ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಅಂಶ ಬೆಳಕಿಗೆ ಬರುತ್ತಿದೆ. ಇದೀಗ ಸಾರಿಗೆ ಇಲಾಖೆಯ ನೇಮಕಾತಿಯಲ್ಲೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಪ್ರಮುಖ ಆರೋಪಿ ಕನ್ನಾಳೆ ಡೈರಿಯಲ್ಲಿ ಹಲವು ಪರೀಕ್ಷೆಗಳು ಹಾಗೂ ಅಭ್ಯರ್ಥಿಗಳ ಹೆಸರುಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ.
ಹೌದು, ಕೆಪಿಎಸ್ಸಿ ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆ ವೇಳೆ ಸಿಐಡಿಗೆ ಮಹತ್ವದ ಮಾಹಿತಿ ಲಭ್ಯವಾಗಿದೆ. ತನಿಖೆ ಚುರುಕುಗೊಳಿಸಿದ್ದ ಅಧಿಕಾರಿಗಳಿಗೆ ಪ್ರಮುಖ ಆರೋಪಿ ಕನ್ನಾಳೆ ಡೈರಿ ಪರಿಶೀಲನೆ ವೇಳೆ ಸಾರಿಗೆ ಇಲಾಖೆಯ ನೇಮಕಾತಿ ಅಕ್ರಮದ ಬಗ್ಗೆ ಸುಳಿವು ಸಿಕ್ಕಿದೆ.2016ರಲ್ಲಿ 141 ಎಂವಿಐ ಅಂದರೆ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಪರೀಕ್ಷೆ ಬಳಿಕ ಸರ್ಕಾರ 129 ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿತ್ತು. ಆದರೆ ಸೇವಾ ಅನುಭವದ ವಿವಾದದಿಂದ ನೇಮಕಾತಿ ಪ್ರಕ್ರಿಯೆ ಕಾನೂನು ಹೋರಾಟಕ್ಕೆ ಸಿಲುಕಿತ್ತು.
ಕೊನೆಗೆ ಹೈಕೋರ್ಟ್ ಆದೇಶದ ಮೇರೆಗೆ 2024ರಲ್ಲಿ ಅಂತಿಮ ಆದೇಶ ಹೊರಬಂದಿದ್ದು, ಆಯ್ಕೆಯಾದ ಅಧಿಕಾರಿಗಳು ಸದ್ಯ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ ಇದೀಗ ಕನ್ನಾಳೆ ಡೈರಿಯ ಪುಟಗಳನ್ನು ಪರಿಶೀಲಿಸಿದಾಗ ಸಿಐಡಿಗೆ ಮತ್ತೊಂದು ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಡೈರಿಯಲ್ಲಿ MVI ಎಂದು ನಮೂದಿಸಿ, ಕೆಲವು ನಿರ್ದಿಷ್ಟ ಅಭ್ಯರ್ಥಿಗಳ ಹೆಸರುಗಳನ್ನು ಬರೆಯಲಾಗಿದೆ. ಈ ಪರೀಕ್ಷೆಯ ಉಲ್ಲೇಖ ಡೈರಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆ ನೇಮಕಾತಿಯಲ್ಲಿ ಕನ್ನಾಳೆ ಪಾತ್ರವಿತ್ತೇ ಎಂಬ ಅನುಮಾನ ಸಿಐಡಿಗೆ ಮೂಡಿದೆ.ಡೈರಿಯಲ್ಲಿ ಹೆಸರುಗಳಿರುವ ಅಭ್ಯರ್ಥಿಗಳ ಬಗ್ಗೆ ಮಾಹಿತಿ ಕಲೆಹಾಕಿದ್ದ ಸಿಐಡಿ, ಅವರಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿತ್ತು ಎನ್ನಲಾಗಿದೆ. ಆದರೆ ಪ್ರಕರಣ ಎಸ್‌ಐಟಿಗೆ ವರ್ಗಾವಣೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ, ಸದ್ಯ ಸಿಐಡಿ ತನ್ನ ಹಿಂದಿನ ತನಿಖಾ ವರದಿ ಹಾಗೂ ದಾಖಲೆಗಳನ್ನು ಕ್ರೋಢೀಕರಿಸುತ್ತಿದೆ.
ಇತ್ತ ಇದೇ ಬೆಳವಣಿಗೆಯ ಬೆನ್ನಲ್ಲೇ ಎಂವಿಐ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಕೆಪಿಎಸ್ಸಿಯಲ್ಲೂ ಮಹತ್ವದ ಬೆಳವಣಿಗೆ ನಡೆದಿದೆ. ಹೈಕೋರ್ಟ್ ಆದೇಶದ ಮೇರೆಗೆ 2025ರಲ್ಲಿ ಪ್ರಕಟಿಸಲಾಗಿದ್ದ ಎಂವಿಐ ಹೆಚ್ಚುವರಿ ಹುದ್ದೆಗಳ ಪಟ್ಟಿಗೆ ತಾತ್ಕಾಲಿಕ ತಡೆ ನೀಡಲಾಗಿದೆ.ಕೆಪಿಎಸ್ಸಿ ಸೆಕ್ರೆಟರಿ ಜ್ಯೋತಿ ಅವರು ಆದೇಶ ಹೊರಡಿಸಿ ಹೆಚ್ಚುವರಿ ಪಟ್ಟಿಯನ್ನು ವಾಪಸ್ ಪಡೆದಿದ್ದಾರೆ. ಹಂತ ಹಂತವಾಗಿ ಪ್ರಕಟಿಸಲಾಗಿದ್ದ ಪಟ್ಟಿಯನ್ನು ಇದೀಗ ಮರುಪರಿಶೀಲಿಸಿ ಹೊಸದಾಗಿ ಬಿಡುಗಡೆ ಮಾಡಲು ಕೆಪಿಎಸ್ಸಿ ಮುಂದಾಗಿದೆ.ಒಟ್ಟಿನಲ್ಲಿ ಕನ್ನಾಳೆ ಡೈರಿಯಲ್ಲಿ ಸಿಕ್ಕಿರುವ ಮಾಹಿತಿಯಿಂದ ಎಂವಿಐ ಹುದ್ದೆಯಲ್ಲಿರುವವರು ಹಾಗೂ ಹೆಚ್ಚುವರಿ ಪಟ್ಟಿಯಲ್ಲಿರುವ ಅಭ್ಯರ್ಥಿಗಳಲ್ಲೂ ಆತಂಕ ಮೂಡಿದೆ.
ಇನ್ನು ಇತ್ತೀಚೆಗೆ ಬೆಳಕಿಗೆ ಬಂದಿರುವ ಕೆಪಿಎಸ್ಸಿ ಅಕ್ರಮ ಪ್ರಕರಣದ ತನಿಖೆ ಸದ್ಯ ಮುಂದಿನ ಹಂತದ ನಿರ್ಧಾರಕ್ಕಾಗಿ ಕಾಯುತ್ತಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಲ್ಲಿ ಕೋರ್ಟ್ ಎಸ್‌ಐಟಿ ರಚನೆಗೆ ಆದೇಶ ನೀಡಿತ್ತು.ಆದರೆ ಎಸ್‌ಐಟಿ ರಚನೆಗೆ ಸರ್ಕಾರ ಅಸಮಾಧಾನ ವ್ಯಕ್ತಪಡಿಸಿ, ತನಿಖೆಯನ್ನು ಎಸ್‌ಐಟಿಗೆ ವರ್ಗಾಯಿಸುವ ನೋಟಿಫಿಕೇಷನ್ ಹೊರಡಿಸದೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.ಕೋರ್ಟ್ ಆದೇಶದಂತೆ ಸಿಐಡಿ ತನ್ನ ತನಿಖಾ ಕಡತಗಳನ್ನು ಎಸ್‌ಐಟಿಗೆ ವರ್ಗಾಯಿಸಲು ಸಿದ್ಧವಾಗಿದೆ. ಸದ್ಯ ಸುಪ್ರೀಂ ಕೋರ್ಟ್‌ನ ಮುಂದಿನ ಆದೇಶದ ಬಳಿಕ ತನಿಖೆಯ ಕುರಿತು ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣದ ಸಂಪೂರ್ಣ ತನಿಖೆ ಯಾವಾಗ ಪೂರ್ಣಗೊಂಡು, ಅಂತಿಮವಾಗಿ ಯಾವ ರೀತಿಯ ತೀರ್ಮಾನಕ್ಕೆ ಬರಲಿದೆ ಎಂಬುದನ್ನು ಕಾದುನೋಡಬೇಕಿದೆ.