SOCIAL MEDIA

Newsletter

PARTNER SITES
Select Language Select State

ಅಗ್ರಿಗೋಲ್ಡ್ ಗೋಲ್‌ಮಾಲ್‌! 10 ವರ್ಷಗಳಾದ್ರೂ ಕೈ ಸೇರದ ಹೂಡಿಕೆ ಹಣ

ಬೆಂಗಳೂರು: ಹತ್ತು ವರ್ಷಗಳ ಹಿಂದೆ ಹಣ ಡಬಲ್ ಆಗುತ್ತೆ, ಭವಿಷ್ಯ ಭದ್ರವಾಗುತ್ತೆ ಅನ್ನೋ ಆಸೆ ತೋರಿಸಿ ಜನರಿಂದ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಅಗ್ರಿಗೋಲ್ಡ್ ಕಂಪನಿ, ಬಳಿಕ ಹೂಡಿಕೆದಾರರಿಗೆ ವಂಚನೆ ಮಾಡಿತ್ತು. ಜೀವನಪೂರ್ತಿ ದುಡಿದು ಕೂಡಿಟ್ಟ ಹಣವನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಜನರು ಇಂದಿಗೂ ತಮ್ಮ ಹಣಕ್ಕಾಗಿ ಕಾಯುವಂತಾಗಿದೆ. ಇದೀಗ ದಶಕದ ಬಳಿಕ ಹೂಡಿಕೆ ಹಣ ವಾಪಸ್ ಸಿಗುವ ನಿರೀಕ್ಷೆ ಮತ್ತೆ ಚಿಗುರಿದೆ. ಸಿಐಡಿ ಅಧಿಕಾರಿಗಳು ಬಾಂಡ್ ಹಾಗೂ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದು, ಆನೇಕಲ್ ಪೊಲೀಸ್ ಠಾಣೆ ಮುಂದೆ ನೂರಾರು ಹೂಡಿಕೆದಾರರು ಜಮಾಯಿಸಿದ್ದಾರೆ. ಆದ್ರೆ ಒಂದೇ ಕೌಂಟರ್‌ನಲ್ಲಿ ನಡೆಯುತ್ತಿರುವ ಪರಿಶೀಲನೆಯಿಂದ ಜನರು ಪರದಾಡುವಂತಾಗಿದೆ. ಹತ್ತು ವರ್ಷಗಳ ನೋವು, ಇಂದಿನ ನಿರೀಕ್ಷೆ ಹಾಗೂ ಹೂಡಿಕೆದಾರರ ಆಕ್ರೋಶದ ಸಂಪೂರ್ಣ ವರದಿ ಇಲ್ಲಿದೆ ನೋಡಿ.

Written By Chetana Devarmani
Published: Nov 02, 2026, 05:25 PM IST | Updated: Nov 02, 2026, 05:27 PM IST
Join

ಬೆಂಗಳೂರು: ಹತ್ತು ವರ್ಷಗಳ ಹಿಂದೆ ಹಣ ಡಬಲ್ ಆಗುತ್ತೆ, ಭವಿಷ್ಯ ಭದ್ರವಾಗುತ್ತೆ ಅನ್ನೋ ಆಸೆ ತೋರಿಸಿ ಜನರಿಂದ ಕೋಟಿ ಕೋಟಿ ರೂಪಾಯಿ ಹೂಡಿಕೆ ಮಾಡಿಸಿಕೊಂಡಿದ್ದ ಅಗ್ರಿಗೋಲ್ಡ್ ಕಂಪನಿ, ಬಳಿಕ ಹೂಡಿಕೆದಾರರಿಗೆ ವಂಚನೆ ಮಾಡಿತ್ತು. ಜೀವನಪೂರ್ತಿ ದುಡಿದು ಕೂಡಿಟ್ಟ ಹಣವನ್ನ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಜನರು ಇಂದಿಗೂ ತಮ್ಮ ಹಣಕ್ಕಾಗಿ ಕಾಯುವಂತಾಗಿದೆ. ಇದೀಗ ದಶಕದ ಬಳಿಕ ಹೂಡಿಕೆ ಹಣ ವಾಪಸ್ ಸಿಗುವ ನಿರೀಕ್ಷೆ ಮತ್ತೆ ಚಿಗುರಿದೆ. ಸಿಐಡಿ ಅಧಿಕಾರಿಗಳು ಬಾಂಡ್ ಹಾಗೂ ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದು, ಆನೇಕಲ್ ಪೊಲೀಸ್ ಠಾಣೆ ಮುಂದೆ ನೂರಾರು ಹೂಡಿಕೆದಾರರು ಜಮಾಯಿಸಿದ್ದಾರೆ. ಆದ್ರೆ ಒಂದೇ ಕೌಂಟರ್‌ನಲ್ಲಿ ನಡೆಯುತ್ತಿರುವ ಪರಿಶೀಲನೆಯಿಂದ ಜನರು ಪರದಾಡುವಂತಾಗಿದೆ. ಹತ್ತು ವರ್ಷಗಳ ನೋವು, ಇಂದಿನ ನಿರೀಕ್ಷೆ ಹಾಗೂ ಹೂಡಿಕೆದಾರರ ಆಕ್ರೋಶದ ಸಂಪೂರ್ಣ ವರದಿ ಇಲ್ಲಿದೆ ನೋಡಿ.

