SOCIAL MEDIA

Newsletter

PARTNER SITES
Select Language Select State

ಸ್ಕೂಟರ್‌ಗೆ ಗೂಡ್ಸ್‌ ವಾಹನ ಡಿಕ್ಕಿ : ಶಾಲಾ ಕಾಂಪೌಂಡ್‌ಗೆ ಪುಡಿ ಪುಡಿ, ವಿದ್ಯಾರ್ಥಿನಿ ಸ್ಥಿತಿ ಚಿಂತಾಜನಕ

ಸ್ಕೂಟರ್‌ಗೆ ಗೂಡ್ಸ್‌ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆಯೊಂದಿಗೆ ಸ್ಕೂಟರ್‌ನಲ್ಲಿ ಶಾಲೆಗೆ ತೆರಳುತ್ತಿದ್ದ 14 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರದಿಯಾಗಿದೆ. ಘಟನೆಗೆ ಲೋಕೋಪಯೋಗಿ ಇಲಾಖೆಯ (PWD) ನಿರ್ಲಕ್ಷ್ಯವೇ ಕಾರಣ ಅಂತ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Written By Krishna NK
Published: Nov 14, 2026, 17:43 IST | Updated: Nov 14, 2026, 17:46 IST
Image Credit: Shivamogga News
Join

ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ದ್ವಿಚಕ್ರ ವಾಹನಕ್ಕೆ ಗೂಡ್ಸ್ ಆಟೋವೊಂದು ಡಿಕ್ಕಿ ಹೊಡೆದ ಪರಿಣಾಮ, 14 ವರ್ಷದ ಶಾಲಾ ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡಿರುವ ದಾರುಣ ಘಟನೆ ನಡೆದಿದೆ. ಮಗಳನ್ನು ಶಾಲೆಗೆ ಬಿಡಲು ತಂದೆ ಸ್ಕೂಟರ್‌ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಇಡೀ ಘಟನೆಯ ಭೀಕರ ದೃಶ್ಯ ಸಿಸಿಟಿವಿ ಸೆರೆಯಾಗಿದೆ.

ಬಾಳೆಹೊನ್ನೂರು ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಶಾಲೆಗೆ ವ್ಯಕ್ತಿಯು ತಮ್ಮ ಮಗಳು ಶಾಜಿಯಾ ಬಾನುಳನ್ನು ಸ್ಕೂಟರ್‌ನಲ್ಲಿ ಬಿಡಲು ಹೊರಟಿದ್ದರು. ರಸ್ತೆ ದಾಟುತ್ತಿದ್ದ ಸ್ವಲ್ಪ ಸಮಯದಲ್ಲಿಯೇ, ಅತಿವೇಗವಾಗಿ ಮತ್ತು ಅಜಾಗರೂಕತೆಯಿಂದ ಬಂದ ಗೂಡ್ಸ್ ಆಟೋವೊಂದು ನೇರವಾಗಿ ಸ್ಕೂಟರ್‌ಗೆ ಬಂದು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್‌ನಲ್ಲಿದ್ದ ಬಾಲಕಿ ರಸ್ತೆಗೆ ಬಿದ್ದಿದ್ದಾಳೆ, ಗೂಡ್ಸ್ ಆಟೋ ನಿಯಂತ್ರಣ ತಪ್ಪಿ ರಸ್ತೆ ಬಕ್ಕಿಯ ಶಾಲೆಯ ಕಾಂಪೌಂಡ್‌ಗೆ ಬಂದು ಅಪ್ಪಳಿಸಿದೆ.

ಈ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ 14 ವರ್ಷದ ವಿದ್ಯಾರ್ಥಿನಿ ಶಾಜಿಯಾ ಬಾನು ಅವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ತಕ್ಷಣವೇ ಸ್ಥಳೀಯರು ಗಾಯಾಳುಗಳಿವೆ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾಯಿಸಲಾಗಿದೆ. ಅದೃಷ್ಟವಶಾತ್, ಶಾಲೆಯ ಕಾಂಪೌಂಡ್ ಬಳಿ ನಿಂತಿದ್ದ ಮತ್ತೊಬ್ಬ ಬಾಲಕಿ ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದು, ದೊಡ್ಡಮಟ್ಟದ ಅನಾಹುತ ತಪ್ಪಿದೆ.

ಲೋಕೋಪಯೋಗಿ ಇಲಾಖೆಯ ನಿರ್ಲಕ್ಷ್ಯವೇ ಕಾರಣ?
ಘಟನಾ ಸ್ಥಳವಿರುವ ಶಿವಮೊಗ್ಗ ರಸ್ತೆಯಲ್ಲಿ ಒಂದೇ ಸಾಲಿನಲ್ಲಿ ಹಲವಾರು ಶಾಲಾ-ಕಾಲೇಜುಗಳು ಕಾರ್ಯಾನಿರ್ವಹಿಸುತ್ತಿವೆ. ಪ್ರತಿದಿನವೂ ನೂರಾರು ಸಂಖ್ಯೆಯಲ್ಲಿ ಕಂದಮ್ಮಗಳು ಹಾಗೂ ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗಾಗಿ ಈ ರಸ್ತೆಯಲ್ಲಿ ಕಾಲ್ನಡಕೆಯಲ್ಲೂ ಹಾಗೂ ವಾಹನಗಳಲ್ಲೂ ಓಡಾಡುತ್ತಿರುತ್ತಾರೆ. ಆದರೆ, ಇಂತಹ ಜನದಟ್ಟಣೆಯ ಶಾಲಾ ವಲಯದ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ಯಾವುದೇ ರೀತಿಯ ಹಂಪ್ಸ್ (ವೇಗದ ತಡೆಗೋಡೆಗಳು) ಅಥವಾ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಸ್ತೆಯಲ್ಲಿ ವಾಹನಗಳು ಮನಬಂದಂತೆ ಅತಿವೇಗವಾಗಿ ಸಂಚರಿಸುತ್ತಿರುವುದರಿಂದ ಇಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಲೇ ಇವೆ. ಶಾಲಾ ಮಕ್ಕಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿರುವ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆಯ (PWD) ಅಧಿಕಾರಿಗಳ ಮತ್ತು ಆಡಳಿತದ ನಿರ್ಲಕ್ಷ್ಯ ಧೋರಣೆ ವಿರುದ್ಧ ಸ್ಥಳೀಯರು ಹಾಗೂ ಪೋಷಕರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡು ರಸ್ತೆಗೆ ಅಗತ್ಯವಿರುವ ಕಡೆಗಳಲ್ಲಿ ಹಂಪ್ಸ್ ನಿರ್ಮಿಸಬೇಕು ಹಾಗೂ ರಸ್ತೆ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪ್ರಸ್ತುತ ಈ ಕುರಿತು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಗೂಡ್ಸ್ ಆಟೋ ಚಾಲಕನ ನಿರ್ಲಕ್ಷ್ಯದ ಬಗ್ಗೆ ತನಿಖೆ ನಡೆದಿದೆ.

Add Zee News as a Preferred Source
TAGS:

About the Author

ಕೃಷ್ಣಕುಮಾರ್‌ ಎನ್‌.ಕೆ. (Krishna Kumar NK) 'ಜೀ ಕನ್ನಡ ನ್ಯೂಸ್‌' ಜಾಲತಾಣದ ಉಪ ಸಂಪಾದಕರಾಗಿ 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕೂ ಮೊದಲು ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ "ಜೀ ನ್ಯೂಸ್‌ ಕನ್ನಡ" ವೆಬ್‌ ಸೈಟ್‌ ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
Read More

ZEENEWS TRENDING STORIES