ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 11 ವರ್ಷದ ಬಾಲಕನಿಗೆ ಕರೆಂಟ್ ಶಾಕ್
ಬೆಸ್ಕಾಂ ನಿರ್ಲಕ್ಷ್ಯದಿಂದ 11 ವರ್ಷದ ಬಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ. ವಿದ್ಯುತ್ ತಂತಿ ತೆರವುಗೊಳಿಸದ ಕಾರಣ ಈ ಅವಘಡ ನಡೆದಿದೆ ಎನ್ನಲಾಗಿದೆ.
ಬೆಂಗಳೂರು : ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ 11 ವರ್ಷದ ಬಾಲಕನೊರ್ವ ವಿದ್ಯುತ್ ಅವಘಡಕ್ಕೆ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇವರಚಿಕ್ಕನಹಳ್ಳಿಯಲ್ಲಿ ನಡೆದಿದೆ.
ವಿದ್ಯುತ್ ತಂತಿ ತೆರವುಗೊಳಿಸುವಂತೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ತೋರಿದ ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಬಾಲಕ ದರ್ಶನ್ ಬಲಗೈ ಸಂಪೂರ್ಣವಾಗಿ ಸುಟ್ಟು ಹೋಗಿದ್ದು, ಇದಲ್ದೆ ದೇಹದ ಹಲವು ಭಾಗಗಳಲ್ಲಿ ಸುಟ್ಟ ಗಾಯಗಳಾಗಿ ನರಳಾಡುವಂತಾಗಿದೆ. ಘಟನೆಯ ಸಂಬಂಧ ಬಾಲಕನ ತಂದೆ ಕುಪ್ಪಣ್ಣ ನೀಡಿದ ದೂರಿನ ಮೇರೆಗೆ ಬೇಗೂರು ಪೊಲೀಸರು ಬೆಸ್ಕಾಂ ಅಧಿಕಾರಿಗಳ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.
ದೇವರಚಿಕ್ಕನಹಳ್ಳಿಯಲ್ಲಿ ದರ್ಶನ್ ತಂದೆ ಕುಪ್ಪಣ್ಣ ಗ್ಯಾರೇಜ್ ನಡೆಸುತ್ತಿದ್ದರು. ದೀಪಾವಳಿ ಅಂಗಡಿ ಪುಜೆಯ ಹಿನ್ನಲೆಯಲ್ಲಿ ಕುಪ್ಪಣ್ಣ ಅವರ ಇಬ್ಬರು ಮಕ್ಕಳು ಗ್ಯಾರೇಜ್‌ಗೆ ಬಂದಿದ್ದರು. ಈ ವೇಳೆ ರಾತ್ರಿ ಸುಮಾರು 8 ಗಂಟೆಗೆ ದರ್ಶನ್ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ವಾಶ್‌ರೂಂಗೆ ತೆರಳಿದ್ದಾನೆ. ಆಗ ಕಟ್ಟಡದ ಸಮೀಪದಲ್ಲೇ ಹಾದು ಹೋಗಿದ್ದ ಬೆಸ್ಕಾಂನ ವಿದ್ಯುತ್ ತಂತಿ ಬಾಲಕನ ಕೈಗೆ ತಲುಗಿದೆ. ಇದರ ಪರಿಣಾಮ ಭೀಕರ ವಿದ್ಯುತ್ ಶಾಕ್ ಹೊಡೆದು ಬಾಲಕನ ಬಲಗೈ ಚರ್ಮ ಸುಟ್ಟು ಹೋಗಿದೆ. ಅಲ್ಲದೆ ಎದೆ, ಬೆನ್ನು ಹಾಗೂ ತಲೆಯ ಕೂದಲು ಕೂಡ ಸುಟ್ಟು ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಮಗನಿಗೆ ವಿದ್ಯುತ್ ಶಾಕ್ ಹೊಡೆಯುತ್ತಿದ್ದಂತೆ ಆತಂಕಗೊಂಡ ತಂದೆ ತಕ್ಷಣ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ಸದ್ಯ ವೈದ್ಯರು ಕರೆಂಟ್ ಶಾಕ್ ನಿಂದ ನರಳಾಡುತ್ತಿದ್ದ ಬಾಲಕನಿಗೆ ಚಿಕಿತ್ಸೆ ನೀಡಿ, ಗಾಯಗಳಿಗೆ ಬ್ಯಾಂಡೇಜ್ ಹಾಕಿ ಬಾಲಕನನ್ನು ಮನೆಗೆ ಕಳುಹಿಸಿದ್ದಾರೆ. ಆದರೆ ಗಾಯಗಳು ಸಂಪೂರ್ಣ ಗುಣವಾಗುವ ಮುನ್ನವೇ ಮನೆಗೆ ಕಳುಹಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮತ್ತೊಂದೆಡೆ ಬಾಲಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದ್ದರು ಅಧಿಕಾರಿಗಳು ಬಂದು ಆರೋಗ್ಯ ವಿಚಾರಿಸಿಲ್ಲ.
ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ!
ಇನ್ನು ಈ ಅವಘಡಕ್ಕೆ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ತಂದೆ ಕುಪ್ಪಣ್ಣನ ಆರೋಪ. ಕಟ್ಟಡ ಸಮೀಪ ವಿದ್ಯತ್ ತಂತಿ ಹಾದು ಹೋಗಿದ್ದು, ಅದನ್ನು ತೆರವುಗೊಳಿಸುವಂತೆ ಈ ಹಿಂದೆಯೇ ಕಟ್ಟಡದಲ್ಲಿದ್ದ ಅಂಗಡಿ ಮಾಲೀಕರು ಹಾಗೂ ಕುಪ್ಪಣ್ಣ ಬೆಸ್ಕಾಂ ಸಿಬ್ಬಂದಿಗೆ ದೂರು ನೀಡಿದ್ದರು. ಸಣ್ಣ ಮಕ್ಕಳು ಆಟವಾಡುವಾಗ ತಂತಿ ತಗುಲುವ ಅಪಾಯವಿದೆ. ಹೀಗಾಗಿ ಬೇಗನೆ ತಂತಿಯನ್ನು ತೆರವುಗೊಳಿಸುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕೆಲಸ ಮುಗಿದ ಬಳಿಕ ತೆರವಿಗೊಳಿಸುತ್ತೇನೆ ಎಂದಿದ್ದಾರೆ ಎನ್ನಲಾಗಿದೆ. ಅಲ್ಲದೇ ಕೆಲಸ ಮುಗಿದ ಮೇಲೆ ಬೆಸ್ಕಾಂ ಕಚೇರಿಗೆ ಬಂದು ಮಾತನಾಡುವಂತೆ ಉಡಾಫೆಯ ಉತ್ತರ ನೀಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.
ಇಷ್ಟೆಲ್ಲಾ ಮನವಿ ಮಾಡಿದರೂ, ಅಧಿಕಾರಿಗಳು ನಿರ್ಲಕ್ಷಿಸಿದ ಕಾರಣ ಬಾಲಕ ದರ್ಶನ್ ಅವರ ಇಂದಿನ ಸ್ಥಿತಿಗೆ ಬೆಸ್ಕಾಂ ಅಧಿಕಾರಿಗಳೇ ನೇರ ಹೊಣೆ ಎಂದು ತಂದೆ ಆರೋಪಿಸಿದ್ದಾರೆ. ಈ ಬಗ್ಗೆ ತಂದೆ ಕುಪ್ಪಣ್ಣ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳು ಘಟನಾ ಸಂಬಂಧ ತನಿಖೆ ನಡೆಸುತ್ತಿದ್ದಾರೆ.