ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಭಾಗದಲ್ಲಿ ಭೀತಿ ಸೃಷ್ಟಿಸಿ, ಇಬ್ಬರು ತೋಟದ ಕಾರ್ಮಿಕರ ಸಾವಿಗೆ ಕಾರಣವಾಗಿದ್ದ ಖತರ್ನಾಕ್ ಕಾಡಾನೆ ‘ಶೌರ್ಯ’ ಶಿವಮೊಗ್ಗ ಸಮೀಪದ ಪ್ರಸಿದ್ಧ ಸಕ್ರೆಬೈಲು ಆನೆ ಬಿಡಾರದಲ್ಲಿ ಅನಾರೋಗ್ಯದಿಂದ ಮೃತಪಟ್ಟಿದೆ.
ಬಾಳೆಹೊನ್ನೂರಿನ ಕಾಫಿ ತೋಟಗಳಲ್ಲಿ ನಿರಂತರ ದಾಳಿ ನಡೆಸಿ ಸೆರೆಸಿಕ್ಕಿದ್ದ ಈ ಆನೆಯನ್ನು ಸಕ್ರೆಬೈಲು ಬಿಡಾರಕ್ಕೆ ತಂದು ಅತ್ಯಂತ ಯಶಸ್ವಿಯಾಗಿ ಪಳಗಿಸಲಾಗಿತ್ತು. ಆದರೆ ಇದೀಗ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ಶೌರ್ಯ ಕೊನೆಯುಸಿರೆಳೆದಿರುವುದು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರಲ್ಲಿ ತೀವ್ರ ಬೇಸರ ಮೂಡಿಸಿದೆ.
2026ರ ಫೆಬ್ರವರಿ ತಿಂಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಸಮೀಪದ ಹ್ಯಾರಂಬಿಪುರ ಭಾಗದಲ್ಲಿದ್ದ ನಾಗೇಶ್ ಗೌಡ ಎಂಬುವರಿಗೆ ಸೇರಿದ ಕಾಫಿ ತೋಟದಲ್ಲಿ ಈ ಕಾಡಾನೆ ಭಾರಿ ಅಟಾಟೋಪ ನಡೆಸಿತ್ತು. ತೋಟದಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಮೂಲದ ಯಲ್ಲಪ್ಪ ಎಂಬ ಕಾರ್ಮಿಕನ ಮೇಲೆ ಮೊದಲು ದಾಳಿ ನಡೆಸಿ ಬಲಿ ಪಡೆದಿತ್ತು. ಈ ಆಘಾತ ಮಾಸುವ ಮುನ್ನವೇ, ಕೇವಲ ಏಳು ದಿನಗಳ ಅಂತರದಲ್ಲಿ ಅದೇ ತೋಟಕ್ಕೆ ಕೆಲಸಕ್ಕೆ ತೆರಳಿದ್ದ ಹೊಸಪೇಟೆ ಮೂಲದ ಬೋರಮ್ಮ (34) ಎಂಬ ಮಹಿಳೆಯ ಮೇಲೆಯೂ ಕ್ರೂರವಾಗಿ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬೋರಮ್ಮ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದರು. ಕೆಲವೇ ದಿನಗಳಲ್ಲಿ ಇಬ್ಬರು ಬಲಿಯಾಗಿದ್ದರಿಂದ ಇಡೀ ಭಾಗದ ಗ್ರಾಮಸ್ಥರು ಮತ್ತು ತೋಟದ ಕಾರ್ಮಿಕರು ಭೀತಿಯಿಂದ ನಡುಗುವಂತಾಗಿತ್ತು.
75 ಸಿಬ್ಬಂದಿ, 7 ಕುಮ್ಕಿ ಆನೆಗಳ ಬೃಹತ್ ಕಾರ್ಯಾಚರಣೆ:
ಕಾರ್ಮಿಕರ ಸರಣಿ ಸಾವಿನ ಬಳಿಕ ಸ್ಥಳೀಯರ ಆಕ್ರೋಶ ಮುಗಿಲುಮುಟ್ಟಿದ್ದರಿಂದ ಅರಣ್ಯ ಇಲಾಖೆ ತಕ್ಷಣವೇ ಆನೆಯನ್ನು ಸೆರೆಹಿಡಿಯಲು ಬೃಹತ್ ಕಾರ್ಯಾಚರಣೆ ರೂಪಿಸಿತ್ತು. ಸುಮಾರು 75 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಹಾಗೂ 7 ಪಳಗಿದ ಕುಮ್ಕಿ ಆನೆಗಳನ್ನು ಬಳಸಿ ಕಷ್ಟಕರ ವಾತಾವರಣದಲ್ಲೂ ಕಾರ್ಯಾಚರಣೆ ನಡೆಸಿ ಆನೆಯನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿತ್ತು.
ಸೆರೆಹಿಡಿದ ಆನೆಯನ್ನು ತಕ್ಷಣವೇ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ರವಾನಿಸಲಾಗಿತ್ತು. ಅಲ್ಲಿ ಆನೆಗೆ ‘ಶೌರ್ಯ’ ಎಂದು ಹೆಸರಿಟ್ಟು, ಮರದ ಕ್ರಾಲ್‌ನಲ್ಲಿ (Kraal) ಇರಿಸಿ ಪಳಗಿಸುವ ಪ್ರಕ್ರಿಯೆ ಆರಂಭಿಸಲಾಯಿತು. ಬಿಡಾರದ ಕೌಶಲ್ಯಯುತ ಮಾವುತರು ಮತ್ತು ಕಾವಾಡಿಗಳ ನಿರಂತರ ಶ್ರಮದಿಂದ ಕೇವಲ 3 ತಿಂಗಳ ಅವಧಿಯಲ್ಲಿಯೇ ಶೌರ್ಯ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿದ್ದ.
2026ರ ಮೇ ತಿಂಗಳಲ್ಲಿ ತರಬೇತಿ ಪೂರ್ಣಗೊಂಡ ಬಳಿಕ ಬಿಡಾರದ ಹಿರಿಯ ಆನೆ ಬಾಲಣ್ಣನ ನೆರವಿನಿಂದ ಶೌರ್ಯನನ್ನು ಮರದ ಕ್ರಾಲ್‌ನಿಂದ ಹೊರಗೆ ಕರೆತರಲಾಗಿತ್ತು. ಕಾಡಿನಿಂದ ಹಿಡಿದು ತಂದ ಅತ್ಯಂತ ರೌದ್ರಾವತಾರದ ಆನೆಯನ್ನು ಅಷ್ಟು ಕಡಿಮೆ ಅವಧಿಯಲ್ಲಿ ಪಳಗಿಸಿದ್ದು ಸಕ್ರೆಬೈಲು ಸಿಬ್ಬಂದಿಯ ದೊಡ್ಡ ಸಾಧನೆಯಾಗಿತ್ತು.
ಸಕ್ರೆಬೈಲು ಬಿಡಾರದಲ್ಲಿ ಹೊಸ ಬದುಕು ಆರಂಭಿಸಿ ಸಿಬ್ಬಂದಿಯ ನೆಚ್ಚಿನ ಆನೆಯಾಗಿದ್ದ ಶೌರ್ಯ, ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ. ಅರಣ್ಯ ಇಲಾಖೆಯ ಪಶುವೈದ್ಯರು ಸೂಕ್ತ ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದೆ ಬಿಡಾರದಲ್ಲೇ ಪ್ರಾಣ ಬಿಟ್ಟಿದ್ದಾನೆ.
ಬಾಳೆಹೊನ್ನೂರು ಭಾಗದಿಂದ ಸೆರೆಹಿಡಿದು ತಂದು ಸಕ್ರೆಬೈಲಿನಲ್ಲಿ ತರಬೇತಿ ನೀಡಲಾಗಿದ್ದ ‘ಶೌರ್ಯ’ ಆನೆ ಅನಾರೋಗ್ಯದ ಕಾರಣದಿಂದ ಮೃತಪಟ್ಟಿದೆ. ವೈದ್ಯರ ತಂಡ ತಕ್ಷಣ ಚಿಕಿತ್ಸೆ ನೀಡಿದರೂ ಆನೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ," ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನ ಕೃಷ್ಣ ಪಟಗಾರ್ ತಿಳಿಸಿದ್ದಾರೆ.