SOCIAL MEDIA

Newsletter

PARTNER SITES
Select Language Select State

ಕರ್ನಾಟಕದಲ್ಲಿ ಉ*ಗ್ರಜಾಲದ ಶಂಕೆ..! ಈ ಮೂವರು ಗಣ್ಯ ನಾಯಕರೇ ಟಾರ್ಗೆಟ್‌?

ಕರ್ನಾಟಕದಲ್ಲಿ ಇತ್ತೀಚಿನ ಬೆಳವಣಿಗೆಗಳು ತೀವ್ರ ಆತಂಕಕ್ಕೆ ಕಾರಣವಾಗಿವೆ. ಹೊರರಾಜ್ಯಗಳಿಂದ ಬಂದ ಯುವಕರನ್ನು ಟಾರ್ಗೆಟ್ ಮಾಡಿ, ಸಾಮಾಜಿಕ ಜಾಲತಾಣಗಳು ಹಾಗೂ ಎನ್ಕ್ರಿಪ್ಟೆಡ್ ಆ್ಯಪ್‌ಗಳ ಮೂಲಕ ಉಗ್ರ ಚಟುವಟಿಕೆಗಳಿಗೆ ಸೆಳೆಯಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿ ತನಿಖೆಯಿಂದ ಹೊರಬಿದ್ದಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ..

Reported By Krishna NK Written By Krishna NK
Published: Sep 27, 2026, 09:13 PM IST | Updated: Sep 27, 2026, 09:18 PM IST
Image Credit: Kannada today news
Join

ಬೆಂಗಳೂರು : ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕದಲ್ಲಿ ಉಗ್ರರು.. ಇದೇ ಈಗ ರಾಜ್ಯದ ಜನರಲ್ಲಿ ಆತಂಕ ಮೂಡಿಸಿರುವ ಪ್ರಶ್ನೆ.. ಹೊರರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ನೆಲೆಸುವ ಯುವಕರನ್ನೇ ಟಾರ್ಗೆಟ್ ಮಾಡಿ, ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಚಟುವಟಿಕೆಗಳಿಗೆ ಸೆಳೆಯಲಾಗ್ತಿದ್ಯಾ..? ಬೆಂಗಳೂರಿನಿಂದ ಕರಾವಳಿ, ಉತ್ತರ ಕರ್ನಾಟಕದವರೆಗೆ ಸ್ಲೀಪರ್ ಸೆಲ್‌ಗಳ ಜಾಲ ವಿಸ್ತರಿಸಿರುವ ಶಂಕೆ ವ್ಯಕ್ತವಾಗಿದೆ.. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರ ಹಾಗೂ ಹಾಸನದಲ್ಲಿ ಟೆಲಿಗ್ರಾಂ ಮೂಲಕ ಉಗ್ರ ಚಟುವಟಿಕೆಗಳ ಬಗ್ಗೆ ಚರ್ಚೆ ನಡೆಸಿದ ಆರೋಪದಲ್ಲಿ ಇಬ್ಬರ ಬಂಧನವಾಗಿದೆ.. ಇತ್ತ ಹಿಂದೆ ಬೆಂಗಳೂರಿನಲ್ಲಿ ಅಲ್-ಖೈದಾ ಹಾಗೂ ಐಸಿಸ್ ಸಂಪರ್ಕದ ಪ್ರಕರಣಗಳಲ್ಲೂ ಬಂಧನ, ತನಿಖೆ ಮತ್ತು ಶಿಕ್ಷೆಗಳು ಆಗಿವೆ.. ಹಾಗಾದ್ರೆ ಕರ್ನಾಟಕದಲ್ಲಿ ನಿಜಕ್ಕೂ ಹೇಗೆ ವಿಸ್ತರಿಸ್ತಿದೆ ಈ ಉಗ್ರಜಾಲ..? ಯಾರು ಈ ಶಂಕಿತರು..? ಎಲ್ಲೆಲ್ಲಿ ಸ್ಲೀಪರ್ ಸೆಲ್‌ಗಳ ಅನುಮಾನವಿದೆ..? ಸಂಪೂರ್ಣ ಮಾಹಿತಿ ಇಲ್ಲಿದೆ..

ಹೌದು.. ಕರ್ನಾಟಕದಲ್ಲಿ ಉಗ್ರಜಾಲ ವಿಸ್ತರಣೆಯಾಗುತ್ತಿರುವ ಬಗ್ಗೆ ತನಿಖಾ ಸಂಸ್ಥೆಗಳು ಅನುಮಾನ ವ್ಯಕ್ತಪಡಿಸಿವೆ.. ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸ್ಲೀಪರ್ ಸೆಲ್‌ಗಳು ಇರುವ ಸಾಧ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ.. ಕೇಂದ್ರ ಹಾಗೂ ರಾಜ್ಯ ಗುಪ್ತಚರ ಸಂಸ್ಥೆಗಳು ಬೆಂಗಳೂರಿನಲ್ಲಿ ಗುರುತಿಸಿರುವ 50ಕ್ಕೂ ಹೆಚ್ಚು ಶಂಕಿತ ಸ್ಲೀಪರ್ ಸೆಲ್‌ಗಳ ಪೈಕಿ ಹಲವು ಘಟಕಗಳಿಗೆ ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ಉತ್ತರ ಮತ್ತು ಪೂರ್ವ ಭಾರತದ ಯುವಕರು ಸೇರಿಕೊಂಡು ಕರ್ನಾಟಕಕ್ಕೆ ಬಂದು ಅಡಗಿರುವ ಶಂಕೆ ಇದೆ ಎಂದು ವಿಜಯವಾಣಿ ವರದಿ ಮಾಡಿದೆ.. ಬೆಂಗಳೂರನ್ನೇ ಸಂಪರ್ಕ ಕೇಂದ್ರವನ್ನಾಗಿ ಬಳಸಿಕೊಂಡು, ಬಳಿಕ ಕರಾವಳಿ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಗೆ ಯುವಕರನ್ನು ಸ್ಥಳಾಂತರಿಸುವ ಸಾಧ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿರುವ ಪ್ರಕರಣ ಚಿಕ್ಕಬಳ್ಳಾಪುರ ಮತ್ತು ಹಾಸನದ ಬಂಧನ.. ಚಿಕ್ಕಬಳ್ಳಾಪುರದ ಬಾಪೂಜಿನಗರದ 21 ವರ್ಷದ ಮೊಹಮ್ಮದ್ ಶಬ್ಬೀರ್‌ನನ್ನು ಪೊಲೀಸರು ಬಂಧಿಸಿದ್ದಾರೆ.. ಇನ್ನು ಬಿಹಾರದ ಪಟನಾ ಮೂಲದ 23 ವರ್ಷದ ಶಬಾಜ್ ಸಲ್ಮಾನ್‌ನನ್ನು ಹಾಸನದಲ್ಲಿ ಬಂಧಿಸಲಾಗಿದೆ.. ರಾಜ್ಯ ಗುಪ್ತಚರ ಇಲಾಖೆಯಿಂದ ಬಂದ ಮಾಹಿತಿ ಆಧರಿಸಿ ಈ ಕಾರ್ಯಾಚರಣೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.. ಶಬ್ಬೀರ್ ಸೃಷ್ಟಿಸಿದ್ದ ಎನ್ನಲಾದ ಮುಚ್ಚಿದ ಟೆಲಿಗ್ರಾಂ ಗುಂಪಿನಲ್ಲಿ ಉಗ್ರ ಚಟುವಟಿಕೆ ಹಾಗೂ ಹಣ ಸಂಗ್ರಹದ ಬಗ್ಗೆ ಚರ್ಚೆಗಳು ನಡೆದಿದ್ದವು ಎನ್ನುವುದು ಪೊಲೀಸರ ಆರೋಪ.. ಪ್ರಕರಣದಲ್ಲಿ ಇತರ ಸದಸ್ಯರ ಬಗ್ಗೆಯೂ ತನಿಖೆ ಮುಂದುವರಿದಿದೆ.

ಚಿಕ್ಕಬಳ್ಳಾಪುರ ಪ್ರಕರಣದಲ್ಲಿ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ.. ಟೆಲಿಗ್ರಾಂ ಗುಂಪಿನ ಚರ್ಚೆಯಲ್ಲಿ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಸಿ.ಟಿ.ರವಿ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೆಸರುಗಳು ಟಾರ್ಗೆಟ್‌ಗಳಾಗಿ ಪ್ರಸ್ತಾಪವಾಗಿದ್ದವು ಎಂದು ಕೆಲವು ವರದಿಗಳು ಹೇಳಿವೆ.. ಆದರೆ, ಈ ಆನ್‌ಲೈನ್ ಚರ್ಚೆ ನಿಜವಾದ ದಾಳಿ ಸಂಚುವಾಗಿ ರೂಪುಗೊಂಡಿತ್ತೇ ಅಥವಾ ಕೇವಲ ಬೆದರಿಕೆ ಮಾತುಕತೆಯಷ್ಟೇ ಆಗಿತ್ತೇ ಎನ್ನುವುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.. ಪೊಲೀಸರು ಡಿಜಿಟಲ್ ಸಾಕ್ಷ್ಯ, ಟೆಲಿಗ್ರಾಂ ಸಂಭಾಷಣೆ ಹಾಗೂ ಆರೋಪಿಗಳ ಸಂಪರ್ಕ ಜಾಲವನ್ನು ಪರಿಶೀಲಿಸುತ್ತಿದ್ದಾರೆ.

ತನಿಖಾ ಸಂಸ್ಥೆಗಳ ಅನುಮಾನಕ್ಕೆ ಕಾರಣವಾಗಿರುವ ಮತ್ತೊಂದು ಅಂಶ ಯುವಕರ ನೇಮಕಾತಿ.. 30 ವರ್ಷದೊಳಗಿನ ಯುವಕರನ್ನು ಉಗ್ರ ಸಂಘಟನೆಗಳತ್ತ ಸೆಳೆಯುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದೆ.. ಸಾಮಾಜಿಕ ಜಾಲತಾಣ, ತಾಂತ್ರಿಕ ಕ್ಷೇತ್ರ ಹಾಗೂ ಎನ್ಕ್ರಿಪ್ಟೆಡ್ ಆ್ಯಪ್‌ಗಳಲ್ಲಿ ಪರಿಣತಿ ಹೊಂದಿರುವ ಯುವಕರನ್ನು ಗುರುತಿಸಿ ಸಂಪರ್ಕ ಸಾಧಿಸುವ ಸಾಧ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ.. ಬೆಂಗಳೂರಿನಲ್ಲಿ ಉದ್ಯೋಗ ಅಥವಾ ವಸತಿ ಕಲ್ಪಿಸುವ ನೆಪದಲ್ಲಿ ಹೊರರಾಜ್ಯಗಳಿಂದ ಬರುವ ಯುವಕರಿಗೆ ಸ್ಥಳೀಯ ಸಂಪರ್ಕ ಕಲ್ಪಿಸಿ, ಬಳಿಕ ಅವರನ್ನು ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.. ಎಂಡ್-ಟು-ಎಂಡ್ ಎನ್ಕ್ರಿಪ್ಶನ್ ಇರುವುದರಿಂದ ಇಂತಹ ಸಂವಹನಗಳನ್ನು ಪತ್ತೆಹಚ್ಚುವುದು ತನಿಖಾಧಿಕಾರಿಗಳಿಗೆ ಸವಾಲಾಗಿದೆ.

ಕರ್ನಾಟಕದಲ್ಲಿ ಉಗ್ರ ಜಾಲದ ಬಗ್ಗೆ ಅನುಮಾನ ಇದೇ ಮೊದಲ ಬಾರಿಗೆ ಕೇಳಿಬರುತ್ತಿಲ್ಲ.. 2020ರ ಬೆಂಗಳೂರು ಅಲ್-ಹಿಂದ್ ಐಸಿಸ್ ಸಂಚು ಪ್ರಕರಣದಲ್ಲಿ ಎನ್‌ಐಎ ಒಟ್ಟು 20 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ.. ಈ ಪ್ರಕರಣದಲ್ಲಿ ಜುಲೈ 2026ರಲ್ಲಿ ಮೊಹಮ್ಮದ್ ಹನೀಫ್ ಖಾನ್‌ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು.. ಆಗಸ್ಟ್ 29ರಂದು ಸಯ್ಯದ್ ಫಸಿಯೂರ್ ರೆಹಮಾನ್ ಕೂಡ ತಪ್ಪೊಪ್ಪಿಕೊಂಡ ಬಳಿಕ 7 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾನೆ.. ಇನ್ನು ಶಿವಮೊಗ್ಗ ಐಸಿಸ್ ಸಂಚು ಪ್ರಕರಣದಲ್ಲಿ ಸೆಪ್ಟೆಂಬರ್ 2026ರಲ್ಲಿ ಹುಜೈರ್ ಫರ್ಹಾನ್ ಬೇಗ್‌ಗೆ 6 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ.. ಈ ಪ್ರಕರಣದಲ್ಲಿ ಇದು ನಾಲ್ಕನೇ ಶಿಕ್ಷೆಯಾಗಿದ್ದು, ಎನ್‌ಐಎ 12 ಆರೋಪಿಗಳ ವಿರುದ್ಧ ನಾಲ್ಕು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸಿದೆ.

ಕರ್ನಾಟಕದಲ್ಲಿ ಉಗ್ರಜಾಲದ ಬಗ್ಗೆ ತನಿಖಾ ಸಂಸ್ಥೆಗಳ ಅನುಮಾನ ಈಗ ಮತ್ತಷ್ಟು ಗಂಭೀರವಾಗಿದೆ.. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ಶಂಕಿತ ಸ್ಲೀಪರ್ ಸೆಲ್‌ಗಳಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಯುತ್ತಿದೆ.. ಉತ್ತರ ಹಾಗೂ ಪೂರ್ವ ಭಾರತದ ಯುವಕರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೆಳೆದು, ಬೆಂಗಳೂರಿನಲ್ಲಿ ನೆಲೆ ಕಲ್ಪಿಸಿ ಬಳಿಕ ರಾಜ್ಯದ ವಿವಿಧ ಭಾಗಗಳಿಗೆ ಸ್ಥಳಾಂತರಿಸುವ ಶಂಕೆಯೂ ಇದೆ.. ಇದರ ಬೆನ್ನಲ್ಲೇ ಚಿಕ್ಕಬಳ್ಳಾಪುರದ ಮೊಹಮ್ಮದ್ ಶಬ್ಬೀರ್ ಹಾಗೂ ಹಾಸನದಲ್ಲಿ ಬಿಹಾರ ಮೂಲದ ಶಬಾಜ್ ಸಲ್ಮಾನ್ ಬಂಧನವಾಗಿದೆ.. ಟೆಲಿಗ್ರಾಂ ಗುಂಪಿನಲ್ಲಿನ ಚರ್ಚೆಗಳು, ಹಣ ಸಂಗ್ರಹದ ಆರೋಪ ಹಾಗೂ ಇತರ ಸದಸ್ಯರ ಸಂಪರ್ಕದ ಬಗ್ಗೆ ತನಿಖೆ ಮುಂದುವರಿದಿದೆ.. ಇದೇ ವೇಳೆ ಅಲ್-ಹಿಂದ್ ಐಸಿಸ್ ಹಾಗೂ ಶಿವಮೊಗ್ಗ ಐಸಿಸ್ ಸಂಚು ಪ್ರಕರಣಗಳಲ್ಲೂ ನ್ಯಾಯಾಲಯದ ಶಿಕ್ಷೆಗಳು ಹೊರಬಂದಿವೆ.. ಹೀಗಾಗಿ, ಕರ್ನಾಟಕದಲ್ಲಿ ಆನ್‌ಲೈನ್ ಮೂಲಕ ನಡೆಯುತ್ತಿರುವ ಶಂಕಿತ ಉಗ್ರ ಚಟುವಟಿಕೆಗಳ ಹಿಂದೆ ನಿಜಕ್ಕೂ ಎಷ್ಟು ದೊಡ್ಡ ಜಾಲವಿದೆ ಎಂಬುದನ್ನು ತನಿಖಾ ಸಂಸ್ಥೆಗಳ ಮುಂದಿನ ತನಿಖೆಯೇ ಸ್ಪಷ್ಟಪಡಿಸಬೇಕಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES