SOCIAL MEDIA

Newsletter

PARTNER SITES
Select Language Select State

ಏನಿದು ಕ್ಲಸ್ಟರ್ ಕಿಚನ್‌ ಸೆಂಟರ್: ಬಿಸಿಯೂಟ ನೌಕರರಿಗೆ ಇದರಿಂದಾಗುವ ಸಮಸ್ಯೆ ಏನು?

ಶಾಲೆಗಳಲ್ಲಿ ಕ್ಲಸ್ಟರ್‌ ಕಿಚನ್‌ ವ್ಯವಸ್ಥೆ ಜಾರಿಗೆ ತರುವ ಪ್ರಸ್ತಾವನೆ ಕೈ ಬಿಡಬೇಕು ಹಾಗೂ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಕರ್ನಾಟಕ ಅಕ್ಷರ ದಾಸೋಹ ಬಿಸಿಯೂಟ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಬಿಸಿಯೂಟ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ ಹಾಗಾದ್ರೆ ಕ್ಲಸ್ಟರ್ ಕಿಚನ್ ಸೆಂಟರ್ ಎಂದ್ರೆ ಏನು ಗೊತ್ತಾ?

Written By Yashaswini V
Published: Nov 17, 2026, 11:55 IST | Updated: Nov 17, 2026, 11:58 IST
Join

ಕರ್ನಾಟಕ ಸರ್ಕಾರ ಸರ್ಕಾರಿ ಶಾಲೆಗಳು, ಅನುದಾನಿತ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆಯಡಿ ಪ್ರತಿ ದಿನ ಮಧ್ಯಾಹ್ನ ವಿದ್ಯಾರ್ಥಿಗಳಿಗೆ ನೀಡಲಾಗುವ ಬಿಸಿಯೂಟ ಯೋಜನೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ. ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಇದೀಗ ʼಕಸ್ಟರ್‌ ಕಿಚನ್‌ ಸೆಂಟರ್‌ʼಗೆ ಮಾರ್ಪಡಿಸುವ ಸರ್ಕಾರದ ಯೋಜನೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಅಡುಗೆ ಮಾಡಿ ಬಡಿಸುತ್ತಿರುವ ಬಿಸಿಯೂಟ ನೌಕರರು ಈ ಪ್ರಸ್ತಾವನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾವಿರಾರು ಬಿಸಿಯೂಟ ನೌಕರರ ಅನ್ನ ಕಸಿಯುವ ʼಕ್ಲಸ್ಟರ್ ಕಿಚನ್ ಸೆಂಟರ್ʼ ಪ್ರಸ್ತಾವನೆಯನ್ನು ಕೂಡಲೇ ಕೈ ಬಿಡಬೇಕು ಎಂದು ಆಗ್ರಹಿಸಿ ಬಿಸಿಯೂಟ ತಯಾರಿಕ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಅಷ್ಟಕ್ಕೂ, ಏನಿದು ಕಸ್ಟರ್‌ ಕಿಚನ್‌ ಸೆಂಟರ್‌? ಇದರ ಅನುಕೂಲಗಳೇನು? ಅನಾನುಕೂಲಗಳೇನು? ಎಂಬ ಮಹತ್ವದ ಮಾಹಿತಿ ಇಲ್ಲಿದೆ.

ಕ್ಲಸ್ಟರ್ ಕಿಚನ್ ಸೆಂಟರ್ ಎಂದರೇನು?
ಪ್ರತಿ ಶಾಲೆಯಲ್ಲೂ ಪ್ರತ್ಯೇಕವಾಗಿ ಬಿಸಿಯೂಟ ತಯಾರಿಸುವ ಬದಲು, ಸುಮಾರು 10 ರಿಂದ 15 ಶಾಲೆಗಳಿಗೆ ಒಂದೇ ಕೇಂದ್ರೀಕೃತ ಸ್ಥಳದಲ್ಲಿ ದೊಡ್ಡ ಪ್ರಮಾಣದಲ್ಲಿ ಬಿಸಿಯೂಟ ತಯಾರಿಸಿ ವಾಹನಗಳ ಮೂಲಕ ವಿವಿಧ ಶಾಲೆಗಳಿಗೆ ಪೂರೈಸುವ ವ್ಯವಸ್ಥೆಯೇ ಕ್ಲಸ್ಟರ್ ಕಿಚನ್ ಸೆಂಟರ್ ಆಗಿದೆ.

ಪ್ರಸ್ತುತ ಕರ್ನಾಟಕದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಆಯಾ ಶಾಲೆಯ ಆವರಣದಲ್ಲೇ ಅಡುಗೆ ಸಿಬ್ಬಂದಿ ಪ್ರತಿದಿನ ಬಿಸಿಯೂಟ ತಯಾರಿಸಿ ಮಕ್ಕಳಿಗೆ ಬಡಿಸುತ್ತಾರೆ. ಆದರೆ, ಬಿಸಿಯೂಟದ ಲೆಕ್ಕಪತ್ರ ಮತ್ತು ನಿರ್ವಹಣೆಯಿಂದ ತಮ್ಮ ಬೋಧನಾ ಕಾರ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಶಿಕ್ಷಕರ ಸಂಘಗಳು ದೂರಿದ್ದವು. ಈ ಹಿನ್ನೆಲೆಯಲ್ಲಿ ಪಿ.ಎಂ. ಪೋಷಣ್ (PM POSHAN) ಯೋಜನೆಯ ಜಂಟಿ ನಿರ್ದೇಶಕರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಶಿಕ್ಷಣಾಧಿಕಾರಿಗಳಿಗೆ ಪತ್ರ ಬರೆದು, ಕೇಂದ್ರೀಕೃತ ಅಡುಗೆ ಮನೆ ಸ್ಥಾಪಿಸುವ ಸಾಧಕ-ಬಾಧಕಗಳ ಕುರಿತು ಅಭಿಪ್ರಾಯ ಕೇಳಿದ್ದಾರೆ. ಈ ವ್ಯವಸ್ಥೆಯಲ್ಲಿ ಒಂದು ನಿರ್ದಿಷ್ಟ ವ್ಯಾಪ್ತಿಯ 10-15 ಶಾಲೆಗಳಿಗೆ ಒಂದೇ ಕಡೆ ಆಹಾರ ತಯಾರಿಸಿ ಸರಬರಾಜು ಮಾಡಲಾಗುತ್ತದೆ ಎನ್ನಲಾಗಿದೆ.

ಈಗಾಗಲೇ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸಾವಿರಾರು ಮಹಿಳೆಯರು ಬಿಸಿಯೂಟ ತಯಾರಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ವಿಧವೆಯರು, ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಹಿಳೆಯರೂ ಇದ್ದಾರೆ. ಕ್ಲಸ್ಟರ್‌ ಕಿಚನ್‌ ಸೆಂಟರ್ ವ್ಯವಸ್ಥೆ ಜಾರಿಯಾದರೆ ಶಾಲೆಗಳಲ್ಲಿ ಅಡುಗೆ ಮಾಡುವ ಜವಾಬ್ದಾರಿ ಬೇರೆ ಸಂಸ್ಥೆಗಳಿಗೆ ಅಥವಾ ಏಜೆನ್ಸಿಗಳಿಗೆ ವರ್ಗಾವಣೆಯಾಗಬಹುದು ಎಂಬ ಆತಂಕ ನೌಕರರಲ್ಲಿದೆ. ಇದರಿಂದ ಎಲ್ಲಿ ಕೆಲಸ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಹುದು ಎಂಬುದು ಅವರ ಆಕ್ಷೇಪ.

ಕ್ಲಸ್ಟರ್‌ ಕಿಚನ್‌ನಿಂದ ಅನುಕೂಲವೇನು?
ಕ್ಲಸ್ಟರ್‌ ಕಿಚನ್‌ ಸೆಂಟರ್‌ ವ್ಯವಸ್ಥೆ ಜಾರಿಯಾದರೆ ಹಲವು ಅನುಕೂಲಗಳು ಸಿಗಬಹುದು ಎಂಬ ಅಭಿಪ್ರಾಯವಿದೆ. ‌
* ಮುಖ್ಯವಾಗಿ ಸರ್ಕಾರಿ ಶಾಲೆಗಳ ಶಿಕ್ಷಕರ ಮೇಲಿರುವ ಹೆಚ್ಚುವರಿ ಕೆಲಸದ ಒತ್ತಡ ಕಡಿಮೆಯಾಗಬಹುದು. 
* ಪ್ರಸ್ತುತ ಶಿಕ್ಷಕರು ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಬಿಸಿಯೂಟದ ಸಾಮಾಗ್ರಿಗಳ ನಿರ್ವಹಣೆ, ಆಹಾರ ತಯಾರಿಕೆ ಹಾಗೂ ವಿತರಣೆಯ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂ ನಿರ್ವಹಿಸಬೇಕಾಗಿದೆ. 
* ಕ್ಲಸ್ಟರ್‌ ಕಿಚನ್‌ ವ್ಯವಸ್ಥೆಯಲ್ಲಿ ಒಂದೇ ಕೇಂದ್ರದಲ್ಲಿ ಹಲವು ಶಾಲೆಗಳಿಗೆ ಆಹಾರ ತಯಾರಿಸುವುದರಿಂದ ಶಿಕ್ಷಕರು ಬೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗಬಹುದು. 
* ಇದಲ್ಲದೆ, ದೊಡ್ಡ ಪ್ರಮಾಣದಲ್ಲಿ ಆಹಾರ ಸಾಮಾಗ್ರಿಗಳನ್ನು ಖರೀದಿಸುವುದರಿಂದ ವೆಚ್ಚ ಕಡಿಮಡಯಾಗುವ ಸಾಧ್ಯತೆ ಇದೆ. 
* ಒಂದೇ ಅಡುಗೆ ಕೇಂದ್ರದಲ್ಲಿ ಆಹಾರ ತಯಾರಿಸುವುದರಿಂದ ಸ್ವಚ್ಛತೆ, ಗುಣಮಟ್ಟ ಮತ್ತು ಪೌಷ್ಟಿಕಂಶದ ಬಗ್ಗೆ ಏಕರೂಪದ ನಿಯಮಗಳನ್ನು ಜಾರಿಗೆ ತರಬಹುದು. 
* ಆಹಾರ ತಯಾರಿಕೆಗೆ ಆಧುನಿಕ ಉಪಕರಣಗಳನ್ನು ಬಳಸುವುದರಿಂದ ಅಡುಗೆ ಪ್ರಕ್ರಿಯೆಯೂ ಸುಲಭವಾಗಬಹುದು.

ಕ್ಲಸ್ಟರ್‌ ಕಿಚನ್‌ನಿಂದ ಅನಾನುಕೂಲವೇನು?
ಪ್ರಸ್ತುತ ಪ್ರತಿ ಸರ್ಕಾರಿ ಮತ್ತು ಮನುದಾನಿತ ಶಾಲೆಗಳಲ್ಲಿ ಸ್ಥಳೀಯ ಮಹಿಳೆಯರು ಅಡುಗೆ ತಯಾರಕರಾಗಿ ಮತ್ತು ಸಹಾಯಕರಾಗಿ ಕೆಲಸ ಮಾಡುತ್ತಿದ್ದಾರೆ. ಒಂದೇ ಕಡೆ ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸಿದರೆ ಕಡಿಮೆ ಸಿಬ್ಬಂದಿ ಸಾಕಾಗುತ್ತದೆ. ಆದರೆ,  ಇದರಿಂದ ಬಿಸಿಯೂಟ ತಯಾರಿಕೆಯನ್ನೇ ಅವಲಂಬಿಸಿರುವ ಸಾವಿರಾರು ನೌಕರರು ಕೆಲಸ ಕಳೆದುಕೊಳ್ಳುವ ಅಪಾಯವಿದೆ.

ಕೇಂದ್ರೀಕೃತ ಅಡುಗೆ ಮನೆ ವ್ಯವಸ್ಥೆ ಜಾರಿಯಾದರೆ, ಮುಂದಿನ ದಿನಗಳಲ್ಲಿ ಸರ್ಕಾರವು ಬಿಸಿಯೂಟದ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ಅಥವಾ ಎನ್‌ಜಿಒ (NGO) ಗಳಿಗೆ ವಹಿಸಬಹುದು ಎಂಬ ಆತಂಕ ನೌಕರರಲ್ಲಿದೆ. ಹೀಗಾದಲ್ಲಿ ಸರ್ಕಾರಿ ಯೋಜನೆಯಡಿ ಸಿಗುತ್ತಿರುವ ಅಲ್ಪ ಸ್ವಲ್ಪ ಸೌಲಭ್ಯಗಳೂ ಕೈತಪ್ಪುವ ಆತಂಕ ಬಿಸಿಯೂಟ ತಯಾರಿಸುವ ನೌಕರರದ್ದಾಗಿದೆ.

ಈಗಾಗಲೇ ಸರ್ಕಾರವು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪ್ರತಿ ಶಾಲೆಯಲ್ಲಿ ಅಡುಗೆ ಕೋಣೆ, ಗ್ಯಾಸ್ ಮತ್ತು ಪಾತ್ರೆಗಳ ವ್ಯವಸ್ಥೆ ಮಾಡಿದೆ. ಕ್ಲಸ್ಟರ್ ಕಿಚನ್ ಬಂದರೆ ಈ ವ್ಯವಸ್ಥೆ ವ್ಯರ್ಥವಾಗುವುದಲ್ಲದೆ, ಅಲ್ಲಿ ದುಡಿಯುತ್ತಿರುವವರ ಅನುಭವಕ್ಕೂ ಬೆಲೆ ಇಲ್ಲದಂತಾಗುತ್ತದೆ.

ಬೆಂಗಳೂರು, ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಕೇಂದ್ರೀಕೃತ ಅಡುಗೆ ಮನೆಗಳ ಮೂಲಕ ಇಸ್ಕಾನ್‌ ಫೌಂಡೇಶನ್‌ ಮತ್ತು ಅದಮ್ಯ ಚೇತನ ಸೇರಿದಂತೆ ಸುಮಾರು 68 ಎನ್‌ಜಿಒಗಳು ಸಾವಿರಾರು ಶಾಲೆಗಳಿಗೆ ಬಿಸಿಯೂಟ ಪೂರೈಸುತ್ತವೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಇದೇ ಮಾದರಿಯಲ್ಲಿ ಕ್ಲಸ್ಟರ್ ಕಿಚನ್‌ಗಳನ್ನು ಸ್ಥಾಪಿಸಿ, ಅವುಗಳ ನಿರ್ವಹಣೆಯನ್ನು ಸ್ವಸಹಾಯ ಸಂಘಗಳು, ಸ್ತ್ರೀ ಶಕ್ತಿ ಸಂಘಗಳು ಅಥವಾ ಇತರ ಸಂಘ-ಸಂಸ್ಥೆಗಳಿಗೆ ನೀಡುತ್ತವೆ ಎನ್ನಲಾಗಿದೆ.

