SOCIAL MEDIA

Newsletter

PARTNER SITES
Select Language Select State

ಗಣಪತಿ ದೀಪ ಕಾಯುತ್ತಿದ್ದ ಬಾಲಕ ಮಹಮ್ಮದ್‌ ಮೇಲೆ ಪೆಟ್ರೋಲ್‌ ಸುರಿದು ಹ*ತ್ಯೆಗೆ ಯತ್ನ.! ಸಂತೋಷ್‌ ಬಂಧನ

ಗಣೇಶ ಮೂರ್ತಿಯ ಮುಂದೆ ಹಚ್ಚಿದ್ದ ದೀಪವನ್ನು ಕಾಯುತ್ತಿದ್ದ ಬಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ. ಸೆ.18 2026ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Reported By Krishna NK Written By Krishna NK
Published: Sep 21, 2026, 02:55 PM IST | Updated: Sep 21, 2026, 02:58 PM IST
Image Credit: News
Join

ಗಂಗಾವತಿ (ಕೊಪ್ಪಳ): ಗಣೇಶ ಮೂರ್ತಿಯ ಮುಂದೆ ಹಚ್ಚಲಾಗಿದ್ದ ದೀಪವನ್ನು ಕಾಯುತ್ತಿದ್ದ 13 ವರ್ಷದ ಬಾಲಕನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿದ ಆಘಾತಕಾರಿ ಘಟನೆಯೊಂದು ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಮುಜಾವರ ಕ್ಯಾಂಪ್‌ನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ. ಈ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಬಾಲಕನನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಯ ವಿವರ
ಗಂಗಾವತಿಯ ಮುಜಾವರ ಕ್ಯಾಂಪ್‌ನ ಸ್ಥಳೀಯ ಯುವಕರು ಈ ಬಾರಿಯ ಗಣೇಶ ಚತುರ್ಥಿಯ ಅಂಗವಾಗಿ ಗಣೇಶ ಮೂರ್ತಿಯನ್ನು ಶ್ರದ್ಧಾಭಕ್ತಿಗಳಿಂದ ಪ್ರತಿಷ್ಠಾಪಿಸಿದ್ದರು. ಗಣೇಶನ ಮುಂದೆ ಉರಿಯುತ್ತಿರುವ ದೀಪವನ್ನು ಕಾಯುವುದಕ್ಕಾಗಿ ಅದೇ ಕ್ಯಾಂಪ್‌ನ ನಿವಾಸಿಯಾದ ಮಹ್ಮದ್ ರಿಯಾಜ್ ರಫೀಕ್ ಸಾಬ (13) ಎಂಬ ಬಾಲಕನನ್ನು ನೇಮಿಸಲಾಗಿತ್ತು. ಬಾಲಕ ರಿಯಾಜ್ ದೀಪದ ಬಳಿ ಕುಳಿತು ಕಾಯುತ್ತಿದ್ದ ಸಂದರ್ಭದಲ್ಲಿ, ಹಮಾಲರ ಕಾಲೋನಿಯ ನಿವಾಸಿಯಾದ ಸಂತೋಷ (20) ಎಂಬ ಯುವಕ ಸ್ಥಳಕ್ಕೆ ಬಂದಿದ್ದಾನೆ.

ಯಾವುದೇ ಮುನ್ಸೂಚನೆ ಇಲ್ಲದೆ ಸಂತೋಷ, ಬಾಲಕ ರಿಯಾಜ್ ಮೇಲೆ ದಿಢೀರನೆ ಪೆಟ್ರೋಲ್ ಸುರಿದು, ಊದಿನಕಡ್ಡಿಯಿಂದ ಗಾಯಗೊಳಿಸಿ ಬಳಿಕ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ. ಘಟನೆಯಲ್ಲಿ ತೀವ್ರವಾಗಿ ಬೆಂಕಿ ಗಾಯಗಳಿಗೆ ಒಳಗಾದ ರಿಯಾಜ್‌ನನ್ನು ತಕ್ಷಣವೇ ಕೊಪ್ಪಳದ ಜಿಲ್ಲಾಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಈ ಅಮಾನವೀಯ ಕೃತ್ಯಕ್ಕೆ ನಿಖರ ಕಾರಣ ಏನೆಂಬುದು ಇನ್ನೂ ತಿಳಿದುಬಂದಿಲ್ಲ. 18 -09- 2026ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿಯ ಬಂಧನ ಮತ್ತು ತನಿಖೆ
ಈ ಕೃತ್ಯಕ್ಕೆ ಸಂಬಂಧಿಸಿದಂತೆ ಭಾನುವಾರ ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಸಂತೋಷನನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಪ್ರಕರಣದ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಕೃತ್ಯದ ಹಿಂದಿರುವ ನೈಜ ಉದ್ದೇಶವನ್ನು ಹೊರತರಲು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. 109/1 ಬಿಎನ್ಎಸ್ 2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ
ಘಟನೆ ನಡೆದ ತಡರಾತ್ರಿಯೇ ಮುಜಾವರ ಕ್ಯಾಂಪ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಯನ್ನು ಸ್ಥಳೀಯರು ವಿಸರ್ಜನೆ ಮಾಡಿದ್ದಾರೆ. ಗಂಗಾವತಿ ನಗರಾದ್ಯಂತ ಒಟ್ಟು 150ಕ್ಕೂ ಹೆಚ್ಚು ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಈ ಪೈಕಿ ಈಗಾಗಲೇ 60ಕ್ಕೂ ಹೆಚ್ಚು ವಿಗ್ರಹಗಳ ವಿಸರ್ಜನೆ ಪೂರ್ಣಗೊಂಡಿದೆ. ಘಟನೆಯ ಬಳಿಕ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಮುಜಾವರ ಕ್ಯಾಂಪ್ ಹಾಗೂ ನಗರದ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES