SOCIAL MEDIA

Newsletter

PARTNER SITES
Select Language Select State

ಭದ್ರಾ ನೀರು ಹರಿಸಿ ರೈತರ ಬದುಕು ಸುಭದ್ರ ಮಾಡಿದ್ದೇವೆ: ಸಿಎಂ ಡಿ.ಕೆ. ಶಿವಕುಮಾರ್

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆದರೆ ಕೇವಲ ಯೋಜನೆಗಳಿಗೆ ಸೀಮಿತವಾಗದೆ, ರೈತರಿಗಾಗಿ ಭೂಮಿ ಹಾಗೂ ನೀರಿನ ಗ್ಯಾರಂಟಿಯನ್ನೂ ಸಹ ನೀಡುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

Reported By Manjunath Naragund Written By Manjunath Naragund
Published: Sep 24, 2026, 11:25 PM IST | Updated: Sep 24, 2026, 11:28 PM IST
Image Credit: D K Shivakumar
Join
 
"ಭದ್ರಾ ನದಿಯ ನೀರನ್ನು ಹರಿಸಿ ಈ ಭಾಗದ ರೈತರ ಬದುಕನ್ನು ಸುಭದ್ರಗೊಳಿಸಿದ್ದೇವೆ. ಚಿತ್ರದುರ್ಗದ ಮಡಿಲಿಗೆ ಭದ್ರಾ ನೀರು ಹರಿಸುವ ಮೂಲಕ ದಶಕಗಳ, ಬರೋಬ್ಬರಿ 60 ವರ್ಷಗಳ ಕನಸನ್ನು ನನಸು ಮಾಡಲಾಗಿದೆ," ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.
 
ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಪಕ್ಕದ ಮೈದಾನದಲ್ಲಿ ಗುರುವಾರ ಆಯೋಜಿಸಲಾಗಿದ್ದ ಬೃಹತ್ ರೈತರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಈ ವೇಳೆ ವಿರೋಧ ಪಕ್ಷಗಳಾದ ಬಿಜೆಪಿ ವಿರುದ್ಧ ತೀವ್ರ ಪ್ರಹಾರ ನಡೆಸಿದ ಅವರು, ರಾಜ್ಯಕ್ಕೆ ಕಾಂಗ್ರೆಸ್ ಸರ್ಕಾರದ ಕೊಡುಗೆಗಳನ್ನು ಪ್ರಸ್ತಾಪಿಸಿದರು.
 
ಪಂಚ ಗ್ಯಾರಂಟಿ ಜೊತೆಗೆ ಭೂಮಿ-ನೀರಿನ ಗ್ಯಾರಂಟಿ
 
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದೆ. ಆದರೆ ಕೇವಲ ಯೋಜನೆಗಳಿಗೆ ಸೀಮಿತವಾಗದೆ, ರೈತರಿಗಾಗಿ ಭೂಮಿ ಹಾಗೂ ನೀರಿನ ಗ್ಯಾರಂಟಿಯನ್ನೂ ಸಹ ನೀಡುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು. ಭೀಕರ ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಬಿಜೆಪಿಯವರಿಗೆ ಯಾವುದೇ ಆಸಕ್ತಿ ಇಲ್ಲ, ಅವರು ಕೇವಲ ನೀಚ ರಾಜಕಾರಣಕ್ಕಷ್ಟೇ ಸೀಮಿತವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಬೊಮ್ಮಾಯಿ, ಗೋವಿಂದ ಕಾರಜೋಳ, ಆರ್. ಅಶೋಕ್ ಹಾಗೂ ಬಿ.ವೈ. ವಿಜಯೇಂದ್ರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಡಿ.ಕೆ. ಶಿವಕುಮಾರ್, "ಕೇಂದ್ರ ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ ಹಾಗೂ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಇದ್ದಾಗ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿ 5400 ಕೋಟಿ ರೂಪಾಯಿ ಘೋಷಣೆ ಮಾಡಿದ್ದರು. ಆದರೆ ಬಿಜೆಪಿ ನಾಯಕರಿಂದ ಕೇಂದ್ರದಿಂದ ಒಂದೇ ಒಂದು ರೂಪಾಯಿ ಅನುದಾನ ತರಲು ಸಾಧ್ಯವಾಗಲಿಲ್ಲ. ನುಡಿದಂತೆ ನಡೆಯದ ಬಿಜೆಪಿ ನಾಯಕರಿಗೆ ಜನಪ್ರತಿನಿಧಿಗಳೆಂದು ಹೇಳಿಕೊಳ್ಳುವ ಹಕ್ಕಿಲ್ಲ," ಎಂದು ವಾಗ್ದಾಳಿ ನಡೆಸಿದರು.

ಡಿ. ಸುಧಾಕರ್ ಸ್ಮರಣೆ: ಯೋಜನೆಗೆ ಹೆಸರು ಇಡಲು ಮನವಿ
 
ಅಗಲಿದ ನಾಯಕ ಡಿ. ಸುಧಾಕರ್ ಅವರನ್ನು ನೆನೆದ ಸಚಿವರು, "ನನ್ನ ಆತ್ಮೀಯ ಮಿತ್ರ ಸುಧಾಕರ್ ಇಂದು ನಮ್ಮ ಜೊತೆಗಿಲ್ಲ. ಅವರ ಕನಸನ್ನು ನನಸು ಮಾಡುವುದು ನಮ್ಮ ಕರ್ತವ್ಯ. ಭದ್ರಾ ಯೋಜನೆಯ ಒಂದು ಭಾಗಕ್ಕೆ ಸುಧಾಕರ್ ಅವರ ಹೆಸರು ಇಡಬೇಕೆಂಬ ಮನವಿ ಹಾಗೂ ಬೇಡಿಕೆ ನಮ್ಮ ಮುಂದಿದೆ," ಎಂದರು. ಅಲ್ಲದೆ, ರೈತರ ಬೆಳೆಗಳಿಗೆ ಉತ್ತೇಜನ ನೀಡಲು ಹಾಗೂ ಸಣ್ಣ ರೈತರ ಬದುಕಿಗಾಗಿ 'ತೇಗದ ಸಿರಿ', 'ಉಳುಮೆ ಯೋಜನೆ' ಹಾಗೂ 'ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ'ಗಳನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.
 
"ನಮಗೆ ಬಂಗಾರದ ರಥಕ್ಕಿಂತ ರೈತರ ಎತ್ತಿನ ಬಂಡಿಯೇ ಸತ್ಯವಾದ ರಥ. ರೈತರು ಕೇವಲ ಬೀಜ ಬಿತ್ತುವುದಿಲ್ಲ, ಬದಲಿಗೆ ನಾಡಿನ ಭವಿಷ್ಯವನ್ನೇ ಬೆಳೆಸುತ್ತಾರೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲು ವರ್ಷಕ್ಕೆ 24,000 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ರೈತ ನಕ್ಕರೆ ಇಡೀ ನಾಡು ನಗುತ್ತದೆ. ಅಧಿಕಾರ ನಶ್ವರ, ಸಾಧನೆಗಳು ಅಜರಾಮರ," ಎಂದು ಮಾರ್ಮಿಕವಾಗಿ ಹೇಳಿದರು.

ಈ ಸಮಾರಂಭದಲ್ಲಿ ಹಲವಾರು ಮಠಾಧೀಶರು, ಕಾಂಗ್ರೆಸ್ ನಾಯಕರು, ಜನಪ್ರತಿನಿಧಿಗಳು ಹಾಗೂ ಸಾವಿರಾರು ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದರು.
Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES