ಚಿಕ್ಕಮಗಳೂರಿನಲ್ಲಿ ಚುಕ್ಕಿ ಜಿಂಕೆ ಬೇಟೆ : ಓರ್ವನ ಬಂಧನ, ಮೂವರು ಪರಾರಿ
ಚಿಕ್ಕಮಗಳೂರು ತಾಲೂಕಿನ ದೇವದಾನ ಗ್ರಾಮದಲ್ಲಿ ಉರುಳು ಹಾಕಿ ಚುಕ್ಕಿ ಜಿಂಕೆಯನ್ನು ಹತ್ಯೆಗೈದು ಮಾಂಸ ಹಂಚಿಕೊಂಡಿದ್ದ ಪ್ರಕರಣವನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ ಭೇದಿಸಿದೆ. ಸದ್ಯ ರೋಜ್ಹಿ ಶ್ವಾನದ ಮೂಲಕ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಇನ್ನು ಮೂವರಿಗಾಗಿ ಹುಡುಕಾಟದಲ್ಲಿದ್ದಾರೆ.
ಚಿಕ್ಕಮಗಳೂರು : ಮಲೆನಾಡಿನ ಕಾಫಿ ತೋಟಗಳಲ್ಲಿ ವನ್ಯಜೀವಿಗಳ ಬೇಟೆ ಹೆಚ್ಚಾಗುತ್ತಿದ್ದು, ಇದೀಗ ಉರುಳಿ ಹಾಕಿ ಅಪರೂಪದ ಚುಕ್ಕಿ ಜಿಂಕೆಯನ್ನು ಹತ್ಯೆಗೈದು ಮಾಂಸ ಹಂಚಿಕೊಂಡ ಪ್ರಕರಣವೊಣದು ಅರಣ್ಯ ಇಲಾಖೆ ಸಿಬ್ಬಂದಿ ಭೇದಿಸಿದ್ದಾರೆ. ಇಲಾಖೆಯ ಶ್ವಾನದಳದ ರೋಜ್ಹಿ ಎಂಬ ಶ್ವಾನದ ಚಾಣಾಕ್ಷತನದಿಂದಾಗಿ ಈ ಪ್ರಕರಣ ಬಯಲಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಹುಡುಕಾಟದಲ್ಲಿ ತೊಡಗಿದ್ದಾರೆ.
ಏನಿದು ಘಟನೆ?
ಚಿಕ್ಕಮಗಳೂರು ಹಾಗೂ ಎನ್.ಆರ್.ಪುರ ತಾಲೂಕಿನ ಗಡಿಭಾಗದಲ್ಲಿರುವ ಖಾಂಡ್ಯ ಸಮೀಪದ ದೇವದಾನ ಗ್ರಾಮದಲ್ಲಿ ಈ ಘಟನೆ ನಡೆದಿದೆ. ನಾಲ್ವರು ಆರೋಪಿಗಳು ಸೇರಿ ಕಾಫಿ ತೋಟದ ಬಳಿ ಉರುಳು ಹಾಕುವ ಮೂಲಕ ಚುಕ್ಕಿ ಜಿಂಕೆಯೊಂದನ್ನು ಬೇಟೆಯಾಡಿ ಹತ್ಯೆ ಮಾಡಿದ್ದರು. ಬಳಿಕ ಜಿಂಕೆಯ ಮಾಂಸವನ್ನು ಎರಡು ಮನೆಗಳಿಗೆ ಹಂಚಿಕೆ ಮಾಡಿಕೊಂಡು ಅಡುಗೆ ಮಾಡುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಖಚಿತ ಮಾಹಿತಿ ಪಡೆದ ಸ್ಥಳೀಯರು ತಕ್ಷಣವೇ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರ ಮಾಹಿತಿಯ ಮೇರೆಗೆ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಸಿಬ್ಬಂದಿ, ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಆರೋಪಿಗಳು ಜಿಂಕೆಯನ್ನು ಹತ್ಯೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಅದರ ಅವಶೇಷಗಳನ್ನು ಕಾಫಿ ತೋಟದೊಳಗೆ ಬರೋಬ್ಬರಿ 10 ಅಡಿ ಆಳದ ಗುಂಡಿಯಲ್ಲಿ ಹೂತು ಹಾಕಿದ್ದರು. ಮೇಲ್ನೋಟಕ್ಕೆ ಯಾವುದೇ ಕುರುಹು ಸಿಗದಂತೆ ಮಣ್ಣು ಮುಚ್ಚಲಾಗಿತ್ತು. ಆದರೆ, ಕಾರ್ಯಾಚರಣೆಗೆ ಕರೆತರಲಾಗಿದ್ದ ಅರಣ್ಯ ಇಲಾಖೆಯ ಶ್ವಾನ ರೋಜ್ಹ ತನ್ನ ಚುರುಕು ವಾಸನೆ ಗ್ರಹಿಸುವ ಶಕ್ತಿಯಿಂದ 10 ಅಡಿ ಆಳದಲ್ಲಿ ಹೂತು ಹಾಕಿದ್ದ ಚುಕ್ಕಿ ಜಿಂಕೆಯ ಅವಶೇಷಗಳನ್ನು ನಿಖರವಾಗಿ ಪತ್ತೆ ಹಚ್ಚಿದೆ.
ಇಷ್ಟೇ ಅಲ್ಲದೆ, ಶ್ವಾನ ರೋಜ್ಹಿ ಅಲ್ಲಿಂದ ನೇರವಾಗಿ ಗ್ರಾಮದ ಎರಡು ಮನೆಗಳತ್ತ ತೆರಳಿ, ಅಲ್ಲಿ ಜಿಂಕೆ ಮಾಂಸವನ್ನು ಹಂಚಿಕೆ ಮಾಡಿಕೊಂಡು ಅಡುಗೆ ಮಾಡಿದ್ದ ಸ್ಥಳವನ್ನೂ ಪತ್ತೆ ಮಾಡಿದೆ. ಶ್ವಾನದ ಈ ಚಾಣಾಕ್ಷ ಕಾರ್ಯಾಚರಣೆ ಅರಣ್ಯ ಇಲಾಖೆ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಆರೋಪಿಗಳ ವಿರುದ್ಧ ಪ್ರಬಲ ಸಾಕ್ಷ್ಯಗಳನ್ನು ಕಲೆ ಹಾಕಲು ನೆರವಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಳೆಹೊನ್ನೂರು ವಲಯ ಅರಣ್ಯ ಅಧಿಕಾರಿಗಳು ದೇವದಾನ ಗ್ರಾಮದ ಪರಮೇಶ್ವ್ ಗೌಡ ಎಂಬಾತನನ್ನು ಬಂಧಿಸಿದ್ದಾರೆ. ಇನ್ನುಳಿದ ಮೂವರು ಆರೋಪಿಗಳಾದ ಕವೀಶ್, ಪೃಥ್ವಿ ರಾಜ್ ಹಾಗೂ ವಿನಯ್ ಎಂಬುವವರು ದಾಳಿಯ ಸುಳಿವು ಸಿಗುತ್ತಿದ್ದಂತೆ ಸ್ಥಳದಿಂದ ಪರಾರಿಯಾಗಿದ್ದಾರೆ.
ಬಾಳೆಹೊನ್ನೂರು ವಲಯ ಅರಣ್ಯ ಕಚೇರಿಯಲ್ಲಿ ಬಂಧಿತ ಪರಮೇಶ್ವ್ ಗೌಡ ಸೇರಿದಂತೆ ನಾಲ್ವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿ ಕಠಿಣ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆ ವಿಶೇಷ ತಂಡಗಳನ್ನು ರಚಿಸಿದ್ದು, ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲೆನಾಡು ಭಾಗದಲ್ಲಿ ವನ್ಯಜೀವಿಗಳ ಬೇಟೆ ತಡೆಯಲು ಅರಣ್ಯ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿದೆ.