SOCIAL MEDIA

Newsletter

PARTNER SITES
Select Language Select State

ರಾಜ್ಯ ಸರ್ಕಾರ 'ಜೀರೋ ಬ್ಯಾಲೆನ್ಸ್' ಸರ್ಕಾರ, ದಿವಾಳಿಯಾಗಿದೆ: ಸುನೀಲ್ ಕುಮಾರ್ ತೀವ್ರ ವಾಗ್ದಾಳಿ

ವಿಧಾನಸೌಧದ ಮೂರನೇ ಮಹಡಿಯಲ್ಲಿ ಯಾವುದೇ ಆಡಳಿತ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಭಾವನೆ ಮೂಡಿದೆ. ಯಾವೊಬ್ಬ ಸಚಿವರೂ ಆಡಳಿತದ ಕಡೆ ಗಮನ ಹರಿಸುತ್ತಿಲ್ಲ. ಮುಖ್ಯಮಂತ್ರಿಯಿಂದ ಹಿಡಿದು ಕಾಂಗ್ರೆಸ್‌ನ ಶಾಸಕರು ಮತ್ತು ಕಾರ್ಯಕರ್ತರು ಕೇವಲ ಸ್ಟಿಂಗ್ ಆಪರೇಷನ್‌ಗಳಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ.

Reported By Manjunath Naragund Written By Manjunath Naragund
Published: Oct 27, 2026, 01:23 PM IST | Updated: Oct 27, 2026, 01:33 PM IST
Image Credit: Sunil Kumar
Join

ಬೆಂಗಳೂರು: ರಾಜ್ಯದಲ್ಲಿ ಸಿಎಂ ಡಿ.ಕೆ. ಶಿವಕುಮಾರ್  ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ 'ಜೀರೋ ಬ್ಯಾಲೆನ್ಸ್' ಸರ್ಕಾರವಾಗಿದ್ದು, ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್ ಕಟುವಾಗಿ ಟೀಕಿಸಿದ್ದಾರೆ.ಸರ್ಕಾರದ ಬಳಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲ ಎಂಬುದನ್ನು ಮುಖ್ಯಮಂತ್ರಿಗಳ ಹೇಳಿಕೆಗಳೇ ಸ್ಪಷ್ಟಪಡಿಸುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಸೆಪ್ಟೆಂಬರ್ 17ರಂದೇ ಆರ್ಥಿಕ ಇಲಾಖೆಯು ಪತ್ರ ಬರೆದು ಯಾವುದೇ ಹೊಸ ಯೋಜನೆಗಳನ್ನು ಘೋಷಣೆ ಮಾಡಬಾರದು ಎಂದು ಎಚ್ಚರಿಕೆ ನೀಡಿತ್ತು.ಆದರೂ ವಿಧಾನಮಂಡಲ ಅಧಿವೇಶನದಲ್ಲಿ ರೈತರಿಗೆ 2,500 ರೂ.ನೀಡುವುದಾಗಿ ಸರ್ಕಾರ ಭರ್ಜರಿ ಘೋಷಣೆ ಮಾಡಿತ್ತು. ಆದರೆ, ಇಂದಿನವರೆಗೂ ಆ ಹಣ ರೈತರ ಖಾತೆಗೆ ಜಮೆ ಆಗಿಲ್ಲ. ತಪ್ಪು ಸರ್ಕಾರದ ಆಶ್ವಾಸನೆಯದ್ದಲ್ಲ, ಬದಲಿಗೆ ರಾಜ್ಯ ಸರ್ಕಾರವೇ ದಿವಾಳಿಯಾಗಿರುವುದು ದೊಡ್ಡ ತಪ್ಪು ಎಂದು ಕಿಡಿಕಾರಿದರು.

ಹಣ ಸಂದಾಯವಾಗದಿರುವುದಕ್ಕೆ ಸ್ವತಃ ಕಂದಾಯ ಸಚಿವರೇ ಬೇಸರ ವ್ಯಕ್ತಪಡಿಸಿದ್ದಾರೆ.ಅಂದರೆ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿರುವುದನ್ನು ಮಂತ್ರಿಗಳೇ ಪರೋಕ್ಷವಾಗಿ ಒಪ್ಪಿಕೊಂಡಂತಿದೆ.ಇತ್ತೀಚೆಗೆ ನಡೆದ ಕಬ್ಬು ಬೆಳೆಗಾರರ ಸಭೆಯಲ್ಲಿ "ಸರ್ಕಾರದಲ್ಲಿ ಹಣ ಎಲ್ಲಿದೆ? ನನ್ನ ಜೇಬಿನಿಂದ ಹಣ ಕೊಡಲು ಆಗುತ್ತದೆಯೇ?" ಎಂದು ಮುಖ್ಯಮಂತ್ರಿಗಳೇ ತಮ್ಮ ಅಸಹಾಯಕತೆಯನ್ನು ಹೊರಹಾಕಿದ್ದಾರೆ ಎಂದು ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು.

ಮಳೆ ಕಡಿಮೆಯಾದ ಸಂಕಷ್ಟದ ಕಾಲದಲ್ಲಿ ರೈತರಿಗೆ ಧೈರ್ಯ ತುಂಬಬೇಕಾದ ಮುಖ್ಯಮಂತ್ರಿಗಳು, ಬೆಳೆಗಳನ್ನೇ ಬೆಳೆಯಬೇಡಿ ಎಂದು ಸಲಹೆ ನೀಡಿ ರೈತರ ಆತ್ಮವಿಶ್ವಾಸ ಕುಗ್ಗಿಸಿದರು. ಇವತ್ತು ಕಬ್ಬು ಬೆಳೆಗಾರರ ವಿಷಯದಲ್ಲೂ ಅದೇ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಇದು ಯಾವ ವರ್ಗಕ್ಕೂ ನ್ಯಾಯ ಒದಗಿಸದ, ಸಂಪೂರ್ಣ ಶೂನ್ಯ ಆವರಿಸಿರುವ ಅಸಮರ್ಥ ಸರ್ಕಾರ ಎಂದು ಟೀಕಿಸಿದರು.

ವಿಧಾನಸೌಧದ ಮೂರನೇ ಮಹಡಿಯಲ್ಲಿ ಯಾವುದೇ ಆಡಳಿತ ಪ್ರಕ್ರಿಯೆ ನಡೆಯುತ್ತಿಲ್ಲ ಎಂಬ ಭಾವನೆ ಮೂಡಿದೆ. ಯಾವೊಬ್ಬ ಸಚಿವರೂ ಆಡಳಿತದ ಕಡೆ ಗಮನ ಹರಿಸುತ್ತಿಲ್ಲ. ಮುಖ್ಯಮಂತ್ರಿಯಿಂದ ಹಿಡಿದು ಕಾಂಗ್ರೆಸ್‌ನ ಶಾಸಕರು ಮತ್ತು ಕಾರ್ಯಕರ್ತರು ಕೇವಲ ಸ್ಟಿಂಗ್ ಆಪರೇಷನ್‌ಗಳಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಜನರಿಗೆ ಪರಿಹಾರ ಒದಗಿಸಲು ಇದುವರೆಗೆ ಗಂಭೀರ ಸಭೆಗಳನ್ನೇ ನಡೆಸಿಲ್ಲ. ಘೋಷಿಸಿದ ಗ್ಯಾರಂಟಿ ಯೋಜನೆಗಳೂ ಕೂಡ ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ ಎಂದು ಸುನೀಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
 

Add Zee News as a Preferred Source
TAGS:

About the Author

ಮಂಜುನಾಥ ನರಗುಂದ (Manjunath Naragund) 11 ವರ್ಷಗಳಿಗೂ ಹೆಚ್ಚು ಕಾಲ ಪತ್ರಿಕೋದ್ಯಮ, ಬರವಣಿಗೆ ಮತ್ತು ಭಾಷಾಂತರ ಕ್ಷೇತ್ರದಲ್ಲಿ ವಿವಿಧ ಮಾಧ್ಯಮ ವೇದಿಕೆಗಳಲ್ಲಿ ವೃತ್ತಿಪರ ಅನುಭವವನ್ನು ಹೊಂದಿದ್ದೇನೆ. 2017ರಿಂದ ಜೀ ಕನ್ನಡ ನ್ಯೂಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಪ್ರಿಂಟ್‌ವೀಕ್, ಅಕ್ಷರ ಸಂಗಾತ, ರೌಂಡ್ ಟೇಬಲ್ ಇಂಡಿಯಾ ಮತ್ತು ವಾರ್ತಾ ಭಾರತಿಯಂತಹ ಪ್ರತಿಷ್ಠಿತ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ನನ್ನ ಲೇಖನಗಳು ಪ್ರಕಟವಾಗಿವೆ. ಅಲ್ಲದೆ, ನಾನು ಅನುಭವಿ ಭಾಷಾಂತರಕಾರನಾಗಿದ್ದು, ಪರಿ ಮತ್ತು ದೆಹಲಿಯ ಸೆಂಟರ್ ಫಾರ್ ಪಾಲಿಸಿ ರಿಸರ್ಚ್‌ನಂತಹ ಸಂಸ್ಥೆಗಳಲ್ಲಿ ನನ್ನ ಅನುವಾದಿತ ಲೇಖನಗಳು ಪ್ರಕಟಗೊಂಡಿವೆ.

ZEENEWS TRENDING STORIES