ದರ್ಶನ್ ಯಾರು ಅಂತಲೆ ಗೊತ್ತಿಲ್ಲ ಎಂದು ಕೋರ್ಟ್‌ನಲ್ಲೇ ಉಲ್ಟಾ ಹೊಡೆದ ಪ್ರತ್ಯಕ್ಷ ಸಾಕ್ಷಿ..
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಕರಣದಲ್ಲಿ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ.
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈಗಾಗಲೇ ಪ್ರಕರಣದಲ್ಲಿ ಆರೋಪಿ ಪ್ರದೋಶ್ ಮಾಫಿ ಸಾಕ್ಷಿಯಾಗಿ ಬದಲಾಗಿದ್ದು, ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ದಾಖಲಿಸಿದ್ದಾರೆ. ಮತ್ತೊಂದೆಡೆ, ಸಾಕ್ಷಿ ಪುನೀತ್ ಕೂಡ ಪೊಲೀಸರ ಮುಂದೆ ನೀಡಿದ್ದ ಹೇಳಿಕೆಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದು ಅಚ್ಚರಿ ಮೂಡಿಸಿದ್ದರು. ಇದೀಗ ಈ ಪ್ರಕರಣದಲ್ಲಿ ಮತ್ತೊಬ್ಬ ಸಾಕ್ಷಿ ಕೂಡ ಉಲ್ಟಾ ಹೊಡೆದಿದ್ದಾನೆ. ಅಷ್ಟಕ್ಕೂ ನ್ಯಾಯಾಲಯದಲ್ಲಿ ನಡೆದಿದ್ದೇನು?
ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು ಅಂದರೆ ನವೆಂಬರ್ 23ರಂದು ಬೆಂಗಳೂರಿನ 59ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಹಾಗೂ ಪ್ರತ್ಯಕ್ಷ ಸಾಕ್ಷಿ ಎನ್ನಲಾಗಿರುವ ಕಿರಣ್ ವಿಚಾರಣೆ ಎದುರಿಸಿದರು. ಆದರೆ ನ್ಯಾಯಾಲಯದಲ್ಲಿ ಕಿರಣ್ ನೀಡಿದ ಹೇಳಿಕೆಗಳು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿವೆ.
ಘಟನೆ ನಡೆದ 2024ರ ಜೂನ್ 8ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ತಾನು ಶೆಡ್‌ನಲ್ಲಿ ಕೆಲಸ ಮಾಡಿದ್ದಾಗಿ ಕಿರಣ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಮಧ್ಯಾಹ್ನ ಊಟಕ್ಕೆ ತೆರಳಿ ವಾಪಸ್ ಬಂದು ಕೆಲಸ ಮುಂದುವರಿಸಿದ್ದಾಗಿಯೂ ಹೇಳಿದ್ದಾರೆ. ಪ್ರತಿದಿನ ಶೆಡ್‌ಗೆ ಸಾಕಷ್ಟು ವಾಹನಗಳು ಬರುತ್ತಿದ್ದವು. ಅಂದು ಮಾತ್ರ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದಿದ್ದವು. ಆದರೆ ಅಂದು ಶೆಡ್‌ನಲ್ಲಿ ಯಾವುದೇ ಘಟನೆ ನಡೆದಿಲ್ಲ ಎಂದು ಕಿರಣ್ ಹೇಳಿಕೆ ನೀಡಿದ್ದಾರೆ.
ಇನ್ನು ಜೈಲಿನಲ್ಲಿರುವ ಆರೋಪಿಗಳನ್ನು ಗುರುತಿಸಬಹುದೇ ಎಂದು ವಿಶೇಷ ಸರ್ಕಾರಿ ಅಭಿಯೋಜಕರು ಪ್ರಶ್ನಿಸಿದಾಗ, ದರ್ಶನ್ ಸೇರಿದಂತೆ ಯಾವುದೇ ಆರೋಪಿಗಳು ತನಗೆ ಪರಿಚಯವಿಲ್ಲ ಎಂದು ಕಿರಣ್ ಹೇಳಿದ್ದಾರೆ. ಅಷ್ಟೇ ಅಲ್ಲ, ನಟ ದರ್ಶನ್ ಕೂಡ ತನಗೆ ಗೊತ್ತಿಲ್ಲ ಎಂದು ಹೇಳಿರುವುದು ವಿಚಾರಣೆಯಲ್ಲಿ ಕುತೂಹಲ ಮೂಡಿಸಿದೆ.
ಇದೇ ವೇಳೆ ಈ ಹಿಂದೆ ಪೊಲೀಸರ ಮುಂದೆ ನೀಡಿದ್ದ ಹೇಳಿಕೆ ನೆನಪಿಲ್ಲ. ನ್ಯಾಯಾಧೀಶರ ಮುಂದೆ ಸಿಆರ್‌ಪಿಸಿ 164ರ ಅಡಿಯಲ್ಲಿ ದಾಖಲಿಸಿದ್ದ ಹೇಳಿಕೆಯ ಬಗ್ಗೆಯೂ ನೆನಪಿಲ್ಲ ಎಂದು ಕಿರಣ್ ತಿಳಿಸಿದ್ದಾರೆ. ಹೀಗಾಗಿ ಕಿರಣ್ ಅವರ ಹೇಳಿಕೆಯನ್ನು ಪ್ರತಿಕೂಲ ಸಾಕ್ಷಿ ಎಂದು ಪರಿಗಣಿಸುವಂತೆ ವಿಶೇಷ ಸರ್ಕಾರಿ ಅಭಿಯೋಜಕರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಅಲ್ಲದೆ, ಅವರನ್ನು ಅಡ್ಡ ವಿಚಾರಣೆಗೆ ಒಳಪಡಿಸಲು ಅನುಮತಿ ಕೋರಿದ್ದಾರೆ.
ಆದರೆ ದರ್ಶನ್ ಪರ ವಕೀಲರು ವಿಚಾರಣೆ ಮುಂದೂಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಪ್ರಕರಣದ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದ್ದಾರೆ. ಅಂದು ಕಿರಣ್ ಅವರ ಅಡ್ಡ ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಒಟ್ಟಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಒಂದರ ಹಿಂದೆ ಮತ್ತೊಂದು ಸಾಕ್ಷಿಗಳು ತಮ್ಮ ಹಿಂದಿನ ಹೇಳಿಕೆಗಳಿಗೆ ವಿರುದ್ಧವಾಗಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ವಿಚಾರಣೆಯಲ್ಲಿ ಕಿರಣ್ ಯಾವ ರೀತಿಯ ಹೇಳಿಕೆ ನೀಡಲಿದ್ದಾರೆ? ಅಡ್ಡ ವಿಚಾರಣೆಯಲ್ಲಿ ಯಾವೆಲ್ಲಾ ಅಂಶಗಳು ಹೊರಬರಲಿವೆ? ಎಂಬುದನ್ನು ಕಾದುನೋಡಬೇಕಿದೆ.