ಕೈಯಲ್ಲಿ ಬಾಂಡ್‌ಗಳ ಕಂತೆ,ಮತ್ತೊಂದೆಡೆ ಬ್ಯಾಂಕ್ ಖಾತೆಯ ವಿವರಗಳಿರುವ ದಾಖಲೆಗಳು,ಬೆಳಗ್ಗೆಯಿಂದಲೇ ಪೊಲೀಸ್ ಠಾಣೆ ಮುಂದೆ ಕಾದು ಕುಳಿತಿರುವ ವಯಸ್ಸಾದವರು, ಮಹಿಳೆಯರು ಸೇರಿದಂತೆ ನೂರಾರು ಮಂದಿ. ಹತ್ತು ವರ್ಷಗಳ ಹಿಂದೆ ಕಳೆದುಕೊಂಡ ಹಣ ಮತ್ತೆ ಕೈ ಸೇರಬಹುದೆಂಬ ನಿರೀಕ್ಷೆಯಲ್ಲಿ ಇವರೆಲ್ಲರೂ ಗಂಟೆಗಟ್ಟಲೆ ಕಾಯುತ್ತಿದ್ದಾರೆ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಬೆಂಗಳೂರು ಹೊರವಲಯದ ಆನೇಕಲ್ ಪೊಲೀಸ್ ಠಾಣೆ. ಹೌದು ಹತ್ತು ವರ್ಷಗಳ ಹಿಂದೆ ಅಗ್ರಿಗೋಲ್ಡ್ ಕಂಪನಿಯ ಆಮಿಷಕ್ಕೆ ಒಳಗಾಗಿ ಹಣ ಹೂಡಿಕೆ ಮಾಡಿದ್ದ ಜನರು, ಇದೀಗ ತಮ್ಮದೇ ಹಣ ವಾಪಸ್ ಪಡೆಯಲು ದಾಖಲೆಗಳ ಸಮೇತ ಅಲೆದಾಡುತ್ತಿದ್ದಾರೆ. ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಕಂಪನಿ ಹೆಚ್ಚಿನ ಲಾಭದ ಆಸೆ ತೋರಿಸಿ ಜನರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿತ್ತು. ಕರ್ನಾಟಕದಲ್ಲಿಯೂ ತನ್ನ ಶಾಖೆಗಳ ಮೂಲಕ ನೂರಾರು ಹೂಡಿಕೆದಾರರಿಂದ ಹಣ ಪಡೆದು ಬಳಿಕ ವಂಚನೆ ಮಾಡಿತ್ತು ಎಂಬ ಆರೋಪ ಕೇಳಿಬಂದಿತ್ತು. ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲೇ ದುಪ್ಪಟ್ಟು ಲಾಭ ಸಿಗುತ್ತೆ ಎಂದು ನಂಬಿದ್ದ ಜನರಿಗೆ ಕೊನೆಗೆ ಎದುರಾಗಿದ್ದು ವಂಚನೆಯ ಆಘಾತ. ಕಷ್ಟಪಟ್ಟು ದುಡಿದ ಹಣ, ಮಕ್ಕಳ ಭವಿಷ್ಯಕ್ಕಾಗಿ ಕೂಡಿಟ್ಟ ಹಣವನ್ನೆಲ್ಲಾ ಹೂಡಿಕೆ ಮಾಡಿದ್ದವರು, ಹಣ ವಾಪಸ್ ಸಿಗದೆ ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದೀಗ ಸಿಐಡಿ ಅಧಿಕಾರಿಗಳು ಹೂಡಿಕೆದಾರರ ಬಾಂಡ್ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸುವ ಪ್ರಕ್ರಿಯೆ ಆರಂಭಿಸಿರುವ ಹಿನ್ನೆಲೆಯಲ್ಲಿ ಮತ್ತೆ ಹಣ ಸಿಗಬಹುದೆಂಬ ಆಸೆ ಜನರಲ್ಲಿ ಮೂಡಿದೆ.

ಇನ್ನು ಆನೇಕಲ್ ಪೊಲೀಸ್ ಠಾಣೆಯಲ್ಲಿಯೂ ದಾಖಲೆಗಳ ಪರಿಶೀಲನೆ ನಡೆಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲಿನ ಪ್ರದೇಶಗಳಷ್ಟೇ ಅಲ್ಲದೆ ದೂರದ ಊರುಗಳಿಂದಲೂ ಹೂಡಿಕೆದಾರರು ಬಾಂಡ್‌ಗಳನ್ನು ಹಿಡಿದು ಠಾಣೆಯತ್ತ ಧಾವಿಸಿದ್ದಾರೆ. ರಾಜ್ಯದ ವಿವಿಧೆಡೆ ಅಗ್ರಿಗೋಲ್ಡ್ ಹೂಡಿಕೆದಾರರ ಬಾಂಡ್ ಹಾಗೂ ದಾಖಲೆಗಳ ಪರಿಶೀಲನಾ ಕೇಂದ್ರಗಳನ್ನು ತೆರೆಯಲಾಗಿದೆ. ಹೂಡಿಕೆದಾರರು ತಮ್ಮ ಬಾಂಡ್‌ಗಳ ಜೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆಯ ವಿವರಗಳು ಹಾಗೂ ಕಂಪನಿಯಲ್ಲಿ ಎಷ್ಟು ಮೊತ್ತದ ಹಣ ಹೂಡಿಕೆ ಮಾಡಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಗೆ ಸಲ್ಲಿಸುತ್ತಿದ್ದಾರೆ. ಪ್ರತಿಯೊಬ್ಬರ ದಾಖಲೆಗಳನ್ನು ಪರಿಶೀಲಿಸಿ, ಅರ್ಹ ಹೂಡಿಕೆದಾರರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಆದರೆ ಹಣ ವಾಪಸ್ ಪಡೆಯುವ ನಿರೀಕ್ಷೆಯಲ್ಲಿ ಬಂದಿರುವ ಜನರಿಗೆ ದಾಖಲೆಗಳ ಪರಿಶೀಲನೆಯೇ ದೊಡ್ಡ ಸವಾಲಾಗಿದೆ. ಆನೇಕಲ್‌ನಲ್ಲಿ ಒಂದೇ ಒಂದು ವ್ಯವಸ್ಥೆಯ ಮೂಲಕ ದಾಖಲೆಗಳನ್ನು ಪರಿಶೀಲಿಸುತ್ತಿರುವುದರಿಂದ ನೂರಾರು ಜನರು ಸರದಿ ಸಾಲಿನಲ್ಲಿ ನಿಂತು ಕಾಯುವಂತಾಗಿದೆ. ದೂರದ ಊರುಗಳಿಂದ ಬಂದಿರುವ ಹೂಡಿಕೆದಾರರು ಬೆಳಗ್ಗೆಯಿಂದಲೇ ಊಟ, ನೀರಿಲ್ಲದೆ ಪೊಲೀಸ್ ಠಾಣೆ ಮುಂದೆ ಕಾಯುತ್ತಿದ್ದಾರೆ. ವಯಸ್ಸಾದವರು ಹಾಗೂ ಮಹಿಳೆಯರು ಕೂಡ ಗಂಟೆಗಟ್ಟಲೆ ನಿಂತು ತಮ್ಮ ಸರದಿ ಬರುವುದನ್ನೇ ಎದುರು ನೋಡುತ್ತಿದ್ದಾರೆ.
ಹೀಗಾಗಿ ದಾಖಲೆಗಳ ಪರಿಶೀಲನೆಗೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು, ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಬೇಕು ಹಾಗೂ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂಬುದು ಹೂಡಿಕೆದಾರರ ಪ್ರಮುಖ ಒತ್ತಾಯವಾಗಿದೆ.

ಒಂದು ಕಾಲದಲ್ಲಿ ಹೆಚ್ಚಿನ ಲಾಭದ ಆಸೆಯಿಂದ ಅಗ್ರಿಗೋಲ್ಡ್ ಕಂಪನಿಯನ್ನು ನಂಬಿ ಹಣ ಹೂಡಿಕೆ ಮಾಡಿದ್ದ ಜನರು, ಇಂದು ತಮ್ಮದೇ ಹಣಕ್ಕಾಗಿ ಅಧಿಕಾರಿಗಳ ಮುಂದೆ ಸಾಲುಗಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಹತ್ತು ವರ್ಷಗಳ ಸುದೀರ್ಘ ಕಾಯುವಿಕೆಯ ಬಳಿಕ ಇದೀಗ ದಾಖಲೆಗಳ ಪರಿಶೀಲನೆ ಆರಂಭವಾಗಿರುವುದು ಹೂಡಿಕೆದಾರರಲ್ಲಿ ಹೊಸ ಭರವಸೆ ಮೂಡಿಸಿದೆ. ಆದರೆ ದಾಖಲೆಗಳ ಪರಿಶೀಲನೆ ಮುಗಿದು ಅರ್ಹ ಹೂಡಿಕೆದಾರರ ಖಾತೆಗೆ ಹಣ ಯಾವಾಗ ಜಮೆಯಾಗಲಿದೆ, ಹತ್ತು ವರ್ಷಗಳ ಹಿಂದೆ ಕಳೆದುಕೊಂಡಿದ್ದ ಹಣ ನಿಜವಾಗಿಯೂ ವಾಪಸ್ ಸಿಗುತ್ತ, ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಒಟ್ಟಿನಲ್ಲಿ ವರ್ಷಗಳ ಕಾಲ ಕಾದು ಕುಳಿತಿರುವ ಅಗ್ರಿಗೋಲ್ಡ್ ಹೂಡಿಕೆದಾರರಿಗೆ ನ್ಯಾಯ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."

ZEENEWS TRENDING STORIES