊಂಡ ನೋವಿನ ನಡುವೆಯೂ ಇನ್ನೊಬ್ಬರ ಬದುಕು ಉಳಿಯಲಿ ಅನ್ನೋ ಕುಟುಂಬದ ನಿರ್ಧಾರ ಮಾನವೀಯತೆಗೆ ಒಂದು ಸಾರ್ಥಕ ಉದಾಹರಣೆ. ಇದು ಕುಸುಮಾ ಕುಟುಂಬದ ಮಾನವೀಯ ಸಾರ್ಥಕತೆ.
 

Add Zee News as a Preferred Source
TAGS:

About the Author

ಭೀಮಪ್ಪ (Bhimappa) ಜೀ ಕನ್ನಡ ನ್ಯೂಸ್‌ನಲ್ಲಿ ಸದ್ಯ ಡಿಜಿಟಲ್ (ವೆಬ್‌ಸೈಟ್‌) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ರಾಜಕೀಯ, ಸ್ಫೋರ್ಟ್ಸ್‌, ಸಿನಿಮಾ, ಆರೋಗ್ಯ, ಎಂಟರ್ಟೈನ್‌ಮೆಂಟ್, ಲೈಫ್‌ಸ್ಟೈಲ್‌, ವೈರಲ್‌ ಸುದ್ದಿಗಳನ್ನು ಓದುಗರಿಗೆ ನೀಡುತ್ತಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಪತ್ರಿಕೋದ್ಯಮವನ್ನು ಅಧ್ಯಯನ ಮಾಡಿರುವ ಇವರು ಪ್ರಜಾವಾಣಿಯಲ್ಲಿ ಒಂದು ವರ್ಷ ಅಪ್ರೆಂಟಿಸ್‌ ಹಾಗೂ ನ್ಯೂಸ್‌ಫಸ್ಟ್‌ನಲ್ಲಿ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. 

ZEENEWS TRENDING STORIES