ಒಟ್ಟಾರೆಯಾಗಿ, ಕ್ಲಸ್ಟರ್ ಕಿಚನ್ ಸೆಂಟರ್ ಪ್ರಸ್ತಾವನೆಯು ಶಿಕ್ಷಕರ ಮೇಲಿನ ಬಿಸಿಯೂಟ ನಿರ್ವಹಣೆಯ ಹೊರೆಯನ್ನು ತಗ್ಗಿಸುವ ಆಡಳಿತಾತ್ಮಕ ಉದ್ದೇಶವನ್ನು ಹೊಂದಿದ್ದರೂ, ಇದು ಗ್ರಾಮೀಣ ಭಾಗದ ಸಾವಿರಾರು ಮಹಿಳಾ ಬಿಸಿಯೂಟ ನೌಕರರ ಉದ್ಯೋಗ ಭದ್ರತೆ ಮತ್ತು ಜೀವನೋಪಾಯಕ್ಕೆ ನೇರ ಸವಾಲಾಗಿ ಪರಿಣಮಿಸಿದೆ. ಕೇಂದ್ರೀಕೃತ ಅಡುಗೆ ವ್ಯವಸ್ಥೆಯಿಂದ ಉದ್ಯೋಗ ನಷ್ಟವಾಗುವುದರ ಜೊತೆಗೆ ಯೋಜನೆಯು ಖಾಸಗಿಯವರ ಪಾಲಾಗಬಹುದು ಎಂಬ ಆತಂಕ ನೌಕರರ ಸಂಘಟನೆಗಳಲ್ಲಿದೆ. ಹೀಗಾಗಿ, ಮಕ್ಕಳಿಗೆ ಗುಣಮಟ್ಟದ ಬಿಸಿಯೂಟ ಪೂರೈಕೆಯಾಗುವ ಜೊತೆಗೆ ಶಿಕ್ಷಕರ ಬೋಧನಾ ಕಾರ್ಯಕ್ಕೂ ಅಡ್ಡಿಯಾಗದಂತೆ, ಮತ್ತು ಹಾಲಿ ದುಡಿಯುತ್ತಿರುವ ಬಿಸಿಯೂಟ ಸಿಬ್ಬಂದಿಯ ಉದ್ಯೋಗಕ್ಕೂ ಯಾವುದೇ ಧಕ್ಕೆಯಾಗದಂತೆ ಸರ್ಕಾರವು ಎಲ್ಲಾ ಪಾಲುದಾರರೊಂದಿಗೆ ಚರ್ಚಿಸಿ ಸಮತೋಲಿತ ನಿರ್ಧಾರ ಕೈಗೊಳ್ಳುವುದು ಅತ್ಯಗತ್ಯವಾಗಿದೆ.
 

Add Zee News as a Preferred Source
TAGS:

About the Author

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ತಮ್ಮ ಬರವಣಿಗೆಯನ್ನು ಓದುಗರೊಂದಿಗೆ ಸಂಪರ್ಕ ಸಾಧಿಸುವ ಮಾಧ್ಯಮವೆಂದು ಪರಿಗಣಿಸುವ ಯಶಸ್ವಿನಿ ವಿ ಅವರು ವ್ಯವಹಾರ, ವೈಯಕ್ತಿಕ ಹಣಕಾಸು, ಕೇಂದ್ರ ಬಜೆಟ್, ರಾಜ್ಯ ಬಜೆಟ್, ಕೇಂದ್ರ ಸರ್ಕಾರಿ ನೌಕರರು, ವೇತನ ಆಯೋಗಗಳು, ಸರ್ಕಾರಿ ನೀತಿಗಳು, ಪಿಂಚಣಿ ಯೋಜನೆಗಳು, ಪಿಂಚಣಿದಾರರು, ಆದಾಯ ತೆರಿಗೆ, ಬ್ಯಾಂಕಿಂಗ್, ಆರ್ಥಿಕತೆ, ಕೃಷಿ ಮತ್ತು ಅಂತರರಾಷ್ಟ್ರೀಯ ವ್ಯವಹಾರಗಳು ಸೇರಿದಂತೆ ವ್ಯಾಪಕ ಶ್ರೇಣಿಯ ವಿಷಯಗಳ ಕುರಿತು ಬರೆಯುವಲ್ಲಿ ಪರಿಣತಿ ಹೊಂದಿದ್ದಾರೆ ಮತ್ತು ರಾಜಕೀಯ ಬೆಳವಣಿಗೆಗಳು, ಆರೋಗ್ಯ, ಜೀವನಶೈಲಿ, ಆಧ್ಯಾತ್ಮಿಕ, ತಂತ್ರಜ್ಞಾನ ಸಂಬಂಧಿತ ಉತ್ತಮ ಮೌಲ್ಯಯುತ ಲೇಖನಗಳನ್ನು ಬರೆಯುವ ಮೂಲಕ ಗುರುತಿಸಿಕೊಂಡಿದ್ದಾರೆ. 
Read More

ZEENEWS TRENDING STORIES