ಗದಗ: ಗದಗ ಜಿಲ್ಲೆಯಲ್ಲಿ ಪುಂಡರ ಪುಂಡಾಟಿಕೆಗೆ ಕೊನೆಯೇ ಇಲ್ಲದಂತಾಗಿದೆ. ಸಣ್ಣಪುಟ್ಟ ವಿಚಾರಗಳಿಗೂ ಗ್ಯಾಂಗ್ ಕಟ್ಟಿಕೊಂಡು ಬಂದು ಮಾರಣಾಂತಿಕ ದಾಳಿ ನಡೆಸುವುದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವುದು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಜನ ಸಾಮಾನ್ಯರು ಆತಂಕದಲ್ಲೇ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಅತ್ಯಂತ ಖಂಡನೀಯ ಹಾಗೂ ಭೀಕರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ತಾವು ಕೊಟ್ಟ ಸಾಲದ ಹಣವನ್ನು ವಾಪಸ್ ಕೇಳಿದ್ದನ್ನೇ ನೆಪ ಮಾಡಿಕೊಂಡ ಕಿಡಿಗೇಡಿಗಳ ಗುಂಪೊಂದು, ಯುವಕನೊಬ್ಬನ ಮೇಲೆ ರೌಡಿಗಳಂತೆ ಎರಗಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ದಾಳಿಗೊಳಗಾದ ದುರ್ದೈವಿ ಯುವಕನನ್ನು ಹುಯಿಲಗೋಳ ಗ್ರಾಮದ ನಿವಾಸಿ ಮಹಾಂತೇಶ ಪುರದ್ ಎಂದು ಗುರುತಿಸಲಾಗಿದೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಮಹಾಂತೇಶ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಸ್ತುತ ಗದಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಘಟನೆ? ಇಲ್ಲಿದೆ ಸಂಪೂರ್ಣ ವಿವರ:
ವಿಷಯ ಏನೆಂದರೆ, ಹಲ್ಲೆಗೊಳಗಾದ ಮಹಾಂತೇಶ ಪುರದ್ ಅವರಿಂದ ಅದೇ ಗ್ರಾಮದ ಜಂಗ್ಲಿಸಾಬ್ ಚಳ್ಳಮರದ್ ಎಂಬಾತ ರಂಜಾನ್ ಹಬ್ಬದ ಸಮಯದಲ್ಲಿ ತುರ್ತು ಅಗತ್ಯಕ್ಕಾಗಿ 20 ಸಾವಿರ ರೂಪಾಯಿ ಕೈಸಾಲವಾಗಿ ಪಡೆದುಕೊಂಡಿದ್ದ. ತಿಂಗಳುಗಳು ಕಳೆದರೂ ಹಣ ಮರಳಿಸದಿದ್ದಾಗ, ಮಹಾಂತೇಶ ತನ್ನ ಹಣವನ್ನು ವಾಪಸ್ ನೀಡುವಂತೆ ಜಂಗ್ಲಿಸಾಬ್‌ನನ್ನು ಕೇಳಿದ್ದಾನೆ. ಆದರೆ, ಹಣ ವಾಪಸ್ ಕೊಡುವ ಬದಲು ಜಂಗ್ಲಿಸಾಬ್ ಅಹಂಕಾರ ಮೆರೆದಿದ್ದಾನೆ. ಹಣ ಕೇಳಿದ್ದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಆತನ ಮೇಲೆ ದ್ವೇಷ ಸಾಧಿಸಲು ಸಂಚು ರೂಪಿಸಿದ್ದ.
ಕಳೆದ ಸೆಪ್ಟೆಂಬರ್ 17 ರಂದು ರಾತ್ರಿ ಸುಮಾರು 11 ಗಂಟೆಯ ನಂತರ, ಇಡೀ ಗ್ರಾಮವೇ ನಿದ್ರೆಗೆ ಜಾರಿದ್ದ ವೇಳೆಯಲ್ಲಿ ಆರೋಪಿ ಜಂಗ್ಲಿಸಾಬ್ ತನ್ನ ಗ್ಯಾಂಗ್ ಜೊತೆ ರಂಗಪ್ರವೇಶ ಮಾಡಿದ್ದಾನೆ. ಬೈಕ್ ಹಾಗೂ ಕಾರಿನಲ್ಲಿ ಬಂದ ಜಂಗ್ಲಿಸಾಬ್ ಚಳ್ಳಮರದ್, ರಿಯಾಜ್ ತಹಶಿಲ್ದಾರ್, ನಾಗರಾಜ ಕಾಳೆ, ಸುಮಂತ್ ಸೇರಿದಂತೆ ನಾಲ್ಕೈದು ಮಂದಿ ಪುಂಡರು ಮಹಾಂತೇಶನನ್ನು ತಡೆದು ನಿಲ್ಲಿಸಿದ್ದಾರೆ. ಯಾವುದೇ ಮುನ್ಸೂಚನೆ ನೀಡದೆ, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಆತನ ಮೇಲೆ ಮುಗಿಬಿದ್ದಿದ್ದಾರೆ.
ಸಿಸಿಟಿವಿಯಲ್ಲಿ ಸೆರೆಯಾಯ್ತು ಅಟ್ಟಹಾಸದ ದೃಶ್ಯ:
ಮಹಾಂತೇಶ ಎಷ್ಟೇ ಬೇಡಿಕೊಂಡರೂ ಬಿಡದ ಈ ಪುಂಡರ ಗುಂಪು, ಆತನನ್ನು ಬೀದಿಯಲ್ಲೇ ಮನಬಂದಂತೆ ಥಳಿಸಿದೆ. ಕಾಲಿನಿಂದ ಒದೆಯುವುದು, ಕೈಯಿಂದ ತೀವ್ರವಾಗಿ ಹಲ್ಲೆ ಮಾಡುವುದು ಸೇರಿದಂತೆ ರೌಡಿಸಂ ಪ್ರದರ್ಶಿಸಿದ್ದಾರೆ. ಈ ಇಡೀ ಭೀಕರ ಹಲ್ಲೆಯ ದೃಶ್ಯ ಹತ್ತಿರದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದರೆ, ಪುಂಡರು ಎಷ್ಟು ಭೀಕರವಾಗಿ ಹಾಗೂ ವಿಕೃತವಾಗಿ ಯುವಕನ ಮೇಲೆ ದಾಳಿ ಮಾಡಿದ್ದಾರೆ ಎಂಬುದು ಕಣ್ಣಿಗೆ ಕಟುವಾಗಿ ಕಾಣಿಸುತ್ತದೆ.
ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ, ಗಂಭೀರ ಗಾಯಗೊಂಡ ಮಹಾಂತೇಶ ಅಸ್ವಸ್ಥಗೊಂಡು ಬಿದ್ದಿದ್ದಾಗ, ಆರೋಪಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ತಕ್ಷಣವೇ ಕುಟುಂಬಸ್ಥರು ಹಾಗೂ ಸ್ಥಳೀಯರು ಆತನನ್ನು ರಕ್ಷಿಸಿ ಗದಗದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಪ್ರಸ್ತುತ ವೈದ್ಯರು ಆತನಿಗೆ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.
ಪೋಲಿಸ್ ಠಾಣೆಯಲ್ಲಿ ದೂರು, ಆರೋಪಿಗಳಿಗಾಗಿ ಬಲೆ:
ಘಟನೆ ನಡೆದ ನಂತರ ಗಾಯಾಳು ಮಹಾಂತೇಶ ನೀಡಿದ ದೂರಿನ ಆಧಾರದ ಮೇಲೆ, ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಂಗ್ಲಿಸಾಬ್ ಚಳ್ಳಮರದ್, ರಿಯಾಜ್ ತಹಶಿಲ್ದಾರ್, ನಾಗರಾಜ ಕಾಳೆ ಹಾಗೂ ಸುಮಂತ್ ಸೇರಿದಂತೆ ಒಟ್ಟು ನಾಲ್ಕೈದು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ನಡೆದ ನಂತರ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ತಮ್ಮದೇ ಹಣವನ್ನು ವಾಪಸ್ ಕೇಳಿದ್ದಕ್ಕೆ ಈ ರೀತಿ ಗ್ಯಾಂಗ್ ಕಟ್ಟಿಕೊಂಡು ಬಂದು ಮಾರಣಾಂತಿಕ ದಾಳಿ ನಡೆಸಿರುವುದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. "ಸಾಲ ಪಡೆದ ಹಣವನ್ನು ಮರಳಿಸುವುದನ್ನು ಬಿಟ್ಟು, ಈ ರೀತಿ ದೌರ್ಜನ್ಯ ಎಸಗುವುದು ಯಾವ ನ್ಯಾಯ?" ಎಂದು ಹುಯಿಲಗೋಳ ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕಾನೂನನ್ನು ಕೈಗೆತ್ತಿಕೊಂಡು, ಅಶಾಂತಿ ಸೃಷ್ಟಿಸಿರುವ ಈ ಕಿಡಿಗೇಡಿಗಳನ್ನು ತಕ್ಷಣವೇ ಬಂಧಿಸಿ, ಸೂಕ್ತ ಶಿಕ್ಷೆ ಒದಗಿಸಬೇಕು ಎಂದು ಗದಗ ಗ್ರಾಮೀಣ ಪೊಲೀಸರಿಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪೋಲಿಸರು ಸಿಸಿಟಿವಿ ಫೂಟೇಜ್ ಆಧಾರದ ಮೇಲೆ ತನಿಖೆ ತೀವ್ರಗೊಳಿಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಕಂಬಿ ಹಿಂದೆ ತಳ್ಳುವ ಭರವಸೆ ನೀಡಿದ್ದಾರೆ.