SOCIAL MEDIA

Newsletter

PARTNER SITES
Select Language Select State

ಸ್ಟಿಂಗ್ ಆಪರೇಷನ್ : ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ಸಿಸಿಬಿ ದಾಳಿ, ಪೆನ್‌ ಡ್ರೈವ್‌

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ ಸ್ಟಿಂಗ್‌ ಆಪರೇಷನ್‌ ತನಿಖೆ ಹಂತದಲ್ಲಿದೆ. ಪ್ರಸ್ತುತ ಇಂದು ಸಿಸಿಬಿ ಅಧಿಕಾರಿಗಳಿಗೆ ಪ್ರಕರಣಕ್ಕೆ ಸಂಬಂಧಿಸಿ ಜೆಡಿಎಸ್‌ ಕಾರ್ಯಕರ್ತರೊಬ್ಬರ ಮನೆಯ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ಹಲವಾರು ಪೆನ್‌ ಡ್ರೈವ್‌ಗಳನ್ನು ವಶಕ್ಕೆ ಪಡೆದಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ..

Written By Krishna NK
Published: Oct 24, 2026, 04:43 PM IST | Updated: Oct 24, 2026, 04:49 PM IST
Image Credit: Sting Operation news
Join

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎದ್ದಿದೆ. ದಸರಾ ಹಬ್ಬದ ರಜೆಗಳ ಕಾರಣಕ್ಕೆ ಸ್ವಲ್ಪ ಮಟ್ಟಿಗೆ ತಣ್ಣಗಾಗಿದ್ದ ಈ ವಿವಾದ, ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ತನಿಖೆ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಸೈಬರ್ ಕ್ರೈಮ್ ಹಾಗೂ ಸಿಸಿಬಿ ಪೊಲೀಸರು ಜೆಡಿಎಸ್ ಕಾರ್ಯಕರ್ತನ ಮನೆ ಮೇಲೆ ದಾಳಿ ನಡೆಸಿರುವುದು ಸಂಚಲನ ಸೃಷ್ಟಿಸಿದೆ.

ಈ ಪ್ರಕರಣದಲ್ಲಿ ಜೆಡಿಎಸ್ ಕಾರ್ಯಕರ್ತರಾದ ಮೋಹನ್ ಗೌಡ ಎಂಬುವವರಿಗೆ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದಾರೆ. ಜೆಡಿಎಸ್ ವಾರ್ ರೂಮ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೋಹನ್ ಗೌಡಗೆ ಪೊಲೀಸರು ಈಗಾಗಲೇ ಎರಡು-ಮೂರು ಬಾರಿ ನೋಟಿಸ್ ನೀಡಿದ್ದರೂ, ಆತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.

ಮೋಹನ್ ಗೌಡ ಮನೆ ಮೇಲೆ ಪೊಲೀಸರ ದಾಳಿ, ಪೆನ್ ಡ್ರೈವ್ ಸೀಜ್
ತಲೆಮರೆಸಿಕೊಂಡಿರುವ ಜೆಡಿಎಸ್ ಕಾರ್ಯಕರ್ತ ಮೋಹನ್ ಗೌಡಗೆ ಸೇರಿದ ಬ್ಯಾಡರಹಳ್ಳಿಯಲ್ಲಿರುವ ಮನೆ ಮೇಲೆ ನಿನ್ನೆ ಸಂಜೆ ಸೈಬರ್ ಕ್ರೈಮ್ ಹಾಗೂ ಸಿಸಿಬಿ ಪೊಲೀಸರು ಕೋರ್ಟ್ ಅನುಮತಿ ಪಡೆದು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಮನೆಯಲ್ಲಿದ್ದ ಮಹತ್ವದ ಪೆನ್ ಡ್ರೈವ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೋಹನ್ ಗೌಡ ಮನೆಯಲ್ಲಿ ಹೈಡ್ರಾಮಾ
ಪೊಲೀಸರು ದಾಳಿ ನಡೆಸಿದ ಸಂದರ್ಭದಲ್ಲಿ ಮೋಹನ್ ಗೌಡ ಮನೆಯಲ್ಲಿ ಹೈಡ್ರಾಮಾವೇ ನಡೆದಿದೆ ಎನ್ನಲಾಗಿದೆ. ಮೋಹನ್ ಗೌಡ ತಲೆಮರೆಸಿಕೊಂಡಿದ್ದು, ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದರು. ಪೊಲೀಸರು ಶೋಧ ನಡೆಸಲು ಮುಂದಾದಾಗ ಮೋಹನ್ ಗೌಡ ಅವರ ಪತ್ನಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಪೊಲೀಸರ ಜತೆಗೆ ವಾಗ್ವಾದ ನಡೆಸಿ ಕೈಕೈ ಮಿಲಾಯಿಸುವ ಹಂತಕ್ಕೂ ಹೋಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಕುಮಾರಸ್ವಾಮಿ ಗರಂ - ಸರ್ಕಾರದ ವಿರುದ್ಧ ಆಕ್ರೋಶ
ಈ ಎಲ್ಲ ಬೆಳವಣಿಗೆಗಳ ಕುರಿತು ಹಾಸನದಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. "ಸ್ಟಿಂಗ್ ವಿಚಾರವಾಗಿ ತನಿಖೆಯಾಗಲಿ ಎಂದು ಸಿದ್ದರಾಮಯ್ಯನವರೇ ಹೇಳಿದ್ದಾರೆ. ಆದರೆ, ಈ ವಿಚಾರ ಹೊರಬಂದಾಗಿನಿಂದ ಗೃಹಸಚಿವರು ನಮ್ಮ ಪಕ್ಷದ ಕಾರ್ಯಕರ್ತರ ಸುತ್ತಲೇ ಸುತ್ತುತ್ತಿದ್ದಾರೆ. ಕುಮಾರಸ್ವಾಮಿ ಮೇಲೆಯೇ ಅನುಮಾನ ಮೂಡುವಂತೆ ವ್ಯವಸ್ಥಿತವಾಗಿ ತನಿಖೆ ನಡೆಸಲಾಗುತ್ತಿದೆ" ಎಂದು ಕಿಡಿಕಾರಿದ್ದಾರೆ.

ಮುಂದುವರಿದು ಮಾತನಾಡಿದ ಅವರು, "2023ರಲ್ಲಿ ಯಾವ ಕಾರಣಕ್ಕಾಗಿ ಸ್ಟಿಂಗ್ ಮಾಡಲಾಗಿತ್ತು ಎಂಬ ಮೂಲ ಸತ್ಯದ ಬಗ್ಗೆ ತನಿಖೆ ನಡೆಯುತ್ತಿಲ್ಲ. ಬದಲಿಗೆ ನಮ್ಮ ಪಕ್ಷದ ಕಾರ್ಯಕರ್ತರಿಗೆ ಸರ್ಚ್ ವಾರೆಂಟ್ ನೀಡಿ ಬೆದರಿಸಲಾಗುತ್ತಿದ್ದು, ಇಡೀ ಹಗರಣವನ್ನು ನಮ್ಮ ಪಕ್ಷದವರೇ ಮಾಡಿರುವಂತೆ ಬಿಂಬಿಸುವ ಕುತಂತ್ರ ನಡೆಯುತ್ತಿದೆ. ಇಂತಹ ಬೆದರಿಕೆಗಳನ್ನು ನಾವಾಗಲಿ, ನಮ್ಮ ಪಕ್ಷದ ಕಾರ್ಯಕರ್ತರಾಗಲಿ ಎದುರಿಸಲು ಸಿದ್ಧರಿದ್ದೇವೆ" ಎಂದು ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆಯಾಗಿ ಸದ್ಯ ಸ್ಟಿಂಗ್ ಆಪರೇಷನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮತ್ತಷ್ಟು ದೊಡ್ಡ ಸಂಚಲನ ಮೂಡಿಸುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಅಷ್ಟೇ ಅಲ್ಲದೆ, ಇನ್ನು ಯಾರ್ಯಾರ ಹೆಸರು ಈ ಕೇಸ್‌ನ ತನಿಖೆಯಿಂದ ಹೊರ ಬರುತ್ತೆ ಅನ್ನೋದನ್ನ ಕಾಯ್ದು ನೋಡಬೇಕಿದೆ..

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ZEENEWS TRENDING STORIES