SOCIAL MEDIA

Newsletter

PARTNER SITES
Select Language Select State

KPSC AC-SAAD ನೇಮಕಾತಿಯಲ್ಲಿ 'ಅಕ್ರಮ'ದ ವಾಸನೆ: ಸ್ವತಂತ್ರ ತನಿಖೆಗೆ ಆಗ್ರಹಿಸಿ ಬೆಳಗಾವಿ ಡಿಸಿಗೆ ಅಭ್ಯರ್ಥಿಗಳ ದೂರು!

ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ ಅಭ್ಯರ್ಥಿಗಳಾದ ಚೇತನ, ಬಸ್ಸು ನಾಯಕ್ ಹಾಗೂ ಇತರರು, KPSC ನಡೆದುಕೊಂಡಿರುವ ರೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

Reported By Manjunath Naragund Written By Manjunath Naragund
Published: Sep 24, 2026, 03:11 PM IST | Updated: Sep 24, 2026, 03:24 PM IST
Image Credit: Belagavi
Join

ಬೆಳಗಾವಿ: ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಎಂದರೆ ಸಾಕು, ಯಾವುದಾದರೊಂದು వివాದ ಅಥವಾ ಅಕ್ರಮದ ಆರೋಪ ಬೆನ್ನತ್ತಿ ಬರುವುದು ಹೊಸದೇನೂ ಅಲ್ಲ. ಇದೀಗ ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ 'ಸಹಾಯಕರೇಖಾಪಾಲಕ ಮತ್ತು ಸಹಾಯಕ ಲೆಕ್ಕ ಪರಿಶೋಧನಾಧಿಕಾರಿ' (AC-SAAD) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲೂ ಬೃಹತ್ ಮಟ್ಟದ ಅಕ್ರಮ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಇಡೀ ನೇಮಕಾತಿಯ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಮತ್ತು ತನಿಖೆ ಮುಗಿಯುವವರೆಗೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿ ಸಂತ್ರಸ್ತ ಅಭ್ಯರ್ಥಿಗಳು ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ? ಅಭ್ಯರ್ಥಿಗಳ ಪ್ರಮುಖ ಅನುಮಾನಗಳೇನು?

ಬೆಳಗಾವಿ ಜಿಲ್ಲಾಧಿಕಾರಿ ಮಹಮ್ಮದ್ ರೋಷನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಿದ ಅಭ್ಯರ್ಥಿಗಳಾದ ಚೇತನ, ಬಸ್ಸು ನಾಯಕ್ ಹಾಗೂ ಇತರರು, KPSC ನಡೆದುಕೊಂಡಿರುವ ರೀತಿಯನ್ನು ಕಟುವಾಗಿ ಟೀಕಿಸಿದ್ದಾರೆ. ಪೂರ್ವಭಾವಿ ಮತ್ತು ಮುಖ್ಯ  ಪರೀಕ್ಷೆಯ ಹಂತಗಳಲ್ಲಿ ಅಭ್ಯರ್ಥಿಗಳ ರೋಲ್ ನಂಬರ್‌ಗಳು ರಹಸ್ಯವಾಗಿ ಬದಲಾವಣೆಯಾಗಿರುವುದು ಪ್ರಮುಖ ಅನುಮಾನಕ್ಕೆ ಕಾರಣವಾಗಿದೆ. ಈ ರೀತಿಯ ವ್ಯತ್ಯಾಸಗಳಿಗೆ KPSC ತಕ್ಷಣವೇ ಸ್ಪಷ್ಟನೆ ನೀಡಬೇಕು ಮತ್ತು ಎರಡೂ ಹಂತಗಳ ನೋಂದಣಿ ಸಂಖ್ಯೆಗಳ ಅಧಿಕೃತ ‘ಮ್ಯಾಪಿಂಗ್ ಪಟ್ಟಿ’ಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲದೆ, 1:3 ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಮುನ್ನವೇ ಅಭ್ಯರ್ಥಿಗಳ ಅಂಕಗಳನ್ನು ಮುಚ್ಚಿಡಲಾಗಿದೆ. ಕೇವಲ ಅಂತಿಮವಾಗಿ ಆಯ್ಕೆಯಾದ ಅಭ್ಯರ್ಥಿಗಳ ಅಂಕಗಳನ್ನು ಮಾತ್ರ ಹೊರಹಾಕಲಾಗಿದೆ. ಇದಕ್ಕಿಂತಲೂ ಮಿಗಿಲಾಗಿ, ಆಯ್ಕೆಯಾದವರ ಪೈಕಿ 40ಕ್ಕೂ ಹೆಚ್ಚು ಅಭ್ಯರ್ಥಿಗಳ ರೋಲ್ ನಂಬರ್‌ಗಳು ಒಂದೇ ಸೀರಿಯಲ್ ಸಾಲಿನಲ್ಲಿರುವುದು ಹಲವು ಶಂಕೆಗಳಿಗೆ ಆಸ್ಪದ ಮಾಡಿಕೊಟ್ಟಿದೆ. ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದವರು ಅಥವಾ ಒಂದೇ ಸರಣಿಯಲ್ಲಿರುವವರು ಸಾಲಾಗಿ ಆಯ್ಕೆಯಾಗಿದ್ದು ಹೇಗೆ ಎಂಬ ಪ್ರಶ್ನೆ ಅಭ್ಯರ್ಥಿಗಳಲ್ಲಿ ಕಾಡುತ್ತಿದೆ.

ಸೆಪ್ಟೆಂಬರ್ 10ರ ಪ್ರಕಟಣೆ ಮತ್ತು KPSC ಗೊಂದಲ:

ಕಳೆದ ಸೆಪ್ಟೆಂಬರ್ 10ರಂದು KPSC ಹೊರಡಿಸಿದ ಪ್ರಕಟಣೆಯು ಅಭ್ಯರ್ಥಿಗಳ ಮನಸ್ಸಿನಲ್ಲಿದ್ದ ಅನುಮಾನಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಪರೀಕ್ಷೆ ಮತ್ತು ಮೌಲ್ಯಮಾಪನ ಸಂಪೂರ್ಣವಾಗಿ ಮುಗಿದ ಮೇಲೆ, ನಿಯಮ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿಕೆ ನೀಡಿದೆ. ಫಲಿತಾಂಶ ಬಿಡುಗಡೆ ಮಾಡುವ ಮುನ್ನ ಈ ನಿಯಮ ಉಲ್ಲಂಘನೆಗಳು ಆಯೋಗದ ಕಣ್ಣಿಗೆ ಬೀಳಲಿಲ್ಲವೇ? ಫಲಿತಾಂಶದ ಹೊಸ್ತಿಲಲ್ಲಿ ಇಂತಹ ನೆಪಗಳನ್ನು ಏಕೆ ಒಡ್ಡಲಾಗುತ್ತಿದೆ? ಎಂದು ಅಭ್ಯರ್ಥಿಗಳು ಆಕ್ರೋಶದಿಂದ ಪ್ರಶ್ನಿಸಿದ್ದಾರೆ.

ಇಡೀ ನೇಮಕಾತಿ ಪ್ರಕ್ರಿಯೆಯು ಆಯೋಗದ ಪ್ರಮುಖ ಅಧಿಕಾರಿಗಳಾದ ಜ್ಞಾನೇಂದ್ರ ಹಾಗೂ ಶಿವಶಂಕರಪ್ಪ ಅವರ ಅವಧಿಯಲ್ಲಿಯೇ ನಡೆದಿರುವುದರಿಂದ, ಇದರ ಹಿಂದೆ ದೊಡ್ಡ ಮಟ್ಟದ ಪ್ರಭಾವಿ ಜಾಲ ಕಾರ್ಯಾಚರಿಸಿರಬಹುದು ಎಂಬ ಆತಂಕ ಪರೀಕ್ಷಾರ್ಥಿಗಳನ್ನು ಕಾಡುತ್ತಿದೆ.

ಅಭ್ಯರ್ಥಿಗಳ ಪ್ರಮುಖ ಬೇಡಿಕೆಗಳು:

ಸ್ವತಂತ್ರ ತನಿಖೆಗೆ ಆದೇಶ: AC-SAAD ನೇಮಕಾತಿಯ ಸಂಪೂರ್ಣ ಪ್ರಕ್ರಿಯೆಯ ಬಗ್ಗೆ ತಟಸ್ಥ ಮತ್ತು ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಯಾಗಬೇಕು.

ನೇಮಕಾತಿ ಮುಂದೂಡಿಕೆ: ತನಿಖಾ ವರದಿ ಬರುವವರೆಗೆ ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯನ್ನು ತಕ್ಷಣವೇ ತಡೆಹಿಡಿಯಬೇಕು.

ಸಾಕ್ಷ್ಯಗಳ ಸಂರಕ್ಷಣೆ: ಪರೀಕ್ಷೆಗೆ ಸಂಬಂಧಿಸಿದ ಉತ್ತರ ಪತ್ರಿಕೆಗಳು (OMR/Answer scripts), ಪರೀಕ್ಷಾ ಕೇಂದ್ರದ ಲಾಗ್‌ಗಳು (Logs) ಮತ್ತು ಡಿಜಿಟಲ್ ದಾಖಲೆಗಳನ್ನು ತಕ್ಷಣವೇ ಸಂರಕ್ಷಿಸಿಡಬೇಕು, ಇಲ್ಲವಾದಲ್ಲಿ ಸಾಕ್ಷ್ಯ ನಾಶವಾಗುವ ಸಾಧ್ಯತೆಯಿದೆ.

ರಾತ್ರಿ ಹಗಲೆನ್ನದೆ ವರ್ಷಗಟ್ಟಲೆ ಓದಿ ಪರೀಕ್ಷೆ ಬರೆಯುವ ಪ್ರಾಮಾಣಿಕ ಅಭ್ಯರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿರುವ KPSC ಧೋರಣೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಹೋರಾಟ ರೂಪಿಸುವುದಾಗಿ ಅಭ್ಯರ್ಥಿಗಳು ಎಚ್ಚರಿಸಿದ್ದಾರೆ.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES