ಏನಿದು ಕಸ್ತೂರಿರಂಗನ್ ವರದಿ? ಇದನ್ನು ಜನರು ವಿರೋಧಿಸುತ್ತಿರುವುದೇಕೆ?
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ 2013ರಲ್ಲಿ ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಕಾರಿ ಗುಂಪು (HLWG) ಈ ಸುದೀರ್ಘ ವರದಿಯನ್ನು ನೀಡಿತ್ತು.
ಪಶ್ಚಿಮ ಘಟ್ಟಗಳ ಪರಿಸರ ರಕ್ಷಣೆಯ ನೆಪದಲ್ಲಿ ಸಿದ್ಧಪಡಿಸಲಾಗಿರುವ ಕಸ್ತೂರಿರಂಗನ್ ವರದಿಯ ಅನುಷ್ಠಾನವನ್ನು ವಿರೋಧಿಸಿ ಕೊಡಗು ಜಿಲ್ಲೆಯಾದ್ಯಂತ ಆಕ್ರೋಶದ ಅಲೆ ಎದ್ದಿದೆ. ಕಸ್ತೂರಿರಂಗನ್ ವರದಿಯು ತಮ್ಮ ಪಾಲಿಗೆ ಮರಣಶಾಸನವಾಗಲಿದೆ ಎಂದು ಕಿಡಿಕಾರಿರುವ ಜಿಲ್ಲೆಯ ಕೃಷಿಕರು, ಯಾವುದೇ ಕಾರಣಕ್ಕೂ ಈ ವರದಿಯನ್ನು ಜಾರಿಗೊಳಿಸಬಾರದೆಂದು ಆಗ್ರಹಿಸಿ ಬೀದಿಗಿಳಿದು ಬೃಹತ್ ಪ್ರತಿಭಟನೆ ನಡೆಸಿದರು.
ರೈತರ ಉಗ್ರ ಹೋರಾಟದಿಂದಾಗಿ ಮಂಜಿನ ನಗರಿ ಎಂದೇ ಹೆಸರುವಾಸಿಯಾದ ಮಡಿಕೇರಿ ಇಡೀ ದಿನ ಕಾದು ಕಾವಲಿಯಂತಾಗಿತ್ತು. ಜಿಲ್ಲೆಯ ಮೂಲೆ ಮೂಲೆಯಿಂದ ಬಂದಿದ್ದ ಸಾವಿರಾರು ರೈತರು ಹಾಗೂ ಸ್ಥಳೀಯರು ನಡೆಸಿದ ಈ ಜನಾಕ್ರೋಶದ ಮೆರವಣಿಗೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೇರ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕಸ್ತೂರಿರಂಗನ್ ವರದಿಯ ಹಿನ್ನೆಲೆ ಹಾಗೂ ವಿವಾದ:
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ 2013ರಲ್ಲಿ ಡಾ. ಕೆ. ಕಸ್ತೂರಿರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯಕಾರಿ ಗುಂಪು (HLWG) ಈ ಸುದೀರ್ಘ ವರದಿಯನ್ನು ನೀಡಿತ್ತು. ಈ ಹಿಂದೆ ಪ್ರೊ. ಮಾಧವ ಗಾಡ್ಗೀಳ್ ಅವರು ನೀಡಿದ್ದ ವರದಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ, ಪರಿಸರ ಮತ್ತು ಸುಸ್ಥಿರ ಅಭಿವೃದ್ಧಿಯ ನಡುವೆ ಸಮತೋಲನ ಕಾಯ್ದುಕೊಳ್ಳಲು ಕಸ್ತೂರಿರಂಗನ್ ಸಮಿತಿಯನ್ನು ರಚಿಸಲಾಗಿತ್ತು.
ವಿವಾದಾತ್ಮಕ ಕಸ್ತೂರಿರಂಗನ್ ವರದಿ ಹೇಳುವುದೇನು?
ಪರಿಸರ ಸೂಕ್ಷ್ಮ ಪ್ರದೇಶ (ESA): ಪಶ್ಚಿಮ ಘಟ್ಟಗಳ ಒಟ್ಟು ವಿಸ್ತೀರ್ಣದಲ್ಲಿ ಶೇಕಡಾ 37% ರಷ್ಟು ಭಾಗವನ್ನು (ಸುಮಾರು 60,000 ಚದರ ಕಿಲೋಮೀಟರ್) ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಇದು ಕರ್ನಾಟಕ, ಕೇರಳ, ತಮಿಳುನಾಡು, ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿ 6 ರಾಜ್ಯಗಳಲ್ಲಿ ಹರಡಿದೆ.
ಚಟುವಟಿಕೆಗಳ ನಿಷೇಧ: ಈ ಪ್ರದೇಶಗಳಲ್ಲಿ ಗಣಿಗಾರಿಕೆ, ಮರಳುಗಾರಿಕೆ, ಕಲ್ಲು ಕ್ವಾರಿ, ಬೃಹತ್ ಉಷ್ಣವಿದ್ಯುತ್ ಯೋಜನೆಗಳು ಮತ್ತು ಮಾಲಿನ್ಯಕಾರಕ Red Category ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಶಿಫಾರಸು ಮಾಡಲಾಗಿದೆ.
ಸಂಸ್ಕೃತಿ ಭೂದೃಶ್ಯ : ಉಳಿದ 63% ಪ್ರದೇಶವನ್ನು ಸಂಸ್ಕೃತಿ ಭೂದೃಶ್ಯ ಎಂದು ವರ್ಗೀಕರಿಸಿ, ಮಾನವ ವಸಾಹತು, ತೋಟ ಹಾಗೂ ಕೃಷಿ ಭೂಮಿಗೆ ವಿನಾಯಿತಿ ನೀಡಲು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಕಸ್ತೂರಿರಂಗನ್ ವರದಿಯನ್ನು ತಯಾರಿಸಲು ಬಳಸಿರುವ ಉಪಗ್ರಹ ಆಧಾರಿತ ಮ್ಯಾಪಿಂಗ್ ವ್ಯವಸ್ಥೆ ತೀವ್ರ ದೋಷಪೂರಿತವಾಗಿದೆ ಎಂಬುದು ರೈತರ ಗಂಭೀರ ಆರೋಪ. ನೆಲದ ವಾಸ್ತವ ಸ್ಥಿತಿಯನ್ನು ಪರಿಶೀಲಿಸದೆ, ಉಪಗ್ರಹ ಚಿತ್ರಗಳನ್ನು ನೋಡಿ ಕೃಷಿ ಭೂಮಿ ಹಾಗೂ ಜನವಸತಿ ಪ್ರದೇಶಗಳನ್ನು 'ಪರಿಸರ ಸೂಕ್ಷ್ಮ ವಲಯ' ಎಂದು ಸೇರಿಸಲಾಗಿದೆ ಎಂಬುದು ಜನರ ಆಕ್ರೋಶಕ್ಕೆ ಮುಖ್ಯ ಕಾರಣ.
ಕೊಡಗಿನಲ್ಲಿ ಭುಗಿಲೆದ್ದ ಆಕ್ರೋಶ:
ಕೇಂದ್ರ ಸರ್ಕಾರವು ಕಸ್ತೂರಿರಂಗನ್ ಕರಡು ಅಧಿಸೂಚನೆಯನ್ನು ಮತ್ತೊಮ್ಮೆ ಹೊರಡಿಸುತ್ತಿದ್ದಂತೆಯೇ ಕೊಡಗಿನ ಜನರ ಆತಂಕ ಇಮ್ಮಡಿಗೊಂಡಿದೆ. ಕೊಡಗು ಜಿಲ್ಲೆಯ ಸುಮಾರು 53 ಪ್ರಮುಖ ಗ್ರಾಮಗಳು ಈ ವರದಿಯ ವ್ಯಾಪ್ತಿಗೆ ಒಳಪಡುತ್ತವೆ. ಒಂದು ವೇಳೆ ಈ ವರದಿ ಜಾರಿಯಾದರೆ, ಹಂತ ಹಂತವಾಗಿ ಕಾಡಂಚಿನ ಗ್ರಾಮಗಳ ಜನರನ್ನು ಮತ್ತು ರೈತರನ್ನು ಜಾಗದಿಂದ ಒಕ್ಕಲೆಬ್ಬಿಸಲಾಗುತ್ತದೆ, ಕೃಷಿ ಚಟುವಟಿಕೆಗಳಿಗೆ ನಿಷೇಧ ಹೇರಲಾಗುತ್ತದೆ ಹಾಗೂ ಪ್ರಾದೇಶಿಕ ಅಭಿವೃದ್ಧಿ ಸಂಪೂರ್ಣ ಸ್ತಬ್ಧವಾಗುತ್ತದೆ ಎಂಬ ಭೀತಿ ಜನರಲ್ಲಿದೆ.
ಇದರಿಂದಾಗಿ, ಪಕ್ಷಾತೀತವಾಗಿ ಒಂದಾದ ಕೊಡಗಿನ ರೈತರು ಹಾಗೂ ಸಾರ್ವಜನಿಕರು ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿ ಹೋರಾಟದ ಹಾದಿ ಹಿಡಿದಿದ್ದಾರೆ.
