SOCIAL MEDIA

Newsletter

PARTNER SITES
Select Language Select State

ಭಾರತಕ್ಕೆ ‘ಸೂಪರ್ ಎಲ್‌ ನಿನೋ’ ಭೀತಿ : ನಿಜವಾಗುತ್ತಾ ಕೋಡಿಶ್ರೀ ಭವಿಷ್ಯ

Super El Niño effects on India : ಭೂಮಿ ಮತ್ತೊಮ್ಮೆ ಬೆಂಕಿಯುಗಕ್ಕೆ ಜಾರುತ್ತಾ.. ಪೆಸಿಫಿಕ್‌ ಸಾಗರದಲ್ಲಿ ಬಲಗೊಳ್ಳುತ್ತಿರುವ ಎಲ್‌ ನಿನೋ ಬಗ್ಗೆ ವಿಜ್ಞಾನಿಗಳ ಹೊಸ ವರದಿ ಜಗತ್ತನ್ನೇ ಬೆಚ್ಚಿಬೀಳಿಸಿದೆ. ‘ಸೂಪರ್ ಎಲ್‌ ನಿನೋ’ ಪರಿಣಾಮ ಮುಂದಿನ ತಿಂಗಳುಗಳಲ್ಲಿ ಜಾಗತಿಕ ಭೂ ಉಷ್ಣಾಂಶ ಸಾಮಾನ್ಯಕ್ಕಿಂತ 1.2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಬಹುದು.. ಅತಿಯಾದ ಬಿಸಿಲಿನ ದಿನಗಳ ಸಂಖ್ಯೆಯೂ ಶೇಕಡಾ 44ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಜೂನ್‌ನಿಂದ ಫೆಬ್ರವರಿವರೆಗೆ ಜಗತ್ತಿನಲ್ಲಿ 4.51 ಲಕ್ಷ ಹೆಚ್ಚುವರಿ ಬಿಸಿಲು ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಹೊಸ ಅಧ್ಯಯನ ಅಂದಾಜಿಸಿದೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Reported By Krishna NK Written By Krishna NK
Published: Sep 26, 2026, 05:26 PM IST | Updated: Sep 26, 2026, 05:29 PM IST
Image Credit: Super El Niño effects
Join

ಬೆಂಗಳೂರು : ಭಾರತಕ್ಕೂ ಎಚ್ಚರಿಕೆಯ ಗಂಟೆ ಮೊಳಗಿದೆ. ಮುಂದಿನ ಆರು ತಿಂಗಳಲ್ಲಿ 15,800 ಹೆಚ್ಚುವರಿ ಸಾವುಗಳ ಅಪಾಯ ಇದೆ ಎಂಬ ಆತಂಕಕಾರಿ ಅಂದಾಜು ಹೊರಬಿದ್ದಿದೆ. ಇದೇ ವೇಳೆ, ಕೋಡಿಮಠದ ಶ್ರೀಗಳ ಭವಿಷ್ಯವಾಣಿಯಲ್ಲೂ ‘ಗಟ್ಟಿ ಭೂಮಿ ಬಟ್ಟಬಯಲಾಗುತ್ತದೆ’ ಎಂಬ ಮಾತು ಚರ್ಚೆಗೆ ಬಂದಿದೆ. ಹಾಗಾದ್ರೆ ವಿಜ್ಞಾನಿಗಳ ಎಚ್ಚರಿಕೆ ಏನು.. ಭಾರತಕ್ಕೆ ಎಷ್ಟು ಅಪಾಯ.. ಕೋಡಿಶ್ರೀ ಭವಿಷ್ಯಕ್ಕೂ ಹವಾಮಾನ ಎಚ್ಚರಿಕೆಗೂ ಸಾಮ್ಯತೆ ಏನು..? ಇಲ್ಲಿದೆ ರೋಚಕ ವರದಿ

ಪೆಸಿಫಿಕ್‌ ಸಾಗರದಲ್ಲಿ ಉಂಟಾಗಿರುವ ಪ್ರಬಲ ಎಲ್‌ ನಿನೋ ಜಾಗತಿಕ ತಾಪಮಾನವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಹೊಸ ಅಧ್ಯಯನ ಎಚ್ಚರಿಸಿದೆ. Climate Impact Lab ನಡೆಸಿದ ವಿಶ್ಲೇಷಣೆಯ ಪ್ರಕಾರ, ಎಲ್‌ ನಿನೋ ಪರಿಣಾಮ ಜಾಗತಿಕ ಭೂ ಉಷ್ಣಾಂಶ ಸಾಮಾನ್ಯಕ್ಕಿಂತ ಸುಮಾರು 1.2 ಡಿಗ್ರಿ ಸೆಲ್ಸಿಯಸ್‌ ಹೆಚ್ಚಾಗಬಹುದು. ಸಾಮಾನ್ಯ ವರ್ಷಕ್ಕೆ ಹೋಲಿಸಿದರೆ ತೀವ್ರ ಬಿಸಿಲಿನ ದಿನಗಳು ಶೇ.44ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹೆಚ್ಚುವರಿ ಉಷ್ಣತೆಯಿಂದ ಜೂನ್ 2026ರಿಂದ ಫೆಬ್ರವರಿ 2027ರವರೆಗೆ 4.51 ಲಕ್ಷ ಹೆಚ್ಚುವರಿ ಶಾಖ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಅಧ್ಯಯನ ಅಂದಾಜಿಸಿದೆ. ಇದು ದಾಖಲಾಗಿರುವ ಸಾವುಗಳ ಸಂಖ್ಯೆ ಅಲ್ಲ, ವೈಜ್ಞಾನಿಕ ಮಾದರಿಗಳ ಆಧಾರದ ಮೇಲಿನ ಮುನ್ಸೂಚನೆ ಎಂಬುದನ್ನು ಗಮನಿಸಬೇಕು.

ಸೂಪರ್ ಎಲ್‌ ನಿನೋ ಪರಿಣಾಮದಿಂದ ಭಾರತದಲ್ಲೂ ಬಿಸಿಲಿನ ತೀವ್ರತೆ ಹೆಚ್ಚಾಗುವ ಆತಂಕವಿದೆ. ಅಧ್ಯಯನದ ಪ್ರಕಾರ ಸೆಪ್ಟೆಂಬರ್ 2026ರಿಂದ ಫೆಬ್ರವರಿ 2027ರವರೆಗೆ ಭಾರತದಲ್ಲಿ ಸುಮಾರು 15,800 ಹೆಚ್ಚುವರಿ ಶಾಖ ಸಂಬಂಧಿತ ಸಾವುಗಳು ಸಂಭವಿಸುವ ಸಾಧ್ಯತೆ ಇದೆ. ಇದರಲ್ಲಿ ಸುಮಾರು 7,400 ಸಾವುಗಳು ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಸಂಭವಿಸಬಹುದು ಎಂದು ಅಂದಾಜಿಸಲಾಗಿದೆ. ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಸಾಮಾನ್ಯ ಚಳಿಗಾಲದ ತಾಪಮಾನವೇ ತುಸು ಹೆಚ್ಚಿರುವುದರಿಂದ, ಅದರ ಮೇಲೆ ಅಸಹಜ ಉಷ್ಣತೆ ಸೇರಿದಾಗ ಶಾಖ ಸಂಬಂಧಿತ ಅಪಾಯ ಹೆಚ್ಚಬಹುದು ಎಂದು ಸಂಶೋಧಕರು ಹೇಳಿದ್ದಾರೆ. ವೃದ್ಧರು, ಹೊರಾಂಗಣದಲ್ಲಿ ಕೆಲಸ ಮಾಡುವವರು ಮತ್ತು ಶಾಖಕ್ಕೆ ಹೆಚ್ಚು ಒಳಗಾಗುವ ಜನರ ಮೇಲೆ ಪರಿಣಾಮ ಹೆಚ್ಚಾಗಬಹುದು.

ಎಲ್‌ ನಿನೋ ಅಂದ್ರೆ ಕೇವಲ ತಾಪಮಾನ ಏರಿಕೆ ಮಾತ್ರವಲ್ಲ. ಪೆಸಿಫಿಕ್‌ ಸಾಗರದ ಅಸಹಜ ತಾಪಮಾನ ಬದಲಾವಣೆ ಜಗತ್ತಿನ ಹಲವು ಭಾಗಗಳ ಮಳೆ ಮತ್ತು ತಾಪಮಾನ ಮಾದರಿಯನ್ನೇ ಬದಲಿಸಬಹುದು. ಪರಿಣಾಮವಾಗಿ ಕೆಲ ಪ್ರದೇಶಗಳಲ್ಲಿ ತೀವ್ರ ಬಿಸಿಲು ಮತ್ತು ಬರ ಎದುರಾದರೆ, ಇನ್ನೂ ಕೆಲವು ಕಡೆ ಭಾರಿ ಮಳೆ, ಪ್ರವಾಹದಂತಹ ಹವಾಮಾನ ವೈಪರೀತ್ಯಗಳು ಸಂಭವಿಸಬಹುದು. ಇದರ ನೇರ ಪರಿಣಾಮ ಕೃಷಿ, ನೀರಿನ ಲಭ್ಯತೆ ಮತ್ತು ಆಹಾರ ಭದ್ರತೆಯ ಮೇಲೂ ಬೀಳುವ ಸಾಧ್ಯತೆ ಇದೆ. ವಿಜ್ಞಾನಿಗಳ ಪ್ರಕಾರ, ಪ್ರಸಕ್ತ ಎಲ್‌ ನಿನೋ ಉತ್ತರಾರ್ಧಗೋಳದ ವಸಂತದವರೆಗೆ ಮುಂದುವರಿಯುವ ನಿರೀಕ್ಷೆಯಿದ್ದು, ಅದರ ದ್ವಿತೀಯ ಪರಿಣಾಮಗಳು ನಂತರವೂ ಮುಂದುವರಿಯಬಹುದು.

ಇದೀಗ ಕೋಡಿಮಠದ ಶ್ರೀಗಳ ಭವಿಷ್ಯವಾಣಿಯೂ ಮತ್ತೆ ಚರ್ಚೆಗೆ ಬಂದಿದೆ. ‘ಗಟ್ಟಿ ಭೂಮಿ ಬಟ್ಟಬಯಲಾಗುತ್ತದೆ’ ಎಂಬ ಅರ್ಥದ ಅವರ ಹೇಳಿಕೆಯನ್ನು ಕೆಲವರು ಬರ, ನೀರಿನ ಕೊರತೆ ಮತ್ತು ತೀವ್ರ ಬಿಸಿಲಿನೊಂದಿಗೆ ಹೋಲಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ವಿಜ್ಞಾನಿಗಳ ವರದಿ ಕೂಡ ಜಾಗತಿಕ ತಾಪಮಾನ ಏರಿಕೆ, ತೀವ್ರ ಬಿಸಿಲು ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಎಚ್ಚರಿಸಿದೆ. ಹೀಗಾಗಿ ಕೋಡಿ ಶ್ರೀಗಳ ಮಾತು ಮತ್ತು ವೈಜ್ಞಾನಿಕ ವರದಿಯಲ್ಲಿ ‘ಬರ-ಬಿಸಿಲಿನ ಭೀತಿ’ ಎಂಬ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಇವೆರಡನ್ನೂ ಒಂದೇ ರೀತಿಯ ವೈಜ್ಞಾನಿಕ ಮುನ್ಸೂಚನೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ವಿಜ್ಞಾನಿಗಳ ಅಂದಾಜು ಹವಾಮಾನ ಮಾದರಿ ಮತ್ತು ತಾಪಮಾನ-ಸಾವುಗಳ ಅಂಕಿಅಂಶಗಳ ಆಧಾರದಲ್ಲಿದೆ.

ಕೋಡಿಮಠದ ಶ್ರೀಗಳ ‘ಗಟ್ಟಿ ಭೂಮಿ ಬಟ್ಟಬಯಲಾಗುತ್ತದೆ’ ಎಂಬ ಭವಿಷ್ಯವಾಣಿಯನ್ನು ಕೆಲವರು ಬರ ಮತ್ತು ನೀರಿನ ಕೊರತೆಯ ಸೂಚನೆಯಾಗಿ ನೋಡುತ್ತಿದ್ದಾರೆ. ಮತ್ತೊಂದೆಡೆ ವಿಜ್ಞಾನಿಗಳ ಅಧ್ಯಯನವು ಅಂಕಿಅಂಶಗಳು ಮತ್ತು ಹವಾಮಾನ ಮಾದರಿಗಳ ಆಧಾರದಲ್ಲಿ ಅಸಹಜ ಉಷ್ಣತೆ, ತೀವ್ರ ಬಿಸಿಲು ಮತ್ತು ಶಾಖ ಸಂಬಂಧಿತ ಸಾವುಗಳ ಅಪಾಯವನ್ನು ಅಂದಾಜಿಸಿದೆ. ಹೀಗಾಗಿ ಎರಡೂ ಮಾತುಗಳಲ್ಲಿ ಬಿಸಿಲು, ಬರ ಮತ್ತು ಭೂಮಿಯ ತೇವಾಂಶ ಕುಸಿತದಂತಹ ಆತಂಕಗಳೊಂದಿಗೆ ಹೋಲಿಕೆ ಮಾಡುವ ಅಂಶಗಳಿವೆ. ಆದರೆ ಕೋಡಿ ಶ್ರೀಗಳ ಭವಿಷ್ಯವಾಣಿ ಧಾರ್ಮಿಕಜ್ಯೋತಿಷ್ಯ ಪರಂಪರೆಯ ಹೇಳಿಕೆಯಾಗಿದ್ದರೆ, ಸೂಪರ್ ಎಲ್‌ ನಿನೋ ವರದಿ ವೈಜ್ಞಾನಿಕ ಮಾದರಿ ಆಧಾರಿತ ಮುನ್ಸೂಚನೆಯಾಗಿದೆ. ಆದ್ದರಿಂದ ಸಾಮ್ಯತೆ ಇದೆ ಎಂದು ಹೇಳಬಹುದು.. ಆದರೆ ಎರಡೂ ಒಂದೇ ವೈಜ್ಞಾನಿಕ ಎಚ್ಚರಿಕೆ ಎಂದು ಹೇಳಲು ಸಾಧ್ಯವಿಲ್ಲ.

ಒಟ್ಟಾರೆಯಾಗಿ, ಸೂಪರ್ ಎಲ್‌ ನಿನೋ ಬಗ್ಗೆ ಹೊರಬಿದ್ದಿರುವ 4.51 ಲಕ್ಷ ಸಾವುಗಳ ಅಂದಾಜು ಈಗಾಗಲೇ ಜಾಗತಿಕ ಆತಂಕಕ್ಕೆ ಕಾರಣವಾಗಿದೆ. ಭಾರತದಲ್ಲೂ 15,800 ಹೆಚ್ಚುವರಿ ಶಾಖ ಸಂಬಂಧಿತ ಸಾವುಗಳ ಅಂದಾಜು ಎಚ್ಚರಿಕೆಯ ಗಂಟೆ ಮೊಳಗಿಸಿದೆ. ಇದು ಖಚಿತವಾಗಿ ಸಂಭವಿಸಲಿರುವ ಸಾವುಗಳ ಸಂಖ್ಯೆ ಅಲ್ಲ, ಹವಾಮಾನ ಮಾದರಿ ಮತ್ತು ಹಿಂದಿನ ತಾಪಮಾನ-ಸಾವುಗಳ ಸಂಬಂಧದ ಆಧಾರದ ಮೇಲಿನ ಮುನ್ಸೂಚನೆ. ಇದರ ನಡುವೆ ಕೋಡಿ ಶ್ರೀಗಳ ‘ಗಟ್ಟಿ ಭೂಮಿ ಬಟ್ಟಬಯಲಾಗುತ್ತದೆ’ ಎಂಬ ಮಾತನ್ನೂ ಕೆಲವರು ಈ ಹವಾಮಾನ ಎಚ್ಚರಿಕೆಯೊಂದಿಗೆ ಹೋಲಿಸುತ್ತಿದ್ದಾರೆ. ಒಂದು ಕಡೆ ಭವಿಷ್ಯವಾಣಿ.. ಮತ್ತೊಂದು ಕಡೆ ವಿಜ್ಞಾನಿಗಳ ಲೆಕ್ಕಾಚಾರ.. ಇವೆರಡರ ನಡುವೆ ಸಾಮ್ಯತೆ ಎಷ್ಟೇ ಇದ್ದರೂ, ಮುಂದಿನ ತಿಂಗಳುಗಳಲ್ಲಿ ಬಿಸಿಲು ಮತ್ತು ಹವಾಮಾನ ವೈಪರೀತ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ ಎಂಬ ಸಂದೇಶ ಮಾತ್ರ ಸ್ಪಷ್ಟವಾಗಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES