SOCIAL MEDIA

Newsletter

PARTNER SITES
Select Language Select State

ಕಬ್ಬಿನ ದರ ಬಿಕ್ಕಟ್ಟು ಇತ್ಯರ್ಥವಾಗಿಲ್ಲ; ನಾಳೆಯವರೆಗೆ ಗಡುವು ಕೇಳಿದ ಸಚಿವ ಸತೀಶ್ ಜಾರಕಿಹೊಳಿ!

ರೈತರ ಬೇಡಿಕೆ ಒಂದು ಕಡೆಯಾದರೆ, ಕಾರ್ಖಾನೆ ಮಾಲೀಕರ ಬೇಡಿಕೆ ಮತ್ತೊಂದು ಕಡೆಯಾಗಿದೆ. ಈ ಕಾರಣದಿಂದ ದರ ನಿಗದಿ ವಿಳಂಬವಾಗುತ್ತಿದೆ. ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಂದು ನಿರ್ದಿಷ್ಟ ಮೊತ್ತದ ಅಂತರವಿದ್ದು, ಅದನ್ನು ಹತ್ತಿರ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

Written By Chetana Devarmani
Published: Nov 03, 2026, 22:40 IST | Updated: Nov 03, 2026, 22:41 IST
Join

ಬೆಳಗಾವಿ: ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ನಡುವಿನ ಕಬ್ಬಿನ ದರದ ಸಂಘರ್ಷ ಇನ್ನೂ ಇತ್ಯರ್ಥವಾಗಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆದ ರೈತ ಮುಖಂಡರು ಹಾಗೂ ಕಾರ್ಖಾನೆ ಮಾಲೀಕರ ಸಭೆಯಲ್ಲೂ ಒಮ್ಮತ ಮೂಡಿಲ್ಲ. ಹೀಗಾಗಿ ನಾಳೆಯೊಳಗೆ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ. ನಿನ್ನೆ ರೈತ ಮುಖಂಡರ ಮನವಿ ಮೇರೆಗೆ ಮತ್ತೊಮ್ಮೆ ಸಭೆ ನಡೆಸಲಾಗಿದೆ. ಈ ಹಿಂದೆ ಮುಖ್ಯಮಂತ್ರಿ ನೇತೃತ್ವದಲ್ಲಿಯೂ ಸಭೆ ನಡೆದಿತ್ತು. ಇದೀಗ ರೈತರ ಸಮಸ್ಯೆಗಳನ್ನು ಆಲಿಸಲು ಮತ್ತೊಮ್ಮೆ ಸಭೆ ನಡೆಸಲಾಗಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಎರಡನೇ ಹಂತದ ಸಭೆಯಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ 4,500 ರೂ. ದರ ನೀಡಬೇಕೆಂದು ಕಾರ್ಖಾನೆ ಮಾಲೀಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಆದರೆ ಕಾರ್ಖಾನೆ ಮಾಲೀಕರು 3,500 ರೂ. ಗಡಿ ದಾಟಲು ಸಿದ್ಧರಿಲ್ಲ. ಹೀಗಾಗಿ ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವಿನ ದರದ ಅಂತರ ಕಡಿಮೆ ಮಾಡಲು ಸಚಿವರು ಪ್ರಯತ್ನಿಸುತ್ತಿದ್ದಾರೆ. ರೈತರ ಬೇಡಿಕೆ ಒಂದು ಕಡೆಯಾದರೆ, ಕಾರ್ಖಾನೆ ಮಾಲೀಕರ ಬೇಡಿಕೆ ಮತ್ತೊಂದು ಕಡೆಯಾಗಿದೆ. ಈ ಕಾರಣದಿಂದ ದರ ನಿಗದಿ ವಿಳಂಬವಾಗುತ್ತಿದೆ. ರೈತರು ಮತ್ತು ಕಾರ್ಖಾನೆ ಮಾಲೀಕರ ನಡುವೆ ಒಂದು ನಿರ್ದಿಷ್ಟ ಮೊತ್ತದ ಅಂತರವಿದ್ದು, ಅದನ್ನು ಹತ್ತಿರ ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಇಂದಿನ ಸಭೆ ಶೇಕಡಾ 50ರಷ್ಟು ಸಕಾರಾತ್ಮಕವಾಗಿದೆ. ನಾಳೆ ಅಗತ್ಯಬಿದ್ದರೆ ಮತ್ತೊಮ್ಮೆ ಕಾರ್ಖಾನೆ ಮಾಲೀಕರ ಸಭೆ ನಡೆಸಲಾಗುವುದು. ದರ ನಿಗದಿ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೂ ಚರ್ಚೆ ನಡೆಸುತ್ತೇವೆ. ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವೆ ಹೊಂದಾಣಿಕೆ ಮೂಡಿದ ಬಳಿಕ ಅಂತಿಮ ನಿರ್ಧಾರವನ್ನು ರೈತರಿಗೆ ತಿಳಿಸಲಾಗುವುದು ಎಂದು ಸತೀಶ್ ಜಾರಕಿಹೊಳಿ ಹೇಳಿದರು. ಕಾರ್ಖಾನೆ ಮಾಲೀಕರು ಮತ್ತು ಸಚಿವನಾಗಿ ಸಮಸ್ಯೆ ಬಗೆಹರಿಸುವ ಜವಾಬ್ದಾರಿ ನನ್ನ ಮೇಲಿದೆ. ನಾಳೆಯವರೆಗೆ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸುತ್ತೇವೆ. ರೈತರು ಒಪ್ಪಿಕೊಂಡರೆ ಸಮಸ್ಯೆ ಬಗೆಹರಿಯುತ್ತದೆ. ಇಲ್ಲದಿದ್ದರೆ ಮತ್ತಷ್ಟು ಸಮಸ್ಯೆಯಾಗಲಿದೆ ಎಂದು ಅವರು ತಿಳಿಸಿದರು.

ಎಸ್‌ಎಪಿ, ಎಂಎಸ್‌ಪಿ ಜಾರಿಗೆ ರೈತರ ಪಟ್ಟು

ರಾಜ್ಯ ಸರ್ಕಾರದ ಎಸ್‌ಎಪಿ ಹಾಗೂ ಕೇಂದ್ರ ಸರ್ಕಾರದ ಎಂಎಸ್‌ಪಿ ನಿಗದಿ ಮಾಡಬೇಕೆಂಬ ಬೇಡಿಕೆಯನ್ನು ರೈತರು ಮುಂದುವರಿಸಿದ್ದಾರೆ. ಸಕ್ಕರೆ ಬೆಲೆ ಪ್ರತಿದಿನ ಬದಲಾಗುತ್ತಿರುವುದರಿಂದ ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ನಾವು ಕೂಡ ಒತ್ತಾಯಿಸಿದ್ದೇವೆ. ಸಕ್ಕರೆಗೆ ಎಂಎಸ್‌ಪಿ ನಿಗದಿಯಾದರೆ ಕಾರ್ಖಾನೆ ಮಾಲೀಕರಿಗೂ ಧೈರ್ಯ ಬರುತ್ತದೆ. ಎಸ್‌ಎಪಿ ಮತ್ತು ಎಂಎಸ್‌ಪಿ ವಿಚಾರದಲ್ಲಿ ಸರ್ಕಾರದ ನಿಲುವಿನ ಕುರಿತು ಚರ್ಚೆ ಮುಂದುವರಿಯಲಿದೆ ಎಂದು ಸಚಿವರು ಹೇಳಿದರು.

13ನೇ ದಿನಕ್ಕೆ ಕಾಲಿಟ್ಟ ಗುರ್ಲಾಪುರ ಹೋರಾಟ

ಕಬ್ಬಿನ ದರದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಗುರ್ಲಾಪುರದಲ್ಲಿ ರೈತರ ಹೋರಾಟ 13ನೇ ದಿನಕ್ಕೆ ಕಾಲಿಡುತ್ತಿದೆ. ಜೈಲ್ ಭರೋ ಚಳವಳಿಗೆ ಲಕ್ಷಾಂತರ ರೈತರು ಆಗಮಿಸುತ್ತಿದ್ದಾರೆ ಎಂದು ಹೋರಾಟಗಾರರು ತಿಳಿಸಿದ್ದಾರೆ. ಹುಕ್ಕೇರಿ ತಾಲೂಕಿನ ಬಡಕುಂದ್ರಿ ಗ್ರಾಮದ ಹೊರವಲಯದಲ್ಲಿರುವ ಹೊಳೆಮ್ಮ ದೇವಿ ದೇವಸ್ಥಾನದಲ್ಲಿ ರೈತರು ಬೀಡುಬಿಟ್ಟಿದ್ದಾರೆ. ನಾಳೆ ಮಧ್ಯಾಹ್ನದೊಳಗೆ ಬೇಡಿಕೆ ಈಡೇರಿಸುವಂತೆ ರೈತ ಮುಖಂಡರು ಗಡುವು ನೀಡಿದ್ದಾರೆ. ಇದೀಗ ಎಲ್ಲರ ಗಮನ ನಾಳೆ ನಡೆಯಲಿರುವ ಸಭೆ ಹಾಗೂ ಕಬ್ಬಿನ ದರದ ಅಂತಿಮ ನಿರ್ಧಾರದ ಮೇಲಿದೆ.
 

Add Zee News as a Preferred Source
TAGS:

About the Author

"*ಚೇತನಾ ದೇವರಮನಿ* ಅವರು ಪ್ರಸ್ತುತ ʻಜೀ ಕನ್ನಡ ನ್ಯೂಸ್‌ʼ ವೆಬ್‌ನಲ್ಲಿ Sub Editor ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚೇತನಾ ದೇವರಮನಿ ಅವರು ಅನುಭವಿ ಪತ್ರಕರ್ತರಾಗಿದ್ದು, ಮಾಧ್ಯಮ ಕ್ಷೇತ್ರದಲ್ಲಿ 8 ವರ್ಷಕ್ಕೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು ಸಿನಿಮಾ, ಕ್ರೀಡೆ, ಕ್ರೈಂ, ಆರೋಗ್ಯ, ಬ್ಯುಸಿನೆಸ್, ಆಧ್ಯಾತ್ಮಿಕ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. 2018ರಲ್ಲಿ ʻರಾಮೋಜಿ ಗ್ರೂಪ್‌ʼನ ಈಟಿವಿ ಭಾರತ ಕರ್ನಾಟಕ ಸಂಸ್ಥೆಯಲ್ಲಿ ಪತ್ರಿಕೋದ್ಯಮ ವೃತ್ತಿಜೀವನ ಆರಂಭಿಸಿದ ಇವರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಬಳಿಕ 2021 ರಲ್ಲಿ ʻಇಂಡಿಯಾ ಡಾಟ್‌ ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ ತಂಡ ಸೇರಿದರು. ಪ್ರಸ್ತುತ ಕಳೆದ 4 ವರ್ಷಗಳಿಂದ ಜೀ ಕನ್ನಡ ನ್ಯೂಸ್‌ ವೆಬ್‌ ಟೀಮ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಚೇತನಾ ದೇವರಮನಿ ತಮ್ಮ ಸಂಶೋಧನಾ ಕೌಶಲ್ಯ ಮತ್ತು ಬರವಣಿಗೆ ಶೈಲಿಯಿಂದ ಎಲ್ಲರ ಗಮನಸೆಳೆದಿದ್ದು, ಹೆಸರುವಾಸಿಯಾಗಿದ್ದಾರೆ. ಚೇತನಾ ದೇವರಮನಿಯವರ ಬರವಣಿಗೆಯ ಶೈಲಿ ಆಕರ್ಷಕ ಹಾಗೂ ತಿಳಿವಳಿಕೆಯಿಂದ ಕೂಡಿದ್ದು ನಿಷ್ಠಾವಂತ ಓದುಗರನ್ನು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ಚೇತನಾ ದೇವರಮನಿ ಅವರು ಬಿಡುವಿನ ವೇಳೆಯಲ್ಲಿ ಸಿನಿಮಾ ನೋಡುವುದು, ಪುಸ್ತಕ ಓದುವುದು, ಪ್ರವಾಸಕ್ಕೆ ಹೋಗುವುದನ್ನು ಆನಂದಿಸುತ್ತಾರೆ. ಈ ಚಟುವಟಿಕೆಗಳು ಅವರನ್ನು ರಿಫ್ರೆಶ್ ಮಾಡುತ್ತದೆ. ಇದೇ ಅವರಲ್ಲಿ ಚೈತನ್ಯ ತುಂಬುತ್ತದೆ. ಇದರಿಂದಲೇ ಅವರು ಕ್ರಿಯಾಶಿಲರಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ತಮ್ಮ ವಿಶ್ವಾಸಾರ್ಹ ಮಾಹಿತಿಪೂರ್ಣ ಬರಹಗಳ ಮೂಲಕ ಚೇತನಾ ದೇವರಮನಿಯವರು ಓದುಗ ವಲಯವನ್ನು ಪರಿಣಾಮಕಾರಿಯಾಗಿ ತಲುಪಲು ಶ್ರಮಿಸುತ್ತಿದ್ದಾರೆ. ಒಟ್ಟಾರೆ ಹೇಳುವುದಾದರೆ, ಚೇತನಾ ದೇವರಮನಿ ಅತ್ಯಂತ ನುರಿತ ಮತ್ತು ಅನುಭವಿ ಪತ್ರಕರ್ತರು, ಅವರು ತಮ್ಮ ಕೆಲಸದ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ."
Read More

ZEENEWS TRENDING STORIES