ಮಡಿಕೇರಿಯಲ್ಲಿ ಬೃಹತ್ ರಸ್ತೆ ತಡೆ - ಸ್ತಬ್ಧಗೊಂಡ ಹೆದ್ದಾರಿ:
ಮಡಿಕೇರಿಯ ಸುದರ್ಶನ ವೃತ್ತದಿಂದ ಆರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಹಸ್ರಾರು ಸಂಖ್ಯೆಯ ರೈತರು, ಮಹಿಳೆಯರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಭಾಗವಹಿಸಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು, ಕಸ್ತೂರಿರಂಗನ್ ವರದಿ ಜಾರಿಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದರು.
ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ರೈತರು ಟೋಲ್‌ಗೇಟ್ ವೃತ್ತದಲ್ಲಿ ರಸ್ತೆಯಲ್ಲೇ ಕುಳಿತು ರಸ್ತೆ ತಡೆ ನಡೆಸಿದರು. ಪರಿಣಾಮವಾಗಿ, ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನದವರೆಗೆ ರಾಷ್ಟ್ರೀಯ ಹೆದ್ದಾರಿ 275 ಸಂಪೂರ್ಣವಾಗಿ ಸ್ತಬ್ಧವಾಗಿತ್ತು. ಮೈಸೂರು, ಮಂಗಳೂರು ಹಾಗೂ ಹಾಸನ ಕಡೆಗೆ ಸಾಗುವ ನೂರಾರು ವಾಹನಗಳು ಗಂಟೆಗಟ್ಟಲೆ ಸಾಲಾಗಿ ನಿಂತು, ಪ್ರಯಾಣಿಕರು ಮತ್ತು ಪ್ರವಾಸಿಗರು ತೀವ್ರ ಪರದಾಡುವಂತಾಯಿತು.
ನಿಜವಾದ ಸಮಸ್ಯೆ ಎಲ್ಲಿದೆ?
ಪರಿಸರ ರಕ್ಷಣೆಯ ಉದ್ದೇಶದಿಂದ ರೂಪುಗೊಂಡ ವರದಿಯೊಂದು ಇಂದು ಕೃಷಿಕರ ಜೀವನೋಪಾಯಕ್ಕೆ ಕೊಳ್ಳಿ ಇಡುತ್ತಿದೆ ಎಂಬ ಭೀತಿ ಸಾರ್ವಜನಿಕರಲ್ಲಿದೆ. ವರದಿಯಲ್ಲೇನಾದರೂ ಗೊಂದಲಗಳಿವೆಯೇ ಅಥವಾ ವರದಿಯ ನಿಜವಾದ ಸ್ವರೂಪವನ್ನು ಜನರಿಗೆ ತಿಳಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆಯೇ ಎಂಬ ಪ್ರಶ್ನೆ ಮೂಡಿದೆ.
ಕರ್ನಾಟಕ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಈ ವರದಿಯನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ವರದಿಯಲ್ಲಿ ಮಾಡಲಾಗಿರುವ ಉಪಗ್ರಹ ಆಧಾರಿತ ಮ್ಯಾಪಿಂಗ್ ವ್ಯವಸ್ಥೆಯು ದೋಷಪೂರಿತವಾಗಿದೆ ಮತ್ತು ವಾಸ್ತವ ಸ್ಥಿತಿಗೆ ದೂರವಾಗಿದೆ ಎಂಬುದು ಸ್ಥಳೀಯರ ವಾದವಾಗಿದೆ. ಈ ವರದಿ ಜಾರಿಯಾದರೆ ರೈತರು ತಮ್ಮ ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸಲ್ಪಡಬಹುದು, ಜೀವನೋಪಾಯಕ್ಕೆ ಧಕ್ಕೆಯಾಗಬಹುದು ಮತ್ತು ಪ್ರಾದೇಶಿಕ ಅಭಿವೃದ್ಧಿ ಕುಂಠಿತಗೊಳ್ಳಬಹುದು ಎಂಬ ಆತಂಕ ಸ್ಥಳೀಯ ಜನರಲ್ಲಿ ಮನೆಮಾಡಿದೆ.
ಸ್ಥಳೀಯರ ಹಿತಾಸಕ್ತಿ ಮತ್ತು ಪರಿಸರ ಸಂರಕ್ಷಣೆಯ ನಡುವೆ ಉಂಟಾಗಿರುವ ಈ ಸಂಘರ್ಷವು ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಕೊಡಗಿನ ಕೃಷಿಕರು ಎತ್ತಿರುವ ಈ ನ್ಯಾಯಯುತ ಹೋರಾಟದ ಧ್ವನಿಗೆ ಸರ್ಕಾರ ಯಾವ ರೀತಿ ಸ್ಪಂದಿಸಲಿದೆ ಮತ್ತು ಈ ವಿವಾದಿತ ವರದಿಗೆ ಯಾವ ಅಂತಿಮ ರೂಪುರೇಷೆ ನೀಡಲಿದೆ ಎಂಬುದನ್ನು ಕಾದು ನೋಡಬೇಕಿದೆ.